ಮೂಡಲಗಿ: ಮೂಡಲಗಿಯಲ್ಲಿ ಅಪರೂಪದ ಕರಿ ಕಂಬರಳು ( ಬ್ಲ್ಯಾಕ್ ನೇಪ್ಡ ಐಬೀಸ್) ಪಕ್ಷಿಯೊಂದು ವಲಸೆ
ಬಂದು ಗಮನಸೆಳೆಯಿತು.
ಇಲ್ಲಿಯ ಮೂಡಲಗಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ವೆಂಕಟೇಶ ಸೋನವಾಲಕರ ಅವರ ಮನೆಯ ಆವರಣದ ಹೂವಿನ ಗಿಡಗಳಲ್ಲಿ ಶುಕ್ರವಾರ ಬಂದು ಕುಳಿತಿದ್ದ ಅಪರೂಪದ ಪಕ್ಷಿ ಹಾರಲಿಕ್ಕಾಗದೆ ಒಂದೇ ಕಡೆಯಲ್ಲಿ ಕುಳಿತಿರುವುದು ವೆಂಕಟೇಶ ಅವರಿಗೆ ಕಂಡಿದೆ. ಶನಿವಾರ ಬೆಳಿಗ್ಗೆ ವೆಂಕಟೇಶ ಅವರು ಪಶು ಆಸ್ಪತ್ರೆಯ ವೈದ್ಯರಿಗೆ ತಿಳಿಸಿ ವೈದ್ಯರನ್ನು ಕರೆಯಿಸಿ ಪಕ್ಷಿಯ ಕಾಲುಗಳಿಗೆ ಹುಲ್ಲಿನ ಗರಿ ತೊಡಕ್ಕಾಗಿದ್ದನ್ನು
ಗುರುತಿಸಿ ಅದನ್ನು ಬಿಡಿಸಿದರು.
ಸುಸ್ತಾಗಿದ್ದ ಪಕ್ಷಿಗೆ ನೀರು, ಹಣ್ಣಿನ ಉಪಚಾರ ಮಾಡಿ ಹಾರಿ ಬಿಡುವ ಮೂಲಕ ಮಾನವೀಯತೆಯನ್ನು ಮೆರೆದರು. “ಒಂದುವರೆ ಅಡಿ ಉದ್ದವಿರುವ ಮತ್ತು ಉದ್ದನೆ ಕುಂಚವಿರುವ, ನೆತ್ತಿಯ ಮೇಲೆ ಕೆಂಬಣ್ಣದ ಮಚ್ಚೆ ಇರುವ ಅಪರೂದ ಕರಿ ಕಂಬರಳು ಪಕ್ಷಿ ನೀರು ಇರುವ ನದಿ, ಹಳ್ಳಗುಂಟ ಆಹಾರಕ್ಕಾಗಿ ವಲಸೆ ಹೋಗುತ್ತವೆ. ಹರಿಯಾಣ ಮತ್ತು ಪಂಜಾಬಗಳಲ್ಲಿ ಹೆಚ್ಚು ಕಂಡುಬರುತ್ತವೆ. ಕಳೆದ ಮೂರು ವಾರಗಳಿಂದ ಮಳೆಯಿಂದ ನದಿಗಳೆಲ್ಲ ತುಂಬಿ ಹರಿಯುತ್ತಿರುವುದರಿಂದ ದೂರದ ಸ್ಥಳದಿಂದ ಪಕ್ಷಿಯು ಘಟಪ್ರಭಾ ನದಿಗುಂಟ ವಲಸೆ ಬಂದಿರಬಹುದು. ಹುಲ್ಲಿನ ಗರಿಯು ಕಾಲಿಗೆ ತೊಡಕಾಗಿ ಹಾರುವುದಕ್ಕೆ ಕಷ್ಟವಾಗಿದೆ’ ಎಂದು ಪಶು ವೈದ್ಯ ಡಾ. ಪ್ರಶಾಂತ ಕುರಬೇಟ, ಪ್ರತಿಕ್ರಿಯಿಸಿದರು.