ಸಿಂದಗಿ: ಮೌಲ್ಯಯುತ ಶಿಕ್ಷಣ ನೀಡುತ್ತಾ ಶಿಕ್ಷಣ ರಂಗದಲ್ಲಿ ಹಲವಾರು ಚೇತನಗಳಿಗೆ ಸ್ಫೂರ್ತಿಯಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗುವ ಶಿಕ್ಷಕರು ತಮ್ಮ ನಿವೃತ್ತಿ ಜೀವನವನ್ನು ಸಮಾಜಮುಖೀ ಚಿಂತನೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಬದುಕು ಸಾರ್ಥಕ ಪಡಿಸಿಕೊಳ್ಳಬೇಕು ಎಂದು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಲಯದ ದೈಹಿಕ ಶಿಕ್ಷಣಾಧಿಕಾರಿ ನಾಮದೇವ ಚವ್ಹಾಣ ಹೇಳಿದರು
ತಾಲೂಕಿನ ಬಂದಾಳ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಹಿರಿಯ ಶಿಕ್ಷಕ ಎಂ.ಬಿ.ಕೋರವಾರ ಅವರ ವಯೋ ನಿವೃತ್ತಿ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಭಾಗವಹಿಸಿ ಮಾತನಾಡಿ, ಬೋಧನಾ ಕೌಶಲ್ಯದಿಂದ ಶಿಕ್ಷಣ ರಂಗದಲ್ಲಿ ಸುದೀರ್ಘ ಸೇವೆ ಸಲ್ಲಿಸಿ ಸರ್ವರೊಂದಿಗೆ ಉತ್ತಮ ಬಾಂಧವ್ಯದೊಂದಿಗೆ ಸಾರ್ಥಕ ಸೇವೆ ಸಲ್ಲಿಸಿದ ಎಂ.ಬಿ .ಕೋರವಾರ ಅವರ ಸೇವೆ ಇಲಾಖೆಗೆ ತೃಪ್ತಿ ತಂದಿದೆ. ಅವರ ಮುಂದಿನ ನಿವೃತ್ತಿ ಜೀವನವನ್ನು ಬಯಸಿ ಬಂದ ವಿದ್ಯಾರ್ಥಿಗಳಿಗೆ ಶಿಕ್ಷಕರಿಗೆ ಮಾರ್ಗದರ್ಶನ ನೀಡುವ ಮೂಲಕ ಶಿಕ್ಷಣ ರಂಗದಲ್ಲಿ ಮಾರ್ಗದರ್ಶಕರಾಗಿ ಸಮಾಜಮುಖೀ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲಿ ಎಂದರು.
ಸನ್ಮಾನ ಹಾಗೂ ಗೌರವ ಸ್ವೀಕರಿಸಿ ಮಾತನಾಡಿದ ಹಿರಿಯ ಶಿಕ್ಷಕ ಎಂ.ಬಿ.ಕೋರವಾರ ಮಕ್ಕಳೊಂದಿಗೆ ಕಳೆದ ದಿನಗಳು ಹಾಗೂ ಹಲವಾರು ಗ್ರಾಮದಲ್ಲಿ ಸೇವೆ ಮಾಡಿರುವ ಶಾಲೆಗಳ ಕುರಿತು ಮಾತನಾಡಿ, ಶೈಕ್ಷಣಿಕವಾಗಿ ಸಾಮಾಜಿಕವಾಗಿ ತಿದ್ದಿ ಬೆಳೆಸಿದ ಸಾರ್ಥಕ ಸೇವೆ ಸಲ್ಲಿಸಿದ ತೃಪ್ತಿ ನನಗಿದೆ ಎಂದು ತಮ್ಮ ಸೇವೆಯ ದಿನಗಳನ್ನು ಸ್ಮರಿಸಿಕೊಂಡರು.
ಶಿಕ್ಷಕ ಚಂದ್ರಶೇಖರ ಬೂಯ್ಯಾರ ಮಾತನಾಡಿದರು.
ಶಾಲೆಯ ಮುಖ್ಯ ಶಿಕ್ಷಕ ನಿಂಗನಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು .ಶಿಕ್ಷಕ ಪಿ.ವ್ಹಿ ಕುಲಕರ್ಣಿ ವಚನ ಗಾಯನ ಮಾಡಿದರು. ಶಾಲಾ ಶಿಕ್ಷಕರಾದ ಸಿದ್ದಲಿಂಗಪ್ಪ ಪೋದ್ದಾರ, .ಶಿಕ್ಷಕಿಯರಾದ ಸುಮಂಗಲಾ ಕೆಂಬಾವಿ, ಮಲ್ಲಮ್ಮ ಹಿಪ್ಪರಗಿ, ಈಶ್ವರಿ ನಾಗಠಾಣ ಹಾಗೂ ಬಿಸಿ ಊಟದ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು. ಶಿಕ್ಷಕ ಬಸವರಾಜ ಅಗಸರ ಸ್ವಾಗತಿಸಿ ವಂದಿಸಿದರು.