spot_img
spot_img

ಶಾಸ್ತ್ರಿಗಳ ಸಾಹಿತ್ಯ ಕಾಲ

Must Read

- Advertisement -

ಕವಿ- ಕಾವ್ಯ ಲಕ್ಷಣಗಳು
( ಸರಳ ಕಾವ್ಯ ಮೀಮಾಂಸೆ)

ಕವಿತ್ವಕ್ಕೆ ಎಂಟು ಮೂಲಭೂತ ಅರ್ಹತೆಗಳನ್ನು ಹೇಳುತ್ತ ಅವು ಕಾವ್ಯದ ಉದಯಕ್ಕೆ ಅಷ್ಟ ಮಾತೆಯರಿದ್ದಂತೆ ಎಂದು ಕಾವ್ಯಮೀಮಾಂಸೆ ಬರೆದ ರಾಜಶೇಖರ ಹೇಳುತ್ತಾನೆ. ಆ ಅಷ್ಟಾಂಗಗಳಲ್ಲಿ ಒಂದೊಂದೇ ಅಂಗಗಳನ್ನು ತೆಗೆದುಕೊಂಡು ಅವುಗಳ ಅಗತ್ಯವನ್ನು ಮನವರಿಕೆ ಮಾಡಿಕೊಳ್ಳೋಣ.
” ಸ್ವಾಸ್ಥ್ಯಂ ಪ್ರತಿಭಾಭ್ಯಾಸೋ ಭಕ್ತಿರ್ವಿದ್ವತ್ಕಥಾ ಬಹುಶ್ರುತತಾ/
ಸ್ಮೃತಿದಾರ್ಢ್ಯಮನಿರ್ವೇದಶ್ಚ ಮಾತರೋಷ್ಟೌ ಕವಿತ್ವಸ್ಯ”
     ಪ್ರತಿಭೆಯ ಕುರಿತು ಈಗಾಗಲೇ ‌ಕೆಲವು ವಿಚಾರ ಹೇಳಲಾಗಿದೆ. ಎರಡನೆಯದು ” ಸ್ವಾಸ್ಥ್ಯ” ಅಂದರೆ ದೇಹ ಮನಸ್ಸುಗಳ ಸ್ವಸ್ಥತೆ. ಕವಿಯಾಗುವುದಕ್ಕೆ ಇದೂ ಅಗತ್ಯವಾ ಎಂದು ಕೆಲವರು ಅಚ್ಚರಿ ವ್ಯಕ್ತಪಡಿಸಬಹುದು. ಹಾಂ, ಇದೂ ಅಗತ್ಯ. ಅನಾರೋಗ್ಯ ಪೀಡಿತನಾದ ವ್ಯಕ್ತಿ ಅಥವಾ ಮಾನಸಿಕವಾಗಿ ಅಸ್ವಸ್ಥರಾದವರು ಉತ್ತಮ ಕಾವ್ಯ ರಚನೆ ಮಾಡುವುದು ಸಹಜವಾಗಿಯೇ ಕಷ್ಟ. ರಾಜಶೇಖರನೇ ಹೇಳುವಂತೆ ” ಕವಿಯಾಗುವವನು ಯಾವಾಗಲೂ ಶುಚಿಯಾಗಿರಬೇಕು. ಶುಚಿತ್ವ ಮೂರು ಬಗೆಯದು. ಒಂದು- ಮಾತಿನದು. ಎರಡು- ಮನಸ್ಸಿನದು. ಮೂರು- ದೇಹದ್ದು. ಕವಿಯ ದೇಹ ಮನಸ್ಸುಗಳ ಸ್ಥಿತಿ ಹೇಗಿರುತ್ತದೋ ಅದಕ್ಕೆ ತಕ್ಕ ಕಾವ್ಯ ರಚನೆಯಾಗುತ್ತದೆ. ಕಾವ್ಯ ರಚನೆ ಮಾಡುವಾಗ ಕವಿಯ ಮನಸ್ಸು ಪ್ರಫುಲ್ಲಿತವಾಗಿರಬೇಕು. ಅವನ ದೇಹವೂ ಆರೋಗ್ಯವಂತವಾಗಿರಬೇಕು. ಆಗ ಅವನಲ್ಲಿ ಉತ್ತಮ ವಿಚಾರಗಳು ಮೂಡಿಬರುತ್ತವೆ. ದೇಹ ಮತ್ತು ಮನಸ್ಸು ಅಸ್ತವ್ಯಸ್ತವಾಗಿದ್ದವರಿಗೆ ಬರೆಯಲು ಮನಸ್ಸು ಒಂದು ಕಡೆ ಹೇಗೆ ಸ್ಥಿರವಾಗಿರಲು ಸಾಧ್ಯ? ಚಂಚಲಚಿತ್ತರಾಗಿದ್ದವರ ಲೇಖನಿಯಿಂದ ಒಳ್ಳೆಯ ಸಾಹಿತ್ಯ ಅದು ಹೇಗೆ ಹೊರಬರಬಲ್ಲುದು?
ಮೂರನೆಯದು ” ಅಭ್ಯಾಸ”. ಎಲ್ಲರೂ ಬಲ್ಲಂತೆ  ಇದಂತೂ ಅನಿವಾರ್ಯ ಅಂಶ. ಭಾಮಹ ಕವಿ ಹೇಳುತ್ತಾನೆ -” ಕಾವ್ಯಕ್ಕೆ ಅಂಗವಾಗದ ಶಬ್ದವಿಲ್ಲ, ಅರ್ಥವಿಲ್ಲ, ನ್ಯಾಯವಿಲ್ಲ, ಕಲೆಯಿಲ್ಲ, . ಅಬ್ಬಾ, ಕವಿಯ ಭಾರ ಎಷ್ಟು ದೊಡ್ಡದು!”
ಅಂದರೆ ಇಲ್ಲಿ ಕವಿಯ ಜವಾಬ್ದಾರಿ ಎಷ್ಟು ದೊಡ್ಡದು ಎನ್ನುವುದನ್ನು ಆತ ಹೇಳುತ್ತಾನೆ. ಅಭ್ಯಾಸದಿಂದ ಕವಿ  “ವ್ಯುತ್ಪತ್ತಿ ಶಕ್ತಿ”ಯನ್ನು  ಪಡೆಯಬೇಕಾಗುತ್ತದೆ. ವ್ಯುತ್ಪತ್ತಿ ಎಂದರೆ ಅನೇಕ ವಿಷಯಗಳನ್ನು ತಿಳಿದಿರುವುದು. ಅದಕ್ಕೇ ರಾಜಶೇಖರ ಹೇಳುತ್ತಾನೆ -” ಇಂತಹ  ವಿಷಯದ ಅರಿವು ನನಗೆ ಅನಾವಶ್ಯಕ ಎಂದು ಕವಿ ನಿರಾಕರಿಸಬಹುದಾದ ವಿಷಯವೇ ಜಗತ್ತಿನಲ್ಲಿ ಇಲ್ಲ.” ಇದು ಬಹಳ ಮಹತ್ವದ ವಿಚಾರ. ಬರೆಹಗಾರರು ತಮಗೆ ಇಂತಹ ವಿಷಯ ಬೇಡ ಎನ್ನುವ ಪ್ರಶ್ನೆಯೇ ಇಲ್ಲ. ಅಭ್ಯಾಸದಿಂದ ಹೆಚ್ಚು ಹೆಚ್ಚು ವಿಷಯಗಳನ್ನು ತಿಳಿದುಕೊಳ್ಳುತ್ತ ಹೋಗುವುದೇ ಕವಿಯ ಕರ್ತವ್ಯ. ಆತ ಏನನ್ನೇ ಬರೆಯಲಿ , ಅದು ಅವನ ವಿಷಯ ಜ್ಞಾನವನ್ನು ಅವಲಂಬಿಸಿಯೇ ಉತ್ತಮಿಕೆಯನ್ನು ಪಡೆದುಕೊಳ್ಳುತ್ತದೆ.
ಕವಿಗೆ ಮೂರು ಬಗೆಯ ವಿಷಯಗಳಲ್ಲಿ ವ್ಯುತ್ಪತ್ತಿ ಅಗತ್ಯವೆಂದು ಮಮ್ಮಟ ಹೇಳುತ್ತಾನೆ. ಒಂದು- ಸಚರಾಚರವಾದ ಈ ಲೋಕದ ನಡೆವಳಿಕೆಯ ಪರಿಜ್ಞಾನ. ಎರಡು- ಕಾವ್ಯನಿರ್ಮಾಣದ ಅಂಗವಿದ್ಯೆಗಳಾದ ಛಂದಸ್ಸು, ವ್ಯಾಕರಣ, ಶಬ್ದಸಂಗ್ರಹ, ವಿವಿಧ ಕಲೆ ಶಾಸ್ತ್ರಗಳ ಜ್ಞಾನ. ಮೂರು- ಮಹಾಕಾವ್ಯ, ಇತಿಹಾಸ ಮೊದಲಾದವುಗಳ ಪರಿಚಯ( ಅನುಶೀಲನ).
ವ್ಯುತ್ಪತ್ತಿಗೆ ಇನ್ನೊಂದು ಅರ್ಥ – “ಉಚಿತಾನುಚಿತ ವಿವೇಕ” ಅಂದರೆ ಯಾವುದು ಉಚಿತ, ಯಾವುದು ಅನುಚಿತ ಎನ್ನುವುದನ್ನು ತೂಗಿ ನೋಡುವ ವಿವೇಚನಾಶಕ್ತಿ. ಇದನ್ನೇ ಔಚಿತ್ಯ ಜ್ಞಾನ ಎಂದೂ ಹೇಳಬಹುದು.
ಮತ್ತೊಂದು ಶಬ್ದ ” ಭಕ್ತಿ”. ಇಲ್ಲಿ ಭಕ್ತಿ ಎನ್ನುವುದನ್ನು ಶ್ರದ್ಧೆ, ನಿಷ್ಠೆ ಎಂಬರ್ಥದಲ್ಲಿ ಪರಿಗಣಿಸಬೇಕಾಗುತ್ತದೆ. ನಾವು ಮಾಡುವ ಯಾವುದೇ ಕೆಲಸದಲ್ಲಿ ನಮಗೆ ಶ್ರದ್ಧೆ ಇಲ್ಲದಿದ್ದರೆ ಆ ಕೆಲಸ ಸರಿಯಾಗಿ ಆಗುವುದು ಸಾಧ್ಯವಿಲ್ಲ. ಇದು ಎಲ್ಲರಿಗೂ ತಿಳಿದಿರುವ ಸಂಗತಿ. ಕಾವ್ಯರಚನೆಯ ವಿಷಯದಲ್ಲೂ ಅಷ್ಟೇ, ಕವಿ ಉಡಾಫೆ ಅಥವಾ ಲಘು ಮನೋಭಾವ ಹೊಂದಿದ್ದರೆ ಅವನಿಂದ ಉತ್ಕೃಷ್ಟ ಮಟ್ಟದ ಕಾವ್ಯ ರಚನೆ ಆಗಲಾರದು. ಅಂದರೆ ಕಾವ್ಯರಚನೆಯನ್ನು ನಾವು ಗಂಭೀರವಾಗಿ ಪರಿಗಣಿಸಬೇಕು ಎಂಬ ಸಲಹೆ ಇಲ್ಲಿದೆ.
ಐದನೆಯದು ” ವಿದ್ವತ್ಕಥಾ” ಅಂದರೆ ವಿದ್ವಾಂಸರೊಡನೆ ಮಾತುಕತೆ. ವಿವಿಧ ವಿಷಯಗಳ ಆಳವಾದ ಅಧ್ಯಯನ ಮಾಡಿದ ಹಿರಿಯ ವಿದ್ವಾಂಸರೊಡನೆ ಚರ್ಚಿಸುವುದರಿಂದ ಬರೆಹಗಾರನ ಜ್ಞಾನವೂ ವಿಸ್ತರಿಸುತ್ತದೆ. ಹೊಸ ಹೊಸ ವಿಷಯಗಳ ಅರಿವು ಉಂಟಾಗುತ್ತದೆ. ಕವಿಯ ಮನಸ್ಸಿನೊಳಗಿರುವ ಸಂದೇಹಗಳಿಗೆ ಪರಿಹಾರ ದೊರಕುತ್ತದೆ. ವಿದ್ವಜ್ಜನರ ಸಂಗದಿಂದ ಕವಿಯೂ ಪರಿಪಕ್ವತೆ ಪಡೆಯಲು ಅನುಕೂಲವಾಗುತ್ತದೆ.
ಮತ್ತೊಂದು ಅಂಶ ಕವಿ ಸ್ವತಃ ಪಾಂಡಿತ್ಯ ಪಡೆದು ಸಕಲ ವಿಷಯಗಳ ಜ್ಞಾನ ಪಡೆದುಕೊಳ್ಳುವುದು. ಎರವಲು ಪಾಂಡಿತ್ಯದಿಂದ ನಾವು ಹೆಚ್ಚು ಕಾಲ ಕಾವ್ಯಲೋಕದಲ್ಲಿ ಅಸ್ತಿತ್ವ ಉಳಿಸಿಕೊಳ್ಳುವುದು ಸಾಧ್ಯವಿಲ್ಲ. ಸ್ವಂತ ಸಾಮರ್ಥ್ಯ ಪಡೆದುಕೊಳ್ಳುವುದು ಬಹಳ ಮಹತ್ವ.
ಏಳನೆಯದು ದೃಢವಾದ ಜ್ಞಾಪಕಶಕ್ತಿ. ಓದುವುದು ಎಷ್ಟು ಮುಖ್ಯವೋ, ಓದಿದ್ದನ್ನು ನೆನಪಿನಲ್ಲಿಟ್ಟುಕೊಳ್ಳುವುದೂ ಅಷ್ಟೇ ಮುಖ್ಯ. ಅಧ್ಯಯನ ಮಾಡಿದ್ದನ್ನು  ಮನನ ಮಾಡಿಕೊಳ್ಳುವುದು ಎರಡನೆಯ ಹಂತ. ಯಾವುದೇ ವಿಷಯವನ್ನಾಗಲಿ ಮನನ ಮಾಡಿಕೊಂಡಾಗ ಮಾತ್ರ ಅದರ ಕುರಿತು ನಾವು ಇತರರು ತಿಳಿಯುವಂತೆ ಹೇಳುವುದು ಸಾಧ್ಯ. ನೆನಪಿನ ಶಕ್ತಿಯಿದ್ದಾಗ ಮಾತ್ರ ನಾವು ಓದಿದ ವಿಷಯವನ್ನು ಸಾಂದರ್ಭಿಕವಾಗಿ ಬಳಸಲು ಸಾಧ್ಯ.
ಎಂಟನೆಯದು ಉತ್ಸಾಹ. ಬರೆಹಗಾರನಲ್ಲಿ ಹಲವು ಬಗೆಯ ಉತ್ಸಾಹಗಳಿರಬೇಕಾಗುತ್ತದೆ. ಅದನ್ನೇ ಚೈತನ್ಯ ಅನ್ನುವುದು. ಓದುವ ಉತ್ಸಾಹ, ಬರೆಯುವ ಉತ್ಸಾಹ, ವಿದ್ವತ್ತನ್ನು ಗಳಿಸುವ ಉತ್ಸಾಹ, ಎಲ್ಲ ವಿಷಯಗಳನ್ನೂ ಅರಿತುಕೊಳ್ಳುವ ಉತ್ಸಾಹ ಇವೆಲ್ಲವುಗಳ ಮೂಲಕ ತನ್ನ ಮನಸ್ಸನ್ನು ಸದಾ ಚೈತನ್ಯಯುಕ್ತವಾಗಿ ಇರಿಸಿಕೊಳ್ಳಬೇಕಾದ್ದು ಕವಿಯ ಕೆಲಸ. ಅಂತಹ ಉತ್ಸಾಹಿ ಮನಸ್ಥಿತಿಯ ಕವಿ ಎಲ್ಲಿಯೇ ಇರಲಿ, ಅಲ್ಲಿಯ ವಾತಾವರಣವೇ ಪೂರ್ತಿ ಚೈತನ್ಯದಿಂದ ಕೂಡಿರುತ್ತದೆ. ಅಂದರೆ ಬರೆಹಗಾರರಾದ ನಾವು ನಮ್ಮನ್ನು ಉತ್ಸಾಹದಿಂದಿರಿಸಿಕೊಂಡು ನಮ್ಮ ಸುತ್ತ ಇರುವವರಲ್ಲಿಯೂ ಉತ್ಸಾಹವನ್ನು ತುಂಬುವಂತಿರಬೇಕು.
ಹೀಗೆ ಲಾಕ್ಷಣಿಕರು ಹೇಳುವ ಎಂಟು ಗುಣಗಳನ್ನು ಹೊಂದಿದವನಲ್ಲಿ ಕಾವ್ಯಶಕ್ತಿ ವಿಜೃಂಭಿಸುವಂತಾಗುತ್ತದೆ.
( ಸಶೇಷ)
ಎಲ್. ಎಸ್. ಶಾಸ್ತ್ರಿ

- Advertisement -
- Advertisement -

Latest News

ಕವನ : ಹೀಗೇ ಒಮ್ಮೆ

ಹೀಗೇ ಒಮ್ಮೆ ____________ ಹೀಗೇ ಒಮ್ಮೆ ನಾನು ನೀನು ಅದೇ ಮರದ ನೆರಳಲಿ ಕುಳಿತು ಮಾತಾಡಬೇಕಿದೆ ನೆನಪಿಸಿಕೊಳ್ಳಬೇಕಿದೆ ಮತ್ತೆ ಹಳೆಯ ಕ್ಷಣಗಳ ಹಂಚಿಕೊಂಡ ಕಥೆ ಕವನ ಮಾತು ಚರ್ಚೆ ಸಂವಾದ ನಗೆ ಪ್ರೀತಿಯ ಸವಿಯ ಸವಿಯಬೇಕಿದೆ. ಆಗ ನಮ್ಮಿಬ್ಬರ ಮಧ್ಯೆ ಮೆರೆದ ಆದರ್ಶಗಳ ಮೆಲುಕು ಹಾಕಬೇಕಿದೆ ಅಂದು ಮಳೆಯಲ್ಲಿ ತಪ್ಪನೆ...
- Advertisement -

More Articles Like This

- Advertisement -
close
error: Content is protected !!
Join WhatsApp Group