ಸಿಂದಗಿ: ಬಾಗಲಕೋಟ ಜಿಲ್ಲೆಯ ಪದವಿ ಕಾಲೇಜುಗಳನ್ನು ಬೆಳಗಾವಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯವು ಬೇರ್ಪಡಿಸಿ ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ಪ್ರತ್ಯೇಕ ವಿಶ್ವವಿದ್ಯಾಲಯವನ್ನು ಮಂಜೂರು ಮಾಡಿ ಬಾಗಲಕೋಟೆ ಜಿಲ್ಲೆಗೆ ಅನುಕೂಲ ಮಾಡಿಕೊಟ್ಟಿದೆ. ಇದು ನಮಗೆ ಸಂತಸ ತಂದಿದೆ. ಅದೇ ರೀತಿಯಾಗಿ ವಿಜಯಪುರ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪದವಿ ಕಾಲೇಜುಗಳಿಗೆ ಸಂಬಂಧಪಟ್ಟಂತೆ ಪ್ರತ್ಯೇಕ ವಿಶ್ವವಿದ್ಯಾಲಯವನ್ನು ವಿಜಯಪುರ ಜಿಲ್ಲೆಯಲ್ಲಿ ಸ್ಥಾಪಿಸಬೇಕು ಎಂದು ಶಾಸಕ ಅಶೋಕ ಮನಗೂಳಿ ವಿಧಾನಸಭೆಯಲ್ಲಿ ಸಭಾಧ್ಯಕ್ಷರಿಗೆ ಮತ್ತು ಸಂಬಂಧಿಸಿದ ಸಚಿವರಿಗೆ ಮನವಿ ಮಾಡಿಕೊಂಡರು.
ನಂತರ ಅವರು ಮಾತನಾಡಿ, ಬಾಗಲಕೋಟ ಜಿಲ್ಲೆಯಲ್ಲಿ ಸುಮಾರು 71 ಕಾಲೇಜುಗಳು ಕಾರ್ಯನಿರ್ವಹಿಸುತ್ತಿವೆ ಅವುಗಳನ್ನ ಜಮಖಂಡಿ ವಿಶ್ವವಿದ್ಯಾಲಯಕ್ಕೆ ಜೋಡಣೆ ಮಾಡಿದ್ದಾರೆ. ಆದರೆ ವಿಜಯಪುರ ಜಿಲ್ಲೆಯಲ್ಲಿ ಸುಮಾರು 132 ಪದವಿ ಕಾಲೇಜುಗಳು ಕಾರ್ಯನಿರ್ವಹಿಸುತ್ತಿದ್ದು ಕಾಲೇಜಿನ ಎಲ್ಲ ಕಾರ್ಯಗಳಿಗೆ ವಿಜಯಪುರ ಜಿಲ್ಲೆಯ ಜನ ಬೆಳಗಾವಿ ವಿಶ್ವವಿದ್ಯಾಲಯಕ್ಕೆ ಹೋಗಬೇಕಾಗಿರುವ ಸ್ಥಿತಿಯಿದೆ ಇದರಿಂದ ಹಣ ಮತ್ತು ಸಮಯದ ವ್ಯಯ ಹೆಚ್ಚಾಗುತ್ತಿದೆ. ವಿಜಯಪುರ ಜಿಲ್ಲೆಯಲ್ಲಿ ಪ್ರತ್ಯೇಕ ವಿಶ್ವವಿದ್ಯಾಲಯ ಸ್ಥಾಪನೆಗೊಂಡರೆ ಜಿಲ್ಲೆಯ ಜನತೆಗೆ ಹೆಚ್ಚು ಅನುಕೂಲವಾಗಲಿದೆ. ಒಂದು ವೇಳೆ ಜಿಲ್ಲೆಯಲ್ಲಿ ಪ್ರತ್ಯೇಕ ವಿಶ್ವವಿದ್ಯಾಲಯ ಸ್ಥಾಪನೆ ಕೂಡಲೇ ಮಾಡದಿದ್ದಲ್ಲಿ ಸದ್ಯ ವಿಜಯಪುರ ಜಿಲ್ಲೆಯ ಸುಮಾರು 132 ಕಾಲೇಜುಗಳನ್ನು ಜಮಖಂಡಿ ವಿಶ್ವವಿದ್ಯಾಲಯಕ್ಕೆ ಒಳಪಡಿಸಬೇಕು ಎಂದು ಸಭಾಧ್ಯಕ್ಷರ ಮೂಲಕ ಉನ್ನತ ಶಿಕ್ಷಣ ಸಚಿವರಿಗೆ ಶಾಸಕ ಅಶೋಕ ಮನಗೂಳಿ ಮನವಿ ಮಾಡಿಕೊಂಡರು.