ಬೀದರ್‌ನಲ್ಲಿ ಶಾಸಕರು ಹಾಗೂ ಎಂಎಲ್ಸಿಗಳ ವಿರುದ್ಧ ಬೃಹತ್ ಪ್ರತಿಭಟನಾ ರ್ಯಾಲಿ
ಬೀದರ – ಬೇಡ ಜಂಗಮರಿಗೆ ಎಸ್ಸಿ – ಎಸ್ಟಿ ಜಾತಿ ಪ್ರಮಾಣ ಪತ್ರ ನೀಡುವಂತೆ ಶಿಫಾರಸು ನೀಡಿದ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರ ವಿರುದ್ಧ ಪ್ರತಿಭಟನೆ ನಡೆದಿದೆ.
ಹುಮ್ನಾಬಾದ್ ಶಾಸಕ ರಾಜಶೇಖರ ಪಾಟೀಲ್, ಬೀದರ್ ಉತ್ತರ ಶಾಸಕ ರಹೀಂಖಾನ್, ಬಸವಕಲ್ಯಾಣ ಶಾಸಕ ಶರಣು ಸಲಗರ್, ಎಂಎಲ್ಸಿ ಚಂದ್ರಶೇಖರ ಪಾಟೀಲ್, ಭೀಮರಾವ್ ಪಾಟೀಲ್ ವಿರುದ್ಧ ಕರ್ನಾಟಕ ಪರಿಶಿಷ್ಟ ಜಾತಿ – ಪಂಗಡಗಳ ಸುಳ್ಳು ಜಾತಿ ಪ್ರಮಾಣ ಪತ್ರಗಳ ವಿರೋಧಿ ಹೋರಾಟ ಸಮಿತಿಯಿಂದ ಬೃಹತ್ ಪ್ರತಿಭಟನಾ ರ್ಯಾಲಿ ನಡೆಯಿತು.
ವಿವಿಧ ದಲಿತ ಪರ ಸಂಘಟನೆಗಳು ಸೇರಿ ಬೃಹತ್ ಪ್ರತಿಭಟನೆ ನಡೆದಿದ್ದು ಜಿಲ್ಲೆ – ಅಂತರ್ ಜಿಲ್ಲೆಯಿಂದ ಹೋರಾಟಕ್ಕೆ ಬರುತ್ತಿರುವ ಪರಿಶಿಷ್ಟ ಜಾತಿ ಹಾಗೂ ಪಂಗಡದ ಜನರು ಭಾಗಿಯಾಗಿ ಬೇಡ ಜಂಗಮರ ಹೆಸರಿನಲ್ಲಿ ಮೀಸಲಾತಿ ಕಬಳಿಸುತ್ತಿರುವ ವೀರಶೈವ ಹಾಗೂ ಲಿಂಗಾಯತ ವಿರುದ್ಧ ಬೃಹತ್ ಹೋರಾಟ ಆರಂಭಿಸಿದ್ದಾರೆ.
ಬೃಹತ್ ಪ್ರತಿಭಟನೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ ದಲಿತರು ಶಾಸಕರು ವಿಧಾನ ಪರಿಷತ್ ಸದಸ್ಯರ ವಿರುದ್ಧ ಕಿಡಿ ಕಾರಿದರು.
ಈ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಯಾಗದಂತ್ತೆ ಡಿಸಿ ಕಚೇರಿ ಹಾಗೂ ಅಂಬೇಡ್ಕರ್ ವೃತದಲ್ಲಿ ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿತ್ತು.
ಹಲವು ತಿಂಗಳಿನಿಂದ ಬೇಡ ಜಂಗಮ ಜಾತಿಗೆ ಎಸ್ ಸಿ ಎಸ್ ಟಿ ಪ್ರಮಾಣ ಪತ್ರ ನೀಡಬೇಕು ಎಂದು ಹೋರಾಟ ಮಾಡುತ್ತಿರುವ ವೀರಶೈವರ ವಿರುದ್ಧ ದಲಿತರು ಹೋರಾಟ ಮಾಡುತ್ತಿದ್ದು ನಿಜವಾದ ಬೇಡ ಜಂಗಮರನ್ನು ದಲಿತ ಒಕ್ಕೂಟ ವೇದಿಕೆಗೆ ಕರೆಸಿ ಹಾಡು ಹಾಡಿಸಿತು.
ವರದಿ: ನಂದಕುಮಾರ ಕರಂಜೆ, ಬೀದರ