ತಹಶೀಲ್ದಾರ್ ಆದ ಶಿಕ್ಷಕ ಮಲ್ಲಿಕಾರ್ಜುನ ಹೆಗ್ಗನ್ನವ
ಇದೇ ೨೦೨೪ ರ ಸಪ್ಟಂಬರ್ ೫ ರಂದು ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಸವದತ್ತಿಯ ನಿಕ್ಕಂ ಕಲ್ಯಾಣ ಮಂಟಪದಲ್ಲಿ ಜರುಗಿತ್ತು.ಅಂದು ಸವದತ್ತಿ ತಾಲೂಕಿನ ತಹಶೀಲ್ದಾರ್ ಮಲ್ಲಿಕಾರ್ಜುನ ಹೆಗ್ಗನ್ನವರ ಮಾತನಾಡಿದರು. ಇಡೀ ಸಭಾಂಗಣದಲ್ಲಿ ಸೇರಿದ ಶಿಕ್ಷಕರ ಕರತಾಡನಕ್ಕೆ ಅವರ ಮಾತುಗಳು ಸಾಕ್ಷಿಯಾಗಿದ್ದವು. ಕಾರಣ ಅವರು ತಾವು ಶಿಕ್ಷಕರಾಗಿ ತಮ್ಮ ಶಾಲೆಯಲ್ಲಿ ಮಕ್ಕಳ ಕಲಿಕೆಯಲ್ಲಿ ತಮ್ಮ ವೃತ್ತಿ ಬದ್ಧತೆ ಕುರಿತು ಅವರಾಡಿದ ಮಾತುಗಳು ಬಹಳ ಸ್ಪೂರ್ತಿದಾಯಕವಾಗಿ ಮೂಡಿ ಬಂದಿದ್ದವು.ನಾವು ಶಿಕ್ಷಕರಾಗಿ ಹೇಗಿರಬೇಕು ಎಂಬುದನ್ನು ಅವರ ಮನದಾಳದ ಮಾತುಗಳು ನಿಜಕ್ಕೂ ಸ್ಪೂರ್ತಿ.ಕಾರಣ ಅವರು ಸವದತ್ತಿ ತಾಲೂಕಿನ ಸಿಂದೋಗಿಯ ನೀರಾವರಿ ಕಾಲನಿಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ನಂತರ ಮುನವಳ್ಳಿ ವಲಯದ ಕ್ಷೇತ್ರ ಸಂಪನ್ಮೂಲ ವ್ಯಕ್ತಿಯಾಗಿ ಮಾಡಿದ ಅನುಭವ ಈ ಮಾತುಗಳಿಗೆ ಸಾಕ್ಷಿಯಾಗಿದ್ದವು.ನಮ್ಮ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮೋಹನ ದಂಡಿನ ಅವರು ತಮ್ಮ ಟಿ.ಸಿ.ಎಚ್ ಕಲಿಯುವಾಗಿನ ಗುರುಗಳು ಎಂದು ತಮ್ಮ ಗುರುಗಳನ್ನು ವೇದಿಕೆಯಲ್ಲಿ ಸ್ಮರಿಸುವ ಮೂಲಕ ಶಿಕ್ಷಕ ವೃತ್ತಿಯ ಪ್ರಾಮುಖ್ಯತೆಯನ್ನು ತಿಳಿಸಿದ್ದರು.
ತಾವು ತಹಶೀಲ್ದಾರ ಆಗಿರಬಹುದು ಆದರೆ ಶಿಕ್ಷಕ ವೃತ್ತಿಯಲ್ಲಿ ಆದ ಅನುಭವ ಯಾವತ್ತೂ ಮರೆಯಲಾಗದು ಎಂಬುದು ಅವರ ಅಭಿಪ್ರಾಯವಾಗಿತ್ತು. ಇಂದು ಸ್ವಂತ ತಾಲೂಕಿನಲ್ಲಿ ತಹಶೀಲ್ದಾರ ವೃತ್ತಿಯನ್ನು ನಿರ್ವಹಿಸುತ್ತಿರುವ ಮಲ್ಲಿಕಾರ್ಜುನ ಹೆಗ್ಗನ್ನವರ ಅವರ ಕುರಿತು ರೂಪಿಸಬೇಕೆಂದಿದ್ದ ಬರಹಕ್ಕೆ ಇಂದು ಜೀವ ಬಂದಿದೆ.
ಆತ್ಮೀಯರೇ ಮಲ್ಲಿಕಾರ್ಜುನ ಹೆಗ್ಗನ್ನವರ ಕುರಿತು ಎರಡು ಮಾತುಗಳನ್ನು ಹೇಳಲೇಬೇಕು.ನನ್ನ ಅವರ ಸಂಬಂಧ ನಿನ್ನೆ ಮೊನ್ನೆಯದಲ್ಲ.ಅವರ ತಂದೆ ನಮ್ಮ ತಂದೆಯ ಜೊತೆಗಿನ ಸಂಬಂಧ ನಾನು ಅರಟಗಲ್ ಸಮೂಹ ಸಂಪನ್ಮೂಲ ವ್ಯಕ್ತಿಯಾಗಿದ್ದ ಅವಧಿಯಲ್ಲಿ ಅವರು ಸಿಂದೋಗಿಯ ನೀರಾವರಿ ಕಾಲನಿಯಲ್ಲಿ ಶಿಕ್ಷಕರಾಗಿದ್ದ ದಿನಗಳಲ್ಲಿ ಅವರ ಸಹೋದರ ದಿವಂಗತ ಸುರೇಶ ಹೆಗ್ಗನ್ನವರ ಅವರ ಒಡನಾಟ ಎಂದೂ ಮರೆಯಲಾಗದ್ದು.ಸಿಂದೋಗಿ ಸಮೂಹ ಸಂಪನ್ಮೂಲ ಕೇಂದ್ರದ ಸಂಪನ್ಮೂಲ ವ್ಯಕ್ತಿಯಾಗಿದ್ದ ಸಿದ್ದಣ್ಣ ಕುಂಬಾರ ಹಾಗೂ ನಾನು ಯಾವುದೇ ಕಾರ್ಯಕ್ರಮವಿದ್ದರೂ ಜಂಟಿಯಾಗಿ ಆಯೋಜನೆ ಮಾಡಿರುತ್ತಿದ್ದೆವು.ಸಿದ್ದಣ್ಣ ಕುಂಬಾರ ಈಗ ಹೂಲಿಕಟ್ಟಿ ಸಮೂಹ ಸಂಪನ್ಮೂಲ ಕೇಂದ್ರದ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಿಸುತ್ತಿರುವರು.
ಪ್ರತಿಭಾ ಕಾರಂಜಿ ಕಾರ್ಯಕ್ರಮ ಸಂದರ್ಭದಲ್ಲಿ ಹಲವು ಚಟುವಟಿಕೆಗಳನ್ನು ಮಲ್ಲಿಕಾರ್ಜುನ ಮತ್ತು ಅವರ ಸಹೋದರ ಸುರೇಶ ನಿರ್ಣಾಯಕ ಪಾತ್ರವನ್ನು ವಹಿಸುತ್ತಿದ್ದ ರೀತಿಯನ್ನು ನಾನು ನೆನಪಿಸಲೇಬೇಕು.ಈಗ ಶಿಕ್ಷಣ ಸಂಯೋಜಕ ಹುದ್ದೆಯಲ್ಲಿರುವ ಸುಧೀರ ವಾಗೇರಿ ಕೂಡ ಅಂದು ನನ್ನ ಸಮೂಹ ಸಂಪನ್ಮೂಲ ಕೇಂದ್ರದಲ್ಲಿ ಅರಟಗಲ್ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು.ಈ ಎಲ್ಲ ಯುವ ಬಳಗ ನಮ್ಮ ಕಾರ್ಯಕ್ರಮದಲ್ಲಿ ಮುಂಚೂಣಿಯಲ್ಲಿರುತ್ತಿತ್ತು ಎಂದರೆ ಅತಿಶಯೋಕ್ತಿಯಲ್ಲ.
ಕಡು ಬಡತನದ ವ್ಯಕ್ತಿತ್ವ
ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ (ಸದ್ಯ ಯರಗಟ್ಟಿ ತಾಲೂಕಿಗೆ ಸೇರಿದೆ) ಸುಕ್ಷೇತ್ರ ಬೆನಕಟ್ಟಿ ಗ್ರಾಮದ ನಾಮದೇವ ಹಾಗೂ ಯಮನವ್ವ ದಂಪತಿಗಳ ಮಗನಾದ ಮಲ್ಲಿಕಾರ್ಜುನ ಹೆಗ್ಗನ್ನವರ, ೧೮-೧೨-೧೯೮೫ ರಂದು ಜನಿಸಿದರು.ಇವರಿಗೆ ಓರ್ವ ಸಹೋದರ(ಸುರೇಶ) ಓರ್ವ ಸಹೋದರಿ.ಇವರ ಸಹೋದರ ಕೂಡ ಶಿಕ್ಷಕನಾಗಿದ್ದನು ಎಂಬುದನ್ನು ಸ್ಮರಿಸಲೇಬೇಕು.ಆತನ ನಿಧನ ಈ ಕುಟುಂಬದ ಮೇಲೆ ಆಗಿರುವ ಪರಿಣಾಮ ಪದಗಳಲ್ಲಿ ಹೇಳಲು ಆಗದು.ಬೆನಕಟ್ಟಿ ಗ್ರಾಮದ ಕನ್ನಡ ಶಾಲೆಯಲ್ಲಿ ೧ ರಿಂದ ೭ ನೇ ತರಗತಿಯವರೆಗೆ ಕಲಿತು ನಂತರ ಕನಕದಾಸ ಪ್ರೌಢಶಾಲೆ ಯರಗಟ್ಟಿಯಲ್ಲಿ ೮ ಮತ್ತು ೯ ತರಗತಿ ವ್ಯಾಸಂಗ ಪೂರೈಸಿ ಕಾರಣಾಂತರಗಳಿಂದ ಸಂಸ್ಥೆ ಮುಚ್ಚಿದಾಗ ಬಸವೇಶ್ವರ ಸಂಸ್ಥೆಯ ಪ್ರೌಢಶಾಲೆಯಲ್ಲಿ ೧೦ ನೇ ತರಗತಿ ಓದುವ ಸಂದರ್ಭ.ನಂತರ ಪಿ.ಯು.ಕಾಲೇಜು ಶಿಕ್ಷಣಶಾಸ್ತ್ರ ವಿಷಯವನ್ನು ತಗೆದುಕೊಂಡು ಕನ್ನಡ ಮಾಧ್ಯಮದಲ್ಲಿ ರಾಜ್ಯಕ್ಕೆ ನಾಲ್ಕನೇ ಸ್ಥಾನ ಪಡೆದು ಕನ್ನಡ ಪ್ರಾಧಿಕಾರದಿಂದ ಗೌರವಕ್ಕೆ ಪಾತ್ರರಾದ ಇವರ ಬಾಲ್ಯದ ಬದುಕು ಬಡತನದ ಬೇಗೆಯಲ್ಲಿತ್ತು. ಇವರ ತಂದೆ ತಾಯಿ ಹೇಳುವುದನ್ನು ಕೇಳಿದಾಗ ಇವರಲ್ಲಿನ ಪ್ರಾಮಾಣಿಕತೆ ನೆನೆಯಲೇಬೇಕು.
ಆಗ ಮುನವಳ್ಳಿಗೆ ಪಿ.ಯು.ಸಿ ವ್ಯಾಸಂಗಕ್ಕೆ ಬೆನಕಟ್ಟಿಯಿಂದ ಬರುವುದು ಹೋಗುವುದು ಮಾಡುವ ಸಂದರ್ಭ.ಮನೆಯಲ್ಲಿ ಬಡತನದ ಬೇಗೆ. ಈಗಿನಂತೆ ಬಸ್ಸಿನ ಸೌಕರ್ಯವಿರಲಿಲ್ಲ. ಈ ರಸ್ತೆಯಲ್ಲಿ ಲಾರಿಗಳು ಸಾಕಷ್ಟು ಸಂಚರಿಸುತ್ತಿದ್ದವು.ಅವುಗಳ ಮೂಲಕ ಮುನವಳ್ಳಿಗೆ ಬರಬೇಕು.ಇವರ ತಂದೆ ತನ್ನ ದುಡಿಮೆಯಲ್ಲಿ ಮಕ್ಕಳ ಶಿಕ್ಷಣಕ್ಕೆ ಹಣ ನೀಡಬೇಕು.ಅವರು ಆಗ ಬೆನಕಟ್ಟಿ ದುರ್ಗಾದೇವಿ ದೇವಾಲಯದ ಪಕ್ಕದಲ್ಲಿ ಕಂಬಳಿ ನೇಯ್ಗೆ ಕೇಂದ್ರದಲ್ಲಿ ಅವರು ಕಂಬಳಿ ನೇಯುವ ವೃತ್ತಿ ಮಾಡುತ್ತಿದ್ದರು. ಮಗ ಮುನವಳ್ಳಿಗೆ ಹೋಗಿ ಬರಲು ಪ್ರತಿ ನಿತ್ಯ ಅವರು ನೀಡುತ್ತಿದ್ದ ಹಣ ಕೇವಲ ನಾಲ್ಕು ರೂಪಾಯಿಗಳು. ಇವರು ಲಾರಿಗಳ ಮೂಲಕ ಸಂಚರಿಸಿ ಹೋಗುವ ಮತ್ತು ಬರುವ ವೆಚ್ಚ ಕೇವಲ ಎರಡು ರೂಪಾಯಿಗಳು. ಉಳಿದ ಎರಡು ರೂಪಾಯಿಗಳನ್ನು ಮನೆಗೆ ಬಂದು ತಂದೆ ಇಟ್ಟಿದ್ದ ಪುಟ್ಟ ಡಬ್ಬಿಯಲ್ಲಿ ಹಾಕಿ ತಾಯಿ ಮಾಡಿದ್ದ ಅಡುಗೆ ಉಂಡು ತಂದೆಯ ಜೊತೆಗೆ ಕಂಬಳಿ ನೇಯಲು ಹೋಗಬೇಕು. ಸಂಜೆ ಹೊತ್ತು ಮನೆಯಲ್ಲಿದ್ದ ಜಾನುವಾರುಗಳಿಗೆ ಹುಲ್ಲು ತರಬೇಕು.ಪುಟ್ಟ ಮನೆಯಲ್ಲಿ ಸಹೋದರ ಸಹೋದರಿಯೊಂದಿಗೆ ಓದಬೇಕು. ಈ ದಿನಚರಿಯನ್ನು ಅವರ ತಂದೆ ಹೇಳುವಾಗ ಅವರ ಕಣ್ಣಂಚಿನಲ್ಲಿ ನೀರು ಇಂದಿಗೂ ಜಿನುಗುತ್ತದೆ. ಉಳಿದ ಎರಡು ರೂಪಾಯಿಯಲ್ಲಿ ನನ್ನ ಮಗ ಏನಾದರೂ ತಿನ್ನಬಹುದಿತ್ತು ಆದರೆ ಹಾಗೆ ಮಾಡದೇ ಅಂದಿನ ದಿನಗಳಲ್ಲಿ ಹಣವನ್ನು ಡಬ್ಬಿಯಲ್ಲಿ ಹಾಕಿ ಮರುದಿನಕ್ಕೆ ತೆಗೆದಿಡುವ ಆತನ ಕಾಳಜಿ ಮರೆಯಲಾಗದ್ದು ಎಂದು ತಮ್ಮ ಬದುಕಿನ ಆ ದಿನಗಳನ್ನು ನೆನೆಯುವರು.ಇಂತಹ ಕಠಿಣ ದಿನಗಳಲ್ಲಿ ಓದಿದ ಮಲ್ಲಿಕಾರ್ಜುನ ನಂತರ ಬೆಳಗಾವಿಯಲ್ಲಿ ಡಿ.ಈಡಿ ಓದಿ.ಸಿಂದೋಗಿಯ ಎಂ.ಎಲ್.ಬಿ.ಸಿ ಕಾಲನಿಯ ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಕ ಹುದ್ದೆಗೆ ನೇಮಕವಾದರು.
ಶಿಕ್ಷಕ ವೃತ್ತಿಯ ಅನುಭವ
೨೦೦೭ ರಲ್ಲಿ ಸಿಂದೋಗಿ ಎಂ.ಎಲ್.ಬಿ.ಸಿ ಕಾಲನಿಯಲ್ಲಿ ಸರಕಾರ ಕಿರಿಯ ಪ್ರಾಥಮಿಕ ಶಾಲೆಯನ್ನು ಆರಂಭಿಸಿತ್ತು. ಆಗ ಶಾಸಕರಾಗಿದ್ದವರು.ದಿವಂಗತ ರಾಜಣ್ಣ ಮಾಮನಿಯವರು.ಅವರ ಇಚ್ಚಾಶಕ್ತಿಯ ಫಲ ಈ ಶಾಲೆ ಶ್ರೀಶೈಲ ಕರೀಕಟ್ಟಿಯವರ ಮೂಲಕ ಪ್ರಾರಂಭಗೊಂಡಿತ್ತು. ಕೇವಲ ಇಬ್ಬರು ಶಿಕ್ಷಕರು ಈ ಶಾಲೆಯಲ್ಲಿ ಸೇವೆಯಲ್ಲಿದ್ದರು.ಆಗ ನಾನು ಅರಟಗಲ್ ಸಮೂಹ ಸಂಪನ್ಮೂಲ ಕೇಂದ್ರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿದ್ದೆ.ದಿನನಿತ್ಯವೂ ಬೆನಕಟ್ಟಿಯಿಂದ ಹೋಗಿ ಬರುತ್ತಿದ್ದ ಇವರು ಈ ಶಾಲೆಯಲ್ಲಿ ಶಿಕ್ಷಕ ವೃತ್ತಿ ನಿರ್ವಹಿಸಿದ ದಿನಗಳು ಇಂದಿಗೂ ನನ್ನ ಮನದಾಳದಲ್ಲಿವೆ.
ಇವರ ಸಹೋದರ ಆಗ ಅರ್ಟಗಲ್ ಶಾಲೆಯಲ್ಲಿ ಶಿಕ್ಷಕ.ಅಣ್ಣ ತಮ್ಮ ಇಬ್ಬರೂ ಕಲಿಸುವುದರಲ್ಲಿ ಬಹಳ ಜಾಣರು.ಇವರು ಸಹೋದರ ಸುರೇಶ.ಎನ್.ಆರ್. ನೀಲಾಕಾರಿ, ರೇಣುಕಾ,ಅಣ್ಣೀಗೇರಿ, ಗುರುಮಾತೆ ಕಾವೇರಿ ಈಚಲಕರಂಜಿ, ಗುರುಮಾತೆ ಸುಧೀರ ವಾಗೇರಿಯಂತಹ ಘಟಾನುಗಟಿ ಶಿಕ್ಷಕರು ಅರ್ಟಗಲ್ ದಲ್ಲಿ ಸೇವೆಯಲ್ಲಿದ್ದರು.ಮಲ್ಲಿಕಾರ್ಜುನ ಇವರು ಸಿಂದೋಗಿ ನೀರಾವರಿ ಕಾಲನಿಯಲ್ಲಿ ಶಿಕ್ಷಕರು.ನನ್ನ ಮನೆ ಇವರ ಶಾಲೆಗೆ ಹತ್ತಿರವಿದ್ದುದರಿಂದ ಶನಿವಾರ ಶಾಲಾ ಅವಧಿಯ ನಂತರ ತಮ್ಮ ಕಾರ್ಯಕ್ರಮಗಳ ಕುರಿತು ನನ್ನೊಂದಿಗೆ ಚರ್ಚಿಸುತ್ತಿದ್ದರು.ನಾನು ಮತ್ತು ಸಿಂದೋಗಿ ಸಂಪನ್ಮೂಲ ಕೇಂದ್ರದ ಸಂಪನ್ಮೂಲ ವ್ಯಕ್ತಿ ಸಿದ್ದಣ್ಣ ಕುಂಬಾರ ಏನೇ ಕಾರ್ಯ ಮಾಡಿದರೂ ಜೊತೆ ಜೊತೆಯಾಗಿಯೇ ಮಾಡುತ್ತಿದ್ದೆವು.ಈ ಸಂದರ್ಭದಲ್ಲಿ ಸಹೋದರರಿಬ್ಬರೂ ನಮ್ಮೊಂದಿಗೆ ಇರುತ್ತಿರುವುದನ್ನು ಇಲ್ಲಿ ಸ್ಮರಿಸಲೇಬೇಕು.
ಅರ್ಟಗಲ್ ಶಾಲೆಯಲ್ಲಿ ಇವರ ಸಹೋದರ ಮತ್ತು ಶಿಕ್ಷಕ ವೃಂದ ಪ್ರತಿ ಶನಿವಾರ ಕ್ವಿಜ್ ಕಾರ್ಯಕ್ರಮ ಶಾಲೆಯ ಆವರಣದಲ್ಲಿ ಜರುಗಿಸುತ್ತಿದ್ದರು.ನಾನು ಈ ಕಾರ್ಯಕ್ರಮಕ್ಕೆ ಹೋಗಲೇಬೇಕು.ಮುಂಚಿತವಾಗಿ ನನಗೆ ತಿಳಿಸುತ್ತಿದ್ದರು. ಮಕ್ಕಳ ಜ್ಞಾನ ವೃದ್ದಿಗೆ ಅವರು ಕೈಗೊಳ್ಳುವ ಕ್ವಿಜ್ ಬಹಳಷ್ಟು ಪಾರದರ್ಶಕ ಮತ್ತು ಮಕ್ಕಳ ಚಟುವಟಿಕೆ ಕಂಡು ನನಗೆ ಅವರ ಓದಿನ ಹಸಿವನ್ನು ನೋಡಿ ಬಹಳ ಸಂತಸವಾಗುತ್ತಿತ್ತು. ಹೀಗಾಗಿ ಪ್ರತಿಭಾ ಕಾರಂಜಿ ನಿರ್ಣಾಯಕರಾಗಿ ನಾಗೇಶ ಹೊನ್ನಳ್ಳಿ (ಸದ್ಯ ಸಿಂದೋಗಿ ಸಿಆರ್‌ಪಿ) ಮತ್ತು ಸುರೇಶ ಹೆಗ್ಗನ್ನವರ ನೇತೃತ್ವವನ್ನು ಮರೆಯಲಾಗದು.
ಒಂದು ಸಲ ಶ್ರೀಶೈಲ ಕರೀಕಟ್ಟಿ ಸಾಹೇಬರು (ಅಂದಿನ ಬಿ. ಇ. ಓ. ) ನನ್ನ ಅರ್ಟಗಲ್ ವಲಯದಲ್ಲಿ ತೆಗ್ಗಿಹಾಳ ಮಡ್ಡಿ ಎಂಬ ಸ್ಥಳದಲ್ಲಿ ಹೊಸ ಶಾಲೆಯನ್ನು ತೆರೆದ ಸಂದರ್ಭವನ್ನು ನೆನೆಯಲೇಬೇಕು.ಆಗ ತಲ್ಲೂರಕ್ರಾಸ್ ಮತ್ತು ತೆಗ್ಗಿಹಾಳದಲ್ಲಿ ಶಿಕ್ಷಕರ ಸಂಖ್ಯೆ ಇದ್ದರೂ ಕೂಡ ಮಲ್ಲಿಕಾರ್ಜುನ ಹೆಗ್ಗನ್ನವರ ಬೆನಕಟ್ಟಿಯಿಂದ ಹೋಗಿ ಬರುವುದನ್ನು ಗಮನಿಸಿದ ಕರೀಕಟ್ಟಿ ಸಾಹೇಬರು ಇವರನ್ನು ತೆಗ್ಗಿಹಾಳ ಮಡ್ಡಿಗೆ ನಿಯೋಜಿಸಿ ಆದೇಶ ಹೊರಡಿಸಿದ್ದರು. ಆ ದಿನ ಮಲ್ಲಿಕಾರ್ಜುನ ಹೆಗ್ಗನ್ನವರ ನನ್ನ ಬಳಿ ಬಂದು ತಮ್ಮ ಈ ಶಾಲೆಯಲ್ಲಿ ಮಾಡುತ್ತಿರುವ ಶೈಕ್ಷಣಿಕ ಚಟುವಟಿಕೆಗಳು ಕುಂಠಿತವಾಗುತ್ತವೆ.ಎಂಬುದನ್ನು ಚರ್ಚಿಸಿದಾಗ ಇವರು ಬೆನಕಟ್ಟಿ ಗ್ರಾಮದಿಂದ ಹೋಗುವುದನ್ನು ಮನಗಂಡಿದ್ದ ಕರೀಕಟ್ಟಿ ಸಾಹೇಬರ ಜೊತೆ ನಾನು ಚರ್ಚಿಸಿ ತೆಗ್ಗಿಹಾಳ ಮತ್ತು ತಲ್ಲೂರಕ್ರಾಸ ಶಾಲೆಯ ಶಿಕ್ಷಕರ ನಿಯೋಜನೆ ಮಾಡುವಂತೆ ಮನವಿ ಮಾಡಿಕೊಂಡಾಗ ಕರೀಕಟ್ಟಿ ಸಾಹೇಬರು ಕೂಡ ಅದಕ್ಕೆ ಸ್ಪಂದಿಸಿದ್ದರು.ಅಂದರೆ ತಾವು ಸೇವೆ ಸಲ್ಲಿಸುತ್ತಿದ್ದ ಮಕ್ಕಳ ಕಾಳಜಿ ಕುರಿತು ಮಲ್ಲಿಕಾರ್ಜುನ ಹೆಗ್ಗನ್ನವರ ಮಾಡುತ್ತಿದ್ದ ಕಾಳಜಿಗೆ ಇದೊಂದು ನಿದರ್ಶನವಷ್ಟೇ.ಅಷ್ಟೇ ಅಲ್ಲ ನೀರಾವರಿ ನಿಗಮದ ಕಚೇರಿ ಧಾರವಾಡದಲ್ಲಿ ಇತ್ತು.ಇವರು ಧಾರವಾಡದ ನಿಗಮದ ಕಚೇರಿಗೆ ಹೋಗಿ ಶಾಲೆಯ ಕುರಿತು ಕಾಗದ ಪತ್ರಗಳ ವಹಿವಾಟು ನಡೆಸಿರುವುದನ್ನು ಮರೆಯಲಾಗದು. ಇಂದಿಗೂ ಕೂಡ ನೀರಾವರಿ ನಿಗಮದಲ್ಲಿ ಈ ಶಾಲೆ ಕಂಡಾಗ ಮಲ್ಲಿಕಾರ್ಜುನ ಹೆಗ್ಗನ್ನವರ ಅವರ ಸೇವೆ ಕಣ್ಮುಂದೆ ಬರುತ್ತದೆ.
ಮುನವಳ್ಳಿ ಸಮೂಹ ಸಂಪನ್ಮೂಲ ಕೇಂದ್ರ ವ್ಯಕ್ತಿಯಾಗಿ
ಇದೇ ಸಂದರ್ಭದಲ್ಲಿ ಸಿಆರ್‌ಪಿ ಪರೀಕ್ಷೆಯನ್ನು ಮಲ್ಲಿಕಾರ್ಜುನ ಹೆಗ್ಗನ್ನವರ ಬರೆದು ಆಯ್ಕೆಯಾದರು.ಆಗ ನಾನು ಬಿಆರ್‌ಪಿಯಾಗಿ ಅರ್ಟಗಲ್‌ದಿಂದ ನಿಯೋಜನೆ ಮೇರೆಗೆ ಸವದತ್ತಿ ಗೆ ಬಂದಿದ್ದೆ. ಎಂ.ಬಿ.ಬಳಿಗಾರ್ ಸಾಹೇಬರು
(ಗೋಕಾಕ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಬಳಿಗಾರ ಅವರ ಸಹೋದರ) ನಮ್ಮ ಕ್ಷೇತ್ರ ಸಮನ್ವಯಾಧಿಕಾರಿಗಳಾಗಿದ್ದರು. ಮಲ್ಲಿಕಾರ್ಜುನ ಆಗ ಕೆಎಎಸ್ ಓದಿನಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಿಆರ್‌ಪಿ ಕಾರ್ಯ ನಿರ್ವಹಿಸುತ್ತಿದ್ದರು. ಮುನವಳ್ಳಿ ಕ್ಲಸ್ಟರ್ ದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಹೆಚ್ಚು.ಇಂತಹ ಸಂದರ್ಭದಲ್ಲಿ ಎಲ್ಲರನ್ನೂ ಒಗ್ಗೂಡಿಸಿಕೊಂಡು ಇಲಾಖೆಯ ಕಾಗದ ಪತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುವದರ ಜೊತೆಗೆ ಸರಕಾರದ ಶಿಕ್ಷಣ ಇಲಾಖೆಯ ಯೋಜನೆಗಳನ್ನು ಇವರು ನಿರ್ವಹಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.ಇವರು ವೃತ್ತಿ ಕಾರ್ಯದ ಜೊತೆಗೆ ಕರ್ನಾಟಕ ವಿಶ್ವವಿದ್ಯಾಲಯದ ಬಾಹ್ಯ ವಿದ್ಯಾರ್ಥಿಯಾಗಿ ಬಿ.ಎ ಪದವಿಯನ್ನು ಮತ್ತು ಎಂ.ಎ.ಸ್ನಾತಕೋತ್ತರ ಪದವಿಯನ್ನು ಇಂದಿರಾಗಾಂಧಿ ರಾಷ್ಟ್ರೀಯ ವಿಶ್ವವಿದ್ಯಾಲಯದಲ್ಲಿ ಬಿ.ಈಡಿ ವ್ಯಾಸಂಗವನ್ನು ಕೂಡ ಪೂರ್ಣಗೊಳಿಸಿರುವುದನ್ನು ನೆನೆದಾಗ ಜ್ಞಾನದ ಹಸಿವು ಇವರಲ್ಲಿ ಎಷ್ಟರಮಟ್ಟಿಗೆ ಇತ್ತು ಎಂಬುದು ಕಂಡು ಬರುತ್ತದೆ. ಈ ಸಂದರ್ಭದಲ್ಲಿ ಇವರು ಪ್ರೌಢಶಾಲಾ ಶಿಕ್ಷಕ ಹುದ್ದೆಗೆ ಅರ್ಜಿ ಸಲ್ಲಿಸಿ ಪರೀಕ್ಷೆ ಬರೆದು ಆಯ್ಕೆಯಾಗುವ ಜೊತೆಗೆ, ಪ್ರಥಮ ದರ್ಜೆ ಸಹಾಯಕ ಮತ್ತು ಪಿಡಿಓ ಹುದ್ದೆಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಆಯ್ಕೆಯಾದರು. ಈ ಮೂರೂ ಹುದ್ದೆಗಳಿಗೆ ಹಾಜರಾಗದೇ ಕೆಎಎಸ್ ಮಾಡಬೇಕೆಂಬ ಇವರ ಉತ್ಕಟ ಇಚ್ಚೆ ಇವರನ್ನು ತಹಶೀಲ್ದಾರ ಹುದ್ದೆಯ ಅಂಚಿನಲ್ಲಿ ತಂದು ನಿಲ್ಲಿಸಿತ್ತು.೨೦೧೪ ನೇ ಬ್ಯಾಚಿನ ತಹಶೀಲ್ದಾರ ಹುದ್ದೆ ಕರ್ನಾಟಕ ರಾಜ್ಯಕ್ಕೆ ೩೪ ನೇ ರ‍್ಯಾಂಕ ಪಡೆಯುವಲ್ಲಿ ಯಶಸ್ವಿ ಕೂಡ ಆಗಿದ್ದರು.ಮೊಟ್ಟ ಮೊದಲ ಹುದ್ದೆ ಅಂದು ಸಿದ್ದರಾಮಯ್ಯನವರು ಪ್ರತಿನಿಧಿಸಿದ್ದ ಬದಾಮಿ ಕ್ಷೇತ್ರಕ್ಕೆ ತಹಶಿಲ್ದಾರ ಆಗಿ ಆಡಳಿತದ ಅನುಭವ ಪಡೆಯುವ ಇವರ ಈ ಹುದ್ದೆ , ಮುಂದೆ ಬದಾಮಿಯಿಂದ ಹಾವೇರಿ ಜಿಲ್ಲೆಗೆ ವರ್ಗವಾದರು.
ತಹಶೀಲ್ದಾರ ಆಗಿ ವಿಶಿಷ್ಟ ರೀತಿಯ ಕಾರ್ಯ ನಿರ್ವಹಣೆ
ಶಿಕ್ಷಕ ವೃತ್ತಿಯಲ್ಲಿ ಎಷ್ಟರ ಮಟ್ಟಿಗೆ ಮಕ್ಕಳ ವಿದ್ಯಾರ್ಜನೆಗೋಸ್ಕರ ಕಾರ್ಯನಿರ್ವಹಿಸುತ್ತಿದ್ದರೋ ಅಷ್ಟೇ ಮುತುವರ್ಜಿ ವಹಿಸಿ ತಹಶಿಲ್ದಾರ್ ಹುದ್ದೆ ಕೂಡ ನಿಭಾಯಿಸಿರುವರು.೨೦೧೯ ರಲ್ಲಿ ರಾಜ್ಯಾದ್ಯಂತ ವಿಪರೀತ ಮಳೆಯಾಗಿ ಪ್ರವಾಹ ಪೀಡಿತ ಪರಿಸ್ಥಿತಿ ನಿರ್ಮಾಣವಾದಾಗ ಬದಾಮಿ ತಾಲೂಕಿನಲ್ಲಿ ಪ್ರವಾಹಕ್ಕೆ ಸಿಲುಕಿದ ೭೨ ಜನರನ್ನು ಎನ್.ಡಿ.ಆರ್.ಎಫ್ ಸಹಕಾರದೊಂದಿಗೆ ರಕ್ಷಿಸುವ ಜೊತೆಗೆ ೯೦ ಪ್ರವಾಹ ಸಂತೃಸ್ತ ಕುಟುಂಬಗಳಿಗೆ ತಾತ್ಕಾಲಿಕ್ ಶೆಡ್ ನಿರ್ಮಿಸಿಕೊಟ್ಟ ಮಾನವೀಯ ಕಾಳಜಿ ಇವರದ್ದು.ಚುನಾವಣೆ ಸಂದರ್ಭದಲ್ಲಿ ಹಾವೇರಿ ಜಿಲ್ಲೆಯ ಸವಣೂರನಲ್ಲಿ ಕಾರ್ಯ ನಿರ್ವಹಿಸುತ್ತಿರುವಾಗ ಚುನಾವಣಾ ನಿರತ ಶಿಕ್ಷಕ ಹಾಗೂ ಇತರ ಇಲಾಖೆಯ ಸಿಬ್ಬಂಧಿಗೆ ಚುನಾವಣೆ ಮುಗಿಸಿ ಮರಳಿ ಮನೆಗೆ ತೆರಳಲು ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳ ಸಹಕಾರದೊಂದಿಗೆ ಬಸ್ ಬಿಡಿಸಿದ್ದನ್ನು ಅಂದಿನ ದೂರದರ್ಶನ ವಾಹಿನಿಗಳು ಶಿಕ್ಷಕರು ಮತ್ತು ಇತರ ಇಲಾಖೆಗಳ ನೌಕರರ ಪ್ರತಿಕ್ರಿಯೆಗಳನ್ನು ಪ್ರಸಾರ ಮಾಡುವ ಮೂಲಕ ಇವರ ಕಾಳಜಿಯನ್ನು ಕೊಂಡಾಡಿದ್ದನ್ನು ಮರೆಯಲಾಗದು.ಅಧಿಕಾರ ಶಾಶ್ವತವಲ್ಲ ಇರುವಷ್ಟು ದಿನ ಮಾನವೀಯತೆಯ ಮೌಲ್ಯಗಳನ್ನು ಜೊತೆಗಿರಿಸಿಕೊಂಡು ಕಾರ್ಯ ನಿರ್ವಹಿಸಬೇಕು ಎಂಬುದಕ್ಕೆ ಮಲ್ಲಿಕಾರ್ಜುನ ಹೆಗ್ಗನ್ನವರ ನಿದರ್ಶನ.
ನಂತರ ಬೆಳಗಾವಿ ಜಿಲ್ಲೆಯ ರಾಮದುರ್ಗಕ್ಕೆ ವರ್ಗವಾಗಿ ಬಂದು ರಾಮದುರ್ಗ ತಹಶೀಲ್ದಾರ ಆಗಿ ಕರ್ತವ್ಯ ನಿರ್ವಹಿಸಿದರು.ಇಲ್ಲಿ ಭೂಮಿ ಸಾಪ್ಟವೇರ್ ಕಾರ್ಯದಲ್ಲಿ ಇಲಾಖೆಯ ಸಿಬ್ಬಂಧಿಯೊಡನೆ ಕಾರ್ಯ ನಿರ್ವಹಿಸಿ ರಾಜ್ಯಕ್ಕೆ ಪ್ರಥಮ ಸ್ಥಾನಕ್ಕೆ ಪಾತ್ರರಾದರು.ಇದು ಈ ಇಲಾಖೆಯಲ್ಲಿ ತಮ್ಮೊಂದಿಗೆ ಕಾರ್ಯ ನಿರ್ವಹಿಸುತ್ತಿರುವ ಎಲ್ಲರ ಪ್ರಯತ್ನಕ್ಕೆ ಸಂದ ಫಲ ಎಂಬುದನ್ನು ಸ್ಮರಿಸುವ ಇವರು ನಂತರ ಗದಗ ಜಿಲ್ಲೆಯಲ್ಲಿ ಸುಮಾರು ಆರು ತಿಂಗಳ ಕಾಲ (ಸಚಿವ ಎಚ್.ಕೆ.ಪಾಟೀಲರ ಕ್ಷೇತ್ರ) ಕಾರ್ಯ ನಿರ್ವಹಿಸಿ ಸವದತ್ತಿಗೆ ವರ್ಗಾವಣೆಗೊಂಡು ಸ್ವಂತ ತಾಲೂಕಿನಲ್ಲಿ ಕಾರ್ಯ ನಿರ್ವಹಿಸುತ್ತಿರುವರು.ಇಲ್ಲಿ ಬಂದ ನಂತರ ಲೋಕಸಭಾ ಚುನಾವಣಾ ಕಾರ್ಯ ನಿಮಿತ್ತ ನವಲಗುಂದ ತಾಲೂಕಿನಲ್ಲಿ ಕೂಡ ಕಾರ್ಯ ನಿರ್ವಹಿಸಿರುವರು.
ಸಹೋದರನ ಸ್ಮರಣೆ
ಇವರು ತಹಶೀಲ್ದಾರ ಆಗಿ ಉನ್ನತಿ ಹೊಂದಲು ಕಾರಣ ತಮ್ಮ ಸಹೋದರರಾದ ಸುರೇಶ ಎಂದು ಸ್ಮರಿಸುವ ಇವರು ಅವನ ಅಕಾಲಿಕ ಮರಣದಿಂದ ನೊಂದಿರುವರು.ವಿಧಿಯ ಕೈವಾಡ ಆತನ ಸಾವು ನಮಗೂ ಕೂಡ ಆಘಾತವನ್ನುಂಟು ಮಾಡಿದೆ. ನನ್ನ ಕ್ಲಸ್ಟರದಲ್ಲಿ ನನಗಂತೂ ಆತನ ಸಹಾಯ ಮರೆಯಲಾಗದು.ಅರ್ಟಗಲ್ ಶಾಲೆಗೆ ಕಂಪ್ಯೂಟರ್ (ಎನ್ ಪಿ ಜಿ ಎಲ್ ಯೋಜನೆಯಡಿ) ಪ್ರಿಂಟರ್ ತಂದಾಗ ನನ್ನ ಬಹುತೇಕ ಕಾರ್ಯಗಳನ್ನು ಸುರೇಶ ಮಾಡಿರುತ್ತಿದ್ದ.ಇಲಾಖೆ ಕೇಳುವ ನಮೂನೆಗಳನ್ನು ಕ್ಷಣಾರ್ಧದಲ್ಲಿ ಕಂಪ್ಯೂಟರ್‌ದಲ್ಲಿ ರಚಿಸಿ ಮಾಹಿತಿ ತುಂಬಿರುತ್ತಿದ್ದನು.ತನ್ನ ಅಣ್ಣನ ಹಾಗೆ ಆತ ಕೂಡ ಕೆ.ಎ.ಎಸ್ ಮಾಡುವ ಕನಸು ಕಂಡಿದ್ದನು.ಆ ಓದಿನಲ್ಲಿ ತೊಡಗಿದ್ದನು.ಬೆನಕಟ್ಟಿ ದುರ್ಗಾದೇವಿ ಜಾತ್ರೆಯ ಸಂದರ್ಭದಲ್ಲಿ ರಜಾ ಅವಧಿಯಲ್ಲಿ ತನ್ನ ಗೆಳೆಯರೊಂದಿಗೆ ರೂಮಿನಲ್ಲಿ ಓದುತ್ತಿದ್ದ ಈತ ಗೆಳೆಯರೊಂದಿಗೆ ಮೂತ್ರ ವಿಸರ್ಜನೆಗೆ ರಸ್ತೆಯ ಪಕ್ಕದ ಸ್ಥಳಕ್ಕೆ ತೆರಳುವ ಸಂದರ್ಭದಲ್ಲಿ ಟ್ಯಾಕ್ಟರ ಅಪಘಾತ ಇವನ ಸಾವನ್ನು ಕೊಂಡೊಯ್ದಿತ್ತು. ಮಲ್ಲಿಕಾರ್ಜುನನ ಬಗ್ಗೆ ಲೇಖನ ರೂಪಿಸಲೆಂದು ರವಿವಾರ ಬೆನಕಟ್ಟಿಯ ಇವರ ಮನೆಗೆ ಹೋದಾಗ ತಂದೆ ತಾಯಿ ಸುರೇಶನನ್ನು ನೆನೆದರು.ಇಂದಿಗೂ ಅವನ ಸಾವು ಕಣ್ಮುಂದೆ ಇದೆ.ಆದರೆ ಅವನ ಕಾರ್ಯ ಮರೆಯಲಾಗದು. ಮಲ್ಲಿಕಾರ್ಜುನ ಕೂಡ ನನ್ನ ಈ ಸಾಧನೆಗೆ ನನ್ನ ತಮ್ಮ ಸುರೇಶ ಕಾರಣ ಎಂದು ಹೇಳುವರು.
ಸುಖಿ ದಾಂಪತ್ಯ
ಮಲ್ಲಿಕಾರ್ಜುನ ಅವರ ಪತ್ನಿ ರಚಿತಾ.ಇವರು ಕೂಡ ಎಂಎಸ್ಸಿ ಪದವೀಧರೆ.ಪತಿಯ ಪ್ರತಿಯೊಂದು ಕಾರ್ಯದಲ್ಲೂ ಸ್ಪೂರ್ತಿ ತುಂಬುವ ಜೊತೆಗೆ ಮನೆಗೆಲಸ ಮಾಡಿಕೊಂಡು ಓದುವ ಹವ್ಯಾಸದೊಡನೆ ಇರುವರು.ಗಂಡ ಯಾವ ತಾಲೂಕಿಗೆ ವರ್ಗವಾಗಲಿ ಅಲ್ಲಿಯೇ ಮನೆ ಮಾಡಿ ವಾಸಿಸುವ ಮನೋಭಾವದ ಇವರ ಸರಳತೆ ನಿಜಕ್ಕೂ ಗಮನಾರ್ಹ., ಮಾನವೀಯತೆಯ ಮಲ್ಲಿಕಾರ್ಜುನನಿಗೆ ತಕ್ಕ ಪತ್ನಿಯಾಗಿರುವ ಇವರ ಸಹಕಾರ ಕೂಡ ಮಹತ್ವದ್ದು.ಇಷ್ಟರಲ್ಲಿ ಈ ದಂಪತಿಗಳ ಕುಟುಂಬಕ್ಕೆ ಹೊಸ ಸದಸ್ಯನ ಆಗಮನವಾಗುವುದು.ಆ ನಿರೀಕ್ಷೆಯಲ್ಲಿ ದಂಪತಿಗಳು ಇರುವರು.ಇವರ ಈ ಜೀವನ ಸುಖಕರವಾಗಿರಲಿ ಎಂದು ಹಾರೈಸುವ ಜೊತೆಗೆ ಓರ್ವ ಶಿಕ್ಷಕ ತನ್ನ ಬದುಕನ್ನು ಯಾವುದೇ ಉನ್ನತ ಸ್ಥಾನಕ್ಕೆ ಹೋದರೂ ಕೂಡ ಶಿಕ್ಷಕನಾಗಿ ಉಳಿಯಲಿ ಎಂದು ಆಶಿಸುವೆ.ನಮ್ಮ ತಾಲೂಕಿನ ವ್ಯಕ್ತಿ.ನಮ್ಮ ತಾಲೂಕಿನ ಹೆಮ್ಮೆ ಎಂದು ಮಾತ್ರ ಹೇಳಬಲ್ಲೆನು.
ವೈ.ಬಿ.ಕಡಕೋಳ, ಶಿಕ್ಷಕರು
ಮುನವಳ್ಳಿ
ಸವದತ್ತಿ ತಾಲೂಕು
ಬೆಳಗಾವಿ ಜಿಲ್ಲೆ