spot_img
spot_img

ನಮ್ಮೂರಿನ ರಥ ಚರಿತ್ರೆ ಗತ ವೈಭವ

Must Read

- Advertisement -

ರಾತ್ರಿ ಮೊಬೈಲ್ ನೆಟ್ ಕನೆಕ್ಷನ್ ತೆಗೆದು ಮಲಗಲು ಹಾಸಿಗೆ ಒದರುತ್ತಿದ್ದೆ. ಆಗ ಪೋನ್ ರಿಂಗಣ ಸಿತು. ಆ ಕಡೆಯಿಂದ ಡಿ.ಸುಂದರೇಶ್. ಸಾರ್, ಫೆಬ್ರವರಿ 16ಕ್ಕೆ ಗೊರೂರು ಜಾತ್ರೆ.  ಪೌರಾಣಿಕ ನಾಟಕೋತ್ಸವ ಈ ಬಾರಿಯ ವಿಶೇಷ. ಬನ್ನಿ ಸಾರ್, ಐದು ನಾಟಕಗಳ ನಾಟಕೋತ್ಸವ ನಾನು ಮೂರು ದಿನ ರಾತ್ರಿ ಶೋನಲ್ಲಿ ನಟಿಸುತ್ತಿದ್ದೇನೆ ಎಂದರು. ಸುಂದರೇಶ್ ಕಾಲೇಜು ದಿನಗಳಲ್ಲೇ ನನ್ನ ವ್ಯವಸ್ಥೆ ನಾಟಕದಲ್ಲಿ ನಟಿಸಿದ್ದರು. ಈಗ ಹಳ್ಳಿ ಪೇಟೆ ಪಟ್ಟಣಗಳಲ್ಲಿ ಸಾಮಾಜಿಕ ನಾಟಕಗಳ ಶೋ ಹೋಗಿ ಪೌರಾಣಿಕ ನಾಟಕಗಳ ವೈಭವಕ್ಕೆ ಮರುಕಳಿಸುತ್ತಿವೆ. ಸರಿ ಸುಂದರೇಶ್ ಎಂದು ಪವಡಿಸಿದೆ. ರಾತ್ರಿ ಸುಂದರ ಕನಸು  ನಮ್ಮೂರ ಜಾತ್ರೆಯ ಗತ ವೈಭವ…

ಮಾಘಮಾಸ ಹುಟ್ಟಿತು ಅಂದರೆ  ಊರಿನಲ್ಲಿ ರಥೋತ್ಸವದ ಜ್ಞಾನ ಅಸಾಧ್ಯ. ಉತ್ಸಾಹ ಅಪಾರ.  ಅದು ಪ್ರತಿಯೊಬ್ಬರಿಗೂ ತನ್ನ ಮನೆಯ ಹಬ್ಬವೆಂಬ ಭಾವನೆ. ಪ್ರತಿ ಮನೆಯೂ ಸುಣ್ಣ ಬಣ್ಣಗಳಿಂದ ಜಾತ್ರೆ ವೇಳೆಗೆ ಕಂಗೊಳಿಸುತ್ತವೆ. ಇಲ್ಲಿನ ನಿವಾಸಿಗಳಾಗಿ (ಈಗ ಹಾಸನದ ವಾಸಿ) ಆಗ ನಾವು  ಬಂಧುಗಳನ್ನು ಪತ್ರ ಬರೆದು ಆಹ್ವಾನಿಸುತ್ತಿದ್ದೆವು. ದೂರದ ಊರಿನಲ್ಲಿ ನೆಲೆಸಿರುವ ಗೊರೂರಿನ ಮಾಜಿ ನಿವಾಸಿಗಳು ಮರೆಯದೆ ಈ ರಥೋತ್ಸವಕ್ಕೆ ಆಗಮಿಸುತ್ತಾರೆ. ಸುತ್ತಲ ಗ್ರಾಮಸ್ಥರು ನೆಂಟರಿಷ್ಟರೊಡನೆ ರಥೋತ್ಸವಕ್ಕೆ ಬರುತ್ತಾರೆ. 

ರಥೋತ್ಸವಕ್ಕೆ ಒಂದು ವಾರ ಮುಂಚೆ ದನಗಳ ಜಾತ್ರೆ. ರಾಸುಗಳನ್ನು ಕೊಳ್ಳುವವರು, ಮಾರುವವರು  ದಳ್ಳಾಳಿಗಳಿಂದ ಊರು ಗಿಜಿಗುಡುತ್ತಿತ್ತು. ಮುಖ್ಯ ರಸ್ತೆ, ಯೋಗಾನೃಸಿಂಹಸ್ವಾಮಿ ದೇವಸ್ಥಾನ ರಸ್ತೆಗಳ  ಎರಡೂ ಬದಿ ಫ್ಯಾನ್ಸಿ ಅಂಗಡಿಗಳು ಪುರಿ ಕಾರ ಖರ್ಜೂರ ಮುಂತಾದ ಸಿಹಿತಿಂಡಿಗಳ ಅಂಗಡಿಗಳು. ಮನರಂಜನೆಯ ವೈವಿಧ್ಯ ರಾಟವಾಳಗಳ ತಿರುಗಾಟ. ಆಗ ವಿದ್ಯಾರ್ಥಿಗಳಾಗಿದ್ದ ನಮಗೆ ಈ ಹತ್ತು ದಿನ ಖುಷಿಯೋ ಖುಷಿ. 

- Advertisement -

ಮಾಘಶುದ್ಧ ಪ್ರಥಮೆಯಿಂದಲೇ ಶ್ರೀ ಪರವಾಸು ದೇವಸ್ಥಾನದಲ್ಲಿ ಸಮಾರಾಧನೆಗಳು ಪ್ರಾರಂಭ.  ಕೈ ತೇರಿನಲ್ಲಿ ಪ್ರಭಾವಳೆ, ಶೇಷ, ಗರುಡ, ಗಜ, ಸಿಂಹ, ಸೂರ್ಯಮಂಡಲ, ಪುಷ್ಪ ಮಂಟಪದಲ್ಲಿ ಉತ್ಸವಮೂರ್ತಿಯನ್ನು ಕೂರಿಸಿ ಹೂವಿನಿಂದ ಅಲಂಕರಿಸಿ ಬ್ರಾಹ್ಮಣರ ಬೀದಿಯಲ್ಲಿ ಸಂಜೆ ವೇಳೆ ಒಂದು ಸುತ್ತು ಎಳೆದು ಉತ್ಸಾಹ ಆಚರಿಸುತ್ತಾರೆ. 

ಪರವಾಸು ದೇವರ ದೇವಸ್ಥಾನದ ಪಕ್ಕ ಭೂತಾಕಾರದ ದೊಡ್ಡ ತೇರಿದೆ. ಈ ತೇರಿನ ಎತ್ತರಕ್ಕೆ  ಸಮನಾಗಿ ಕಲ್ಲು ಮಂಟಪ ನಿರ್ಮಿಸಿ ಹತ್ತಲು ಮೆಟ್ಟಲು ನಿರ್ಮಿಸಲಾಗಿದೆ.  ರಥೋತ್ಸವದ ದಿನ ಈ ಮಂಟಪ ಮತ್ತು ತೇರಿನ ಮಧ್ಯೆ ಹಲಗೆ ಇಟ್ಟು ತೇರಿನೊಳಗೆ ಪ್ರವೇಶಿಸಲು ಓಡಾಡಲು ಅನುಕೂಲ ಮಾಡಿಕೊಳ್ಳುತ್ತಾರೆ. ಈ ತೇರು ನಾಲ್ಕು ಚಕ್ರಗಳನ್ನೊಳಗೊಂಡ ಗಟ್ಟಿಯಾದ ಮರದಿಂದ ತಯಾರಿಸಲ್ಪಟ್ಟ ಸುಂದರವಾದ ಕೆತ್ತನೆ ಕೆಲಸಗಳನ್ನೊಳಗೊಂಡು ಬೃಹದಾಕಾರವಾಗಿದೆ. ರಥೋತ್ಸವಕ್ಕೆ ನಾಲ್ಕೈದು ದಿನ ಮೊದಲೇ ಅಡಿಕೆ ಬೊಂಬಿನಿಂದ ಎತ್ತರವಾಗಿ ಅಂಕಣ ನಿರ್ಮಿಸಿ ತುದಿಗಳಲ್ಲಿ ದಿಂಬುಗಳನ್ನು ನೇತು ಹಾಕಿರುತ್ತಾರೆ. ನಾಲ್ಕು ಅಂಕಣಗಳ ಮೇಲ್ತುದಿಯಲ್ಲಿ ಕಳಸವಿರುತ್ತದೆ. ಹಿಂದೆ ಎಂಟು ಅಂಕಣಗಳನ್ನು ಏರಿಸುತ್ತಿದ್ದರಂತೆ! ಗಗನಚುಂಬಿ ಎತ್ತರದಲ್ಲಿ ಕಳಸವು ಚುಕ್ಕಿಯಂತೆ ಕಾಣುತ್ತಿತಂತೆ! ಆದರೆ ಈಗ ಆ ರೀತಿ ಕಟ್ಟುವ ಕುಶಲಮತಿಗಳು ಇಲ್ಲದಿರುವುದರಿಂದಲೂ, ಕಿರಿದಾದ ದಾರಿಯಲ್ಲಿ ಭಾರಿ ಜನಸ್ತೋಮದ ನಡುವೆ ಎಳೆಯುವುದು ಅಪಾಯಕಾರಿ ಸಾಹಸವಾದುದರಿಂದಲೂ ಈಗ ನಾಲ್ಕು ಅಂಕಣಕ್ಕೆ ಸೀಮಿತಗೊಳಿಸಿದ್ದಾರೆ.

ರಥೋತ್ಸವ ದಿನ ಶ್ರೀ ಯೋಗಾನೃಸಿಂಹಸ್ವಾಮಿ ದೇವಾಲಯ ಭಕ್ತಾದಿಗಳಿಂದ ತುಂಬಿ ತುಳುಕುತ್ತದೆ. ಅಂದು ಪ್ರತಿ ಮನೆಯವರು ಹಣ್ಣು ಕಾಯಿ ನೆಂಟರಿಷ್ಟರೊಡನೆ  ದೇವಸ್ಥಾನಕ್ಕೆ ಹೋಗಿ ಬರುತ್ತಾರೆ. ಅಂದು ಬೆಳಿಗ್ಗೆ 5ಕ್ಕೆ ಪ್ರಾರಂಭವಾದ ಭಕ್ತರ ಕ್ಯೂ ತೇರು ಹರಿಯುವ ಹೊತ್ತಿಗೆ  ದೇವಸ್ಥಾನ ದಾಟಿ ರಸ್ತೆಗಿಳಿಯುತ್ತದೆ. ಅಂದು ನಾವು ಬೆಳಿಗ್ಗೆ ದೇವಸ್ಥಾನಕ್ಕೆ ಹೋಗಿ ಬರದೆ  ತಿಂಡಿ ತಿನ್ನುತ್ತಿರಲಿಲ್ಲ. ರಥ ಹರಿಯುವವರೆಗೆ ಊಟ ಮಾಡುತ್ತಿರಲಿಲ್ಲ. 

- Advertisement -

ಅಯ್ನೋಳ ಗುಡಿಯಲ್ಲಿ ಏನೇನು ಅಡ್ಗೆ ಊಟ ಮತ್ತೆ ಪನಿವಾರ ||

ನೆನೆಯಕ್ಕಿ ನೆನೆಗಡಲೆ ಪನಿವಾರ ನಮ್ಮ ಮುದ್ದು ನರಸಿಂಹನ ಗುಡಿಯಾಗೆ ||

ಮಧ್ಯಾಹ್ನದ ವೇಳೆಗೆ ಉತ್ಸವಮೂರ್ತಿಯನ್ನು ಶ್ರೀ ಯೋಗಾನೃಸಿಂಹಸ್ವಾಮಿ ದೇವಸ್ಥಾನದಿಂದ ಅಡ್ಡೆಯಲ್ಲಿಟ್ಟು ಮೆರವಣ ಗೆಯಲ್ಲಿ ಹೊತ್ತು ತಂದು ಈ ತೇರಿನಲ್ಲಿಡುತ್ತಾರೆ. ಎರಡು ಹೊರ್ಜಿಗಳಿಗೂ ಪೂರ್ತಾ ಜನ ನಿಂತು ಹಿಂದೆ ತ್ರಾಣವುಳ್ಳ 24 ಜನರು ಒಂದೊಂದು ಕಡೆಗೆ ಹೆದ್ನ ಕೊಡದೆ ಹೋದರೆ ಈ ತೇರು ಮಲಕುವುದಿಲ್ಲ. ಹೆದ್ನ ಹಾಕುವುದು ಬಹಳ ಕಷ್ಟವಾದ ಕೆಲಸ. ಸುಮಾರು ಹದಿನೆಂಟು ಮೊಳದ ಎರಡು ತೊಲೆ. ಅದರಲ್ಲಿ ಒಂದೊಂದು ಮೊಳಕ್ಕೆ ಒಂದೊಂದು ಕಂಡು, ಆ ಕಂಡಿಗೆ ಹಗ್ಗವನ್ನು ಕಟ್ಟಿ ಆ ಕಡೆ 12 ಜನ ಈ ಕಡೆ 12 ಜನ ಎತ್ತಿ ಅದನ್ನು ತೇರಿನ ಚಕ್ರಕ್ಕೆ ಕೊಟ್ಟು ಅಮುಕುವರು. ಎರಡು ಚಕ್ರಗಳಿಗೂ ಏಕಕಾಲದಲ್ಲಿ ಕೊಟ್ಟು ಮೀಟಿದರೆ ಆಗ ತೇರು ಅಲ್ಲಾಡುವುದಕ್ಕೆ ಪ್ರಾರಂಭವಾಗುವುದು. ಆ ಕಾಲದಲ್ಲಿ ಮುಂದುಗಡೆ ಹೊರ್ಜಿ ಹಿಡಿದವರು ಎಳೆದರೆ ತೇರು ಮುಂದಕ್ಕೆ ಚಲಿಸುವುದು.

ತೇರಿಗೆ ಹಿಂದುಗಡೆ ಹೆದ್ನ ಹೇಗೆ ಮುಖ್ಯವೋ ಮುಂದುಗಡೆ ಗೊದಮ ಹಾಗೆಯೇ ಮುಖ್ಯ. ಈ ಗೊದಮ ಎತ್ತಿಗೆ ಮೂಗುದಾರ ಹೇಗೋ ಹಾಗೇ. ಬೆಟ್ಟದಂತಹ ಆ ದೊಡ್ಡ ತೇರು ತಾನು ಹೊರಟ ಜಾಗವನ್ನು ಸುರಕ್ಷಿತವಾಗಿ ಆ ಚಿಕ್ಕ ಬೀದಿಗಳಲ್ಲಿ ನಾಲ್ಕು ಮೂಲೆಗಳನ್ನು ದಾಟಿ ಸ್ವಸ್ಥಾನ ಸೇರಬೇಕಾದರೆ ಗೊದಮ ಕೊಡುವವರಿಗೆ ಶಕ್ತಿ ಇರಬೇಕು. ಮುಂದೆ ಸಾವಿರಾರು ಜನ ಹೊರ್ಜಿ ಹಿಡಿದು ಎಳೆಯುತ್ತಿರುವಾಗ ಅಷ್ಟು ಜನರ ಬಲವೂ ಸೇರಿದಾಗ ತೇರು ಮನೆಗಳ ಮೇಲೆ ನುಗ್ಗದಂತೆ ಒಂದು ಚಿಕ್ಕ ಗೊದಮದಿಂದ ತಡೆ ಹಿಡಿಯಲು ಬಹಳ ಬುದ್ಧಿವಂತಿಕೆ ಬೇಕು. ಆ ಗಾಲಿಗಳು ನಮ್ಮ ಮೇಲೆಯೇ ಉರುಳಿ ಬರುವಂತೆ ಕಾಣುತ್ತದೆ. ಚಕ್ರದ ಮುಂದೆ ನಿಂತುಕೊಂಡು ಗೋದಮವನ್ನು ಆಚೆ ಈಚೆ ಕೊಟ್ಟು ತೇರು ಮನೆಗಳ ಮೇಲೆ ಜನರ ಮೇಲೆ ನುಗ್ಗದಂತೆ ಮಾಡಬೇಕಾದರೆ ಬಹಳ ಧೈರ್ಯ ಯುಕ್ತಿ ಬೇಕು. ಸ್ವಲ್ಪ ಹೆಚ್ಚು ಕಡಿಮೆ ಆದರೂ ಗೊದಮವೂ ಅದನ್ನು ಕೊಡುವವನೂ ಪುಡಿಪುಡಿ..!

ತೇರು ಹರಿದಾವೋ ತಾನಕ್ಕೆ ನಿಂತಾವೊ

ತಾರೋ ಚನ್ನಯ್ಯ ಜವನವ

ತಾರೋ ಚನ್ನಯ್ಯ ಜವನವ ಬಾಳೆಹಣ್ಣ

ಬೇಡಿಕೊಳ್ಳೆ ಮಗಳೆ ಸೆರಗೊಡ್ಡಿ

ಭಕ್ತಾದಿಗಳು ಬಾಳೆಹಣ ್ಣಗೆ ಜವನವ ಸಿಗಿಸಿ ಮೇಲ್ತುದಿಯಲ್ಲಿರುವ ಕಳಸಕ್ಕೆ ಹೊಡೆಯುವ ಸಾಹಸ ನಡೆಸುತ್ತಾರೆ. ತೇರು ಹರಿಯುವಾಗ ಜೋರು ಗಲಾಟೆಯಲ್ಲಿ ಜನ ಅತ್ತಿಂದಿತ್ತ ಓಡಾಡಿ ಒಬ್ಬರ ಕಾಲೊಬ್ಬರು ತುಳಿಯುವುದು ಸಾರಿ ಹೇಳಿ ಮುಂದೆ ಸಾಗುವುದು ಸರ್ವೆ ಸಾಮಾನ್ಯ.   ಅಪಾಯಕಾರಿ ಸಾಹಸ ಮಾಡಿ ನೋಡುಗರಿಗೆ ಭೀತಿ ಹುಟ್ಟಿಸುವ ಹೆದ್ನ ಹಾಕುವವರು, ಗೊದಮ ಕೊಡುವವರಿಗಿಂತ ಹೊರ್ಜಿ ಹಿಡಿದು ಎಳೆಯುವವರ ಆರ್ಭಟವೇ ಜೋರು. ಗೊರೂರು ನೆನಪುಗಳು ಪುಸ್ತಕದ ಲೇಖಕರು ಗೊರೂರು ಸೋಮಶೇಖರ್ ಅವರು ಜಾತ್ರೆಯ ಮೆರಗನ್ನು ಒಂದು ಕವನದಲ್ಲಿ ಕಟ್ಟಿಕೊಡುತ್ತಾರೆ.  

ಗೌರಿಯ ದಿನದಾಗೆ ತುಂಬಿ ಹರಿವ ಗಂಗೆ ಪೂಜೆ

ದೀವಳಿಗೆ ದಿನದಾಗೆ ಮಿರುಗುವ ಗೋ ಪೂಜೆ

ಸಂಕ್ರಾಂತಿ ದಿನದಾಗೆ ಭೂತಾಯ ಬೆಳೆ ಪೂಜೆ

ಸುಗ್ಗಿಯ ದಿನದಾಗೆ ಸಲಹೊ ಸ್ವಾಮಿಯ ಪೂಜೆ

  ಸ್ವಾಮಿ ಬರುವನೋ ತೇರನೇರ್ವನೋ

  ಹೂವ ಮುಡಿವನೋ ಪೂಜೆಗೊಳ್ವನೋ

  ಕಾಯ ಒಡೆವರೋ ಕರ್ಪೂರ ಬೆಳಗ್ವಿರೋ

  ಹಗ್ಗ ಹಿಡಿವರೋ ತೇರನೆಳೆವರೋ

 ಛಾಯಗ್ರಾಹಕ ಜಗದೀಶ್ ರಾಮಘಟ್ಟ ಜಾತ್ರೆಯ ನಾಟಕೋತ್ಸವದ ಆಹ್ವಾನ ಪತ್ರಿಕೆ ವ್ಯಾಟ್ಸಪ್ ಮಾಡಿದ್ದರು. ಪ್ರಚಂಡ ರಾವಣ ನಾಟಕದಲ್ಲಿ ರಾವಣ ಪಾತ್ರದಲ್ಲಿ ಪ್ರಚಂಡ ಅಭಿನಯ ಮೊನ್ನೆ ಹಾಸನದಲ್ಲಿ ಮೆರೆದಿದ್ದರು. ಇವರಿಗೆ ಈ ವರ್ಷದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.  ಹಾಗೆಯೇ ನಟರು ಕಾವ್ಯ ಚಿತ್ರದ ನಿರ್ಮಾಪಕರು ಜಿ.ಎನ್. ವೆಂಕಟರಾಮನ್  ಒಂದು ಮೆಸೇಜ್ ಕಳಿಸಿದ್ದರು. ಗೊರೂರಿನ ನೂತನ ರಥಕ್ಕೆ ಇಪ್ಪತ್ತೈದು ವರ್ಷ. ಅರೇ! ಆಗಲೇ 25 ವರ್ಷ ಕಳೆದು ಹೋಯಿತೇ! ಅಂತೆಯೇ ನಾನು ಆ ಸಂದರ್ಭ ಬರೆದಿದ್ದ ಬರಹ ಕಳಿಸಿದ್ದರು. ನಿಮ್ಮ  ಅನುಭವ ಒಂದಿಷ್ಟು ಕಳಿಸಿ ಎಂದು ಪೋನಾಯಿಸಿದೆ. ಅವರು ಕಿರಿದಾಗಿ ಬರೆದು ನನಗೆ ಇಷ್ಟೇ ಬರೆಯಲು ಸಾಧ್ಯ ಎಂದಿದ್ದರು.  ಸುಮಾರು 300 ವರ್ಷಗಳಷ್ಟು ಹಳೆಯದಾದ ಶ್ರೀ ಯೋಗನರಸಿಂಹಸ್ವಾಮಿ ಹಳೇ ಬ್ರಹ್ಮರಥವು ಶಿಥಿಲಗೊಂಡಿತ್ತು. 1998ರ ಮುಂಚೆ ಏಳೆಂಟು ವರ್ಷ ರಥೋತ್ಸವ ಕಾರ್ಯ ಕುಂಠಿತಗೊಂಡಿತ್ತು. ಕಾರಣ ರಥವು ತುಂಬಾ ಶಿಥಿಲಸ್ಥಿತಿಯಲ್ಲಿದ್ದು ಎಳೆಯಲು ಯೋಗ್ಯವಾಗಿರದೇ ತುಂಬಾ ಭಕ್ತಾದಿಗಳು ನಿರಾಶೆಯಲ್ಲಿದ್ದರು. ಮೂರ್ನಾಲ್ಕು ಸಮಿತಿಗಳು ಈ ಕಾರ್ಯದಲ್ಲಿ ಶ್ರಮಿಸಿ ಕಾರ್ಯ ಕೈಗೂಡಲಿಲ್ಲ. 1996ರಲ್ಲಿ ನರಸಿಂಹ ಜಯಂತಿ ನಂತರ  ದೇವಸ್ಥಾನದ ಸಮಿತಿ ಪರವಾಗಿ ಹತ್ತಾರು ಜನ ನನ್ನ ಸಂಪರ್ಕ ಮಾಡಿ ಈ ಕಾರ್ಯವನ್ನು ನಾನು ಮಾಡುತ್ತೇನೆಂದು ನಂಬಿ ಈ ಜವಾಬ್ದಾರಿಯನ್ನು ವಹಿಸಿದರು. ನಮ್ಮ ತಾತನವರು ಪಟೇಲ್ ವೆಂಕಟಚಾರ್ ದೇವಸ್ಥಾನದ ಕೆಲಸಗಳಲ್ಲಿ ತುಂಬಾ ತಲ್ಲೀನರಾಗಿದ್ದರು. ಅವರ ಮೊಮ್ಮಗನಾಗಿ ಈ ಕೆಲಸ ಮಾಡಬೇಕೆಂದು ನನ್ನನ್ನು ಪ್ರೇರೇಪಿಸಿ ಈ ಕಾರ್ಯ ವಹಿಸಿದ್ದರು. ಒಂದು ಸಮಿತಿ ರಚಿಸಿ ಕೆಲಸ ಪ್ರಾರಂಭಿಸಿದೆವು.   ಶ್ರೀ ಯೋಗಾನರಸಿಂಹಸ್ವಾಮಿ ನವರಥ ನಿರ್ಮಾಣ ಸಮಿತಿ ಈ ಕಾರ್ಯವನ್ನು ಅಚ್ಚುಕಟ್ಟಾಗಿ ಪೂರ್ಣಗೊಳಿಸಿತು. ಸಮಿತಿಯಲ್ಲಿ ಸರ್ವಶ್ರೀ ಜಿ.ಎನ್.ವೆಂಕಟರಾಮನ್ ಅಧ್ಯಕ್ಷರು, ಜಿ.ಎನ್.ಲಕ್ಷ್ಮೀಪತಿ ಉಪಾಧ್ಯಕ್ಷರು ಜಿ.ವಿ.ಶೇಷಾದ್ರಿ ಕಾರ್ಯಾಧ್ಯಕ್ಷರು, ಜಿ.ಎಸ್.ಗೋಪಾಲಕೃಷ್ಣ, ಕಾರ್ಯದರ್ಶಿ, ಎನ್.ರಾಘವಚಾರ್ ಖಜಾಂಚಿ, ಜಿ.ಆರ್.ಜಗನ್ನಾಥ್, ಜಿ.ಡಿ.ಕೇಶವಮೂರ್ತಿ, ಜಿ.ಭೋಜರಾಜ್, ಜಿ.ಎಸ್.ಚಂದ್ರಶೇಖರಯ್ಯ, ಜಿ.ಪಿ.ರಾಮು, ಜಿ.ಕೆ.ಹುಚ್ಚಯ್ಯ ಸ್ಥಳೀಯ ನಿವಾಸಿ ಸದಸ್ಯರು ಇದ್ದರು. 

ಒಳ್ಳೆಯ ಕುಶಲ ಕರ್ಮಿಗಳನ್ನು ಗುರುತಿಸಿ ಒಳ್ಳೆಯ ವಿವಿಧ ಜಾತಿಯ ಮರಗಳನ್ನು ತಂದು ಒಂದು ವರ್ಷದಲ್ಲಿ ಸುಮಾರು 30 ಲಕ್ಷ ರೂ. ವೆಚ್ಚದಲ್ಲಿ ಶಾಸ್ತ್ರೋಕ್ತವಾಗಿ 1998ರ ಜನವರಿ 30,31 ಮತ್ತು ಫೆಬ್ರವರಿ 1 (ರಥ ಸಪ್ತಮಿ)ರÀಂದು ಸಕಲ ಜಾತಿಯವರೆಲ್ಲಾ ಕೂಡಿ ನವರಥ ಪ್ರತಿಷ್ಠಾಪನ ಮಹೋತ್ಸವವನ್ನು ಅತಿ ವಿಜೃಂಭಣೆಯಿಂದ ನಡೆಸಿ ಇಂದಿಗೆ 25ನೇ ರಥೋತ್ಸವ ನಡೆಯುತ್ತಿದೆ. ನಾನು (ಗೊರೂರು ಅನಂತರಾಜು) ಅಂದು ನವರಥ ಶಿಲ್ಪಿಗಳಾದ ಎ.ಆರ್.ಚಂದ್ರಶೇಖರ ಆಚಾರ್ಯ ಮತ್ತು ಸುರೇಶಚಾರ್ಯರನ್ನು ಮಾತನಾಡಿಸಿ ಲೇಖನ ಮಾಡಿದ್ದೆ. ಮರದಲ್ಲಿ 80 ಕ್ಕೂ ಹೆಚ್ಚು ಕಲಾತ್ಮಕ ವಿಗ್ರಹಗಳನ್ನು ಕೆತ್ತಿ ರಥಕ್ಕೆ ಅಳವಡಿಸಿದ್ದರು. ರಥದ ನಾಲ್ಕು ದಿಕ್ಕಿಗೂ ಅಳವಡಿಸಿರುವ ಸಿಂಹ ಗರ್ಜನೆಯ ಶಿಲ್ಪಗಳು ಶಕ್ತಿ ಸಂಕೇತವಾಗಿ ರಥ ಎಳೆಯುವವರಿಗೆ ಸ್ಫೂರ್ತಿದಾಯಕವಾಗಲಿ ಎಂಬ ಆಶಯದಿಂದ ನಿರ್ಮಿಸಿ ಅಳವಡಿಸಿದರೆ ದೃಷ್ಟಿ ದೋಷ ನಿವಾರಣೆಗಾಗಿ ಮೂರು ಮಿಥುನ ಶಿಲ್ಪಗಳನ್ನು ಅಳವಡಿಸಲಾಗಿದೆ. ಎಂಟೂ ದಿಕ್ಕಿಗೂ ಅಷ್ಟದಿಕ್ಪಾಲಕರು, ರಥದ ಸುತ್ತಲೂ ದಶಾವತಾರ ದೃಶ್ಯಗಳು, ವಿಗ್ರಹಗಳು ಮತ್ತು 16 ಪ್ರಧಾನ ವಿಗ್ರಹಗಳನ್ನು ಸಂಯೋಜಿಸಿದ್ದಾರೆ.  

ನಮ್ಮೂರಿನ ರಥೋತ್ಸವ ಕುರಿತ್ತಾಗಿ ಡಾ. ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ಸ್ವಾರಸ್ಯಕರವಾಗಿ ಬರೆದಿದ್ದಾರೆ. ಗೊರೂರಿನಲ್ಲಿ ನರಸಿಂಹಸ್ವಾಮಿಯ ರಥೋತ್ಸವ ಪ್ರಾರಂಭವಾದ ದಿನದಿಂದ ಇಂದಿನವರೆಗೂ ನರಸಿಂಹಚಾರ್ಯರ ಮೂಲೆ ಮನೆಯ ಜಗಲಿಯನ್ನು ಸವರುವುದು ನಿಂತಿಲ್ಲ. ತೇರಿನ ಓಟ ಯಾವಾಗಲೂ ಬಲಗಡೆಗೆ ಇದೆ. ಆದರೆ ಈ ಮನೆ ಇರುವುದು ಎಡಗಡೆಯಲ್ಲಿ. ಆದರೂ ಈ ಮನೆಯ ಜಗಲಿಯನ್ನು ಸವರಿಕೊಂಡು ಹೋಗುವುದು ನಿಂತಿಲ್ಲ. ಗೊದಮದವರು ಎಷ್ಟು ಪ್ರಯತ್ನ ಮಾಡಿದರೂ ತೇರು ನೆಟ್ಟಗೆ ಬಂದು ಇಲ್ಲಿ ಒಂದು ಗಳಿಗೆ ನಿಂತು ಬಿಡುತ್ತದೆ. ಆಗ ಮನೆಯ ಯಜಮಾನ ತನ್ನ ಮನೆಯ ಜಗಲಿಯನ್ನು ಕಡೆವಿದ ತೇರಿನ ಗಾಲಿಗೆ ತೆಂಗಿನಕಾಯಿ ಇಡುಗಾಯಿ ಹಾಕಿ ಮಂಗಳಾರತಿ ಮಾಡಿದ ನಂತರ ತೇರು ಮುಂದಕ್ಕೆ ಹೊರಡುವುದು.  

ಅಪ್ಪನ ಹೆಗ್ಗಲಲ್ಲಿ ಅವ್ವನ ಬಗಲಲ್ಲಿ ಮಕ್ಕಳು ನಲಿದಾರೋ…

ತೇರಿನ ಕಳಸಕ್ಕೆ ಹಣ್ಣು ದವನವ ಪ್ರಾಯ್ದರೋ ಒಗೆದಾರೋ…

ಭಕ್ತಿಯ ಪರವಶ ಸಡಗರ ಸಂತಸ ಸ್ವಾಮಿ ನನ್ನಪ್ಪ ಕಾಪಾಡೆಂದಾರೋ…

ಕೈ ಕೈ ಹಿಡ್ಕೊಂಡು ಜಾತ್ರೆ ಮಾಳ ಸುತ್ತುತ್ತಾ ಕಣ್ತುಂಬ ನೋಡಿದಾರೋ…

 ಪೀಪಿಯ ಊದುತ್ತ ಬತಾಸು ಚೀಪುತ್ತಾ ಹೈಕಳು ನಲಿದಾರೋ…

ಕಳ್ಳೆಪುರಿ ಮೆಲ್ಲುತ್ತಾ, ಸ್ವಾಮಿಯ ನೆನೆಯುತ್ತಾ  ಮನೆಕಡೆ ಹೊಂಟಾರೋ.


ಗೊರೂರು ಅನಂತರಾಜು, ಹಾಸನ. 

ಮೊ:9449462879. 

ಹುಣಸಿನಕೆರೆ ಬಡಾವಣೆ, 29ನೇ ವಾರ್ಡ್,  ಶ್ರೀ ಶನೀಶ್ವರ ದೇವಸ್ಥಾನ  ರಸ್ತೆ, ಹಾಸನ.

- Advertisement -
- Advertisement -

Latest News

ಕವನ : ಗೊಂಬೆಗಳ ಕಣ್ಣೀರು

ಗೊಂಬೆಗಳ ಕಣ್ಣೀರು ಅಂದು ನಾವು ಅಪ್ಪ ಅವ್ವನನ್ನು ಕಾಡಿ ಬೇಡಿ ಗೊಂಬೆಗಳಿಗಾಗಿ ಅಳುತ್ತಿದ್ದೆವು ಜಾತ್ರೆ ಉತ್ಸವದಲ್ಲಿ ಹಿರಿಯರಿಗೆ ದೇವರ ಮೇಲಿನ ಭಕ್ತಿ ನಮಗೋ ಬಣ್ಣ ಬಣ್ಣದ ಗೊಂಬೆಗಳ ಮೇಲೆ ಆಸಕ್ತಿ ಅವ್ವ ಹೇಗೋ ಮಾಡಿ ಅಪ್ಪನ ತುಡುಗಿನಲಿ ತನ್ನಲಿದ್ದ ದುಡ್ಡು ಕೊಟ್ಟು ತಂದಳು ಗೊಂಬೆಗಳ ಮಿತಿ ಇರಲಿಲ್ಲ...
- Advertisement -

More Articles Like This

- Advertisement -
close
error: Content is protected !!
Join WhatsApp Group