spot_img
spot_img

ಇಂದಿನ ಮಾತು

Must Read

- Advertisement -

ಮಧುರಕಾನನ ಕಣ್ಣಿಗೆ ಬಿತ್ತು. ಮನಸು ಹಿಂದಕ್ಕೋಡಿತು

ಮಧುರಕಾನನ ಗೋಪಾಲಕೃಷ್ಣ ಭಟ್ ಅವರು, ನಮಗೆ ಹೈಸ್ಕೂಲಿನಲ್ಲಿ ಕನ್ನಡ ಪಾಠ ಮಾಡಿದ ಗುರುಗಳು. ಮಧುರಕಾನನ ಎಂಬುದು ಅವರ ಮನೆಯ ಹೆಸರು. ಅವರು ಸುಧೀರ್ಘ ಕಾಲ ವಾಸಿಸಿದ ಅವರ ಮನೆಯ ಪರಿಸರದವರೆಗೆ ಇಂದು ಅನಿರೀಕ್ಷಿತವಾಗಿ ಹೋಗಬೇಕಾಯಿತು. ಅವರ ಮನೆ ಹಿತ್ತಲಿನ ಗೇಟಿನ ಕಂಬದಲ್ಲಿ ‘ಮಧುರಕಾನನ’ ಎಂಬ ಹೆಸರಿನ ಫಲಕ ಈಗಲೂ ಅಲ್ಪಸ್ವಲ್ಪ ಮಾಸಿಕೊಂಡು ತೂಗುತ್ತಿದೆ. ಆದರೆ ಗುರುಗಳು ಇಂದಿಲ್ಲ.! “ಅವರ ಮನೆಯವರೂ ಅಲ್ಲಿಲ್ಲ” ಎಂದು ನನ್ನ ಜತೆಗಿದ್ದವರು ತಿಳಿಸಿದರು.

ಅರೆತೆರೆದ ತುಕ್ಕು ಹಿಡಿದ ಗೇಟು, ಹಳೆಯ ರಸ್ತೆ ಕಾಣುವಾಗ ಯಾಕೋ ಬೇಸರವಾಯಿತು. ಸರ್ ಅವರ ಜೀವಂತಿಕೆಯ, ಪಾಂಡಿತ್ಯಪೂರ್ಣವಾದ ಪಾಠ ಪ್ರವಚನ ನೆನಪಾಯಿತು

ಗುರುಗಳು ಇದೇ ಹಿತ್ತಿಲಿನ ಒಳಗಿರುವ ಮನೆಯಲ್ಲಿ ವಾಸಿಸುತ್ತಿದ್ದರು. ಇದೇ ರಸ್ತೆಯಲ್ಲಿ, ಇದೇ ಗೇಟು ದಾಟಿ ದಶಕಗಳವರೆಗೆ ಅಗಲ್ಪಾಡಿ ಶ್ರೀ ಅನ್ನಪೂರ್ಣೇಶ್ವರಿ ಶಾಲೆಗೆ ತಮ್ಮ ಲ್ಯಾಂಬಿ ಸ್ಕೂಟರಿನಲ್ಲಿ ಬರುತ್ತಿದ್ದುದು..! ಒಂದೆರಡು ಸಲ ಅವರ ಸ್ಕೂಟರ್ ಅಪಘಾತಕ್ಕೆ ಈಡಾದುದರ ಬಗ್ಗೆ ಹೇಳಿಕೇಳಿ ಗೊತ್ತು.!

- Advertisement -

ಹೆಲ್ಮೇಟ್ ಕಡ್ಡಾಯ ನಿಯಮ ಇಲ್ಲದ ಕಾಲದಲ್ಲೂ ಅವರು ಶಿರಸ್ತ್ರಾಣ ಇಲ್ಲದೆ ಸ್ಕೂಟರ್ ಓಡಿಸುವುದನ್ನು ನಾನು ನೋಡಿಲ್ಲ.

ನಮ್ಮ ಆರು – ಏಳನೆ ತರಗತಿ ಇರುವ ಕಟ್ಟಡ ಇದ್ದುದು ಶಾಲೆಯ ಪ್ರವೇಶ ದ್ವಾರದಲ್ಲಿ. ಅಲ್ಲೊಂದು ಗೇಟು ಇತ್ತು. ಸರ್ ಯಾವತ್ತೂ ಹತ್ತು ಗಂಟೆಯ ಮೊದಲೇ ಶಾಲೆ ತಲುಪುತ್ತಿದ್ದರು. ನಾವು ಕೆಲವು ಗೆಳೆಯರು ಪಾದರಕ್ಷೆ ಇಲ್ಲದೆ ಬರಿ ಪಾದದಲ್ಲಿ ಎರಡು ಕಿ.ಮೀ ನಡೆದುಕೊಂಡು ಶಾಲೆಗೆ ಬರುತ್ತಿದ್ದೆವು. ಸರ್ ಅವರು ಸ್ಕೂಟರಿನಲ್ಲಿ ಗೇಟು ಸಮೀಪ ತಲುಪಿದಾಗ ಗೇಟು ತೆರೆಯಲು ತಾಮುಂದು ತಾಮುಂದೆಂದು ಗೇಟಿನ ಬಳಿಗೆ ವಿದ್ಯಾರ್ಥಿಗಳಾದ ನಾವು, ಓಡಿ ಬರುತ್ತಿದ್ದೆವು.

ಅವರು ಶಾಲೆಗೆ ಬಂದು ತಲುಪಿದ ಕೂಡಲೇ ಸ್ಕೂಟರ್ ನ್ನು ಅದರ ಸ್ಥಾನದಲ್ಲಿಟ್ಟು, ಶಿರಸ್ತ್ರಾಣ ತೆಗೆದು, ಅಸ್ತವ್ಯಸ್ತವಾದ ಉದ್ದ ತಲೆಕೂದಲಿಗೆ ನೀರು ಹಾಕಿ, ತಲೆಕೂದಲು ಚೆಂದಕೆ ಬಾಚಿ, ರೆಡಿಯಾಗುತ್ತಿದ್ದರು.

- Advertisement -

ಸ್ವತಃ ಕವಿಯೂ ನಾಟಕಕಾರನೂ ಸಾಹಿತಿಯೂ ಆಗಿರುವ ಅವರಿಗೆ, ಹಳೆಗನ್ನಡದ ಬಗ್ಗೆ ವಿಶೇಷ ಆಸಕ್ತಿ. ಅವರು ಬರೆದ ‘ಸಿದ್ಧಾರ್ಥ’ ಎಂಬ ನಾಟಕವು ನಮಗೆ ಏಳನೆಯ ತರಗತಿಯಲ್ಲಿ ಪಾಠಕ್ಕೆ ಇತ್ತು. ಆದ ಕಾರಣ ನಮಗೆ ಹೈಸ್ಕೂಲಿನಲ್ಲಿ ಕಲಿಸಲಿರುವ ಗುರುಗಳ ಬಗ್ಗೆ ಎಳವೆಯಲ್ಲಿಯೇ ಪರಿಚಯವಾಗಿತ್ತು.

ಮಧುರಕಾನನ ಗೋಪಾಲಕೃಷ್ಣ ಭಟ್ ಅವರ ಪಾಠವೂ ಅರ್ಥಪೂರ್ಣ. ಅವರು ನಮಗೆ ಷಡಕ್ಷರ ಕವಿಯ ಕೋಳೂರ ಕೊಡಗೂಸು, ಕುಮಾರವ್ಯಾಸನ ಭಾರತ ಕಥಾಮಂಜರಿ, ಸುಧನ್ವ ವಿಜಯ, ತೊರವೆ ಕವಿಯ ತೊರವೆ ರಾಮಾಯಣ ಈ ಕಾವ್ಯಭಾಗಗಳನ್ನು ಪಾಠ ಮಾಡುತ್ತಿದ್ದ ಪರಿ, ಈಗಲೂ ಮನದೊಳಗೆ ಹಚ್ಚ ಹಸುರು.

ಆಗ ನಾವು ಕಾವ್ಯಭಾಗಗಳೆಲ್ಲವನ್ನೂ ಕಡ್ಡಾಯವಾಗಿ ಕಂಠಸ್ಥ ಮಾಡಬೇಕಾಗಿತ್ತು. ಅದನ್ನು ತರಗತಿಯಲ್ಲಿ ಹೇಳಬೇಕಾಗಿತ್ತು. ತಪ್ಪಿದರೆ ಹತ್ತು ಸಲವೋ ಇಪ್ಪತ್ತು ಸಲವೋ ಬರೆಯಬೇಕಾಗಿತ್ತು.!

ಆದ ಕಾರಣ ಅಂದು ಕಂಠಸ್ಥ ಮಾಡಿದ ಹಳೆಗನ್ನಡ, ಹೊಸಗನ್ನಡ ಕಾವ್ಯಗಳು ಇಂದಿಗೂ ಹಾಗೇ ನೆನಪಿವೆ. ಈಗ ಪದವಿ ಅಥವಾ ಸ್ನಾತಕೋತ್ತರ ಪದವಿ ತರಗತಿಗಳಿಗೆ ಹಳೆಗನ್ನಡ ಭಾಷೆ ಸಾಹಿತ್ಯ ಬೋಧಿಸುವಾಗ ಸಾಂದರ್ಭಿಕವಾಗಿ ವಿದ್ಯಾರ್ಥಿಗಳಿಗೆ ವಿವರಿಸುವಾಗ ಓತಪ್ರೋತವಾಗಿ ಕಾವ್ಯಸಾಲುಗಳನ್ನು ಸುಶ್ರಾವ್ಯವಾಗಿ ಹಾಡುವಾಗ ತರಗತಿಯ ವಿದ್ಯಾರ್ಥಿಗಳು ಬೆರಗುಗಣ್ಣುಗಳಿಂದ ನೋಡುವುದಿದೆ.!

ಯಾಕೆಂದರೆ ಈಗ ಕಂಠಪಾಠ ಮಾಡುವ ಕ್ರಮ ಶಿಕ್ಷಣ ವ್ಯವಸ್ಥೆಯಲ್ಲಿ ಇಲ್ಲ. ಅಥವಾ ವಿದ್ಯಾರ್ಥಿಗಳಿಂದ ಕಂಠಪಾಠ ಮಾಡಿಸುವ ವ್ಯವಸ್ಥೆ ಸಲ್ಲ.

ಮಾತ್ರವಲ್ಲ ಈಗಿನ ಹಿರಿಯ ಪ್ರಾಥಮಿಕ, ಪ್ರೌಢ ಶಾಲೆ, ಹಿರಿಯ ಪ್ರೌಢಶಾಲೆಗಳಲ್ಲಿ ಹಳೆಗನ್ನಡ ಕಾವ್ಯಗಳಿಗೆ ಒತ್ತು ಕಡಿಮೆ. ಮಧುರಕಾನನ ಸರ್ ಅವರಂತೆ ಪಾಠ ಮಾಡುವವರೂ ಇಂದು ವಿರಳ.

ನಮ್ಮ ಹಳೆಗನ್ನಡ ಕಾವ್ಯದ ಆಸಕ್ತಿ ಕಂಡು ಇಂದಿನ ವಿದ್ಯಾರ್ಥಿಗಳು “ಹೇಗೆ ಸರ್ ಇಷ್ಟೊಂದು ಕಾವ್ಯಭಾಗ ನಿಮಗೆ ಕಂಠಸ್ಥ ಆಗಿರುವುದು?” ಎಂದು ಕೇಳಿದಾಗ, “ಎಲ್ಲವೂ ನಮ್ಮ ಯುಪಿ ಹಾಗೂ ಹೈಸ್ಕೂಲು ತರಗತಿಗೆ ಪಾಠ ಮಾಡಿದ ಗುರುವರ್ಯರ ಕೃಪೆ. ಹೊರತು ನನ್ನ ಸಾಮರ್ಥ್ಯ ವೋ ಪ್ರತಿಭೆಯೋ ಅಲ್ಲ.” ಎಂದು ಹೇಳುವುದಿದೆ.

ಶಾಲೆಯಲ್ಲಿ ಕಲಿಯುವಾಗ ನಾನು ಕಲಿಕೆಯಲ್ಲಿ ಮೊದಲ ಸಾಲಿನ ವಿದ್ಯಾರ್ಥಿಯೇನೂ ಅಲ್ಲ. ಗಣಿತಶಾಸ್ತ್ರ, ರಸಾಯನ ಶಾಸ್ತ್ರವಂತೂ ನನಗೆ ತಲೆಬುಡ ಅರ್ಥವಾಗುತ್ತಿರಲಿಲ್ಲ. ಹುಟ್ಟಿನಿಂದಲೇ ನನಗೆ ಇದ್ದ ದೃಷ್ಠಿದೋಷವೂ (ದೂರದೃಷ್ಠಿ ದೋಷ) ಇದಕ್ಕೆ ಪ್ರಮುಖ ಕಾರಣ. ನನಗೆ ಇಷ್ಟೊಂದು ದೊಡ್ಡ ದೃಷ್ಟಿ ದೋಷ ಇದೆಯೆಂದು ಶಾಲಾಬದುಕಿನಲ್ಲಿ ನನಗೆ ಗೊತ್ತೇ ಆಗಲಿಲ್ಲ. ಅಧ್ಯಾಪಕರಿಗಾಗಲೀ ಮನೆಯವರಿಗಾಗಲೀ ಸ್ವತಃ ನನಗಾಗಲೀ ಇದು ಹೈಸ್ಕೂಲು ಕಳೆಯುವವರೆಗೆ ಗೊತ್ತಾಗದೆ ಇದ್ದುದನ್ನು ನೆನೆಸುವಾಗ ಈಗಲೂ ಆಶ್ಚರ್ಯವಾಗುತ್ತದೆ.!

ಆದ ಕಾರಣ ಕರಿಹಲಗೆಯಲ್ಲಿ (Black Board)ಬರೆದು ಪಾಠ ಮಾಡಬೇಕಾದ ವಿಷಯಗಳನ್ನು ಅರಗಿಸಿಕೊಳ್ಳುವಲ್ಲಿ ನಾನು ಹಿಂದುಳಿದೆ. ಆದರೆ ಪುಸ್ತಕ ಓದಿ ಅರಗಿಸಿಕೊಳ್ಳುವ ವಿಷಯದಲ್ಲಿ ನಾನು ಹಿಂದೆ ಉಳಿಯಲಿಲ್ಲ. ಅದರಲ್ಲೂ ಕನ್ನಡ ಭಾಷೆ ಸಾಹಿತ್ಯ ನನ್ನ ಇಷ್ಟದ ವಿಷಯವಾಗಿತ್ತು. ತರಗತಿಯಲ್ಲಿ ಒಂದನೇ ರೇಂಕು ಪಡೆವವರು ಕನ್ನಡದಲ್ಲಿ ಪಡೆದ ಅಂಕ ನನಗೂ ಆ ವಿಷಯದಲ್ಲಿ ಸಿಗುತ್ತಿತ್ತು. 50 ರಲ್ಲಿ 48 ಅಂಕ ಕನ್ನಡದಲ್ಲಿ ಸಿಗುವ ಕೆಲವೇ ಕೆಲವು ತರಗತಿಯ ವಿದ್ಯಾರ್ಥಿಗಳಲ್ಲಿ ನಾನೂ ಒಬ್ಬನಾಗಿದ್ದೆ. !

ನಾರಂಪಾಡಿ ಫಾತಿಮ ಎ.ಎಲ್.ಪಿ ಶಾಲೆಯ ಮೇಬಲ್ ಸಿಸ್ಟರ್, ಅಗಲ್ಪಾಡಿ ಅನ್ನಪೂರ್ಣೇಶ್ವರಿ ಶಾಲೆಯ ಅಚ್ಯುತ ಸರ್, ರಾಮಚಂದ್ರ ಸರ್, ಮಾಧವ ಭಟ್ ಸರ್ ಹಾಗೂ ಮಧುರಕಾನನ ಗೋಪಾಲಕೃಷ್ಣ ಭಟ್ ಸರ್ ಇವರೆಲ್ಲರೂ ಕನ್ನಡ ಭಾಷೆ ಸಾಹಿತ್ಯದ ಶುಚಿರುಚಿಯನ್ನು ತೋರಿಸಿಕೊಟ್ಟವರು. ಇಂದು ಕನ್ನಡದ ಮೇಲಿನ ಪ್ರೀತಿ, ಅಭಿಮಾನ ಹಾಗೂ ಬೋಧನೆಗೆ ಮುಖ್ಯವಾಗಿ ಇವರೆಲ್ಲ ಒಂದಲ್ಲ ಒಂದು ರೀತಿಯಲ್ಲಿ ಕಾರಣಕರ್ತರು.

ನಾನು ಮಂಜೇಶ್ವರ ಗೋವಿಂದ ಪೈ ಕಾಲೇಜಿನಲ್ಲಿ ತೃತೀಯ ಬಿ.ಎ ಕನ್ನಡ ವಿದ್ಯಾರ್ಥಿಯಾಗಿದ್ದಾಗ ಕಾಲೇಜಿನ ವಿದ್ಯಾರ್ಥಿ ಯೂನಿಯನ್ ಪ್ರಧಾನ ಕಾರ್ಯದರ್ಶಿಯಾಗಿ ಚುನಾಯಿತನಾಗಿದ್ದೆ. ಈಗ ಮಂಜೇಶ್ವರದ ಶಾಸಕರಾಗಿರುವ ಎ ಕೆ ಎಂ ಅಶ್ರಫ್ ಅವರು ಯೂನಿಯನ್ ಚೆಯರ್ಮೇನ್ ಆಗಿದ್ದರು. ನಮ್ಮ ಕಾಲೇಜು ಫೈನ್ ಆರ್ಟ್ಸ್ ಡೇ ಗೆ ನನ್ನ ಪ್ರೀತಿಯ ಗುರುಗಳಾದ ಮಧುರಕಾನನ ಗೋಪಾಲಕೃಷ್ಣ ಭಟ್ ಅವರನ್ನು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಕರೆದಿದ್ದೆ.

ಹತ್ತರಲ್ಲಿ ಕಡಿಮೆ ಅಂಕ ಪಡೆದು ಉತ್ತೀರ್ಣನಾದ ಹುಡುಗ ಬಿ.ಎ ಮಾಡುತ್ತಿದ್ದಾನೆಂದು ಅವರು ಸಂತೋಷಪಟ್ಟಿದ್ದರು. ಅದರ ಬಳಿಕ ನನ್ನ ಒಂದೊಂದು ಬೆಳವಣಿಗೆಯ ಸಂದರ್ಭದಲ್ಲೂ ಅವರು ಹರ್ಷ ವ್ಯಕ್ತಪಡಿಸಿ ಅಂಚೆಕಾರ್ಡು ಬರೆಯುತ್ತಿದ್ದರು. ಅವರು ಬರೆದ ಕವನಸಂಕಲನಗಳನ್ನು ನನಗೆ ಕಳಿಸಿಕೊಡುತ್ತಿದ್ದರು. ನಾನು ಅದನ್ನು ಓದಿ ಪತ್ರದ ಮೂಲಕ ಪ್ರತಿಕ್ರಿಯೆ ನೀಡುತ್ತಿದ್ದೆ.

ನಾನು ವೃತ್ತಿ ಬದುಕಿಗೆ ಕಾಲಿರಿಸಿದ ಒಂದು ದಿನ ಅವರ ಭೇಟಿಯಾಯಿತು. ನಾನು ಕನ್ನಡ ಪ್ರಾಧ್ಯಾಪಕನೆಂದು ತಿಳಿದು ಸಂಭ್ರಮಿಸಿದರು. ನಿಜವಾದ ಗುರುವಿನ ಸಹಜವಾದ ನಡೆ ಅದು. ಅವರು ಸೇವೆಯಿಂದ ನಿವೃತ್ತಿ ಹೊಂದಿದ ಬಳಿಕ ‘ಮಕ್ಕಳ ರಾಮಾಯಣ’ ಎಂಬ ಚೌಪದಿ ಮಹಾಕಾವ್ಯವನ್ನು ರಚಿಸಿ, ಪ್ರಕಟಿಸಿದ್ದರು. ನಾನು ಇರುವಲ್ಲಿಗೆ ಬಂದು ಅವರ ಹಸ್ತಾಕ್ಷರದಲ್ಲಿ ಅದರಲ್ಲಿ ಬರೆದು ಪುಸ್ತಕವನ್ನು ನನಗೆ ನೀಡಿದ್ದರು.
ಅವರ ಅಕ್ಷರವೂ ಅವರ ಹಾಗೆ ಚೆಂದ. ಶಾಲೆಯ ಪ್ರಮುಖ ಕೆಲವು ದಾಖಲೆಗಳಲ್ಲಿ ಅವರ ಹಸ್ತಾಕ್ಷರದ ಬರಹ ಇರುವುದನ್ನೂ ನಾನು ಗಮನಿಸಿದ್ದೆ.

ಮಧುರಕಾನನ ಅವರ ಸಹೋದರ ಅಧ್ಯಾಪಕ, ಅಂಕಣಕಾರ, ಸಾಹಿತಿ ಎಂ.ವಿ ಭಟ್ ಮಧುರಂಗಾನ ಅವರೂ ಮತ್ತೊಬ್ಬ ಸಹೋದರ ಅಧ್ಯಾಪಕ, ಚಿತ್ರಕಲಾವಿದ ಬಾಲ ಮಧುರಕಾನನ ಹಾಗೂ ಕವಿ, ಭೂಗರ್ಭಶಾಸ್ತ್ರಜ್ಞ ಗಣಪತಿ ಮಧುರಕಾನನ ಅವರೂ ನನಗೆ ಆತ್ಮೀಯರು.

ಮಧುರಂಗಾನ ಅವರು ಒಂದು ದಿನ ನಾನಿರುವ ಮನೆಗೆ ಬಂದು, ಸಂದರ್ಶನ ಮಾಡಿ, ಅಂಕಣವೊಂದನ್ನು ಬರೆದಿದ್ದರು. ಸಹೋದರನ ಶಿಷ್ಯ ಎಂಬ ಹೆಮ್ಮೆ ಅವರಿಗೆ.

ಇಂದು ಗುರುಗಳಾದ ಮಧುರಕಾನನ ಅವರಿಲ್ಲ. ಅವರ ಸಹೋದರ ಮಧುರಂಗಾನ ಅವರೂ ಇಂದಿಲ್ಲ. ಆದರೆ ಅವರಿಬ್ಬರ ಪ್ರೀತಿ, ವಿಶ್ವಾಸ ಹಾಗೂ ಒಡನಾಟ ಮನದೊಳಗೆ ಹಚ್ಚಹಸಿರು.

ಈಗ ವಿಶ್ವವಿದ್ಯಾನಿಲಯದ ಸೆಮಿಸ್ಟರ್ ಪರೀಕ್ಷೆಗಳು ನಡೆಯುತ್ತಿವೆ. ಜಿಲ್ಲೆಯ ಹಲವು ಕಾಲೇಜುಗಳಿಗೆ ಸಂದರ್ಶನ ಮಾಡಬೇಕಾದ ಸಮಿತಿಯ ನೇತೃತ್ವ ನನ್ನದು. ಹಾಗೆ ಇಂದಿನ ಕರ್ತವ್ಯ ಮುಗಿಸಿ, ಮರಳುತ್ತಿರುವಾಗ ದಾರಿ ಮಧ್ಯೆ ಒಬ್ಬರು ವಯೋವೃದ್ಧರು ಕಾರಿಗೆ ಕೈ ತೋರಿಸಿದರು. ಅವರ ಪರಿಚಯ ಅಷ್ಟಿಲ್ಲ. ಅವರಿಗೆ ಅವರ ಮನೆಗೆ ಹೋಗಬೇಕಿತ್ತು. ಕೊರೊನ ಸಮಯವಾದ ಕಾರಣ ಬಸ್ ವ್ಯವಸ್ಥೆ ಸರಿಯಾಗಿಲ್ಲ. ಅವರೊಬ್ಬ ಯಕ್ಷಗಾನ ಹಿಮ್ಮೇಳ ಕಲಾವಿದನೆಂದು ಗಾಡಿ ಹತ್ತಿದ ಬಳಿಕ ಅವರ ಮಾತಿನಿಂದ ತಿಳಿಯಿತು.

ಅವರ ಮಗನು ನನ್ನ ಪರಿಚಿತರೂ ಹೌದು. ಅವರನ್ನು ಅವರ ಮನೆಯ ತನಕ ಬಿಡಲು ತೀರ್ಮಾನಿಸಿದೆ. ಹಾಗೆ ಹೋಗುವಾಗ ಮಧುರಕಾನನ ಗುರುಗಳು ವಾಸಿಸುತ್ತಿದ್ದ ಊರಿನತ್ತ ಹೋಗಬೇಕಾಯಿತು. ಆಗ ಕಣ್ಣಿಗೆ ಬಿತ್ತು ‘ಮಧುರಕಾನನ’ ಎಂಬ ಈ ಹಳೆಯ ಫಲಕ…!

ತಕ್ಷಣ ಅದ್ಯಾಕೋ ಹಳೆಯ ಮಧುರವಾದ ನೆನಪೆಲ್ಲವೂ ಚಿಮ್ಮಿ ಬಂತು. ತಕ್ಷಣ ಅಕ್ಷರಗಳಲ್ಲಿ ಅದನ್ನು ಬಿಗಿಯಾಗಿ ಹಿಡಿದುಬಿಟ್ಟೆ.!


ಡಾ.ರತ್ನಾಕರ ಮಲ್ಲಮೂಲೆ

- Advertisement -
- Advertisement -

Latest News

ಹುಬ್ಬಳ್ಳಿ ಕೊಲೆ ಪ್ರಕರಣ ತನಿಖೆ ಸಿಬಿಐಗೆ ಕೊಡಬೇಕು

ಬೆಂಗಳೂರಿನ ತನ್ನದೆ ಪಕ್ಷದ ಶಾಸಕನ ಮನೆ ಬೆಂಕಿಗೆ ಆಹುತಿಯಾಗುವುದನ್ನು ತಡೆಯದ ಕಾಂಗ್ರೆಸ್, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ತನ್ನದೆ ಪಕ್ಷದ ನಗರ ಸೇವಕನ ಮಗಳ ಹತ್ಯೆಯನ್ನ...
- Advertisement -

More Articles Like This

- Advertisement -
close
error: Content is protected !!
Join WhatsApp Group