ಬದುಕಿನ ಬಂಡಿ ಸಾಗುವ ದಾರಿಯಲಿ ಹಲವು ಮಜಲುಗಳು

0
180

ಸಾಧನೆಯ ಕುದುರೆ ಏರುವುದೆಂದರೆ ಅದು ಸಾಮಾನ್ಯ ವಿಷಯವಲ್ಲ. ಭೂಮಿಯಲ್ಲಿ ಜನಿಸಿದ ಪ್ರತಿ ಜೀವಿಗೂ ಕೂಡ ತನ್ನದೇ ಆದ ಬದುಕಿದೆ. ಆ ಬದುಕಿನಲ್ಲಿ ಖುಷಿ, ದುಃಖ, ಸಂಭ್ರಮ, ಸಡಗರ ಹೀಗೆ ನೂರೆಂಟು ನೋವು-ನಲಿವಿನ ಬದುಕಿನ ಮಜಲುಗಳನ್ನು ಕಾಣಬಹುದು. ನಾವು ನಮ್ಮ ಬದುಕಿನ ಬಂಡಿ ಎಳೆಯಲು ಎರಡು ಎತ್ತುಗಳನ್ನು ಹೂಡಲೇಬೇಕು, ಆ ಎರಡು ಎತ್ತುಗಳು ಎಂದರೆ ಒಂದು ಸಮಸ್ಯೆಯನ್ನು ಬಗೆಹರಿಸುವ ಎತ್ತು ಮತ್ತೊಂದು ಸಾಧನೆಯ ಮೆಟ್ಟಿಲೇರುವ ಎತ್ತು ಈ ಎರಡು ಎತ್ತುಗಳನ್ನು ಸಂಬಾಳಿಸುವ ಧೈರ್ಯ ನಮ್ಮೊಳಗೆ ತಂದುಕೊಳ್ಳಬೇಕು. ಒಮ್ಮೊಮ್ಮೆ ಸಮಸ್ಯೆ ಎಂಬ ಎತ್ತು ಒಂದು ಕಡೆ ಎಳೆದರೆ ಸಾಧನೆ ಎಂಬ ಎತ್ತು ಇನ್ನೊಂದು ಕಡೆ ಎಳೆಯುತ್ತದೆ ಅದನ್ನು ಸರಿದೂಗಿಸುವುದು ಒಂದು ಸವಾಲೇ ಸರಿ. ಏಕೆಂದರೆ ಒಂದು ಕಡೆ ಸಾಧನೆಯ ಎತ್ತು ಎಳೆದರೆ ಮತ್ತೊಂದು ಕಡೆ ಸಮಸ್ಯೆ ಎಂಬ ಎತ್ತಿನ ಭಾರವನ್ನು ಹೊರಬೇಕಿರುತ್ತದೆ. ಒಂದು ವೇಳೆ ಸಾಧನೆಯ ಎತ್ತು ಮುಂದೆ ಹೋದರೆ ಸಮಸ್ಯೆಯ ಭಾರ ಹೆಚ್ಚು, ಸಮಸ್ಯೆಯ ಎತ್ತು ಮುಂದೆ ಹೋದರೆ ಸಾಧನೆಯ ಹಾದಿ ಹಿಂದೆ ಉಳಿಯುತ್ತದೆ. ಹಾಗಾಗಿ ಇವೆರಡನ್ನು ಸರಿಯಾದ ರೀತಿಯಲ್ಲಿ ನಮ್ಮೊಟ್ಟಿಟ್ಟಿಗೆ ಕರೆದುಕೊಂಡು ಹೋಗುವುದು ಒಂದು ತಪಸ್ಸೆ ಸರಿ.

ಮತ್ತೊಂದು ಸಂಗತಿ ಎಂದರೆ ಬದುಕಿನಲ್ಲಿ ಸಮಸ್ಯೆಗಳು ಕಲಿಸುವಷ್ಟು ಪಾಠ ಯಾವ ಶಿಕ್ಷಕನು ಕಲಿಸಲಾರ. ಎಡವಿದಲ್ಲೆಲ್ಲಾ ಏಳುವುದನ್ನು ನಮಗೆ ಗೊತ್ತಿಲ್ಲದಂತೆ ನಮ್ಮನ್ನು ತಿದ್ದುತ್ತವೆ, ನಡೆಸುತ್ತವೆ, ಗಟ್ಟಿಗೊಳಿಸುತ್ತವೆ. ಮತ್ತೆ ಎದ್ದು ನಿಲ್ಲುವುದು, ಬದುಕಿನುದ್ದಕ್ಕೂ ಬದ್ಧರಾಗಿ ನಡೆಯುವ ಮತ್ತು ಸಾಗುವ ನಿಲುವನ್ನು ನಾವೇ ಕಂಡುಕೊಳ್ಳಬೇಕು. ಒಬ್ಬ ವ್ಯಕ್ತಿ ಜೀವನದಲ್ಲಿ ಸಕ್ಸಸ್ ಆಗಿದ್ದಾನೆ ಅಂದರೆ ಅವನ ಹಿಂದೆ ಅದೆಷ್ಟೋ ಕಷ್ಟಗಳ ಸರಮಾಲೆ, ಏಟಿನ ಮೇಲೆ ಏಟು ತಿಂದು ಕೊನೆಗೆ ಗಟ್ಟಿಯಾಗಿ ನಿಂತಿರುತ್ತಾನೆ.

ನನಗೆ ಆಗಾಗ ಒಬ್ಬ ಕವಿ ಹೇಳಿದ ಮಾತುಗಳು ಮತ್ತಷ್ಟು ನನ್ನಲ್ಲಿ ಬಲ ತುಂಬುತ್ತಿರುತ್ತವೆ ಏನೆಂದರೆ one can cross on ocean without wetting-his legs but,cannot cross his life without wetting his eyes. ಈ ಮಾತು ಎಂತಹ ವ್ಯಕ್ತಿ ಜೀವನದಲ್ಲಿ ಏನು ಇಲ್ಲ ಅಂದುಕೊಂಡವನು ಸಹ ಬದುಕಿನಲ್ಲಿ ಗೆಲ್ಲುವುದಕ್ಕಾಗಿ ಅಣಿ ಇಡುತ್ತಾನೆ. ಏಕೆಂದರೆ ಸಾಧನೆ ಬೇಕಾಗಿರುವುದು ಪೊಳ್ಳು ಮಾತುಗಳು, ಕೇವಲ ಸಕ್ಸಸ್ ಸಿಕ್ಕ ಸ್ಟೋರಿ ಗಳು, ಬೊಬ್ಬೆ ಹೊಡೆದು ಕಿಕ್ಕಿರಿದು ನಕ್ಕು ಮುಂದೆ ಸಾಗಿದ ಕಥೆಗಳಂತೂ ಇಲ್ಲವೇ ಇಲ್ಲ ಸಕ್ಸಸ್ ನ ಮೂಲ ಮಂತ್ರವೆಂದರೆ ಬದುಕಿನಲ್ಲಿ ಒಂದು ಬಂಡೆಕಲ್ಲು ಸಾಕಷ್ಟು ಉಳಿಪೆಟ್ಟು ತಿಂದು ಶಿಲೆಯಾದಂತೆ, ಅದೆಷ್ಟೋ ಕಷ್ಟಗಳನ್ನು ಜಯಿಸಿ ಮೇಲೆ ಬಂದಂತಹ ವ್ಯಕ್ತಿಯ ಕಷ್ಟಕರ ಸಂಗತಿಗಳು ಉದಾಹರಣೆಯಾಗಿ ಸಿಗುತ್ತವೆ.

ಈಗ ಅಬ್ರಾಹಿಂ ಲಿಂಕನ್ ರವರನ್ನು ಉದಾಹರಣೆಯಾಗಿ ತೆಗೆದುಕೊಂಡು ನೋಡುವುದಾದರೆ ಚಿಕ್ಕ ವಯಸ್ಸಿನಲ್ಲಿ ಶೂನ್ಯವಾಗಿ ಬೆಳೆದು ನಿಂತವರು ಅವರು ತಮ್ಮ ನಿತ್ಯದ ಬದುಕನ್ನು ಹೊರೆಯಲು ಪಾದರಕ್ಷೆಗಳನ್ನು ಹೊಲಿಯುತ್ತಿದ್ದರು ಎಂಬುದನ್ನು ನೋಡುವುದಾದರೆ ಅವರು ಪಟ್ಟಂತಹ ಕಷ್ಟ ಮತ್ತು ಅವರು ಬೆಳೆದುಬಂದಂತಹ ದಾರಿ ಬದುಕಿನಲ್ಲಿ ಏನೂ ಇಲ್ಲ ಎಂದುಕೊಂಡವರಿಗೂ ಬದುಕಿನ ಮೇಲೆ ಆಸಕ್ತಿ ಮೂಡಿ ಏನನ್ನಾದರೂ ಸಾಧಿಸಬಲ್ಲೇನೆಂಬ ಧೈರ್ಯ, ಛಲವನ್ನು ನಮ್ಮೊಳಗೇ ತಂದುಕೊಳ್ಳಲು ಸಾಧ್ಯವಾಗುತ್ತದೆ. ಇಲ್ಲಿ ಸಮಸ್ಯೆಎಂಬ ಭಾರ ಹೊತ್ತ ಎತ್ತನ್ನು ಸಾಧನೆ ಎಡೆಗೆ ಕೊಂಡೊಯ್ಯುವ ಪರಮ ಗುರಿಯನ್ನು ಅವರು ಕಂಡುಕೊಂಡರೆಂಬುದನ್ನು ನಾವು ತಿಳಿಯಬಹುದು.

ಒಂದು ಕಾಲಕ್ಕೆ ಕಷ್ಟದಲ್ಲಿದ್ದವರನ್ನು ಕಂಡ ಜನ ಬೆಳೆದು ನಿಂತಾಗ ಚಪ್ಪಾಳೆ ತಟ್ಟುವುದು, ಶಿಳ್ಳೆ ಹಾಕುವುದು, ಸ್ಮರಣೆ ಮಾಡುವುದು ಎಲ್ಲವೂ ತಾನಾಗೇ ನಡೆಯುತ್ತದೆ. ನಾವು ಮಾಡುವ ಕೆಲಸ ಕೀಳೆಂದು ಲಿಂಕನ್ ಯೋಚಿಸಿದ್ದರೆ ಅವರು ಎಂದಿಗೂ ಬೆಳೆಯಲು ಸಾಧ್ಯವಿರಲಿಲ್ಲ. ನಾವು ಮಾಡುವ ಕೆಲಸ ಯಾವತ್ತೂ ಕೀಳಲ್ಲ, ಕೆಲಸ ಮಾಡದೇ ವೃತಾ ಕಾಲಹರಣ ಮಾಡುವುದು ನಿಜವಾದ ಕೀಳು ಎಂದು ಭಾವಿಸುತ್ತೇನೆ. ನಾವು ಮಾಡುವ ಕೆಲಸ ಮತ್ತೊಬ್ಬರಿಗೆ ತೊಂದರೆ ಉಂಟಾಗುವಂತಿದ್ದರೆ ಅದು ನಿಜವಾದ ಕೀಳುಮಟ್ಟದ ಕೆಲಸ ಆದರೆ ನಾವು ಮಾಡುವ ಕೆಲಸ ಚಿಕ್ಕದಾದರೂ ಅದರಿಂದ ಯಾರಿಗೂ ನಾವು ಕೆಟ್ಟದ್ದು ಬಯಸುವುದಿಲ್ಲ ಎನ್ನುವುದಾದರೆ ಅದರಂತಹ ಉತ್ತಮ ಕೆಲಸ ಯಾವುದೂ ಇಲ್ಲ. ನಾವು ಮಾಡುವ ಸಣ್ಣಪುಟ್ಟ ಕೆಲಸಗಳು ಮುಂದೊಂದು ದಿನ ಬಹುದೊಡ್ಡ ಯಶಸ್ಸಿಗೆ ಕಾರಣವಾಗಬಹುದು ಅದಾಗಬೇಕು ಎಂದಾದರೆ ಮೊದಲು ನಾವು ಮಾಡುವ ಕಾಯಕದ ಮೇಲೆ ನಿಷ್ಠೆ, ಶ್ರದ್ದೆ, ಪ್ರೀತಿ ಬಹುಮುಖ್ಯವಾಗುತ್ತವೆ. ಸಾಧನೆ ಮಾಡಲು ಪ್ರಾಯ ಅಡ್ಡಿಯಾಗುವುದಿಲ್ಲ, ಸಾಧನೆಗೆ ವಯಸ್ಸಿನ ಮಿತಿ ಇಲ್ಲ ಅದಕ್ಕಿರುವುದು ನಮ್ಮೊಳಗಿರುವ ಸಾಧಿಸುತ್ತೇನೆ ಎಂಬ ಧೃಡ ನಿರ್ಧಾರ ಮುಖ್ಯವಾಗುತ್ತದೆ.

ನಾವು ಈ ಬದುಕನ್ನು ಜೀವಿಸುತ್ತಿದ್ದೇವೆ ಎಂದರೆ ನಮ್ಮ ತಾಯಿ ತಂದೆಗೆ ಋಣಿಯಾಗಿರಬೇಕು ಏಕೆಂದರೆ ಈ ಭೂಮಿಗೆ ನಮ್ಮನ್ನು ಕರೆತಂದು ಬದುಕು ತೋರಿಸಿಕೊಟ್ಟವರು. ನಾವು ಈ ಬದುಕನ್ನು ಸುಂದರಗೊಳಿಸಿಕೊಂಡರೆ ಅದು ನಾವು ತಂದೆ ತಾಯಿಗೆ ನೀಡುವ ಬದುಕಿನ ಬಹುದೊಡ್ಡ ಉಡುಗೊರೆ.

ನಮ್ಮನ್ನು ಮೆಚ್ಚುವವರು ಯಾರು, ನಮ್ಮನ್ನು ತೆಗಳುವವರು ಯಾರು? ಇಂತಹ ಹುಚ್ಚು ಪ್ರಶ್ನೆಗಳನ್ನು ನಮ್ಮಲ್ಲಿ ನಾವೇ ಕೇಳಿಕೊಳ್ಳದೆ ನಾನು ಏನು ಮಾಡಬೇಕು, ಹೇಗೆ ಜೀವಿಸಬೇಕು ಎಂಬುದರ ಕುರಿತು ಯೋಚಿಸಬೇಕಿದೆ. ಅಯ್ಯೋ ನಮಗೆ ನಮ್ಮಪ್ಪ ಅಮ್ಮ ಆಸ್ತಿ ಮಾಡಿಲ್ಲ, ನಮಗೇನೂ ಇಲ್ಲ, ನಾವು ಬಡವರು ಎಂಬಂತಹ Nonsense ಯೋಚನೆಗಳನ್ನ ಬಿಟ್ಟು ಬದುಕು ಹೇಗೆ ನಡೆಸಬೇಕು, ನನಗಾಗಿ ನಾನು ಏನನ್ನ ಕಂಡುಕೊಳ್ಳಬೇಕು ಅನ್ನೋದರ ಬಗ್ಗೆ ಗಮನಹರಿಸಿದರೆ ಆಗ ಅಕ್ಷರಶಃ ನಮಗಾಗಿ ನಾವು ಜೀವಿಸುತ್ತಿದ್ದೇವೆ ಎಂದರ್ಥ. ಬದುಕಿನಲ್ಲಿ ಏನೂ ಇಲ್ಲ ಎಂದು ಭಾವಿಸಿದರೆ ಖಂಡಿತ ಏನೂ ಇಲ್ಲ, ಆದರೆ ಬದುಕಿನಲ್ಲಿ ಏನೇನಿಲ್ಲ ಎಲ್ಲವೂ ಇದೆ ಎಂದಾದರೆ ಎಲ್ಲವೂ ಇದೆ. ಸಮಸ್ಯೆಗಳು ಯಾರನ್ನು ಬಿಟ್ಟಿಲ್ಲ, ಅಂತಹ ಭಗವಂತ, ಅಂತಹ ಸತ್ಯಹರಿಶ್ಚಂದ್ರರನ್ನೂ ಬಿಡದೆ ಬಾಧಿಸಿದೆ. ಕೆಲವೊಮ್ಮೆ ಒಳ್ಳೆಯತನವು ನಮ್ಮನ್ನು ನೋಯಿಸಬಹುದು ಆದರೆ ಕೊನೆಗೆ ಆ ಒಳ್ಳೆಯತನವೇ ಕಾಯುತ್ತದೆ. ನಮ್ಮ ಭವಿಷ್ಯವನ್ನು ನಾವೇ ತಿದ್ದಿ ತೀಡಿ ಸಾಗಬೇಕು. ಭವಿಷ್ಯವಾಣಿ, ಶಕುನಗಳು ಬದಲಾಯಿಸುವುದಾಗಿದ್ದಾರೆ ಯಾರು ಕಷ್ಟಪಡಬೇಕಿರಲಿಲ್ಲ,

ಕೃಷ್ಣ, ಕರ್ಣರ ರಾಶಿಗಳು ಒಂದೇ ಆಗಿದ್ದರು ಒಬ್ಬನು ಪರಮಾತ್ಮನೆನಿಸಿಕೊಂಡರೆ ಮತ್ತೊಬ್ಬ ತ್ಯಾಗಿಯಾಗಿ ಪ್ರಾಣ ತ್ಯಗಿಸಿ ಲೋಕ ತೊರೆದನು. ಹೀಗೆ ನಾವು ನಮ್ಮನ್ನ ಅರ್ಥೈಸಿಕೊಳ್ಳಬೇಕಿದೆ, ಅದರ ಬದಲಿಗೆ ಇನ್ನ್ಯಾರಿಗೋ ನಮ್ಮನ್ನ ಅರ್ಥ ಮಾಡಿಸುವ ಅಗತ್ಯವಿಲ್ಲ ಎಂಬುದನ್ನು ಕಂಡುಕೊಂಡು ಬದುಕೆಂಬ ಬಂಡಿಯಲ್ಲಿ ಹಲವು ಮಜಲುಗಳನ್ನು ದಾಟಿ ಸಮಸ್ಯೆ ಮತ್ತು ಸಾಧನೆಯ ಎತ್ತುಗಳನ್ನು ಎಳೆದು ಒಯ್ಯಬೇಕಿದೆ. ಬದುಕಿಗೆ ನಾವೇ ಅರ್ಥಕಂಡುಕೊಳ್ಳಬೇಕಿದೆ.

ವಿಶ್ವನಾಥ ಗೌಡ ಮಾಲಿ ಪಾಟೀಲ
ಶಿಕ್ಷಕರು
ಸ.ವಿ.ಸ ಶಾಲೆ ಮಾನವಿ.