ಹಾನಗಲ್ – ಮಹಿಳೆ ಯಾವತ್ತೂ ಪಾರತಂತ್ರ್ಯ ಬಯಸಿದವಳಲ್ಲ.ಅವಳು ಸಬಲೆ ಆದರೆ ಒಂದು ಕಾಲಘಟ್ಟದಲ್ಲಿ ಮಹಿಳೆಯನ್ನು ಮಕ್ಕಳ ಹೆರುವ ಯಂತ್ರವಾಗಿ ನೋಡಿಕೊಳ್ಳಲಾಗಿತ್ತು.ತದನಂತರ ಸ್ವಾವಲಂಬಿ ನಿಲುವಿನ ಮೇಲೆ ತನ್ನ ಬದುಕನ್ನು ಕಂಡುಕೊಂಡಳು ಎಂದು ಸರಸ್ವತಿ ಮಹಿಳಾ ಮಂಡಳದ ಅಧ್ಯಕ್ಷೆ ಪಾರ್ವತಿಬಾಯಿ ಕಾಶೀಕರ್ ಹೇಳಿದರು.
ಅವರು ಸರಸ್ವತಿ ಮಹಿಳಾ ಮಂಡಳದ ಕಾರ್ಯಾಲಯದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
75 ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಹಾನಗಲ್ಲಿನಲ್ಲಿ ಸರಸ್ವತಿ ಮಹಿಳಾ ಮಂಡಳದ ಸರ್ವ ಸದಸ್ಯರು ಭಾಗವಹಿಸಿದ್ದರು. ಶ್ರೀಮತಿ ಛಾಯಾ ದೇಶಪಾಂಡೆ ಪ್ರಾರ್ಥನೆ ಮೂಲಕ ಚಾಲನೆ ನೀಡಿದರು. ಶ್ರೀಮತಿ ಮಾಧವಿ ವರ್ದಿ ಕಾರ್ಯಕ್ರಮದ ಎಲ್ಲ ಅತಿಥಿ ಗಣ್ಯರನ್ನು ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಪ್ರಾಸ್ತಾವಿಕ ನುಡಿಗಳನ್ನಾಡಿದ ಬಳಗದ ಶ್ರೀಮತಿ ಪುಷ್ಪ ಬಸ್ತಿ ಸ್ವಾತಂತ್ರ್ಯ ಹೋರಾಟದ ವಿವಿಧ ಮಜಲುಗಳನ್ನು ವಿವರಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶ್ರೀಮತಿ ಅಕ್ಕಮ್ಮ ಸೋಗಾವಿ ಅವರು ಭಾರತೀಯ ಸಂಸ್ಕೃತಿಯ ಮೇಲೆ ಬೆಳಕು ಚೆಲ್ಲಿದರು.ಇಂದಿನ ವಿದ್ಯಾರ್ಥಿಗಳು ಅದರಲ್ಲೂ ವಿಶೇಷವಾಗಿ ಇಂದಿನ ವಿದ್ಯಾರ್ಥಿನಿಯರು ಭಾರತೀಯ ಸಂಸ್ಕೃತಿಯನ್ನು ತಿಳಿದುಕೊಂಡು ಭಾರತೀಯ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವಂತೆ ಸಲಹೆ ನೀಡಿದರು.
ಅತಿಥಿಗಳಾಗಿ ಆಗಮಿಸಿದ್ದ ಶ್ರೀಮತಿ ಶಾರದಾ ಉದಾಸಿ ಪ್ರಸ್ತುತ ದಿನಮಾನದಲ್ಲಿ ಸ್ತ್ರೀಯರ ಸಬಲೀಕರಣ ಕುರಿತು ಮಾತನಾಡಿದರು.,ಶ್ರೀಮತಿ ಸುಜಾತಾ ನಂದಿಶೆಟ್ಟರ ಭಾರತೀಯ ಸ್ವಾತಂತ್ರ್ಯ ಹೋರಾಟಗಾರಲ್ಲಿ ಮಹಿಳೆಯರ ಪಾತ್ರದ ಕುರಿತು ವಿವರಿಸಿದರು. ಕಾರ್ಯಕ್ರಮದಲ್ಲಿ ಶ್ರೀಮತಿ ಲೀಲಾ ಭಟ್, ಶ್ರೀಮತಿ ಅಕ್ಕಮ್ಮ ಸೋಗಾವಿ,ಶ್ರೀಮತಿ ಚಂಪಾ ಸೋಗಾವಿ ಮತ್ತು ಸುಮಕ್ಕ ಶೆಟ್ಟರ ಅವರು ದೇಶಭಕ್ತಿ ಗೀತೆಗಳನ್ನು ಹಾಡಿದರು.ಇನ್ನುಳಿದಂತೆ ಬಳಗದ ಎಲ್ಲಾ ಸದಸ್ಯರು ಭಾಗಿಯಾಗಿದ್ದರು.ಶ್ರೀಮತಿ ರೇಖಾ ಶೆಟ್ಟರ ಕಾರ್ಯಕ್ರಮ ನಿರೂಪಿಸಿದರು.ಕಾರ್ಯಕ್ರಮದ ಕೊನೆಯ ಭಾಗದಲ್ಲಿ ಶ್ರೀಮತಿ ಜ್ಯೋತಿ ಬೆಲ್ಲದ ವಂದಿಸಿದರು.