spot_img
spot_img

ಹೊಸ ಪುಸ್ತಕ ಓದು; ಬಸವಣ್ಣ: ಶರಣಗಣ ಸಂಘಟನೆ

Must Read

spot_img
- Advertisement -

ಪುಸ್ತಕದ ಹೆಸರು : ಬಸವಣ್ಣ : ಶರಣಗಣ ಸಂಘಟನೆ
ಲೇಖಕರು: ಡಾ. ವೀರಣ್ಣ ದಂಡೆ
ಪ್ರಕಾಶಕರು: ನ್ಯಾಯಮೂರ್ತಿ ಚೆನ್ನಮಲ್ಲಪ್ಪ ರುದ್ರಪ್ಪ ಬೆನಕನಹಳ್ಳಿ ಪ್ರತಿಷ್ಠಾನ, ಕಲಬುರಗಿ, ೨೦೨೦
ಬೆಲೆ: ರೂ. ೪೦
ಮೊ: ೯೪೪೮೭೭೮೯೯೧


ಶರಣ ಶ್ರೀ ಡಾ. ವೀರಣ್ಣ ದಂಡೆ ಮತ್ತು ಶ್ರೀಮತಿ ಡಾ. ಜಯಶ್ರೀ ದಂಡೆ ಅವರು ಕಲಬುರ್ಗಿ ಪ್ರದೇಶದಲ್ಲಿ ಸದ್ದುಗದ್ದಲವಿಲ್ಲದೆ ಮಾಡುತ್ತ ಬಂದ ಶರಣ ಸಾಹಿತ್ಯ ಸೇವೆ ಅನನ್ಯವಾದುದು. ಕಲಬುರಗಿ ಬಸವ ಸಮಿತಿ ನಿರ್ದೇಶಕರಾಗಿ, ನಿರಂತರವಾಗಿ ಉಪನ್ಯಾಸ ಮಾಲೆಯನ್ನು ಮುನ್ನಡೆಸಿಕೊಂಡು ಬಂದಿರುವುದು ಅವರ ಹೆಗ್ಗಳಿಕೆ. ಸುಮಾರು ಹತ್ತು ವರ್ಷಗಳ ಕಾಲ ಕರ್ನಾಟಕ-ಮಹಾರಾಷ್ಟç-ಆಂಧ್ರಪ್ರದೇಶಗಳನ್ನು ಸುತ್ತಿ ಶರಣ ಕ್ಷೇತ್ರಗಳನ್ನು ದಾಖಲಿಸಿದ ಕೀರ್ತಿ ದಂಡೆ ದಂಪತಿಗಳಿಗೆ ಸಲ್ಲಬೇಕು.

ಡಾ. ವೀರಣ್ಣ ದಂಡೆ ಅವರು ಕಲಬುರ್ಗಿ ಬಸವ ಸಮಿತಿಯಲ್ಲಿ ನೀಡಿದ ಮೂರು ಉಪನ್ಯಾಸಗಳ ಸಂಗ್ರಹವೇ ಪ್ರಸ್ತುತ ‘ಬಸವಣ್ಣ : ಶರಣಗಣ ಸಂಘಟನೆ’ ಎಂಬ ಕೃತಿ. ೧. ಬಸವಣ್ಣನವರ ಸಂಘಟನಾ ಸಾಮರ್ಥ್ಯ, ೨. ಶರಣಗಣ ಸಂಘಟನೆಯ ರಾಚನಿಕ ಸ್ವರೂಪ ಮತ್ತು ೩. ಅನುಭವ ಮಂಟಪ ಪರಿಕಲ್ಪನೆ ಮತ್ತು ರಚನೆ ಈ ಮೂರು ಕಿರು ಲೇಖನಗಳ ಸಂಕಲನ ಇದಾಗಿದೆ.

- Advertisement -

ಬಸವಣ್ಣನವರ ಸಮಾಜ ಸಂಘಟನೆಯ ನಿಲುವುಗಳನ್ನು ಆಧುನಿಕ ನೆಲೆಯಲ್ಲಿ ಪರಾಮರ್ಶಿಸಿ ಎಂಥ ಸಮಾಜ ನಿರ್ಮಾಣಕ್ಕಾಗಿ ಬಸವಣ್ಣನವರು ಅಹೋರಾತ್ರಿ ಪರಿಶ್ರಮಿಸಿದರು ಎಂಬುದನ್ನು ಎಳೆ ಎಳೆಯಾಗಿ ಬಿಡಿಸಿಟ್ಟಿದ್ದಾರೆ. ಆಧುನಿಕ ಪ್ರಜಾಪ್ರಭುತ್ವ ಮಾದರಿಯನ್ನು ೧೨ನೇ ಶತಮಾನದ ಬಸವಣ್ಣನವರ ಸಂಘಟನೆಯಲ್ಲಿ ಗುರುತಿಸುವ ಪ್ರಯತ್ನ ಮಾಡಿದ್ದಾರೆ. ‘ಲಿಂಗ’ ಮತ್ತು ‘ದಾಸೋಹ’ ಎಂಬ ಎರಡು ಅಮೂಲ್ಯ ತತ್ವಗಳ ಆಧಾರದ ಮೇಲೆ ಶರಣಗಣ ಸಂಘಟನೆಯ ಮೊದಲ ಹಂತವನ್ನು ಗಟ್ಟಿಗೊಳಿಸಿದರೆಂದು ಡಾ. ದಂಡೆಯವರು ಅಭಿಪ್ರಾಯ ಪಡುತ್ತಾರೆ.

‘ಶರಣಗಣ ಸಂಘಟನೆಯ ರಾಚನಿಕ ಸ್ವರೂಪ’ ಎಂಬ ಲೇಖನದಲ್ಲಿ ಬಸವಣ್ಣನವರು ಕಟ್ಟಬಯಸಿದ ಸಮಾಜ ಸಂಘಟನೆಯ ಅಥವಾ ಶರಣ ಗಣ ಸಂಘಟನೆಯ ಮೂರು ಹಂತಗಳನ್ನು ಡಾ. ದಂಡೆಯವರು ಪ್ರಸ್ತಾಪಿಸುತ್ತಾರೆ. ೧. ಅಸಂಖ್ಯಾತ ಪುರಾತನರು (ಭಕ್ತಗಣಗಳು), ೨. ಪ್ರಮಥಗಣಂಗಳು ಮತ್ತು ೩. ಅಮರ ಗಣಂಗಳು. ಈ ಮೂರು ನೆಲೆಯಲ್ಲಿ ಜನರ ಮನದಲ್ಲಿ ಧರ್ಮ ತತ್ವದ ಬೀಜಗಳನ್ನು ಬಿತ್ತಿ ಒಂದು ಸಮೃದ್ಧ ಸಮಾಜವನ್ನು ಕಟ್ಟಲು ಬಸವಣ್ಣನವರು ಪ್ರಯತ್ನಿಸಿದ ಪರಿಯನ್ನು ಲೇಖಕರು ತುಂಬ ಹೃದ್ಯವಾದ ಶೈಲಿಯಲ್ಲಿ ನಿರೂಪಿಸಿದ್ದಾರೆ. ಬಸವಣ್ಣನವರು ಹುಟ್ಟುಹಾಕಿದ ಲಿಂಗಾಯತ ಧರ್ಮವು ಹೇಗೆ ಮತ್ತು ಏಕೆ ಹೋಳಾಯಿತು ಎಂಬುದನ್ನು ಡಾ. ದಂಡೆ ಅವರು ತುಂಬ ಅರ್ಥಪೂರ್ಣವಾಗಿ ವಿಶ್ಲೇಷಿಸಿದ್ದಾರೆ.

“ಯಾವಾಗಲೂ ಧರ್ಮಗಳು, ಸಂಘಟನೆಗಳು, ರಾಜಕೀಯ ಪಕ್ಷಗಳು ಹೋಳಾಗುವುದು ಮುಂಚೂಣಿಯಲ್ಲಿರುವ ನಾಯಕರಿಂದ. ಧರ್ಮ ಹೋಳಾಗುವುದು ಧಾರ್ಮಿಕ ತಾತ್ವಿಕ ತಿಳುವಳಿಕೆಯುಳ್ಳ ಗುರುಗಳಿಂದಲೇ ಹೊರತು ಜನಸಾಮಾನ್ಯರಿಂದ ಅಲ್ಲ. ಬೌದ್ಧ ಧರ್ಮವು ಹೀನಾಯಾನ ಮಹಾಯಾನ ಎಂದು ಹೋಳಾಗಿದ್ದು, ಜೈನ ಧರ್ಮವು ದಿಗಂಬರ, ಶ್ವೇತಾಂಬರ ಎಂದು ಎರಡಾಗಿದ್ದು, ಎಲ್ಲವೂ ಮುಂಚೂಣಿಯಲ್ಲಿರುವ ಬುದ್ಧಿವಂತ ಧಾರ್ಮಿಕ ಗುರುಗಳಿಂದಲೇ. ಹೀಗೆಯೇ ಲಿಂಗಾಯತ ಧರ್ಮವು ಪ್ರಮಥಗಣಂಗಳ (ಚರಜಂಗಮರ) ನಾಯಕರ, ತತ್ತ್ವ ಬಲ್ಲವರ ನಡುವಿನ ಯಾವುದೋ ಭಿನ್ನಾಭಿಪ್ರಾಯಗಳಿಂದ ಒಡಕುಂಟಾಗಿರುವ ಸಾಧ್ಯತೆ ಇದೆ. ಇದು ೧೨ನೇ ಶತಮಾನದ ನಂತರ, ನೂರಿನ್ನೂರು ವರ್ಷಗಳ ಅವಧಿಯಲ್ಲಿ ಘಟಿಸಿರಬಹುದಾದ ಸಂಗತಿಯಾಗಿದೆ. ನಾನು ಮೇಲು ತಾನು ಮೇಲು ಎಂಬ ಅಹಮಿಕೆ, ಸಂಪತ್ತಿನ ಸಂಗ್ರಹ, ಮಠ-ಸ್ಥಿರಾಸ್ತಿ ಗಳಿಕೆ, ಈ ಮುಂತಾದವುಗಳು ಕಾರಣವಾಗಿ ಪ್ರಮಥಗಣಂಗಳಲ್ಲಿ (ಚರಜಂಗಮರಲ್ಲಿ) ಒಡಕುಂಟಾಗಿ, ಒಂದು ಗುಂಪು ಬಸವಣ್ಣನವರೊಂದಿಗೆ ಶಿವನನ್ನು ಒಪ್ಪಿಕೊಂಡು, ಇನ್ನೊಂದು ಗುಂಪು ಶಿವನ ಮಗನಾದ ವೀರಭದ್ರನನ್ನು ಅನಿವಾರ್ಯವಾಗಿ ಹಿಡಿದುಕೊಂಡು, ಲಿಂಗಾಯತ ಎರಡಾಗಿ ಸಾಗಿದಂತೆ ತೋರುತ್ತದೆ. ಭಕ್ತರು ಭಾವನಾತ್ಮಕವಾಗಿ ಇವರ ಜೊತೆಗೆ ಒಂದಿಷ್ಟು ಜನ, ಅವರ ಜೊತೆಗೆ ಒಂದಿಷ್ಟು ಜನ ಬೆನ್ನು ಹತ್ತಿ, ಸಮಾಜ ದಿಕ್ಕು ತಪ್ಪಿರುವ ಸಾಧ್ಯತೆ ಇದೆ. ವೀರಭದ್ರನನ್ನು ಹಿಡಿದು ಹೊರಟವರು ಕಾಲಕ್ಕೆ ತಕ್ಕಂತೆ ಮುಂದುವರೆಯದೆ, ಒಂದು ಹೆಜ್ಜೆ ಹಿಂದೆ ಸರಿದು, ವೇದಾಗಮಗಳನ್ನು ಮೆಚ್ಚಿಕೊಂಡು, ಒಂದಿಷ್ಟು ಶೈವಧರ್ಮಾಚರಣೆಗಳನ್ನಿಟ್ಟುಕೊಂಡು ಬಸವಣ್ಣನವರ ವೈಜ್ಞಾನಿಕ ಮನೋಧರ್ಮದಿಂದ ದೂರ ಸರಿದಿರುವುದು ಸ್ಪಷ್ಟವಾಗಿ ತೋರುತ್ತದೆ” (ಪು. ೩೫)

- Advertisement -

ಡಾ. ವೀರಣ್ಣ ದಂಡೆಯವರ ಈ ವಿಚಾರ ಅಕ್ಷರಶಃ ನಿಜವೆನಿಸುತ್ತದೆ. ಇಂದು ವೀರಶೈವ-ಲಿಂಗಾಯತ ಪದಗಳ ಬಗೆಗಿನ ದ್ವಂದ್ವ ನಿಲುವುಗಳಿಗೆ ಇಲ್ಲಿ ಸ್ಪಷ್ಟ ಉತ್ತರವಿದೆ ಎನಿಸುತ್ತದೆ.

ಈ ಕೃತಿಯ ಮೂರನೆಯ ಲೇಖನ ‘ಅನುಭವ ಮಂಟಪ ಪರಿಕಲ್ಪನೆ ಮತ್ತು ರಚನೆ’ ಡಾ. ದಂಡೆಯವರ ಕ್ಷೇತ್ರಕಾರ್ಯ ಅಧ್ಯಯನದ ಫಲವಾಗಿ ಹೊಸ ವಿಚಾರಗಳನ್ನು ಶೋಧಿಸಿದ ಬರಹವಾಗಿದೆ. ೧೯೩೨ರಲ್ಲಿಯೇ ಅಂದರೆ ೯೦ ವರುಷಗಳ ಹಿಂದೆ “ಅನುಭವ ಮಂಟಪ : ಲಿಂಗಾಯತ ಧರ್ಮದ ಹೃದಯ” ಎಂಬ ಇಂಗ್ಲಿಷ್ ಕೃತಿಯನ್ನು ರೆ. ಉತ್ತಂಗಿ ಚೆನ್ನಪ್ಪನವರು ಬರೆದು ಪ್ರಕಟಿಸಿದ್ದರು. ಈ ಕೃತಿಯನ್ನು ಕನ್ನಡ ಕುಲಪುರೋಹಿತ ಆಲೂರ ವೆಂಕಟರಾಯರು ಕನ್ನಡಕ್ಕೆ ಅನುವಾದಿಸಿದ್ದರು.

ರೆವರೆಂಡ ಚನ್ನಪ್ಪ ಉತ್ತಂಗಿಯವರು ‘ಸರ್ವಜ್ಞ ಸಾಹಿತಿ’ ಎಂದೂ ವಚನ ಶಾಸ್ತçದಲ್ಲಿ ವಿದ್ವಾಂಸರೆAದೂ ಪ್ರಸಿದ್ಧರಾಗಿದ್ದರು. ೧೯೪೩ರಲ್ಲಿ ಧಾರವಾಡದ ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆಯ ಸಾಹಿತ್ಯ ಸಮಿತಿಯಿಂದ ಪ್ರಕಟವಾಗುತ್ತಿದ್ದ ಪತ್ರಿಕೆಯಲ್ಲಿ ಶಿವಶರಣರ ವಚನಾಂಕಿತಗಳಲ್ಲಿ ಐತಿಹಾಸಿಕ ಅಂಶಗಳನ್ನು ಶೋಧಿಸಿ ಲೇಖನ ಬರೆದರು. ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದಲ್ಲಿ ವಚನಗಳು ಬರೆಯಲ್ಪಟ್ಟು, ವಚನ ಭಂಡಾರಿ ಶಾಂತರಸನ ಉಸ್ತುವಾರಿಯಲ್ಲಿದ್ದ ವಚನ ಭಂಡಾರದಲ್ಲಿ ಸಂಗ್ರಹಿಸಲಾಗುತ್ತಿತ್ತೆAದು ಪ್ರತಿಪಾದಿಸಿದ್ದರು. ಇದನ್ನು ಅವಲೋಕಿಸಿದ ಕಲಬುರ್ಗಿಯ ನ್ಯಾಯವಾದಿಗಳೂ ಸಂಶೋಧಕರೂ ಆಗಿದ್ದ ಕಪಟರಾಳ ಕೃಷ್ಣರಾಯರು ೧೨ನೇ ಶತಮಾನದಲ್ಲಿ ಅನುಭವ ಮಂಟಪ ಇರಲಿಲ್ಲವೆಂದೂ, ತತ್ಕಾರಣ ವಚನ ಭಂಡಾರ ಅಸ್ತಿತ್ವದಲ್ಲಿ ಇರಲಿಲ್ಲವೆಂದೂ ಪ್ರತಿಪಾದಿಸಿ ‘ಜಯಂತಿ’ ಪತ್ರಿಕೆಯಲ್ಲಿ ಲೇಖನ ಬರೆದರು. ಇದು ಸಮಗ್ರ ಲಿಂಗಾಯತ ಸಮಾಜಕ್ಕೆ ನುಂಗಲಾರದ ತುತ್ತಾಯಿತು. ಕೊನೆಗೆ ಧಾರವಾಡದ ಪ್ರೊ. ಶಿ. ಶಿ.

ಬಸವನಾಳ, ನಿವೃತ್ತ ಜಿಲ್ಲಾ ನ್ಯಾಯಾಧೀಶ ಹಾಲಭಾವಿ ವೀರಭದ್ರಪ್ಪ ಮುಂತಾದವರು ಉತ್ತಂಗಿಯವರನ್ನು ಭೇಟಿಯಾಗಿ ಕಪಟರಾಳ ಕೃಷ್ಣರಾಯರ ಲೇಖನಕ್ಕೆ ತಕ್ಕ ಉತ್ತರ ಕೊಡಬೇಕೆಂದು ಕೇಳಿಕೊಂಡರು. ಉತ್ತಂಗಿಯವರು ಒಪ್ಪಿಕೊಂಡರು. ಅನುಭವ ಮಂಟಪ ಮತ್ತು ವಚನ ಭಂಡಾರಗಳ ಅಸ್ತಿತ್ವ ಕುರಿತು ಐದು ಲೇಖನಗಳನ್ನು ಬರೆದರು. ಶ್ರೀ ಕಪಟರಾಳರು ತಮ್ಮ ತಪ್ಪನ್ನು ಒಪ್ಪಿಕೊಂಡರು. ಮುಂದೆ ಆ ಎಲ್ಲ ಲೇಖನಗಳನ್ನು ಸಂಗ್ರಹಿಸಿ ‘ಅನುಭವ ಮಂಟಪದ ಐತಿಹಾಸಿಕತೆ’ ಎಂಬ ತಲೆಬರಹದಲ್ಲಿ ಪ್ರಕಟಿಸಿದರು. ಇದರ ಎರಡನೆಯ ಆವೃತ್ತಿಯು ೧೯೭೯ರಲ್ಲಿ ಬೆಳಕುಕಂಡಿದೆ. ಈ ಗ್ರಂಥದಲ್ಲಿ ಅನುಭವ ಮಂಟಪ ಮತ್ತು ವಚನ ಭಂಡಾರಗಳ ಅಸ್ತಿತ್ವದ ಬಗೆಗೆ ಐತಿಹಾಸಿಕ, ಸಾಹಿತ್ಯಿಕ ಆಧಾರಗಳನ್ನು ಕೊಟ್ಟು ಸಿದ್ಧಪಡಿಸಿರುವ ವಿಷಯ ಕರ್ನಾಟಕದ ಎಲ್ಲ ಸಂಶೋಧಕರಿಗೆ ತಿಳಿದಿದೆಯೆಂದು ನಾನು ಭಾವಿಸಿದ್ದೇನೆ.

ಈ ಹಿನ್ನೆಲೆಯಲ್ಲಿ ಡಾ. ವೀರಣ್ಣ ದಂಡೆಯವರು ಅನುಭವ ಮಂಟಪದ ಅಸ್ತಿತ್ವವನ್ನು ವಿವರಿಸುವ ಅಪೂರ್ವ ಸ್ಮಾರಕಗಳ, ಶರಣ ಕ್ಷೇತ್ರಗಳ ವಿವರಣೆಯನ್ನು ಸ್ವತಃ ಕ್ಷೇತ್ರಕಾರ್ಯದ ಅಧ್ಯಯನ ಫಲದಿಂದ ಕೊಟ್ಟಿರುವುದು ತುಂಬ ಔಚಿತ್ಯಪೂರ್ಣವಾಗಿದೆ. ಕಲ್ಯಾಣದ ಸುತ್ತಲೂ ಇರುವ ಶರಣರ ನೆಲೆಗಳು, ಅನುಭವ ಮಂಟಪದ ಹೊಳಹು ಕೊಡುವ ಶರಣರ ಗವಿಗಳು, ಶರಣ ಸ್ಮಾರಕಗಳಿರುವ ಗ್ರಾಮಗಳು, ಮೊದಲಾದ ವಿಷಯಗಳಿಂದ ಅನುಭವಮಂಟಪದ ಅಸ್ತಿತ್ವವನ್ನು ಸಿದ್ಧಗೊಳಿಸಿದ್ದಾರೆ.

ಈ ಕೃತಿಗೆ ಆಶೀರ್ವಚನ ನೀಡಿದ ಬೇಲಿಮಠದ ಶ್ರೀ ಶಿವರುದ್ರ ಸ್ವಾಮಿಗಳು- “ಲಿಂಗಾಯತ ಧರ್ಮದ ರಾಚನಿಕ ಸ್ವರೂಪವನ್ನು ವಿಶ್ಲೇಷಿಸುತ್ತ, ವಚನಗಳಲ್ಲಿಯೇ ಹುದುಗಿರುವ ಲಿಂಗಾಯತ ಧರ್ಮದ ಸ್ವತಂತ್ರ ಅಸ್ತಿತ್ವದ ಎಳೆಗಳನ್ನು ಹಿಡಿದು, ಅದರ ಒಳಹೊರಗುಗಳನ್ನು ಅರ್ಥಮಾಡಿಕೊಳ್ಳಲು ಡಾ. ವೀರಣ್ಣ ದಂಡೆ ಅವರ ಈ ಕೃತಿ ದಾರಿದೀಪವಾಗಿದೆ. ನಿಜವಾದ ಅರ್ಥದಲ್ಲಿ ಲಿಂಗಾಯತ ಧರ್ಮದ ಸ್ವತಂತ್ರ ಅಸ್ತಿತ್ವದ ತಾತ್ವಿಕ ಚರ್ಚೆಯನ್ನು ಒಳಗೊಂಡ ಈ ಕೃತಿ ಮಹತ್ವದ್ದಾಗಿದೆ. ಒಂದು ಧರ್ಮದ ರಚನೆಯ ರೀತಿಯಲ್ಲಿಯೇ ಆ ಧರ್ಮದ ಸ್ವತಂತ್ರ ಅಸ್ತಿತ್ವ ಅಡಗಿರುತ್ತದೆ. ಬಸವಣ್ಣನವರು ಹುಟ್ಟುಹಾಕಿದ ಲಿಂಗಾಯತಧರ್ಮ ಹೇಗೆ ತನ್ನ ಅಸ್ತಿತ್ವದಲ್ಲಿಯೇ ಸ್ವತಂತ್ರ ಸ್ವರೂಪವನ್ನು ಹೊಂದಿದೆ ಎಂಬುದನ್ನು ಈ ಚಿಕ್ಕ ಕೃತಿ ಪ್ರಸ್ತುತಪಡಿಸುತ್ತದೆ” ಎಂಬ ಮಾತುಗಳು ಕೃತಿಯ ಮಹತ್ವವನ್ನು ಸಾರುತ್ತವೆ.

ಪುಸ್ತಕ ಕಿರಿದಾದರೂ ಸಮಸ್ತ ಲಿಂಗಾಯತ ಸಮಾಜ ಬಾಂಧವರು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅನೇಕ ಮೌಲಿಕ ವಿಚಾರಗಳು ಇಲ್ಲಿವೆ. ಇಂಥ ಅಮೂಲ್ಯ ಕೃತಿಯನ್ನು ರಚಿಸಿದ ಡಾ. ವೀರಣ್ಣ ದಂಡೆ ಅವರಿಗೆ ವಂದನೆ-ಅಭಿನಂದನೆಗಳು.


ಪ್ರಕಾಶ ಗಿರಿಮಲ್ಲನವರ
ಬೆಳಗಾವಿ
ಮೊ: ೯೯೦೨೧೩೦೦೪೧

- Advertisement -
- Advertisement -

Latest News

ಪ್ರಬಂಧ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಬಸವರಾಜ ಪತ್ತಾರ ಅವರಿಗೆ ಸನ್ಮಾನ

ಬೈಲಹೊಂಗಲ: ಸೋಲನ್ನು ಒಪ್ಪಿಕೊಳ್ಳದೇ ನಿರಂತರವಾಗಿ ಪ್ರಯತ್ನಿಸುವ ಮನೋಭಾವವೇ ಸಾಧನೆಯ ಸೂತ್ರ ಎಂದು ಬೈಲಹೊಂಗಲ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷರಾದ ಎನ್.ಆರ್.ಠಕ್ಕಾಯಿ ಹೇಳಿದರು. ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ...
- Advertisement -

More Articles Like This

- Advertisement -
close
error: Content is protected !!
Join WhatsApp Group