ಹಾರೂಗೇರಿ – ಕೃಷಿ ಕ್ಷೇತ್ರಕ್ಕೆ ಇಂದು ಅತ್ಯಂತ ಕೆಟ್ಟ ಸ್ಥಿತಿ ಬಂದಿದೆ. ರೈತರಿಗೆ ಹೆಣ್ಣು ಕೂಡಾ ಸಿಗಲಾರದಂಥ ದಯನೀಯ ಪರಿಸ್ಥಿತಿ ಇದೆ. ಎಲ್ಲಾ ಕಾರ್ಮಿಕ ಕ್ಷೇತ್ರಗಳಿಗೆ ಸಂಘಟನೆಗಳಿವೆ ಆದರೆ ರೈತರಿಗಾಗಿ ಒಂದು ಸದೃಢವಾದ ಸಂಘಟನೆ ಇಲ್ಲವಾಗಿದೆ. ರೈತರಿಗೆ ವಿದ್ಯುತ್, ನೀರು, ಸರಿಯಾದ ಬೆಲೆ ಒದಗಿಸಲು ಹೋರಾಡುವವರು ಇಲ್ಲವಾಗಿದ್ದಾರೆ. ಈ ಕೊರತೆ ನೀಗಿಸಲು ಭಾರತೀಯ ಕಿಸಾನ್ ಸಂಘ ಹುಟ್ಟಿಕೊಂಡಿದೆ ಎಂದು ರಾಜ್ಯ ಸಂಘಟನಾ ಕಾರ್ಯದರ್ಶಿ ಪುಟ್ಟಸ್ವಾಮಿ ಹೇಳಿದರು.
ಭಾರತೀಯ ಕಿಸಾನ್ ಸಂಘ ಕರ್ನಾಟಕ ಪ್ರದೇಶ (ರಿ) ಇದರ ಕರ್ನಾಟಕ ಉತ್ತರ ಪ್ರಾಂತ ಚಿಕ್ಕೋಡಿ ಭಾಗದ ರೈತರ ಸಭೆ ಚಿಕ್ಕೋಡಿ ಜಿಲ್ಲಾ ಸಂಘಟಕರ ಆಯ್ಕೆ ಸಭೆಯಲ್ಲಿ ಅವರು ಮಾತನಾಡಿದರು.
ಇದು ರೈತರಿಗಾಗಿಯೇ ಇರುವ ಸಂಘಟನೆ. ಯಾವುದೇ ಪಕ್ಷಾಧಾರಿತ, ವ್ಯಕ್ತಿ ಆಧಾರಿತ ಸಂಘಟನೆಯಲ್ಲ. ಯಾವುದೇ ಸಮಸ್ಯೆ ಇರಲಿ ಸಮಗ್ರವಾಗಿ ರೈತರ ಸಮಸ್ಯೆಗಳ ಬಗ್ಗೆ ಗಮನಹರಿಸಿ ಹೋರಾಡಬೇಕಾದ ಅನಿವಾರ್ಯತೆ ಇಂದು ಇದೆ ಅದನ್ನು ನಮ್ಮ ಸಂಘಟನೆ ಮುಂದಿನ ದಿನಗಳಲ್ಲಿ ಮಾಡಲಿದೆ ಎಂದರು
ಪ್ರಾಸ್ತಾವಿಕವಾಗಿ ಮಾತನಾಡಿದ ಶಿವಕುಮಾರ ಗಾಣಿಗೇರ ಅವರು, ರೈತರನ್ನು ಸ್ವಾವಲಂಬಿಯಾಗಿಸುವುದು, ರೈತರ ಸಮಸ್ಯೆ ಪರಿಹಾರಗಳು, ಅನ್ನ ನೀಡುವ ರೈತನ ಸಂಕಷ್ಟ ಪರಿಹಾರ ಮಾಡುವ ಉದ್ದೇಶದಿಂದ ಭಾರತೀಯ ಕಿಸಾನ್ ಸಂಘ ಸ್ಥಾಪಿಸಲಾಗಿದೆ. ದೇಶದ ಎಲ್ಲಾ ರಾಜ್ಯಗಳ ಎಲ್ಲಾ ಜಿಲ್ಲೆಗಳಲ್ಲಿ ಭಾರತೀಯ ಕಿಸಾನ್ ಸಂಘ ಬೆಳದಿದೆ ಎಂದರು.
ಕಲ್ಲಪ್ಪ ಹಾರೂಗೇರಿ ಹಾಗೂ ಜಯಪಾಲ ನಾಗನೂರ ಮಾತನಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಸಮಿತಿಯ ಅಧ್ಯಕ್ಷ ಉಪಾಧ್ಯಕ್ಷ ಹಾಗೂ ಸದಸ್ಯರನ್ನು ಆಯ್ಕೆ ಮಾಡಲಾಯಿತು.
ಜಿಲ್ಲಾ ಅಧ್ಯಕ್ಷರಾಗಿ ಬಸಗೌಡಾ ಪಾಟೀಲ, ಉಪಾಧ್ಯಕ್ಷರಾಗಿ ಶಿವಾನಂದ ಮುಧೋಳ, ವಿಶ್ವನಾಥ ರಾಜಾರಾಮ ಪಾಟೀಲ, ಕಾರ್ಯದರ್ಶಿಯಾಗಿ ದರ್ಶನಕುಮಾರ ಅಕ್ಕಿ, ಸಾಗರ, ಸಹಕಾರ್ಯದರ್ಶಿಗಳಾಗು ಸುಶೀಲ ಕೋರೆ, ಖಜಾಂಚಿಯಾಗಿ ಸುರೇಶ ಹೊಸಪೇಟ, ಯುವ ಪ್ರಮುಖರು ಬಾಳಪ್ಪ ಖೋತ, ಶೈಲೇಶ ಖುರೇಶಿ, ಮಂಜುನಾಥ ಕಲ್ಲೋಳಿ, ಬೃಹ್ಮಾನಂದ ಮಾಚಕನೂರ, ಅಶೋಕ ಗುಡೋಡಗಿ ಹಾಗೂ ಪ್ರತಿ ತಾಲೂಕಿನಿಂದ ಇಬ್ಬರು ಸದಸ್ಯರನ್ನು ಪ್ರಾಂತ ಸಮಿತಿಗೆ ಆಯ್ಕೆ ಮಾಡಲಾಯಿತು.
ಪ್ರಾಂತ ಕಾರ್ಯದರ್ಶಿ ಶ್ರೀಶೈಲ ಜನಗೌಡ ಕಾರ್ಯಕ್ರಮ ನಿರೂಪಿಸಿದರು. ದರ್ಶನಕುಮಾರ ಅಕ್ಕಿಸಾಗರ ವಂದಿಸಿದರು.