ಘಟಪ್ರಭಾ: ರೈತರ ಆದಾಯವನ್ನು ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸತತ ಪ್ರಯತ್ನಶೀಲವಾಗಿದ್ದು ರೈತರಿಗೆ ಅನುಕೂಲವಾಗುವ ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗಿದೆ. ಕಳೆದ ೬ ವರ್ಷಗಳಿಂದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಬಿಡುಗಡೆ ಮಾಡುವಲ್ಲಿ ವಿಶೇಷ ಮುತುವರ್ಜಿ ವಹಿಸಿದ್ದು ಶನಿವಾರ ೨೦ನೇ ಕಂತಿನ ಮೂಲಕ ನೇರವಾಗಿ ಬೆಳಗಾವಿ ಜಿಲ್ಲೆಯ ೫ ಲಕ್ಷ ೨೫ ಸಾವಿರ ಅಧಿಕ ರೈತರ ಖಾತೆಗಳಿಗೆ ೧೦೬.೧೩ ಕೋಟಿ ರೂ.ಗಳು ಜಮಾ ಮಾಡಲಾಗಿದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.
ಶನಿವಾರ ಆ-೦೨ ರಂದು ಸಮೀಪದ ರಾಜಾಪೂರ ಗ್ರಾಮದ ಚುನಿಮಟ್ಟಿಯ ಶ್ರೀ ಚುನಮ್ಮಾದೇವಿ ದೇವಸ್ಥಾನದ ಹತ್ತಿರ ರಾಜ್ಯಸಭಾ ಸಂಸದರ ಸ್ಥಳೀಯ ಪ್ರದೇಶಾಭಿವೃದ್ದಿ ಯೋಜನೆಯಡಿ ೩೦ ಲಕ್ಷ ರೂ.ಗಳ ವೆಚ್ಚದಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೇರವೇರಿಸಿ ಮಾತನಾಡಿದ ಅವರು ಪಿ.ಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ದೇಶದಾದ್ಯಂತ ೯.೭ ಕೋಟಿ ರೈತರಿಗೆ ಒಟ್ಟು ೨೦,೫೦೦ ಕೋಟಿ ರೂ. ಹಾಗೂ ರಾಜ್ಯದ ೪೩.೩೦ ಲಕ್ಷ ರೈತರ ಖಾತೆಗೆ ೮೭೭.೭೦ ಕೋಟಿ ರೂ. ಹಣ ನೇರವಾಗಿ ಡಿಬಿಟಿ ಮೂಲಕ ರೈತರ ಖಾತೆಗೆ ವರ್ಗಾವಣೆ ಮಾಡಲಾಗಿದೆ ಎಂದರು.
ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಈಗಾಗಲೇ ನಾನು ೩೦ ಲಕ್ಷ ರೂ.ಗಳ ಅನುದಾನವನ್ನು ಮಂಜೂರು ಮಾಡಲಾಗಿದ್ದು ತಾವು ಕೂಡ ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರುಗಳಿಂದ ಅನುದಾನ ಪಡೆದು ಸುಸಜ್ಜಿತವಾದ ಸಾಂಸ್ಕೃತಿಕ ಭವನ ನಿರ್ಮಾಣ ಮಾಡಿದರೆ ಈ ಭಾಗದ ಗ್ರಾಮೀಣ ಪ್ರದೇಶ ಜನರಿಗೆ ಮದುವೆ, ಸೀಮಂತ ಕಾರ್ಯಕ್ರಮ, ಬೇರೆ ಬೇರೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಈ ಭವನ ಅನುಕೂಲವಾಗಲಿದೆ. ಗ್ರಾಮಸ್ಥರು ರಾಜಕಾರಣ ಬೆರೆಸದೇ ವ್ಯವಸ್ಥಿತವಾಗಿ ಶ್ರಮ ಹಾಕಿದರೇ ಸಾಧ್ಯವಾಗಲಿದೆ ಎಂದರು.
ಈಗಾಗಲೇ ನಿಮ್ಮ ಗ್ರಾಮಕ್ಕೆ ಜನೋಪಯೋಗಿ ಅಭಿವೃದ್ದಿ ಕಾರ್ಯಗಳಿಗೆ ರಾಜ್ಯಸಭಾ ಸಂಸದರ ಸ್ಥಳೀಯ ಪ್ರದೇಶಾಭಿವೃದ್ದಿ ಯೋಜನೆ ಅನುದಾನದಲ್ಲಿ ಚುನಮ್ಮಾದೇವಿ ದೇವಸ್ಥಾನದ ಹತ್ತಿರ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ೩೦ ಲಕ್ಷ ರೂ.ಗಳ, ಕಲ್ಲೋಳಿ ರಾಜಾಪೂರ ಕೊರೆವ್ವನ ಹಳ್ಳದ ಹತ್ತಿರ ಒಂದು ಕೋಟಿ ರೂ.ಗಳ ವೆಚ್ಚದಲ್ಲಿ ಬ್ರಿಡ್ಜ್ ಕಂ ಬ್ಯಾರೆಜ್ ನಿರ್ಮಿಸಲಾಗಿದೆ. ದುರ್ಗಾದೇವಿ ದೇವಸ್ಥಾನದ ಹತ್ತಿರ ೫ ಲಕ್ಷ ರೂ.ಗಳ ವೆಚ್ಚದಲ್ಲಿ ಸಮುದಾಯ ಭವನ, ಶಾಲೆಗೆ ೨.೫ ಲಕ್ಷ ರೂ.ಗಳ ವೆಚ್ಚದಲ್ಲಿ ಸ್ಮಾರ್ಟ ಕ್ಲಾಸ್, ಗ್ರಾಮದ ಅಭಿವೃದ್ದಿಗಾಗಿ ರಸ್ತೆ, ಕುಡಿಯುವ ನೀರು ಸೌಲಭ್ಯ ಹಾಗೂ ಜಿ.ಪಂ ಅಧ್ಯಕ್ಷನ ಅವಧಿಯಲ್ಲಿ ಕನಕ ಭವನ ನಿರ್ಮಾಣ ಮಾಡಿರುವುದನ್ನು ಸ್ಮರಿಸಿದರು ಹಾಗೂ ಮುಂಬರುವ ದಿನಗಳಲ್ಲಿ ಗ್ರಾಮದ ಅಭಿವೃದ್ದಿ ಕಾರ್ಯಗಳಿಗೆ ನನ್ನ ಸಹಕಾರ ಇದ್ದೇ ಇರುತ್ತದೆ ಗ್ರಾಮಸ್ಥರು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ವಿನಂತಿಸಿದರು.
ಈ ಸಂದರ್ಭದಲ್ಲಿ ಚುನಮ್ಮಾದೇವಿ ಸುಧಾರಣಾ ಕಮೀಟಿ ಅಧ್ಯಕ್ಷ ಗೋಪಾಲ ಕಮತಿ, ಗ್ರಾ.ಪಂ ಸದಸ್ಯ ಕೆಂಪಣ್ಣ ಗಡಹಿಂಗ್ಲೆಜ್, ಮಲ್ಲಪ್ಪ ಪಾಟೀಲ, ಪಿ.ಕೆ.ಪಿ.ಎಸ್ ಅಧ್ಯಕ್ಷ ಸಿದ್ದಪ್ಪ ಜಟ್ಟೆನ್ನವರ, ವಿಠ್ಠಲ ಎಣ್ಣಿ, ಚಿನ್ನಪ್ಪ ಪಾಟೀಲ, ರಾಮಚಂದ್ರ ಕೊಡ್ಲಿ, ಬಸವರಾಜ ಹೊಸೂರ, ಗೋಪಾಲ ಅಥಣಿ, ಹಣಮಂತ ಹುದ್ದಾರ, ವಿಠ್ಠಲ ಸಿಂಗಾಡಿ, ರಾಮಚಂದ್ರ ಗುಂಡಪ್ಪಗೋಳ, ಗೋಪಾಲ ಕೆಂಪವ್ವಗೋಳ, ಅಡಿವೆಪ್ಪ ಮುತ್ನಾಳ, ಮುತ್ತೆಪ್ಪ ಜಟ್ಟೆನ್ನವರ ಸೇರಿದಂತೆ ಸ್ಥಳೀಯ ಮುಖಂಡರು ಗ್ರಾಮಸ್ಥರು ಉಪಸ್ಥಿತರಿದ್ದರು.