spot_img
spot_img

ಭತ್ತದ ನಾಡು ಕೆ.ಆರ್.ನಗರ ಕಾವೇರಿ ತೀರದ ಅರ್ಕೇಶ್ವರ

Must Read

- Advertisement -

ನಾವು ಕಪ್ಪಡಿ ದರ್ಶನ ಮಾಡಿಕೊಂಡು ಕೆ.ಆರ್.ನಗರದ ಅರ್ಕೇಶ್ವರ ದೇವಸ್ಥಾನ ನೋಡಲು ಪ್ರಯಾಣ ಮುಂದುವರೆಸಿದೆವು. ಕೆ.ಆರ್.ನಗರದಿಂದ ಹಾಸನ ರಸ್ತೆಯಲ್ಲಿ ಮೂರ್ನಾಲ್ಕು ಕಿ.ಮೀ. ದೂರದಲ್ಲಿ ಕಾವೇರಿ ನದಿಯ ದಂಡೆಯಲ್ಲಿ ಅರ್ಕೇಶ್ವರ ದೇವಾಲಯ ನೆಲೆಗೊಂಡಿದೆ.

ಮೀನಾಕ್ಷಮ್ಮನವರ ಸಮೇತ ಶ್ರೀ ಅರ್ಕೇಶ್ವರ ದೇವಸ್ಥಾನ ಎಂಬುದಾಗಿದೆ. ಕೆ.ಆರ್.ನಗರಕ್ಕೆ ಈ ಹಿಂದೆ ಇದ್ದ ಹೆಸರು ಎಡತೊರೆ. ಊರಿಗೆ ಎಡಭಾಗದಲ್ಲಿ ಹರಿಯುವ ತೊರೆ ಕಾವೇರಿ ನದಿ ಇರಲಾಗಿ ಎಡತೊರೆ ಎಂದಾಗಿದೆ. ಇದನ್ನು ಸೂರ್ಯ ಉದಯನಾಡೆಂದು ಕರೆಯುತ್ತಿದ್ದರು. ಇದು ಜಗತ್ತಿನಲ್ಲಿ ಕಂಡು ಬರುವ 2ನೇ ಸೂರ್ಯ ದೇವಾಲಯವೆಂದು ಹೇಳಲಾಗಿದೆ.

ಮಹಾಭಾರತ, ರಾಮಾಯಣ, ಭಗವದ್ಗಿತೆ ಸೇರಿದಂತೆ 18 ಪುರಾಣಗಳಲ್ಲಿ ಅರ್ಕೇಶ್ವರನ ಪುರಾಣವೂ ಒಂದು. ಸೂರ್ಯದೇವ ಛಾಯಾದೇವಿಯನ್ನು ಮದುವೆಯಾಗಿ ಯಮ ಮತ್ತು ಶನಿಯ ಜನನಕ್ಕೆ ಕಾರಣನಾಗುತ್ತಾನೆ. ಶುಕ್ರಾಚಾರ್ಯರ ಪುತ್ರಿ ಸಂಜ್ಞಾದೇವಿಯನ್ನು 2ನೇ ಮದುವೆಯಾಗುತ್ತಾನೆ. ಇವರಿಗೆ ವೈವಸುತ ಎಂಬ ಮಗ ಯಮುನೆ ಎಂಬ ಪುತ್ತಿ ಜನಿಸುತ್ತಾರೆ. ಯಮುನೆ ಪ್ರಾಪ್ತ ವಯಸ್ಸಿಗೆ ಬಂದಾಗ ಜಗದೇಕ ಸುಂದರಿಯಾಗಿ ಖ್ಯಾತಿ ಪಡೆಯುತ್ತಾಳೆ. ಈಕೆಯ ಸೌಂದರ್ಯಕ್ಕೆ ಸೂರ್ಯದೇವನೇ ಮೋಹಪರವಶನಾಗುತ್ತಾನೆ. ಇದರಿಂದ ಸೂರ್ಯ ತನ್ನ ಸಹಚರ ದೇವತೆಗಳಿಂದಲೇ ಬಹಿಷ್ಕಾರಕ್ಕೆ ಒಳಗಾಗುತ್ತಾನೆ. ನಂತರ ಸೂರ್ಯ ತನ್ನ ತಪ್ಪಿಗೆ ಪಶ್ಚಾತ್ತಾಪಪಟ್ಟು ಪಾಪ ಕಳೆಯಲು ಶಿವನನ್ನು ಕುರಿತು ತಪಸ್ಸು ಮಾಡಲು ದಂಡಕಾರಣ್ಯ ಸೇರುತ್ತಾನೆ. ನರ್ಮದಾ ನದಿಯಲ್ಲಿ ಸ್ನಾನ ಮಾಡಿ ನದಿಯಿಂದ ಲಿಂಗವೊಂದನ್ನು ತೆಗೆದುಕೊಂಡು ಹೊರಟು ಇಲ್ಲಿಗೆ ತನ್ನ ಪ್ರಯಾಣ ನಿಲ್ಲಿಸಿ ಅಲ್ಲೇ ಲಿಂಗ ಪ್ರತಿಷ್ಠಾಪಿಸುತ್ತಾನೆ. ಆ ಕ್ಷೇತ್ರವೇ ಎಡತೊರೆಯ ಅರ್ಕೇಶ್ವರಸ್ವಾಮಿ ದೇವಾಲಯ ಎಂಬ ಐತಿಹ್ಯವಿದೆ.

- Advertisement -

ಅವರ್ತಪುರಿ ಎಂದು ಪುರಾಣ ಪ್ರಸಿದ್ಧಿಯಾದ ಈ ಕ್ಷೇತ್ರದಲ್ಲಿ ಸೂರ್ಯ ಸಪ್ತ ಸರೋವರಗಳಲ್ಲಿ ಸ್ನಾನ ಮಾಡುತ್ತಾನೆ. ಈ ಸರೋವರಕ್ಕೆ ಅರ್ಕಪುಷ್ಕರಿಣಿ ಎಂಬ ಹೆಸರು ಬಂದಿದೆ. ಸೂರ್ಯ ಪ್ರತಿಷ್ಠಾಪಿಸಿದ ಲಿಂಗವೇ ಅರ್ಕೇಶ್ವರ ಎಂಬ ಪ್ರತೀತಿ ಇದೆ. ಪ್ರತಿ ಶಿವರಾತ್ರಿಯ ಬೆಳಗ್ಗೆ ಸೂರ್ಯನ ಕಿರಣಗಳು ಗರ್ಭಗುಡಿಯ ಅರ್ಕೇಶ್ವರ ಲಿಂಗದ ಮೇಲೆ ಬೀಳುವುದಾಗಿ ಕಾಣಲು ಜನತೆ ಮುಗಿಬೀಳುತ್ತಾರೆ. ಶಿವರಾತ್ರಿಯಂದು ದೇಗುಲದಲ್ಲಿ ಜನ ಉಪವಾಸವಿದ್ದು ಶಿವಕಥೆ, ಪುರಾಣ ಪಠಣ ಮಾಡುತ್ತಾರೆ. ರಥ ಸಪ್ತಮಿ ದಿನದಂದು ರಥೋತ್ಸವ ಜರುಗುತ್ತದೆ. ಇದೇ ದಿನ ನಮ್ಮೂರಿನ (ಗೊರೂರು) ಶ್ರೀ ಯೋಗನರಸಿಂಹಸ್ವಾಮಿ ರಥೋತ್ಸವವು ಜರುಗುತ್ತದೆ.

ಅರ್ಕೇಶ್ವರ ದೇವಾಲಯದ ಸಮೀಪ 9ನೇ ಶತಮಾನದ ಗಂಗರ ಶಾಸನ ದೊರೆತಿದೆ. ಅಂಗೈಕಾರನ್ ಎಂಬುವನು ಈಶ್ವರ ದೇವಾಲಯಕ್ಕೆ ಭೂಮಿಯನ್ನು ದಾನ ಕೊಟ್ಟನೆಂದು, ರಾಜೇಂದ್ರ ಚೋಳನು 11ನೇ ಶತಮಾನದಲ್ಲಿ ಗಂಗರನ್ನು ಸೋಲಿಸಿ ಎಡತೊರೆಯನ್ನು ವಶಪಡಿಸಿಕೊಂಡನೆಂದು ಆ ಕಾಲದಲ್ಲಿ ಮೀನಾಕ್ಷಿ ಅಮ್ಮನವರ ದೇವಾಲಯ ನಿರ್ಮಿಸಿರಬಹುದೆಂದು ಹೇಳಲಾಗಿದೆ. ಈ ಪ್ರದೇಶವು ಗಂಗ ಚೋಳ, ಚಂಗಾಳ್ವ, ಕೊಂಗಾಳ್ವ, ಹೊಯ್ಸಳ, ವಿಜಯನಗರ ಮತ್ತು ಮೈಸೂರು ಅರಸರ ಆಡಳಿತಕ್ಕೆ ಒಳಪಟ್ಟಿತ್ತು 12ನೇ ಶತಮಾನದ ಚೋಳ ದಾಖಲೆಯಂತೆ ತುರೈನಾಡಿನ ಇಡೈತುರೈನಾಡ್ ಇದಾಗಿತ್ತು. ಈ ದ್ರಾವಿಡ ಪದ ಇಡೈತೊರೆ ಮುಂದೆ ಎಡತೊರೆಯಾಯಿತು. ಕ್ರಿ.ಶ.1391ರ ವಿಜಯನಗರ ದಾಖಲೆಯಲ್ಲಿ ಎಡತೊರೆ ಎಂದೇ ಇದೆ.

ಚೋಳರ ಕಾಲದಲ್ಲಿ ನಿರ್ಮಿತ ಈ ದೇವಾಲಯ ಮೈಸೂರು ಅರಸರ ಕಾಲದಲ್ಲಿ ಪ್ರವೇಶದ್ವಾರ, ರಾಜಗೋಪುರ ನಿರ್ಮಾಣವಾಗಿದೆ. ಪ್ರವೇಶದ್ವಾರದ ಗರುಡಗಂಬದ ಮೇಲೆ ನಂದಿಯ ಸಣ್ಣ ವಿಗ್ರಹವಿದೆ. ಒಳಾಂಗಣದಲ್ಲಿ ಸೂರ್ಯ ವಿಗ್ರಹವಿದ್ದು ಸುತ್ತಲೂ 40 ಲಿಂಗಗಳಿವೆ. ದೇವಾಲಯದ ಪ್ರವೇಶದ್ವಾರದ ಎಡಭಾಗದಲ್ಲಿ ಸೂರ್ಯದೇವ, ಈಶಾನ್ಯಕ್ಕೆ ಯಾಗಶಾಲೆ, ಅರ್ಕೇಶ್ವರ, ಮೀನಾಕ್ಷಮ್ಮ ದೇವಾಲಯವಿದೆ. ಹಿಂಭಾಗ ಚಂಡಿಕೇಶ್ವರಿ ಗಿರಿಜಾಕಲ್ಯಾಣ ಮಂಟಪ ಹೊಂದಿದೆ. ದೇವಸ್ಥಾನ ದ್ರಾವಿಡ ಶೈಲಿಯದು.

- Advertisement -

ಮೈಸೂರು ಹಾಸನ ರಾಷ್ಟ್ರೀಯ ಹೆದ್ದಾರಿ 88ರ ರಸ್ತೆಗೆ ಇಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಿಸಲಾಗಿದೆ. ಪಕ್ಕದಲ್ಲೇ ಮೈಸೂರು ಹಾಸನ ಸಂಪರ್ಕದ ರೈಲ್ವೆ ಬ್ರಿಡ್ಜ್ ಇದೆ. ಮುಮ್ಮಡಿ ಕೃಷ್ಣರಾಜ ಒಡಯರ ಆಡಳಿತಾವಧಿಯಲ್ಲಿ (1811-31) ಈಸ್ಟ್ ಇಂಡಿಯಾ ಕಂಪನಿಯ ನಿಬಂಧನೆಯಂತೆ ಮತ್ತು ಪ್ರಜೆಗಳ ಕ್ಷೇಮಾಭಿವೃದ್ಧಿಗಾಗಿ 18 ಕಛೇರಿಗಳು 6 ಪೌಜುದಾರಿಗಳನ್ನು ಮತ್ತು 125 ಗಡಿಗಳನ್ನು ಸ್ಥಾಪಿಸಿದರು. ಎಡತೊರೆ ಹತ್ತಿರ ಡೋರ್ನಹಳ್ಳಿಯಲ್ಲಿ 1780ರಲ್ಲಿಯೇ ಸೆಂಟ್ ಅಂತೋಣಿ ಚರ್ಚ್ ಎಂಬ ರೋಮನ್ ಕ್ಯಾತೊಲಿಕ್ ಚರ್ಚ್ ಆರಂಭವಾಯಿತು. ಬಿ.ಎಲ್.ರೈಸ್ ಪ್ರಕಾರ 1876ರಲ್ಲಿ ಎಡತೊರೆಗೆ 7 ಹೋಬಳಿಗಳು ಸೇರಿದ್ದವು. 1920ರಲ್ಲಿ ಕಾವೇರಿ ನದಿಯ ಪ್ರವಾಹದಿಂದ ಗ್ರಾಮವು ತೀವ್ರವಾಗಿ ಹಾನಿಗೊಳಗಾಯಿತು. ಕನ್ನಂಬಾಡಿ ಕಟ್ಟೆ ಕಟ್ಟುವಾಗ ಮುಳುಗಡೆ ಭೀತಿಯಲ್ಲಿದ್ದ ಎಡತೊರೆಯನ್ನು ಕಾವೇರಿ ಬಲದಂಡೆಯಲ್ಲಿ 3 ಕಿ.ಮೀ. ದೂರಕ್ಕೆ ವರ್ಗಾಯಿಸಿ ಸುಮಾರು 10 ವರ್ಷಗಳ ಕಾಲ ಜರ್ಮನ್ ಇಂಜಿನಿಯರ್ ಕ್ರುಂಬ್ಲಿಗಲ್ ಅವರ ಮಾರ್ಗದರ್ಶನದಲ್ಲಿ ವ್ಯವಸ್ಥಿತವಾಗಿ ರೂಪುಗೊಂಡು 1934ರಲ್ಲಿ ಕೃಷ್ಣರಾಜನಗರ ಎಂದು ಮರುನಾಮಕರಣ ಮಾಡಲಾಯಿತು.

ಕೆ.ಆರ್.ನಗರವು ಭತ್ತದ ಕಣಜವೆಂದು ಪ್ರಸಿದ್ಧಿ ಹೊಂದಿದೆ. ಹಾಸನದಿಂದ ಮೈಸೂರಿಗೆ ಪ್ರಯಣಿಸುವಾಗ ಭತದ ನಾಡಿಗೆ ಸ್ವಾಗತ ಎಂಬ ನಾಮಫಲಕ ಗಮನಿಸಬಹುದು. ಭತ್ತದ ನಾಡಿನ ಪ್ರಸಿದ್ಧಿಗೆ ಬ್ರಿಟಷ್ ಆಳ್ವಿಕೆಗೆ ಪೂರ್ವದಲ್ಲಿಯೇ ಸ್ಥಳೀಯವಾಗಿ ನಿರ್ಮಿಸಿದ ನೀರಾವರಿ ವ್ಯವಸ್ಥೆಯಿಂದ ದೇಶದಲ್ಲೇ ಅಗ್ರಸ್ಥಾನ ಪಡೆದು ಬ್ರಿಟೀಷರಿಂದಲೇ ಹೊಗಳಿಸಿಕೊಂಡ ಹೆಗ್ಗಳಿಕೆ ಮೈಸೂರು ಸಂಸ್ಥಾನದ್ದು. ಬಿ.ಎಲ್.ರೈಸ್ ಪ್ರಕಾರ 1876ರಷ್ಟರಲ್ಲಿಯೇ ಕಾವೇರಿ ನದಿಗೆ 12 ಅಣೆಕಟ್ಟೆಗಳಿದ್ದವು. ಅವುಗಳಲ್ಲಿ 2 ಹಾಸನ ಜಿಲ್ಲೆಗೆ ಸೇರಿದವು. ಕೆ.ಆರ್.ನಗರ ತಾಲ್ಲೂಕಿನಲ್ಲಿ ಶೇ. 77.98ರಷ್ಟು ವಿಸ್ತೀರ್ಣ ಜಮೀನು ನೀರಾವರಿಗೆ ಒಳಗಾಗಿ ರಾಜ್ಯದಲ್ಲಿ 6ನೇ ಸ್ಥಾನದಲ್ಲಿದೆ. ಚುಂಚನಕಟ್ಟೆ ಬಳಿಯ ಹನುಮಂತನಟ್ಟೆ 1672ರಲ್ಲಿ ಚಿಕ್ಕದೇವರಾಜ ಒಡೆಯರ್ ನಿರ್ಮಿಸಿದ್ದು ಮುಂದೆ ಪೂರ್ಣಯ್ಯನವರು ಸುವ್ಯವಸ್ಥೆಗೊಳಿಸಿದ ಈ ಕಟ್ಟೆಯಿಂದ ಮಿರ್ಲೆ ನಾಲೆ ಎಡದಂಡೆಯಲ್ಲಿ ಹೊರಟು ಸುಮಾರು ಒಂದು ಮೈಲಿಯಾದ ಮೇಲೆ 3 ಉಪನಾಲೆಗಳಾಗಿ ಹರಿಯುತ್ತದೆ. ಮತ್ತು ಈ ನಾಲೆಗಳ ಹಳ್ಳಗಳು ಗಂಧನಹಳ್ಳಿಯ ಬಳಿ ಹಂಪಾಪುರ ನಾಲೆಯಾಗಿ ಸುಮಾರು 16 ಮೈಲಿ ಹರಿದು ಗುಲ್ಲಿಗೆ ಕೆರೆ ಸೇರುತ್ತದೆ. ಹೊಸನಾಲೆ 6 ಹಿರಿನಾಲೆ 12 ಮತ್ತು ಅತ್ತಿಕಟ್ಟೆ ನಾಲೆ 6 ಮೈಲಿ ಇದ್ದು ಮಿರ್ಲೆ ನಾಲೆ 41 ಮೈಲಿ ಉದ್ದವಿದ್ದು 6219 ಎಕರೆಗೆ ನೀರಾವರಿ ಒದಗಿಸಿದೆ. ಚಾಮರಾಜ ಅಣೆಕಟ್ಟೆ ಚುಂಚನಕಟ್ಟೆಗೆ 10 ಕಿ.ಮೀ.ದೂರದ ಬಳ್ಳೂರು ಬಳಿ ಇದ್ದು ಬಳ್ಳೂರು ಕಟ್ಟೆ ಎಂದು ಕೂಡ ಕರೆಯುವ ಇಲ್ಲಿಂದ 53 ಮೈಲಿ ಉದ್ಧದ ಚಾಮರಾಜ ನಾಲೆ 23514 ಎಕರೆಗೆ ನೀರಾವರಿ ಒದಗಿಸಿದೆ.

ಹನುಮನಕಟ್ಟೆಯಿಂದ ಕೆಳಗೆ ಚಿಕ್ಕದೇವರಾಜ ಒಡಯರೇ ನಿರ್ಮಿಸಿದ ಚುಂಚನಕಟ್ಟೆಯಿಂದ ರಾಮಸಮುದ್ರ ಬಲದಂಡೆ ನಾಲೆ ಕೆ.ಆರ್.ನಗರದ ಕಡೆಗೆ ಹರಿದು ಸುಮಾರು 4300 ಎಕರೆಗೆ ನೀರಾವರಿ ಒದಗಿಸುತ್ತದೆ. ( ಮಾಹಿತಿ ಕೃಪೆ: ಎಂ.ಎಸ್.ಶ್ರೀಧರ್ ಅವರ ನನ್ನೂರು ಮಿರ್ಲೆ ಹಾಗೂ ಇತರ ಮೂಲಗಳು) ಇಲ್ಲಿ ಕಾವೇರಿ ನದಿಯು ಪಶ್ಚಿಮದಿಂದ ಪೂರ್ವಕ್ಕೆ ಹರಿಯುತ್ತದೆ. ನಾವು ಹೋದಾಗ ನದಿಯಲ್ಲಿ ಎರಡು ಕಡೆ ಗುಂಪಾಗಿ ಜನರು ಸೇರಿದ್ದರು. ನೀರು ತುಂಬಾ ಇಳಿಮುಖವಾಗಿ ಕರಿ ಕಲ್ಲು ಬಂಡೆಗಳು ಎದ್ದು ಕಾಣಿಸುತ್ತಿದ್ದವು. ಮದುವೆ ಸಮಾರಂಭ ಇರಬಹುದೆಂದು ಯಾರನ್ನೋ ವಿಚಾರಿಸಲಾಗಿ ಹತ್ತಿರದ ಹಳ್ಳಿಗಳಲ್ಲಿ ನಡೆಯುವ ದೇವರ ಉತ್ಸವ ಮೂರ್ತಿಯನ್ನು ತಂದು ದೇವರು ಕಳಸ ಪೂಜೆ ನಡೆಯುತ್ತಿರುವುದಾಗಿ ತಿಳಿಸಿದರು. ಸಾಕಷ್ಟು ತುಂಬಾ ವಿಸ್ತಾರವಾದ ದೇವಸ್ಥಾನವನ್ನು ಒಂದು ಸುತ್ತು ಸುತ್ತಿ ಕಾರಿನತ್ತ ಬರುವಷ್ವರಲ್ಲಿ ಕತ್ತಲಾಗಿತ್ತು.ಗೊರೂರು ಅನಂತರಾಜು, ಹಾಸನ.
ಮೊ: 9449462879
ವಿಳಾಸ: ಹುಣಸಿನಕೆರೆ ಬಡಾವಣೆ, 29ನೇ ವಾರ್ಡ್, ಶ್ರೀ ಶನೀಶ್ವರ ದೇವಸ್ಥಾನ ರಸ್ತೆ, ಹಾಸನ.

- Advertisement -
- Advertisement -

Latest News

ರೈತ ಆತ್ಮಹತ್ಯೆ ; ಶಾಸಕರ ಸಾಂತ್ವನ

ಸಿಂದಗಿ; ಸಾಲದ ಬಾಧೆಗೆ ಆತ್ಮಹತ್ಯೆ ಪರಿವಾರವಲ್ಲ. ಕಾಲದ ವೈಪರೀತ್ಯದಿಂದ ಮಳೆಯಾಗದೇ ಇಂತಹ ದುಸ್ತರ ಪರಿಸ್ಥಿತಿ ಬಂದೊದಗಿದ್ದು ರೈತರ ಕಷ್ಟಗಳಿಗೆ ಸರಕಾರ ಸ್ಪಂದಿಸುತ್ತದೆ ಅಲ್ಲದೆ ನಿಮ್ಮ ಕಷ್ಟಕ್ಕೆ...
- Advertisement -

More Articles Like This

- Advertisement -
close
error: Content is protected !!
Join WhatsApp Group