spot_img
spot_img

ಪುಸ್ತಕ ಪರಿಚಯ: ವಚನಾಮೃತಸಾರ

Must Read

- Advertisement -

ವಚನಾಮೃತಸಾರ

ವಚನಾಮೃತಸಾರ ಕೃತಿ ಷಟ್‍ಸ್ಥಲ ತತ್ವವನ್ನು ಸರಳ ಹಾಗೂ ಸುಂದರವಾಗಿ ನಿರೂಪಿಸುವ ವಿಶಿಷ್ಟ ಕೃತಿ. ಇದನ್ನು ಸಂಯೋಜಿಸಿದವನ ಹೆಸರು, ಕಾಲ, ಅಜ್ಞಾತವಾಗಿವೆ. ಕೇವಲ 12ನೆಯ ಶತಮಾನದ ಬಸವಾದಿ ಶರಣರ ವಚನಗಳನ್ನು ಮಾತ್ರ ಇದರಲ್ಲಿ ಸೇರಿಸಿಕೊಂಡಿರುವುದರಿಂದ ಇವನು ತೋಂಟದ ಸಿದ್ಧಲಿಂಗನ ಶಿಷ್ಯ ಪರಂಪರೆಗೆ ಸೇರಿದವನಲ್ಲ ಎಂಬುದು ಖಚಿತವಾಗುತ್ತದೆ. ಸಧ್ಯಕ್ಕೆ 15ನೆಯ ಶತಮಾನದ ಒಬ್ಬ ಸಂಕಲನಕಾರನಿಂದ ಇದು ಸಂಯೋಜನೆಗೊಂಡಿರಬೇಕೆಂದು ಊಹಿಸಬಹುದಾಗಿದೆ.

ಈ ಶೃತಿ ಒಂಬತ್ತು ಸ್ಥಲಗಳಲ್ಲಿ ಹಬ್ಬಿಕೊಂಡಿದೆ. 17 ಜನ ವಚನಕಾರರ ಒಟ್ಟು 128 ವಚನಗಳನ್ನು 4 ಹಾಗೂ 9ನೆಯ ಸ್ಥಲಗಳಲ್ಲಿ ಸ್ಥಲ ಒಂದಕ್ಕೆ 15ರಂತೆ, ಉಳಿದ ಸ್ಥಲಗಳಲ್ಲಿ 19 ರಂತೆ ಜೋಡಿಸಲಾಗಿದೆ. ಇದು 2017 ರಲ್ಲಿ ಶ್ರೀ ಮುರುಘಾಮಠ ಧಾರವಾಡದಿಂದ ಬೆಳಕು ಕಂಡಿದೆ. 100 ಪುಟದ ಹರವು ಪಡೆದಿದೆ. ಇದನ್ನು ಶಾಸ್ತ್ರೀಯ ನೆಲೆಯಲ್ಲಿ ಸಂಪಾದಿಸಿದವರು ಹಿರಿಯ ಸಾಹಿತಿಗಳಾದ ಡಾ.ವೀರಣ್ಣ ರಾಜೂರ ಹಾಗೂ ಬಸವರಾಜ ಹೂಗಾರ ಅವರು.

ಈ ಕೃತಿಯ ಪರಿವಿಡಿ ಪರಿಮಳ ಹೀಗಿದೆ. ವಸ್ತುನಿರ್ದೇಶ ಪಿಂಡಸ್ಥಲ, ಗುರುಕರುಣಾಹ್ವಾನಸ್ಥಲ, ಗುರುಪ್ರಸನ್ನ ಲಿಂಗಧಾರಣಸ್ಥಲ, ಭಕ್ತಸ್ಥಲ, ಮಾಹೇಶ್ವರಸ್ಥಲ, ಪ್ರಸಾದಿಸ್ಥಲ, ಪ್ರಾಣಲಿಂಗಿಸ್ಥಲ, ಶರಣಸ್ಥಲ, ಐಕ್ಯಸ್ಥಲ, ಅನುಬಂಧಗಳಲ್ಲಿ ವಚನಗಳ ಆಕಾರಾದಿ, ವಚನಕಾರರು-ಅಂಕಿತ-ವಚನ ಸಂಖ್ಯೆ, ಪಾರಿಭಾಷಿಕ ಪದಕೋಶ, ಪದಕೋಶ ನೀಡಿರುವದು ಓದುಗರಿಗೆ ಉಪಯುಕ್ತವೆನಿಸಿದೆ.

- Advertisement -

ಸ್ಥಲ ಎಂಬ ಪದದ ಸಾಮಾನ್ಯ ಅರ್ಥಸ್ಥಾನ, ಹಂತ, ಮೆಟ್ಟಿಲು ಎಂದು. ಸಾಧಕ ತನ್ನ ಅಂತಿಮ ಗುರಿಯನ್ನು ತಲುಪುವದಕ್ಕೆ ಏರಿ ನಡೆಯಬೇಕಾದ ವಿವಿಧ ಹಂತಗಳು ಎಂದೂ ಇದನ್ನು ಅರ್ಥೈಸಲಾಗುತ್ತದೆ. ಆದರೆ ಶರಣರು ಇದಕ್ಕೆ ಕೊಟ್ಟ ಅರ್ಥ ವಿಶಾಲ ಹಾಗೂ ವಿಶಿಷ್ಟವಾಗಿದೆ.

ಅವರ ದೃಷ್ಟಿಯಲ್ಲಿ ಸ್ಥಲವೆಂದರೆ ಲಿಂಗ, ಪರಶಿವತತ್ವ, ಚರಾಚರವಾದ ಈ ಜಗತ್ತು ಯಾವುದರಲ್ಲಿ ಹುಟ್ಟಿ ಯಾವುದರಲ್ಲಿ ಲಯವಾಗುತ್ತದೆಯೋ ಆ ಏಕಮೇವಾದ್ವಿತೀಯವಾದ ಪರಶಿವಬ್ರಹ್ಮ ವನ್ನೇ ಇಲ್ಲಿ ಸ್ಥಲವೆಂದು ಕರೆಯಲಾಗಿದೆ ಎಂದು ಸ್ಪಷ್ಟವಾಗಿ ನಿರೂಪಿಸಿದ್ದಾರೆ.

ಸಾಧಕ ಶಿವನಾಗಬೇಕಾದರೆ ಸ್ಥಲಗಳನ್ನು ಸಾಧಿಸಿಕೊಳ್ಳಬೇಕು. ಅವು ಆರುವಿಧ. ಲಿಂಗಾಯತ ಪರಿಭಾಷೆಯಲ್ಲಿ ಅವಕ್ಕೆ ಷಟ್‍ಸ್ಥಲ ಎಂದು ಸಾರ್ಥಕ ಹೆಸರು. ಅಂಗ-ಲಿಂಗರ ಪರಸ್ಪರ ಸಂಬಂಧವನ್ನು ತನ್ನದೇ ಆದ ಸ್ವತಂತ್ರ ವಿಚಾರಧಾರೆಯಲ್ಲಿ ನಿರೂಪಿಸುತ್ತದೆ ಈ ಷಟ್‍ಸ್ಥಲ ಸಿದ್ಧಾಂತ. ಇದು ಮಾನಸಿಕವಾಗಿ ಪರಮಾತ್ಮನ ಅನುಸಂಧಾನದ ಮಹಾಮಾರ್ಗ. ತಾತ್ವಿಕ ಸಿದ್ಧಾಂತ ಮತ್ತು ಆಚರಣೆಯ ಮಾರ್ಗಗಳೆರಡನ್ನೂ ಹೊಂದಿದ ಇದರಲ್ಲಿ ಲಿಂಗಾಯತಧರ್ಮದ ಸಾರವೆಲ್ಲ ಅಡಕವಾಗಿದೆ.

- Advertisement -

ಇದನ್ನು ಸಾಧಿಸುವದರಿಂದ ಸಾಧಕನ ಆಧ್ಯಾತ್ಮಿಕ ಅನುಭಾವಿಕ ವಿಕಾಸ ಹೆಚ್ಚುತ್ತ ಹೋಗುತ್ತದೆ. ಭಕ್ತಿ ಜ್ಞಾನ ಕ್ರಿಯೆಗಳು ಇಲ್ಲಿ ಮುಪ್ಪುರಿಗೊಂಡು ಅವನ ಕಾರ್ಯಕ್ಕೆ ಚೈತನ್ಯ ನೀಡುತ್ತವೆ. ಸುಲಭವಾಗಿ ಸಿದ್ಧಿಯನ್ನು ಪಡೆಯಲು ಕಾರಣವಾಗುತ್ತವೆ ಎಂದು ಅದರ ಮಹತ್ವವನ್ನು ಸುಂದರವಾಗಿ ಬಿಡಿಸಿತೋರಿದ್ದಾರೆ.

ಎರಡಾದ ಪರವಸ್ತುವಿನಲ್ಲಿ ಮತ್ತೆ ವಿಕಾಸವಾಗುತ್ತ ನಡೆಯುತ್ತದೆ. ಅಂಗಸ್ಥಲದಲ್ಲಿ ತ್ಯಾಗಾಂಗ, ಭೋಗಾಂಗ, ಯೋಗಾಂಗ ಎಂದು ಮೂರು, ಲಿಂಗಸ್ಥಲದಲ್ಲಿ ಇಷ್ಟಲಿಂಗ, ಪ್ರಾಣಲಿಂಗ, ಭಾವಲಿಂಗವೆಂದು ಮೂರು-ಹೀಗೆ ಆರು ವಿಭಾಗಗಳಾಗುತ್ತವೆ. ಮತ್ತೆ ಅವುಗಳಲ್ಲಿ ಒಂದೊಂದಕ್ಕೆ ಎರಡೆರಡರಂತೆ ಆರಾರು ಒಟ್ಟು ಹನ್ನೆರಡು ಭಾಗಗಳಾಗುತ್ತವೆ.

ತ್ಯಾಗಾಂಗದಲ್ಲಿ ಭಕ್ತಸ್ಥಲ, ಮಹೇಶ್ವರಸ್ಥಲ; ಭೋಗಾಂಗದಲ್ಲಿ ಪ್ರಸಾದಿಸ್ಥಲ-ಪ್ರಾಣಲಿಂಗಿಸ್ಥಲ; ಯೋಗಾಂಗದಲ್ಲಿ ಶರಣಸ್ಥಲ-ಐಕ್ಯಸ್ಥಲ; ಇಷ್ಟಲಿಂಗದಲ್ಲಿ ಆಚಾರಲಿಂಗ-ಗುರುಲಿಂಗ; ಪ್ರಾಣಲಿಂಗದಲ್ಲಿ ಶಿವಲಿಂಗ-ಜಂಗಮಲಿಂಗ; ಭಾವಲಿಂಗದಲ್ಲಿ ಪ್ರಸಾದಲಿಂಗ-ಮಹಾಲಿಂಗ. ಇವುಗಳಿಗೆ ಅಂಗಷಟ್‍ಸ್ಥಲ ಎಂದು ಹೆಸರು. ಈ ಆರು ಲಿಂಗಸ್ಥಲಗಳು ಆರು ಅಂಗಸ್ಥಲಗಳೊಡನೆ ಉಪಾಸ್ಯ ಉಪಾಸಕ ಭಾವದಲ್ಲಿ ಒಂದಾಗುತ್ತ ನಡೆದು ಕೊನೆಗೆ ಎರಡೂ ಸಮರಸಗೊಳ್ಳುತ್ತವೆ.

ಇದನ್ನೇ ಲಿಂಗಾಂಗ ಸಾಮರಸ್ಯ ಅಥವಾ ಷಟ್‍ಸ್ಥಲ ಸಿದ್ಧಾಂತ ಎಂದು ಕರೆಯಲಾಗುತ್ತದೆ. ಇಲ್ಲಿ ಸಾಧಕ ಒಂದು ಸ್ಥಲದಿಂದ ಮತ್ತೊಂದು ಸ್ಥಲಕ್ಕೆ ಬೆಳೆಯುತ್ತ ನಡೆಯುತ್ತಾನೆ. ಜೊತೆಗೆ ಅವನ ಲಿಂಗೋಪಾಸನೆಯ ಹಂತ ಹಾಗೂ ಭಕ್ತಿಯೂ ವಿಕಾಸಹೊಂದುತ್ತ ಸಾಗುತ್ತದೆ. ಆ ಮೇಲೆ ಈ ಆರು ಸ್ಥಲಗಳ ಒಂದೊಂದರಲ್ಲಿ ಆಕಾರರಂತೆ ಮತ್ತೆ ಮೂವತ್ತಾರು ಉಪವಿಭಾಗಗಳು ಒಡೆದುಕೊಳ್ಳುತ್ತದೆ.

ಇದೂ ಮುಂದುವರಿದು ಮೂವತ್ತಾರರಲ್ಲಿ ಮತ್ತೆ ಆರಾರು ಕವಲುಗಳಾಗಿ ಎರಡುನೂರಾ ಹದಿನಾರು ಸ್ಥಲಗಳಾಗುತ್ತವೆ. ಹೀಗೆ ಒಂದು ಎರಡಾಗಿ, ಎರಡು ಮೂರಾಗಿ, ಮೂರು ಆರಾಗಿ, ಆರು ಮೂವತ್ತಾರಾಗಿ, ಮೂವತ್ತಾರು ಎರಡುನೂರಾ ಹದಿನಾರಾಗಿ ಬೆಳೆಯುವ ಸ್ಥಲಕ್ರಮಕ್ಕೆ ಪ್ರವೃತ್ತಿ ಮಾರ್ಗವೆಂದೂ, ಇವು ಕಡಿಮೆಯಾಗುತ್ತ ನಡೆದು ಒಂದೇ ಆಗುವುದಕ್ಕೆ ನಿವೃತ್ತಿ ಮಾರ್ಗವೆಂದು ಕರೆಯುತ್ತಾರೆ ಎಂದಿರುವರು.

ವಚನಾಮೃತಸಾರ ಕೃತಿಯನ್ನು ಏಕೈಕ ಹಸ್ತಪ್ರತಿಯಿಂದ ಪರಿಷ್ಕರಣೆ ಮಾಡಿರುವರು. ಪಾಠಾಂತರಗಳನ್ನು ಗುರುತಿಸಲು ಈಗಾಗಲೇ ಪ್ರಕಟವಾದ ವಿವಿಧ ವಚನಕಾರರ ಪ್ರಕಟಿತ 7 ಕೃತಿಗಳನ್ನು ಅವಲಂಬಿಸಿ ಪರಿಷ್ಕರಿಸಿದ್ದಾರೆ.

ಶ್ರೀ ಚಂದ್ರಶೇಖರ ಮಠ ಬೆಳಗಾವಿ ಅವರಿಂದ ಬಂದ, ಕನ್ನಡ ಅಧ್ಯಯನ ಪೀಠದ ಹಸ್ತಪ್ರತಿ ಭಾಂಡಾರಕ್ಕೆ ಸೇರಿದ 3141 ನೆಯ ನಂಬರಿನ ಪ್ರತಿ. ಅಕ್ಷರಗಳು ಸಣ್ಣ ಸಾಧಾರಣ, ದುಂಡಗೆ, ರಕಾರ ಬಳಕೆ ಇದೆ. ಉದ್ದ 12 ಅಗಲ 21/2 ಒಂದು ಗರಿಯ ಒಮ್ಮೆಯಲ್ಲಿ 12 ರಿಂದ 14ರ ವರಗೆ ಸಾಲುಗಳಿವೆ. ಇದರಲ್ಲಿ ವೃಷಭಗೀತೆ ಮೊದಲಾದ ಇತರ ಎಂಟು ಕೃತಿಗಳಿಗೆ. ವಚನಾಮೃತಸಾರ 6ನೆಯ ಗರಿಯಿಂದ ಪ್ರಾರಂಭವಾಗಿ 14ನೆಯ ಗರಿಗೆ ಮುಗಿಯುತ್ತದೆ.

ಇದರ ಕೊನೆಯಲ್ಲಿ ಪುರದ ಸೋಮೇಶನ ಲಿಂಗಾಂಗ ಸಂಯೋಗ ಸಹಜ ಸದುಭಕುತಿಯಲ್ಲಿ ಎಂದು ಪ್ರಾರಂಭವಾಗುವ ಒಂದು ಸ್ವರವಚನವಿದೆ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ. ಈ ಕೃತಿ 1979 ರಲ್ಲಿ ಮಂಗಳ ಪ್ರಕಾಶನದಿಂದ ಪ್ರಥಮ ಬಾರಿಗೆ ಪ್ರಕಟವಾಗಿತ್ತು. ಈಗ ಇದರ ಪ್ರತಿಗಳೆಲ್ಲ ತೀರಿಹೋಗಿ ಓದುಗರಿಗೆ ಅಲಭ್ಯವಾಗಿರುವ ಕಾರಣ ಮರಳಿ ಪ್ರಕಟಿಸಿರುವದು ಅರ್ಥಪೂರ್ಣವೆನಿಸಿದೆ.


ಡಾ.ವ್ಹಿ.ಬಿ.ಸಣ್ಣಸಕ್ಕರಗೌಡರ
ಉಪನ್ಯಾಸಕರು, ಬಾದಾಮಿ

- Advertisement -
- Advertisement -

Latest News

ಶಿವಾನಂದ ಮಹಾವಿದ್ಯಾಲಯದಲ್ಲಿ ವರಕವಿ ಬೇಂದ್ರೆಯವರ ೪೩ನೇ ಪುಣ್ಯಸರಣೆ

ಕಾಗವಾಡ: ನಗರದ ಶಿವಾನಂದ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ ಪ್ರಾಯೋಜಿತ ಕನ್ನಡ ವಿಭಾಗ ವರಕವಿ ಶಬ್ದಗಾರುಡಿಗ ಡಾ. ದ. ರಾ. ಬೇಂದ್ರೆಯವರ ೪೩ನೇ ಪುಣ್ಯಸ್ಮರಣೆಯನ್ನು ಆಯೋಜಿಸಲಾಗಿತ್ತು. ಈ ಸಮಾರಂಭದ ಮುಖ್ಯ...
- Advertisement -

More Articles Like This

- Advertisement -
close
error: Content is protected !!
Join WhatsApp Group