spot_img
spot_img

ಹಾಸ್ಯ ಬರಹ ; ಬಯಲು ಶೌಚದ ಬಯಲು ದರುಶನ

Must Read

- Advertisement -

ಪೂರ್ವ ದಿಕ್ಕಿನ್ಯಾಗ ಬಾಲ ರವಿ ತನ್ನ ಕಣ್ಣು ಉಜ್ಜಿಕೊಳ್ಳುತ್ತ ಸಕ್ಕರೆ ನಿದ್ದೆ ಸವಿಯುವದನ್ನು ಬಿಟ್ಟು  ಏಳಲೋ ಬೇಡವೋ ಎಂದು ಅನುಮಾನಿಸುವ ಸಮಯದಲ್ಲಿದ್ದಾಗಲೇ ಊರಿನ ಜನರೆಲ್ಲ ಒಬ್ಬೊಬ್ಬರೇ ತಮ್ಮ ತಮ್ಮ ಮನ್ಯಾಗಿನ ಹಂಡೆದಾಗ ಕೈ ಎದ್ದಿ ಅದ ಕೈನ ಮುಖದ ಮ್ಯಾಲೆ ಎಳಕೊಂಡು ಆಮ್ಯಾಲೆ ಸೀದಾ ಛಾವಣಿಗೆ ಬಂದು ಕಂಬದ ಹಿಂದ ವಿಶೇಷವಾಗಿ ಬಹಿರ್ದೆಸೆಗೆಂದೇ ತುಂಬಿಟ್ಟ ತಂಬಿಗೆಗೆ ಕೈ ಹಾಕಿ ಬ್ಯಾಸಗ್ಯಾಗ ಒಂದರ ಹಿಂದ ಒಂದ ಚೇಳು ಹಾವು ಹೊರ ಬಿದ್ದಂಗ ಜನ ಬಹಿರ್ದೆಸೆಗೆ ಹೋಗುವ ಬೆಳ್ಳಂಬೆಳಿಗಿನ ದೃಶ್ಯ ಕಣ್ತುಂಬಿಸಿಕೊಂಡವರಿಗೇ ಗೊತ್ತು ಅದರ ಅಂದ ಚೆಂದ !

ಮನ್ಯಾಗ ಹದ್ನಾರು ಎತ್ತಿನ ಕಮತ ಇದ್ದವರು ಡಜನ್ ಆಕಳ ಒಂದ ಅರ್ಧ ಡಜನ್ ಎಮ್ಮೆ (ಗೊಡ್ಡು) ಕಾಣು ಕಣ್ಣಿಗೆ ಕಂಡ ಬಯಲೆಲ್ಲ ತಮ್ಮದು ಅಂತ ಕೊಚ್ಚಿಕೊಳ್ಳುವಂಥವರೂ  ಇಡೀ ಊರಿಗೆ ತಾನ ಶ್ರೀಮಂತ ಅಂಥ ಬೀಗುವವರು ಮುಂಜಾನೆದ್ದು ತಂಬಿಗೆ ಹಿಡಕೊಂಡು ಬಯಲಿಗೆ ಬರಲೇಬೇಕಿತ್ತು. ಬಯಲು ಶ್ರೀಮಂತ ಬಡವ ಎಂದು ಕೇಳದೇ ಭೇದ ಭಾವ ಮಾಡದೇ ತನ್ನತ್ತ ಬಂದವರಿಗೆಲ್ಲ ನಿತ್ಯ ಕರ್ಮಾದಿಗೆ ಜಾಗ ಕೊಡುತ್ತಿತ್ತು. ಬಳಿ ಬಂದವರ ಬೇಗೆ ನೀಗಿಸುತ್ತಿತ್ತು. ಕೃಷಿ ಮಳೆ ಬೆಳೆ ಉತ್ತುವುದು ಬಿತ್ತುವುದು ಕುರಿತು ಮಾತು ಎಗ್ಗಿಲ್ಗದ ನಡಿತಿದ್ವು. ಮನಿಗೆ ಬೀಗರು ಬಿಜ್ಜರು ಬಂದ್ರ ಅವರನ ಶೌಚಕ್ಕ ಕರಕೊಂಡು ಹೋಗು ಡ್ಯೂಟಿ ಇರತಿತ್ತು. 

ಮೊದಲ ಹಳ್ಳಿ ಹೈದರು ನೋಡಾಕ ಭೀಮನ್ಹಂಗ ಕಡದರ ನಾಕು ಮಂದಿ ಆಗುವಂತವರು ಫೈಲ್ವಾನಂಥವರು ಗರಡಿಯೊಳಗ ಜಟ್ಟಿ ಕುಸ್ತಿ ಆಡುವವರೆಲ್ಲ ಕೈಯ್ಯಾಗ ಒಂದು ಗುಬ್ಬಿ ಮರಿಯಂಥ ತಂಬಿಗೆ ಹಿಡಕೊಂಡು ಹೋಗುವುದನ್ನು ಕಂಡು ನಮ್ಮಂಥ ಕಿಡಗೇಡಿಗಳು ಈ ದೊಡ್ಡ ದೇಹಕ್ಕ ಅಷ್ಟ ಸಣ್ಣ ಚರಗಿ ಹೆಂಗ ಸಾಲತೈತಿ ಅಂತ ಛೇಷ್ಟೆ ಮಾಡಕೊಂಡ ಕಿಸಕ್ ಅಂತ ಅವರಿಗೆ ಕೇಳದಂಗ ಒಮ್ಮೊಮ್ಮೆ ಕೇಳುವಂಗ  ನಗತಿದ್ವಿ ಮುಂಜಾನೆದ್ದು ಅದೊಂದು ತರ ಸಾಮೂಹಿಕ ಬಯಲು ಶೌಚ ಆಂದೋಲನ. ಒಡಕ ಮೆತ್ತಾಕಾಗುದಿಲ್ಲ ಬಡಕಗ ಕೂಳ ಹಾಕಾಕ ಆಗೂದಿಲ್ಲ ಅನ್ನೂ ಮಾತಿನ್ಹಂಗ ನೋಡಾಕ ಶರೀರ ಸಣಕಲ ಅನಸ್ತಿದ್ರು ತಿನ್ನುದು ಮಾತ್ರ ಬುಟ್ಟಿಗಟ್ಲೆ. ಹಿಂಗ ತಿಂದಿದ್ದು ಮುಂಜಾನೆದ್ದು ಹೊರಗ ಹಾಕ ಬೇಕಲ್ಲ  ನರಪೇತಲ ನಾರಾಯಣನಂತವರಿಗೆ ಕೈಯ್ಯಾಗಿನ ಹಿತ್ತಾಳೆ ತಂಬಿಗಿ ಭಾರ ಆಗಿರತಿದ್ವು. ತಂಬಿಗಿ ಭಾರಕ್ಕ ಒಂದ ಕಡೆ ವಾಲಿ ಅವರು ನಡೆಯೋ ರೀತಿ ಕಂಡು ನಗದ ಇರಾಕ ಆಗ್ತಿರಲಿಲ್ಲ.

- Advertisement -

ಮುಂಜಾನೆದ್ದು ಲೋಕಾರೂಢಿಯಂಗ ಎದ್ರಿ ಎದ್ರ್ಯಾ ಎಂದು ಕೇಳುವ ರೂಢಿ ಹೂಂ ನಾವು ಎದ್ವಿ ಗೆದ್ವಿರಿ ಅನ್ನೋ ಮಾತು ತಮಗೆಲ್ಲ ಬದುಕು ಮತ್ತೊಂದು ದಿನ ಬದುಕು ಕೊಟ್ಟಿದೆ ಅನ್ನೋದನ್ನ ಖಾತ್ರಿಪಡಿಸಿಕೊಳ್ಳುತ್ತ  ಮುಗಳ್ನಗುತ್ತ ಬಯಲಿನತ್ತ ಹೆಜ್ಜೆ ಹಾಕೋದು ರೂಢಿ. ಬಯಲಿಗೆ ಅವಸರವಿದ್ದವರು ಅವಸರ ಅವಸರವಾಗಿ ಹೋಗುವಾಗ ತುಂಟಾಟದ ಮನಸ್ಸಿನವರು ಸಂಬಂಧದಲ್ಲಿ ಮಾವ ಅಳಿಯ ಆಗುವಂಥವರನ್ನು ನಿಲ್ಲಿಸಿ ಯಾವುದೇ ವಿಚಾರವಾಗಿ ಬೇಕಂತಲೇ ಕೆಣಕಿ ಕೇಳುತ್ತಿರುವುದನ್ನು ಕಂಡ ಹಿರಿಯರು ಬಿಡೋ ಅವಂಗ ಅರ್ಜಂಟ್ ಐತಿ ಪಾಪ ಮುಖ ಕಿವುಚಾಕತ್ತಾನ ಎಂದಾಗ ಕೆಣಕಿಸಿಕೊಂಡವರು ಬದುಕಿತು ಬಡ ಜೀವವೆಂದು ಬಯಲಿನತ್ತ ಓಡುವ ದೃಶ್ಯವನ್ನು ನೋಡಿ ನಗುವುದೋ ಬೇಡವೋ ಎಂದು ಲೆಕ್ಕ ಹಾಕದೇ ಗೊಳ್ಳ ಅಂತ ನಕ್ಕು ಆ ಕ್ಷಣದ ಮಜವನ್ನು ಸವಿದು ಬಿಡುತ್ತಿದ್ದೆವು. 

ಧೋ ಅಂತ ಸುರಿಯುವ ಮಳೆಗಾಲದಾಗ ಹೊಟ್ಟೆ ಕೆಟ್ರ. ಅದು ರಾತ್ರಿ ಹೊತ್ತು ಆದರಂತೂ  ಮುಗದ ಹೋತು ಅಂಥ ಪರಿಸ್ಥಿತಿ ನಮ್ ಶತ್ರುಗಳಿಗೂ ಬರಬಾರ್ದು ಅನಸ್ತಿತ್ತು. ಮ್ಯಾಲಿಂದ ಕಣ್ಣು ಮುಚ್ಚಿ ಸುರಿಯುವ ಮಳೆ ಕಾಲಾಗ ಹವಾಯಿ ಚಪ್ಪಲಿ ಚಪ್ ಚಪ್ ಅಂತ ಸಪ್ಪಳ ಮಾಡತಿದ್ವು ಅಷ್ಟ ಅಲ್ಲ ಕಾಲಾಗಿನ ರಾಡಿ ಬೆನ್ನ ಹುರಿ ಮ್ಯಾಲಿನವ್ರಿಗೂ ಸಿಡೀತಿತ್ತು. ಒಂದ ಕೈಯ್ಯಾಗ ತುಂಬಿದ ತಂಬಿಗಿ ಇನ್ನೊಂದ ಕೈಯ್ಯಾಗ ಛತ್ರಿ ಮತ್ತ ಸೆಲ್ ಮುಗಿಯಾಕ ಬಂದ ಸಣ್ಣಗ ಮಿನಕ್ ಅಂತ ಉರಿಯೋ ಬ್ಯಾಟರಿ ಮೆಂಟೇನ್ ಮಾಡಕೊಂತ ಬಯಲು ಮುಟ್ಟುದ್ರೊಳಗ ಇನ್ನ ಮುಂದ ಮಳೆಗಾಲ ಮುಗಿಯೋವರೆಗೂ ತುಂಬಿದ ತಾಟಿಗೆ ಕೈ ಹಾಕಬಾರದು ಅಂತ ಅನಿಸದೇ ಇರತಿರಲಿಲ್ಲ. ಇಷ್ಟೆಲ್ಲ ಪೇಚಾಡಿ ಶೌಚ ಮುಗಿಸಿಕೊಂಡು ಅಬ್ಬಾ ಅಂತೂ ಇಂತೂ ಗೆದ್ನಿ ಅಂತ ಮನಿ ಹೊರಗಿನ ಕಟ್ಟಿ ಮುಟ್ಟಿ ಕೈಗೆ ನೀರ ಹಾಕಿಸಿಕೊಂಡು ಬಗ್ಗಿ ಮಣ್ಣು ತುಗೊಳ್ಳುವಾಗ  ಹೊಟ್ಟಿ ಮತ್ತ ಗೊಡ್ರ ಅಂತ ಸೌಂಡ್ ಮಾಡಿದ್ರ ಅರ್ಧಂಬರ್ಧ ಕೈ ತೊಳಕೊಂಡು ಅದ ತಂಬಿಗಿನ ಮತ್ತ ಹೊಳ್ಳಿ ತುಂಬಿಸಿಕೊಂಡು ಬಯಲಿನತ್ತ ಓಡುವವರಿಗೆ ಹುಟ್ಟಿದ್ದು ಬೆಳೆದಿದ್ದೆಲ್ಲ ನೆನಪಿಗೆ ಬರುತ್ತಿತ್ತು. ಅಂಥಾ ಅವಸರದಾಗ ಹೊರಗ ಕಟ್ಟಿದ ದನ ಎತ್ತು ಕರುಗಳನ್ನ  ಒಳಗ ತರಬೇಕಂತ ಹೋದವರ ಮಧ್ಯೆ  ಸಣ್ಣ ಸಂದಿಯೊಳಗ ಸಿಕ್ಕಿ ಹಾಕಿಕೊಂಡವರ ಫಜೀತಿ ಕೇಳಬ್ಯಾಡ್ರಿ. ರಾಕೆಟ್ ಸ್ಪೀಡಿನ್ಯಾಗ ಹೊಂಟವರು ಮತ್ತ ಹಿಂಬರ್ಕಿಯಲ್ಲಿ ರಿವರ್ಸ್ ಗೇರಿನಲ್ಲಿ ಮನಿ ಕಟ್ಟಿಗೆ ಹೊಳ್ಳಿ ಬಂದು ನಿಲ್ಲ ಬೇಕಾಗತಿತ್ತು ಆಗ ಮನೆನ್ನವರು ಎಷ್ಟು ಜಲ್ದಿ ಬಂದ್ಯೋ ಈಗ ಹೆಂಗ್ ಸ್ವಲ್ಪ ಕಮ್ಮಿ ಅನಸಾಕತ್ತೆನು ಬಾ ತಂಬಿಗಿ ಅಲ್ಲಿಡು ಕೈಗೆ ನೀರು ಹಾಕ್ತಿನಿ ಎಂದಾಗ ಹೂಂ ಹಾಂ ಅನ್ನಾಕ ತ್ರಾಣ ಇರ್ತಿರಲಿಲ್ಲ ಕೈಯ್ಯಾಗಿನ ತಂಬಿಗಿ ಕೆಳಗಿಟ್ಟು ಹೊಟ್ಟಿ ಮೆಲ್ಲಗ ಸವರಕೋತ ಏನು ಉತ್ರ ಕೊಡೂದು ತಿಳಿಲಾರದ ಸುಮ್ನ ಒಂದ್ ಸಲ ಹಲ್ಲು ತೆಗೆದು ಮತ್ತ ರಾಕೆಟ್ ಸ್ಪೀಡ್‍ನ್ಯಾಗ ಗಾಡಿ ಓಡಿಸಬೇಕಾಗತಿತ್ತು. ಹೊಳ್ಳಿ ಮನಿಗೆ ಹೋಗಲೋ ಬೇಡ್ವೋ ಅಂತ ಅನುಮಾನಿಸಕೋತ ಮನಿಗೆ ಬಂದು ಮುಟ್ಟುದ್ರೊಳಗ ಅರ್ಧ ಹೆಣ ಬಿದ್ದಿರತಿತ್ತು. 

- Advertisement -

ಹೆಣ್ಮಕ್ಕಳು ನಸುಕಿನಲ್ಲಿಯೇ ಅಲಾರಾಂ ಇಲ್ಲದ ಎದ್ದು ಚುಕ್ಕಿ ತಾರೆಗಳ ಬೆಳಕಿನಲ್ಲಿ ಬಯಲಿಗೆ ಹೋಗಿ ಬಂದರೆ ಮರಳಿ ಚಂದ್ರ ಬಂದು ಮೋಡದಲ್ಲಿ ಸಿಕ್ಕಿ ಹಾಕಿಕೊಂಡದ್ದನ್ನು ನೋಡಿಕೊಂಡು ಸಾಮೂಹಿಕವಾಗಿ ಬಯಲು ಶೌಚಕ್ಕೆ ತೆರಳುವುದು ಒಂದು ಪದ್ದತಿ. ಅಲ್ಲಿ ಊರಿನ ಎಲ್ಲರ ಅಡುಗೆ ಮನೆಯ ಮಲಗುವ ಕೋಣೆಯ ಮಸಾಲೆ ಭರಿತ ಸುದ್ದಿಗಳು ಬಿತ್ತರವಾಗುತ್ತಿದ್ದವು ಕೊನೆಗೆ ಯಾರಿಗೂ ಹೇಳ ಬ್ಯಾಡ್ರಿ ನಮಗ್ಯಾಕ ಬೇಕ್ರಿ ಮಂದಿ ಸುದ್ದಿ ಮಾಡಿದವ್ರ ಪಾಪ ಆಡಿದವ್ರ ಬಾಯಾಗ ಅಂತ ಎಂಬ ಉಲ್ಲೇಖದೊಂದಿಗೆ ಮನೆ ಸೇರುತ್ತಿದ್ದರು.

ಒಂದು ವೇಳೆ ಮಧ್ಯಾಹ್ನದಾಗ ಯಾರರ ಹೆಣ್ಮಕ್ಳು ತಪ್ಪಿ ತಂಬಿಗಿ ಹಿಡಕೊಂಡು ಹೊಂಟರ ಛಾವಣಿಯೊಳಗ ಕುಂತ ಹಿರಿ ಕಿರಿ ಮುದುಕಿಯರು ಅಡ್ಡ ಹಾಕಿ ಇಷ್ಟೊತ್ತಿನ್ಯಾಗ ಯಾಕ ಅಂತ ಹತ್ತಾರು ಪ್ರಶ್ನೆ ಹಾಕಿ ಒಂದ ನಮೂನಿ ಸಂದರ್ಶನ ಮಾಡಿ ಅವರ ಹೊಟ್ಟೆ ಕೆಟ್ಟ ಸುದ್ದಿ ಓಣಿಗೆ ಗೊತ್ತು ಆಗುವಂಗ ಮಾಡಿ ಅನ್ನುವದಕ್ಕಿಂತ ಅವರ ಆರೋಗ್ಯದ ಕುರಿತು ಕಾಳಜಿ ವಹಿಸಿ ಬಯಲಿಗೆ ಬೀಳ್ಕೊಡತಿದ್ರು. ಅವರ ಪ್ರಶ್ನೆಗೆ ಉತ್ರ ಹೇಳೂದಕ್ಕಿಂತ ಬಯಲಿಗೆ ಹೋಗದ ಇರೋದು ವಾಸಿ ಅನ್ನೊಹಂಗನೂ ಒಮ್ಮೊಮ್ಮೆ ಆದ ಪ್ರಸಂಗಗಳೂ ಉಂಟು. ಹೊಟ್ಟೆಗೆ ಹುಷಾರಿಲ್ಲದಾಗ ಅನೇಕ ಹೆಂಗಳೆಯರು ಇಂಥವರಿಂದ ಬಚಾವಾಗಿ ಬಯಲು ಮುಟ್ಟಿ ಬರೂದು ಅಂದ್ರ ಮೈ ಮೈಮ್ಯಾಲೆ ಮುಳ್ಳು ಬರ್ತಾವ ಅಂತ ಅಳಲು ತೋಡಕೋತಿದ್ದ ಪ್ರಸಂಗಗಳೂ ನಡಿತಿದ್ವು. 

       ಇನ್ನು ಹರೆಯಕ ಬಂದ ಹುಡುಗ ಹುಡುಗಿಯರು ಶೌಚಕ್ಕ ಹೋಗೂದು ಅಂದ್ರ ಒಂದ ನಮೂನಿ ಸಡಗರ ಜೋಳದ ಹಿಟ್ಟು ಇಲ್ಲ ಹಸಿ ಕಡಲೆ ಬೇಳೆ ಹಿಟ್ಟು ಹಚಿಕೊಂಡು ಸ್ವಲ್ಪ ಹಣ ಇದ್ದವರು ಸಾಬೂನು ಹಚಕೊಂಡು ಮುಖ ಗಸ ಗಸ ತಿಕ್ಕಿ ತೊಳಕೊಂಡು ಪೌಡರ್ ಹಚ್ಕೊಂಡು ಒಳೆ ಮದುವಿ ಮುಂಜವಿಗೆ ಹೊಂಟವರಂಗ ರೆಡಿಯಾಗಿ ತಮಗ  ಶೌಚಕ್ಕೆ ಹೋಗುವದು ಇರಲಿಲ್ಲಂದ್ರೂ ಗೆಳೆಯ ಗೆಳತಿಯರ ಜೊತೆ ಒಂದ್ ರೌಂಡ್ ಹೋಗಿ ಬರುತಿದ್ರು ಅಗ ಪ್ರೀತಿಯ ಆಕರ್ಷಣೆಯ ಮಾತುಕತೆಗಳು ಹರಟೆಗಳು ನಡೆಯುವ ಅಡ್ಡಾದಂತೆ ಬಯಲು ಬದಲಾಗುತಿತ್ತು. 

ಪುಟ್ಟ ಪುಟ್ಟ ಮಕ್ಕಳಂತೂ ಮನೆ ಮುಂದಿನ ತಿಪ್ಪೆಯಲ್ಲಿ ಕೂತು ಕೋಳಿಯ ಹಾಗೆ ತಿಪ್ಪೆ ಗೆಬರುತ್ತ ಶೌಚದ ನೆಪದಲ್ಲಿ ಖುಷಿ ಪಡುತ್ತಿದ್ದವು ತಾಯಂದಿರು ಹುಸಿಕೋಪ ತೋರಿಸಿ ಬೆನ್ನಿಗೊಂದು ಸಣ್ಣ ಏಟು ಹಾಕಿ  ಅಂಡ ತೊಳೆದು ತಮ್ಮ ಸೆರಗಿನಿಂದ ಮಗುವಿನ ಹಿಂಭಾಗವನ್ನು ಒರಿಸಿ ಒಳ ಕರೆದುಕೊಂಡು ಬರುವ ದೃಶ್ಯ  ಈಗ ಕಂಡು ಬರುವುದು ತುಂಬಾ ವಿರಳ. ಈಗ ಎಲ್ಲೆಲ್ಲೂ ಬಯಲು ಮುಕ್ತ ಶೌಚದ ಮಾತು ಹಳ್ಳಿಗಳಲ್ಲೂ ಈಗ ಮನೆಗೊಂದು ಶೌಚಾಲಯ ಕಡ್ಡಾಯವಾಗಿರುವುದರಿಂದ ವಾಯು ವಿಹಾರದ ಬಯಲು ಶೌಚದ ಬಯಲು ದರುಶನದ ರೂಪಗಳು ತೀರಾ ವಿರಳವಾಗಿವೆ. ಬಯಲು ಶೌಚದಲ್ಲಿರುವ ಮಜ ಬಯಲು ಮುಕ್ತ ಶೌಚದಲಿಲ್ಲ ಎನ್ನುವುದು ಹಲವು ಹಳ್ಳಿಗರ ಮತ್ತು ಅನುಭವಿಸಿದವರ ಅಂಬೋಣ. ಮನೆಯಲ್ಲಿಯೇ ಶೌಚಕ್ಕೆ ವ್ಯವಸ್ಥೆ ಇರುವದರಿಂದ ಎಷ್ಟು ಸಾರಿಯಾದರೂ ಯಾವಾಗ ಬೇಕಾದರೂ ಹೋಗಬಹುದು ಎಂಬುದು  ಬಯಲು ಶೌಚದಿಂದ ಬೇಸತ್ತಿದ್ದ ಹೆಂಗಳೆಯರ ಎಳೆಯರ ಮನದ ಮಾತು. ಪರಿಸರ ಸ್ನೇಹಿ ಬಯಲು ಮುಕ್ತ ಶೌಚ ಸರ್ವೋತ್ತಮ. ಏನೇ ಹೇಳಿ ಬಯಲು ಶೌಚದಲ್ಲಿ ಒಂದು ದೇಸೀ ಸೊಗಡು ಇತ್ತು ಅನ್ನೋದು ಹಿರಿಕರ ಮಾತು ನೀವೇನಂತೀರಿ?



ಜಯಶ್ರೀ ಜೆ. ಅಬ್ಬಿಗೇರಿ

- Advertisement -

1 COMMENT

  1. ಕರೆನ್ ಮೇಡಂ ರಿ ನೀವ್ ಹೇಳಿದ್ದ ಮಾತ್ ಚೆಂದ ಐತ್ರಿ

Comments are closed.

- Advertisement -

Latest News

ಕವನ : ಗೊಂಬೆಗಳ ಕಣ್ಣೀರು

ಗೊಂಬೆಗಳ ಕಣ್ಣೀರು ಅಂದು ನಾವು ಅಪ್ಪ ಅವ್ವನನ್ನು ಕಾಡಿ ಬೇಡಿ ಗೊಂಬೆಗಳಿಗಾಗಿ ಅಳುತ್ತಿದ್ದೆವು ಜಾತ್ರೆ ಉತ್ಸವದಲ್ಲಿ ಹಿರಿಯರಿಗೆ ದೇವರ ಮೇಲಿನ ಭಕ್ತಿ ನಮಗೋ ಬಣ್ಣ ಬಣ್ಣದ ಗೊಂಬೆಗಳ ಮೇಲೆ ಆಸಕ್ತಿ ಅವ್ವ ಹೇಗೋ ಮಾಡಿ ಅಪ್ಪನ ತುಡುಗಿನಲಿ ತನ್ನಲಿದ್ದ ದುಡ್ಡು ಕೊಟ್ಟು ತಂದಳು ಗೊಂಬೆಗಳ ಮಿತಿ ಇರಲಿಲ್ಲ...
- Advertisement -

More Articles Like This

- Advertisement -
close
error: Content is protected !!
Join WhatsApp Group