ಎಡೆಯೂರು ಶ್ರೀ ಸಿದ್ದಲಿಂಗೇಶ್ವರ
ಈಗಿನ ಚಾಮರಾಜನಗರ ಜಿಲ್ಲೆಯ ಹರದನಹಳ್ಳಿಯಲ್ಲಿ
ಜ್ಞಾನಾಂಬೆ ಮತ್ತು ಮಲ್ಲಿಕಾರ್ಜುನ ಎಂಬ ಶಿವಭಕ್ತ ದಂಪತಿಗಳಿಗೆ ಆಯೋನಿಜವಾಗಿ ತೇಜಸ್ವಿ ಮುಖ ಕಾಂತಿಯುಳ್ಳ ಕೊರಳಲ್ಲಿ ರುದ್ರಾಕ್ಷಿ ಇರುವ ಮಗು ಜನಿಸುತ್ತದೆ. ಗಣೇಶನ ನಿರಂಜನ ಅವತಾರ ಎನ್ನಲಾದ ಈ ಮಗು ಲಿಂಗಾಂಗ ಸಾಮರಸ್ಯವುಳ್ಳ ಸಿದ್ದಪುರುಷ ಎಂದು ಗುರುಗಳು ಸಿದ್ದಲಿಂಗ ಎಂದು ನಾಮಕರಣ ಮಾಡುವರು.
ಈತನು ಲೋಕ ಕಲ್ಯಾಣಕ್ಕಾಗಿ ಜನಿಸಿದವನು. ಎಂಟು ವರ್ಷಗಳ ತನಕ ನಿಮ್ಮ ಮಗನಂತೆ ಸಲಹಿ ಆನಂತರ ಹೆಚ್ಚಿನ ಜ್ಞಾನಾರ್ಜನೆಗಾಗಿ ಗುರುಗಳ ಹತ್ತಿರ ಬಿಡಬೇಕು ಎಂದು ತಿಳಿಸುವರು. ಸಿದ್ದಲಿಂಗರು 8 ವರ್ಷದವರಾದ ಬಳಿಕ ಸರ್ವಸಂಗ ಪರಿತ್ಯಾಗ ಮಾಡಿ ಗುರುಗಳ ಉಪದೇಶದಂತೆ ಗುಬ್ಬಿಯ ಶ್ರೀ ಚನ್ನಬಸವೇಶ್ವರ ಶಿವಯೋಗಿಗಳಿಂದ ದೀಕ್ಷೆ ಪಡೆದು ಹೆಚ್ಚಿನ ಜ್ಞಾನ ಸಂಪಾದನೆ ಮಾಡಿ ಲೋಕ
ಕಲ್ಯಾಣಕ್ಕಾಗಿ ಲೋಕ ಸಂಚಾರಗೊಳ್ಳಲು ಸಿದ್ದರಾದಾಗ ಗುರುಗಳು ಹೆಚ್ಚಿನ ಅಧ್ಯಯನಕ್ಕಾಗಿ ಅಣ್ಣ
ಬಸವಣ್ಣನವರ, ಅಕ್ಕಮಹಾದೇವಿಯವರ ವಚನಗಳನ್ನು ನೀಡಿ ಒಂದು ದಂಡ ಒಂದು ಅರ್ಕಾವಳಿ ಪಾತ್ರೆ ನೀಡಿ ಹೆಣ್ಣು ಗಂಡು ಜಾತಿ ಮತ ಪಂಗಡಗಳ ಭೇದ ಭಾವವಿಲ್ಲದೆ ಅಜ್ಞಾನಿಗಳಿಗೆ ಜ್ಞಾನವನ್ನು ಧರ್ಮೋಪದೇಶವನ್ನು ಮಾಡು ಎಂದು ಆಶೀರ್ವದಿಸಿ ಕಳುಹಿಸಿ ಕೊಡುವರು.
ಸಿದ್ದಲಿಂಗರು ಲೋಕ ಸಂಚಾರ ಮಾಡುತ್ತಾ
ಮದರಿ, ಕಾಶಿ, ಚಿದಂಬರ, ಕೇದಾರ, ಅರುಣಾಚಲ ಪ್ರದೇಶಗಳಲ್ಲಿ ಸಂಚರಿಸುತ್ತಾ ಅನೇಕ ಪವಾಡಗಳನ್ನು ಮಾಡಿದರು ಎನ್ನಲಾಗಿದೆ. ಸಿದ್ದಲಿಂಗರ ಪರಮ ಭಕ್ತೆ
ಮಾತು ಬರದ ಬಸ್ಸಮ್ಮನಿಗೆ ಮಾತು ಬರೆಸಿದ್ದು, ಶಿಲ್ಪ ನಂದಿಗೆ ಪೂಜೆ ಮಾಡಿ ಪ್ರಸಾದ ತಿನಿಸಿದ್ದು, ಗುರುಗಳು ಪೂಜೆಗೆ ಕುಳಿತಾಗ ದೀಪದಲ್ಲಿ ಎಣ್ಣೆ ಮುಗಿದು ದೀಪವು ಆರುವ
ಸ್ಥಿತಿಯಲ್ಲಿದ್ದಾಗ ನೀರು ಹಾಕಿ ದೀಪ ಬೆಳಗಿಸಿದ್ದು ಜ್ಞಾನಬೋಧನೆ, ಧರ್ಮೋಪದೇಶ, ಪವಾಡಗಳನ್ನು ಮಾಡುತ್ತ
ಸಂಚಾರ ಮಾಡುತ್ತಿದ್ದರು. ಕರ್ನಾಟಕದ ವಾಣಿಜ್ಯಪುರದ ಅರುಣೇಶ್ವರ ದೇವಸ್ಥಾನದಲ್ಲಿ ಒಂದು ಘಟನೆ ನಡೆದು ಅಲ್ಲಿನ ರಾಜರಿಗೆ ಕಣ್ಣು ಕಾಣದಾದಾಗ ಸಿದ್ಧಲಿಂಗರು ಶಿವನ ಪಾದೋದಕ ಸಿಂಪಡಿಸಿ ಕಣ್ಣು ಬರಿಸಿದರು.
15ನೇ ಶತಮಾನ ಸಿದ್ದಲಿಂಗರ ಕಾಲವಾಗಿದ್ದು ಇವರು ಬಸವಣ್ಣನವರ ಪರಮ ಭಕ್ತರಾಗಿದ್ದರು ಅನ್ನಲಾಗಿದೆ.
ಷಟಸ್ಥಳ ಜ್ಞಾನ ಸಾರಾಮೃತ ಎಂಬ ಗ್ರಂಥ ರಚಿಸಿ ಅದರಲ್ಲಿ
701 ವಚನಗಳು ರಚಿಸಿದ್ದಾರೆ ಕುಣಿಗಲ್ ಸಮೀಪವಿರುವ
ಶಿಕ್ಷಾ ನದಿಯ ಸಮೀಪದಲ್ಲಿರುವ ಎಡೆಯೂರು ಗ್ರಾಮದ ಹೊರವಲಯದಲ್ಲಿರುವ ಒಂದು ತೋಟದಲ್ಲಿ ಸಿದ್ದಲಿಂಗರು ನೆಲೆಸಿದರು. ಗ್ರಾಮದ ಮುಖ್ಯಸ್ಥರಾದ ನಂಬಿಯಣ್ಣನವರು ಸಿದ್ದಲಿಂಗರ ಬಗ್ಗೆ ಸಾಕಷ್ಟು ತಿಳಿದುಕೊಂಡು ಭಕ್ತಿ ಭಾವದಿಂದ ತಮ್ಮ ಮನೆಗೆ ಪ್ರಸಾದ ಸೇವನೆಗಾಗಿ ಬರಮಾಡ ಬೇಕೆಂದು ಕೇಳಿಕೊಳ್ಳುತ್ತಾರೆ. ಸಿದ್ದಲಿಂಗರು ಒಪ್ಪಿಕೊಂಡು ನಾಳೆ ಬನ್ನಿ ನಾವು ಇಲ್ಲೇ ಕುಳಿತಿರುತ್ತೇವೆ ನಿಮ್ಮ ಮನೆಗೆ ಪ್ರಸಾದ ಸೇವನೆಗೆ ಬರುವೆವು ಎನ್ನುತ್ತಾರೆ. ಮರು ದಿವಸ ನಂಬಿಯಣ್ಣನವರು ಸಿದ್ದಲಿಂಗರನ್ನು ಕರೆಯಲು ಬರುವ ಮಾರ್ಗದಲ್ಲಿ ಹಳೆ ದ್ವೇಷದ ಬೇಡರು ಗುಂಪೊಂದು
ಬಂದು ಕಾಳಗ ಮಾಡಿ ನಂಬಿಯಣ್ಣನವರನ್ನು ಸೋಲಿಸಿ ಬಂಧಿಯಾಗಿಸಿಕೊಂಡು ಕರೆದೊಯ್ಯುತ್ತಾರೆ. ಇತ್ತ
ಸಿದ್ದಲಿಂಗರು ಮಾತು ಕೊಟ್ಟಂತೆ ಕುಳಿತ ಜಾಗದಿಂದ ಕದಲಲಾರದೇ ಬಹುಕಾಲ ಕುಳಿತ ಕಾರಣ ಸುತ್ತಲೂ ಹುತ್ತ ಕಟ್ಟಿ ಬೆಳೆಯುತ್ತದೆ. ಹುತ್ತದ ರಂದ್ರಗಳ ಮೂಲಕ ಕಾಮಧೇನು ಎಂಬ ಹಸು ಹಾಲು ಕರೆದು ಸಿದ್ದಲಿಂಗರಿಗೆ ಉಣಿಸುತ್ತಿತ್ತು. 12 ವರ್ಷಗಳ ಬಳಿಕ ನಂಬಿಯಣ್ಣನವರು ಬಿಡುಗಡೆ ಹೊಂದಿ ಬಂದು ನೋಡಲಾಗಿ ಹುತ್ತದಿಂದ ಓಂ ನಮಃ ಶಿವಾಯ ಎಂಬ ಮಂತ್ರ ಪಠಿಸುವ ಶಬ್ದ ಕೇಳಿ
ಆದ ಪ್ರಮಾದ ಬಗ್ಗೆ ಅರಿವಾಗಿ ಸಿದ್ದಲಿಂಗರನ್ನು ಹೊರಗೆ ಕರೆದು ಕ್ಷಮೆ ಯಾಚಿಸಿದರು. ಸಿದ್ದಲಿಂಗರು ತೋಟದಲ್ಲಿ ವಾಸವಾಗಿದ್ದ ಕಾರಣ ಅವರಿಗೆ ತೋಟದಪ್ಪ, ತೋಟದಾಚಾರ್ಯ, ತೋಟದ ಸಿದ್ದಲಿಂಗ ಎಂದು ಹೆಸರು ಬಂದಿದೆ. ಎಡೆಯೂರು ಗ್ರಾಮದಲ್ಲಿಯೇ ಗುಹೆ ಪ್ರವೇಶಿಸಿ ಸಮಾಧಿ ಸ್ಥಿತಿ ಹೊಂದಿದರು ಎನ್ನಲಾಗುತ್ತದೆ.
ಸಮಾಧಿ ಸ್ಥಿತಿ ಹೊಂದಿ 500
ವರ್ಷಗಳಾಗಿವೆ. ಸಿದ್ದಲಿಂಗರ ಗದ್ದುಗೆ ಇದೆ ಎನ್ನಲಾದ
ಎಡೆಯೂರು ದೇವಾಲಯವನ್ನು ದ್ರಾವಿಡ ಶಿಲ್ಪ ಶೈಲಿಯಲ್ಲಿ ಕಟ್ಟಲಾಗಿದೆ. ದೇವಾಲಯದಲ್ಲಿ ಸಿದ್ದಲಿಂಗರ ಜೀವನ ವೃತ್ತಾಂತ ಮತ್ತು ಪವಾಡಗಳನ್ನು ಸಾರುವ
300 ಚಿತ್ರಗಳಿವೆ. ಶಿವ ಭಕ್ತರಿಗೆ ಜಾತಿ ಮತ ಪಂಗಡಗಳ ಭೇದ ಭಾವವಿಲ್ಲದೆ ಯಡಿಯೂರು ಶ್ರೀ ಸಿದ್ದಲಿಂಗೇಶ್ವರ ದೇವಸ್ಥಾನವು ತೀರ್ಥ ಕ್ಷೇತ್ರವಾಗಿದೆ. ಯುಗಾದಿ ಹಬ್ಬದ ದಿವಸ ದೇವಾಲಯದಲ್ಲಿ ಉತ್ಸವ ಜರಗುತ್ತದೆ. ಅಂದಿನ ದಿನವೇ ಸಿದ್ದಲಿಂಗರು ಸಮಾಧಿ ಸ್ಥಿತಿ ಹೊಂದಿದರು ಅನ್ನಲಾಗಿದೆ.
ವಚನ
ಗುರುವನು ಮಹದೇವನು
ಎಂದು ಭಾವಿಸಬೇಕು ನೋಡಾ
ಎರಡು ಎಂಬ ಪ್ರತಿಭಾವ ಇದ್ದರೆ
ಅದು ಅಜ್ಞಾನ ನೋಡಾ
ಇದು ಕಾರಣ ಅವನೋರ್ವನು
ಎರಡೆಂದು ಭಾವಿಸಿದನಾದರೆ
ಅನೇಕ ಕಾಲ ನರಕದ
ಕುಳ್ಳಿಯಲಿಪ್ಪದು ತಪ್ಪದು ನೋಡಾ ಮಹಾಲಿಂಗ ಗುರು ಶಿವ ಸಿದ್ದಲಿಂಗೇಶ್ವರ ಪ್ರಭುವೇ
ಶ್ರೀ ಸಿದ್ದಲಿಂಗರು ಗುರು ಎಂದರೆ ಅಂಧಕಾರದ ಜ್ಞಾನವನ್ನು ಹೋಗಲಾಡಿಸಿ ಸುಜ್ಞಾನದ ಮಾರ್ಗ ತೋರಿಸಿ
ಮುಕ್ತಿ ಹೊಂದುವ ದಾರಿ ದೀಪವಾಗುವವರು ಸನ್ಮಾರ್ಗ ತೋರಿಸಿ ಉತ್ತಮ ಚರಿತ್ರೆ ಉಳ್ಳವರನ್ನಾಗಿ ಮಾಡುವವರು
ಗುರುಗಳನ್ನು ದೇವರೆಂದು ಭಾವಿಸಬೇಕು ಯಾರು ಗುರುಗಳನ್ನು ದೇವರೆಂದು ಭಾವಿಸುವುದಿಲ್ಲವೋ ಅವರು ಬಹುಕಾಲದ ನರಕದಲ್ಲಿ ಕುಳಿತಿರುವದು ತಪ್ಪದು ಎಂದು ಗುರುವಿನ ಬಗ್ಗೆ ಅಪಾರ ಭಕ್ತಿ ಭಾವ ಹೊಂದಿದ ಸಿದ್ದಲಿಂಗರು
ಗುರುವನ್ನು ತಮ್ಮ ವಚನಗಳಲ್ಲಿ ಮಹಾಲಿಂಗ ಗುರು ಎಂದು
ಅಂಕಿತನಾಮವಾಗಿರಿಸಿದ್ದಾರೆ.
2 ವಚನ
ಊರಿಗೆ ಹೋಹ ದಾರಿಯಲ್ಲಿ
ಒಂದು ಕೋಡಗನ ಕುಳಿತಿಪ್ಪದು ಕಂಡೇನಯ್ಯ
ಊರಿಗೆ ಹೋಹ ಅಣ್ಣಗಳ
ಏಡಿಸಿ ನೋಡಾ
ಕೋಡಗನ ಹಿಡಿದು ಕೊಡತಕ್ಕೆ
ಹಾಕಿದನೆಂದು ಹೋದರೆ
ಊರೆಲ್ಲಾ ನುಂಗಿತ್ತು ಅರಿವು ಕಾಣಿಸದೆ ಇದೇನು ಸೂಜಿಗವೋ ಮಹಾಲಿಂಗ ಗುರು ಶಿವ ಸಿದ್ದಲಿಂಗೇಶ್ವರ ಪ್ರಭುವೆ.
ಜೀವನದ ದಾರಿ ಉದ್ದಕ್ಕೂ ಸಾಗುವಾಗ ದಾರಿಯಲ್ಲಿ ಕೋಡಗನಂತೆ ಮನಸುಳ್ಳವರು ಕಂಡ ಕಂಡಲ್ಲಿ ಅಶಾಂತಿ ಹರಡಿ ಸಿಕ್ಕಸಿಕ್ಕಲ್ಲಿ ಅಲೆದಾಡಿ ಕಂಡ ಕಂಡಿದ್ದಕ್ಕೆಲ್ಲ ಮೋಹ ಗೊಂಡು ಜನರನ್ನು ನೋಯಿಸಿ ಊರನ್ನೆಲ್ಲ ಹಾಳು ಮಾಡುವವರು ಅಂಥವರಿಂದ ದೂರವಿದ್ದು ಗುರುವಿನ ಮಾರ್ಗದರ್ಶನ ಪಡೆದು ಸಜ್ಜನರ ಸಂಗ ಮಾಡಿ
ಶಿವ ಧ್ಯಾನ ಮಾಡುತ್ತಾ ಉತ್ತಮ ಮಾರ್ಗದಲ್ಲಿ ಸಾಗಬೇಕು ಎಂದು ಶ್ರೀ ಸಿದ್ದಲಿಂಗರು ತಮ್ಮ ವಚನಗಳಲ್ಲಿ ತಿಳಿಸುತ್ತಾರೆ.
ಶ್ರೀ ಸಿದ್ದಲಿಂಗೇಶ್ವರರು ಭಕ್ತಿ ಭಾವದ, ಜ್ಞಾನವಂತ, ಧರ್ಮೋದಾರಕ, ಪವಾಡ ಪುರುಷರು, ವಚನಕಾರರು ಮಹಾ ತಪಸ್ವಿ ಸಂತರು ಎಂದು ಪ್ರಸಿದ್ಧಿ ಪಡೆದವರು. ( ಚಿತ್ರ ಕೃಪೆ : ಫೇಸ್ ಬುಕ್ )
ಬಸಮ್ಮ ಭರಮಶೆಟ್ಟಿ
ರಾಂಪುರ ಪಿ. ಎ.
ವಚನ ಅಧ್ಯಯನ ವೇದಿಕೆ
ಅಕ್ಕನ ಅರಿವು ಬಸವಾದಿ
ಶರಣರ ಚಿಂತನ ಕೂಟ.