spot_img
spot_img

ರಿಜಲ್ಟ್ ಗೆ ಮಾರೋ ಗೋಲಿ…ರೆಡಿ ಟು ಬಿ ಜಾಲಿ!..ನೋ ಬಿಪಿ….ಬೀ ಹ್ಯಾಪಿ !

Must Read

- Advertisement -

ಹಾಯ್ ಡಿಯರ್ ಹೇಗಿದ್ದೀಯಾ?

ನನಗೊತ್ತು ಇವತ್ತು ಈಗಷ್ಟೇ ನಿನ್ನ ಫಲಿತಾಂಶ ಬಂದಿರುತ್ತೆ…

ಶಾಲಾ ದಿನಗಳಲ್ಲಿ ಉಳಿದವರಂತೆ ಓದಿನಲ್ಲಿ ಅಷ್ಟೇನು ಜಾಣನಲ್ಲದ, ಯಾವ ದಿನವೂ ಶಾಲೆಯ ಮೇಷ್ಟ್ರೂ ಅಥವಾ ಟೀಚರ್ ಗಳಿಂದ ಶಭಾಷ್ ಅನ್ನಿಸಿಕೊಳ್ಳದ, ಸರಿಯಾಗಿ ಒಂದು ನೋಟ್ಸ್ ಮಾಡಿಕೊಳ್ಳಲು ಬಾರದ ಮತ್ತು ದಿನವು ಶಾಲೆಗೆ ಹಾಜರಾತಿಯನ್ನೇ ಕೊಡಲಾಗದೇ ಅದು ಎಲ್ಲಿಯೋ ಪೋಲಿ ಅಲೆಯುತ್ತ ಹೇಗೋ ಎಸ್ ಎಸ್ ಎಲ್ಸಿ ವರೆಗೂ ಬಂದ ಅದೆಷ್ಟೋ ಅಸಂಖ್ಯಾತ ಮಕ್ಕಳಲ್ಲಿ ನೀನು ಕೂಡ ಒಬ್ಬ ಅಥವಾ ಒಬ್ಬಳಾಗಿರ್ತೀಯ…

- Advertisement -

ಈ ಪೇಪರ್ ಪಾಸ್ ಆಗುತ್ತೋ, ಇಲ್ವೋ ಅಂತ ಯೋಚಿಸುತ್ತಾ ಪರೀಕ್ಷೆಯ ದಿನ ಶ್ರದ್ಧೆಯಿಂದ ಮನೆಯ ದೇವರಿಗೆ ಕೈ ಮುಗಿದೋ, ಹಿಂದಿನ ಬೆಂಚಿನಲ್ಲಿ ನಿನ್ನದೇ ಗೆಳೆಯ ಅಥವಾ ಗೆಳತಿ ಇದ್ದಾಳೆ ಅಂತಲೋ,ಅಥವಾ ಆದದ್ದಾಗಲಿ ಅಂತ ಒಂದಷ್ಟು ಕಾಫಿ ಇಟ್ಟುಕೊಂಡೋ ಅಳಕುತ್ತಲೇ ನೀನೂ ಕೂಡ ಪೇಪರ್ ಬರೆದಿರುತ್ತೀಯ..

ಹೀಗೆ ನಾವೂ ಪೇಪರ್ ಬರೆದಿರುವ ಮತ್ತು ಪರೀಕ್ಷಾ ಕೊಠಡಿಯ ಕಿಟಕಿಗೆ ಬಂದು ಸಂಭಂಧವೇ ಇಲ್ಲದ ಸಬ್ಜೆಕ್ಟಿನ ಚೀಟಿ ಎಸೆದದ್ದನ್ನೆ ಗಬಕ್ಕನೆ ಎತ್ತಿಕೊಂಡು ಗೀಚಿದ ಮತ್ತು ಸ್ಕ್ವಾಡ್ ಬಂದ್ರೋ ಅಂತ ಯಾರೋ ಪೋಲಿಯೊಬ್ಬ ಜೋರಾಗಿ ಕೂಗಿದಾಗ ನಮ್ಮ ಬೆಂಚಿನ ಅಕ್ಕಪಕ್ಕದಲ್ಲಿ ಏನಾದರೂ ಬಿದ್ದಿದೆಯಾ ಅಂತ ಗಾಬರಿಯಿಂದ ನೋಡಿ ಕಿಟಕಿಯಾಚೆಗೆ ಎಸೆದು ಪರೀಕ್ಷೆ ಬರೆಯುತ್ತಿದ್ದ ದಿನಗಳು ಅದು ಯಾವಾಗಲೋ ಮಾಯವಾಗಿ ಸಿ ಸಿ ಕ್ಯಾಮರಾಗಳ ಕಣ್ಗಾವಲಿನಲ್ಲಿ ಆಳೆತ್ತರದ ಕಂಪೌಂಡಿನ ಶಾಲೆಗಳಲ್ಲಿ ಸೂಜಿ ಬಿದ್ದರೂ ಸದ್ದಾಗುವಷ್ಟು ಮೌನ ಆವರಿಸಿ ಅತ್ತಿತ್ತ ಹೊರಳಿ ನೋಡಲೂ ಆಗದೆ ಗಂಟಲ ಪಸೆ ಒಣಗಿದ್ದರೂ ನೀರು ಕೇಳಲಾಗದೆ ಸಪ್ಲಿಮೆಂಟ್ ಅಂತ ಯಾರೋ ಕೇಳಿದಾಗ ಅವರತ್ತ ಬೆರಗಿನಿಂದ ನೋಡುತ್ತಿದ್ದ ನಮ್ಮ ಕಾಲದ ಯಾವ ಪುಳಕವೂ ಇಲ್ಲದೆ ಇರುವಂತಹ ಈ ಕಾಲಘಟ್ಟದಲ್ಲಿ ನಾವು ಇರುವಾಗಲೇ ಉಳಿದ ಮಕ್ಕಳು ನಂದು ನೈಂಟಿ ನೈನ್ ಪಾಯಿಂಟ್ ಸಮ್ ಥಿಂಗ್ ಅಂತಲೋ, ನಾನು ಫಸ್ಟ್ ಕ್ಲಾಸ್ ಮಚ್ಚಾ, ಏ ನಾನ್ ಡಿಸ್ಟಿಂಕ್ಷನ್ ಕಣೇ ಅಂತಲೋ ಹೇಳುತ್ತಿರುವುದರ ನಡುವೆ ಮ್ಯಾಥೆಮೆಟಿಕ್ಸ್, ಇಂಗ್ಲಿಷ್ ಮತ್ತು ಸೈನ್ಸ್ ಮೂರು ವಿಷಯದಲ್ಲಿ ಫೇಲಾಗಿದ್ದೇನೆ ಅಂತ ಹೇಳುವ ಸರದಿ ಇಂದು ನಿನ್ನದಾಗಿರಬಹುದು….

ಹೀಗೆ ಫೇಲ್ ಆಗಿದ್ದ ಒಂದು ಕಾಲದ ನನ್ನ ಗೆಳೆಯರೇ ಮುಂದೆ ಸರಿಯಾಗಿ ಓದಿಕೊಂಡು ಪರೀಕ್ಷೆ ಬರೆದು ಪಾಸಾದ ಬಳಿಕ ಈಗ ಯಶಸ್ವಿ ಉದ್ಯಮಿ ಮತ್ತು ಸರ್ಕಾರಿ ನೌಕರ ಅನ್ನುವಂತ ಸ್ಥಾನಗಳಲ್ಲಿ ಈಗಲೂ ಇದ್ದಾರೆ. ಎಷ್ಟೋ ಸಲ ಪರೀಕ್ಷೆಯನ್ನು ಚೆನ್ನಾಗಿ ಬರೆದರೂ ಕೂಡ ಅಂದುಕೊಂಡಷ್ಟು ಅಂಕ ಬರದೇ ಇದ್ದವರು ಮತ್ತು ಕೆಲವಷ್ಟು ಸಬ್ಜೆಕ್ಟ್ ಗಳಲ್ಲಿ ಫೇಲಾದವರು ಅಷ್ಟೇ ಯಾಕೆ?? ಎಸ್ ಎಸ್ ಎಲ್ ಸಿ ಬಳಿಕ ಮುಂದೆ ಯಾವ ಕೋರ್ಸಿಗೆ ಸೇರಬೇಕು ಅಂತಲೇ ಸರಿಯಾದ ಗುರುವಿನ ಮಾರ್ಗದರ್ಶನವಿಲ್ಲದೆ ತಮಗೆ ಇಷ್ಟವಿಲ್ಲದ ಅಥವಾ ತಮಗೆ ತಿಳಿದಿರಬಹುದಾದ ಇಲ್ಲವೇ ಹತ್ತಿರದಲ್ಲೆ ಇರುವ ಕೆಲವೇ ಕೆಲವು ಉನ್ನತ ವ್ಯಾಸಂಗ ಅನ್ನುವ ಹೆಸರಿನ ಓದಿನ ಹಿಂದೆ ಬಿದ್ದು ಸರಿ ಸುಮಾರು ತಮ್ಮ ಬದುಕಿನ ಇಪ್ಪತ್ತೊಂದು ವರ್ಷಗಳನ್ನು ಈಗಾಗಲೇ ಅದೆಷ್ಟೋ ಜನ ಕಳೆದುಬಿಟ್ಟಿದ್ದಾರೆ…

- Advertisement -

ಅದರ ಬಳಿಕವೂ ಕೂಡ ನನ್ನ ಬದುಕಿನ ಅನುಭವಕ್ಕೆ ಬಂದಂತೆ ಕೆಲ ವರ್ಷಗಳ ಹಿಂದೆ ಬಿ.ಎ ಡಿಗ್ರಿ ಕಲಿತವನೂ ತನ್ನ ಕೆಲಸದ ಅನುಭವದಿಂದ ಮತ್ತು ಈಗಷ್ಟೇ ಎಂಬಿಎ ಕಲಿತವನು ಪ್ರೆಷರ್ ಅನ್ನುವ ಕಾರಣಕ್ಕೆ ಒಂದೇ ಕಂಪನಿಯ ಸಮಾನ ಹುದ್ದೆಯಲ್ಲಿ ಒಂದೇ ಪ್ರಮಾಣದ ಸಂಬಳದಲ್ಲಿ ದುಡಿಯುತ್ತಾ ಇರುವುದನ್ನು ನಾನು ನೋಡಿದ್ದೇನೆ…

ಎಸ್ ಎಸ್ ಎಲ್ ಸಿ ಫೇಲ್ ಆಗಿದ್ದವರಲ್ಲಿ ಮುಂದೆ ಓದುವುದನ್ನ ಅರ್ಧಕ್ಕೆ ನಿಲ್ಲಿಸಿ ಪುಟ್ಟದೊಂದು ಪಾನ್ ಶಾಪ್ ನಿಂದ ಆರಂಭಿಸಿ ಫೈವ್ ಸ್ಟಾರ್ ಹೋಟೆಲ್ ಇಟ್ಟು ಬದುಕು ಕಟ್ಟಿಕೊಂಡವರು, ಫೇಲ್ ಆದೆ ಅನ್ನುವ ಕಾರಣಕ್ಕೆ ಬದುಕಿನ ಬಗ್ಗೆ ಭರವಸೆ ಕಳೆದುಕೊಳ್ಳದೆ ಸಣ್ಣಪುಟ್ಟ ಸಾಮಾಜಿಕ ಕೆಲಸಗಳನ್ನ ಮಾಡುತ್ತಲೇ ಈಗ ರಾಜಕಾರಣಿಗಳಾದವರು ಮತ್ತು ಮನೆಯಲ್ಲಿದ್ದ ಬಡತನದ ಕಾರಣದಿಂದಾಗಿ ಓದನ್ನು ಅರ್ಧಕ್ಕೆ ಮೊಟಕುಗೊಳಿಸಿ ಪಾರ್ಟ್ ಟೈಮ್ ಕೆಲಸ ಮಾಡುತ್ತಲೇ ಎಕ್ಸಟರ್ನಲ್ ಡಿಗ್ರಿ ಮುಗಿಸಿ ಸರ್ಕಾರದ ಉನ್ನತ ಹುದ್ದೆ ಅಲಂಕರಿಸಿದವರು ಹೀಗೆ ಹುಡುಕುತ್ತಾ ಹೊರಟರೆ ಉದಾರಣೆಗಳು ಸಾಕಷ್ಟು ಸಿಗುತ್ತವೆ…

ಮೈ ಡಿಯರ್ ಫ್ರೆಂಡ್ ಇಂದಿನ ನಿನ್ನ ಫಲಿತಾಂಶ ಏನೇ ಆಗಿರಲಿ ಆದರೆ ಸತತವಾದ ಪ್ರಯತ್ನ ಮತ್ತು ಬದುಕನ್ನು ಗೆಲ್ಲುವ ಹಂಬಲ ಇದ್ದವರು ಎಂದಿಗೂ ಕೂಡ ನಂಬರ್ ಒನ್ ಸ್ಥಾನದಲ್ಲಿಯೇ ಇರುತ್ತಾರೆ ಅನ್ನುವದನ್ನ ನಿನಗೆ ನೆನಪಿಸಬೇಕಾಗಿದೆ…

ಕನ್ನಡ ಸಬ್ಜೆಕ್ಟಿನ ಎರಡನೇ ಪುಟದ ಅಕ್ಷರಗಳನ್ನೇ ಮನಸಿಟ್ಟು ಓದಲಾಗದ ಅಥವಾ ಒಂದರಿಂದ ಒಂಬತ್ತನೇ ತರಗತಿಯವರೆಗೆ ಟೀಚರ್ ಗಳು ಪಾಸ್ ಮಾಡುತ್ತಾ ಬಂದರು ಅನ್ನುವ ಕಾರಣಕ್ಕೆ ಅದು ಹೇಗೋ ಒಂದಷ್ಟು ಓದುವುದನ್ನು ಕಲಿತ ನಿನ್ನಂತಹ ಮಕ್ಕಳಿಗೆ ಇದೊಂದು ಬರವಣಿಗೆ ಸ್ಪೂರ್ತಿಯಾಗಲಿ ಅನ್ನುವ ಕಾರಣಕ್ಕೆ ಬದುಕು ಸೋತೆ ಅಂತ ಕೈ ಚೆಲ್ಲಿ ಕೂಡ ಬೇಡ ಬದುಕುವುದಕ್ಕೆ ನೂರೆಂಟು ದಾರಿಗಳಿದೆ ಆದರೆ ಬದುಕು ಕಳೆದುಕೊಳ್ಳುವುದಕ್ಕೆ ಮತ್ತದೇ ಹಗ್ಗ, ವಿಷದ ಬಾಟಲು, ಕೆರೆ ಬಾವಿ ಮತ್ತು ಕೈಯ ನರ ಕತ್ತರಿಸಿ ಕೊಳ್ಳುವ ಅಥವಾ ಕತ್ತು ಜೀರಿಕೊಳ್ಳುವ ಬ್ಲೇಡು,ಚೂರಿ ಚಾಕು,ಮನೆಯಲ್ಲಿ ಟ್ರಿಪ್ ಆಗದ ಸ್ವಿಚ್ಚು ಇಲ್ಲವೇ ಅದೆಷ್ಟೋ ಅಸಂಖ್ಯಾತ ಜೀವಗಳನ್ನು ತಲೆ ಇಟ್ಟ ಕಾರಣಕ್ಕೆ ಅಮಾನುಷವಾಗಿ ಬಲಿ ಪಡೆದ ಅದೇ ರೈಲ್ವೆ ಟ್ರ್ಯಾಕುಗಳಿವೆ. ಅಬ್ಬಬ್ಬಾ ಅಂದರೆ ಹಾಗೆ ಹೇಡಿಗಳಂತೆ ತೀರಿಹೋದ ಮಕ್ಕಳನ್ನ ಮೂರು ದಿನವೋ, ಮೂರು ತಿಂಗಳೀ ಅವರ ಮನೆಯವರು ಮತ್ತು ಸಂಬಂಧಿಕರು ನೆನಪಿಸಿಕೊಳ್ಳಬಹುದಷ್ಟೇ… ಆದರೆ ಅಂತಹ ಸಾವಿಗೆ ಮರಗಿದವರ ಕೊರಗು ಕೂಡ ನಿನ್ನ ಆತ್ಮಕ್ಕೆ ಶಾಂತಿ ನೀಡುವದಿಲ್ಲ…ಅನ್ನುವದನ್ನ ಅರ್ಥ ಮಾಡಿಕೋ..

ಒಂದು ವೇಳೆ ಬದುಕಿ ಸಾಧಿಸಿ ತೋರಿಸಿದರೆ ಇಂದು ನಿನ್ನನ್ನು ಆಡಿಕೊಂಡು ನಕ್ಕವರೇ ಮುಂದೊಮ್ಮೆ ಕೈ ಕುಲುಕಿ ಸಭೆಯೊಂದರಲ್ಲಿ ಸನ್ಮಾನಿಸಿ ಚಪ್ಪಾಳೆ ತಟ್ಟುವ ಸಮಯ ಬರಲು ಕೇವಲ ಕೆಲವೇ-ಕೆಲವು ವರ್ಷಗಳ ಶ್ರದ್ಧೆಯ ಮತ್ತು ಪರಿಶ್ರಮದ ಅಗತ್ಯವಿದೆ ಅನ್ನುವದನ್ನ ನೆನಪಿಟ್ಟುಕೋ…

ಇಂದಿನ ಫಲಿತಾಂಶದಲ್ಲಿ ನೀನು ಫೇಲ್ ಆಗಿರಬಹುದು ಆದರೆ ಬದುಕು ನಡೆಸುವ ಹಲವಾರು ಪರೀಕ್ಷೆಗಳನ್ನ ನಿಧಾನವಾಗಿ ಆದರೂ ಪರವಾಗಿಲ್ಲ ಒಂದೊಂದನ್ನೆ ಜಯಿಸುತ್ತಾ ಹೋಗಿ ಯಶಸ್ಸಿನ ಮೆಟ್ಟಿಲು ಏರಿದ್ದೇ ಆದರೆ ಆಗ ಮಿಂಚುವ ನಿನ್ನ ಕಣ್ಣುಗಳಲ್ಲಿ ಕಾಣುವ ಬದುಕು ಗೆದ್ದ ಭರವಸೆಯ ಬೆಳಕನ್ನ ಇಂದು ತೇವಗೊಂಡ ನಿನ್ನ ಕಣ್ಣುಗಳ ನೋಡುತ್ತ ನಿರೀಕ್ಷೆಯನ್ನು ಇಟ್ಟುಕೊಂಡಿರುವ ನಿನ್ನ,ಅಪ್ಪ,ಅಮ್ಮ ಅಣ್ಣ,ತಂಗಿ,ಅಕ್ಕ ಮತ್ತು ತಮ್ಮ ಇವರ ಕಣ್ಣುಗಳನ್ನೊಮ್ಮೆ ದಿಟ್ಟಿಸಿ ನೋಡು…

ಮನೆಯ ಯಾವದೋ ರೂಮಿನಲ್ಲಿ ಅಳುತ್ತ ಕುಳಿತುಕೊಳ್ಳದೆ, ಕೆಟ್ಟ ಯೋಚನೆಗಳನ್ನ ಮಾಡಿ ವರವಾಗಿ ಬಂದ ಈ ಮನುಷ್ಯ ಬದುಕನ್ನ ಮುಗಿಸಲು ಸ-ಕಾರಣವೇ ಅಲ್ಲದ ಫಲಿತಾಂಶದ ನೆಪದಲ್ಲಿ ಅರ್ಧಕ್ಕೆ ಮುಗಿಸಿಕೊಳ್ಳದೇ ಒಂದಷ್ಟು ಆತ್ಮಸ್ಥೈರ್ಯವನ್ನು ನಿನಗೆ ನೀನೆ ತುಂಬಿಕೊಂಡು ಕೇವಲ ಎಸ್ ಎಸ್ ಎಲ್ಸಿ ಅಷ್ಟೇ ಕಲಿತಿರುವ ಅಥವಾ ಫೇಲಾಗಿ ಓದು ಮುಂದುವರೆಸಲಾಗದೆ ಬದುಕಿನ ಅನಿವಾರ್ಯತೆಗೆ ಮಣಿದು ಲೈಟ್ ಬಾಯ್ ಆಗಿ ದುಡಿಯಲು ಆರಂಭಿಸಿದ ಬಳಿಕ ಕೆಲ ವರ್ಷಗಳಲ್ಲೇ ಯಶಸ್ವಿ ಸಿನಿಮಾ ನಟರಾದವರು,ಅತ್ಯುತ್ತಮ ಬಾಡಿ ಬಿಲ್ಡರ್ ಆದವರು,ಕಾಮೀಡಿ ಖಿಲಾಡಿಯ ಬೆಸ್ಟ ಕಾಮೆಡೀಯನ್ ಆದವರೂ, ಮುಂಬೈನ ತಾಜ್, ಅಥವಾ ಯಾವುದೋ ದೊಡ್ಡ ಹೋಟಲ್ ನಲ್ಲಿ ರುಚಿಯಾದ ಖಾದ್ಯಗಳನ್ನು ತಾಯಾರಿಸುವ ಚೇಪ್ ಆಗಿ ದುಡಿಯುತ್ತ ಪದವೀಧರರು ಪಡೆಯಲಾಗದಷ್ಟು ಸಂಬಳವನ್ನ ಪಡೆಯುತ್ತಿರುವವರುಮತ್ತು ಸ್ಕಿಲ್ ಓರಿಯಂಟೆಡ್ ಕುಶಲತೆಯನ್ನ ಅಳವಡಿಸಿಕೊಂಡು ಸಾವಿರಾರು ರೂಪಾಯಿಗಳ ಟಿಪ್ಸ ಜೊತೆಗೆ ಸಂಭಾವನೆ ಪಡೆಯುತ್ತಿರುವವರು ಹೀಗೆ ಓದಿನ ಸರ್ಟಿಫಿಕೇಟ್ಟುಗಳ ಅವಶ್ಯಕತೆಯೇ ಇಲ್ಲದ ಅದೆಷ್ಟೋ ಅವಕಾಶಗಳ ಬಾಗಿಲು ತಾನಾಗಿಯೇ ತೆರೆದುಕೊಂಡು ನಿನಗಾಗಿ ಕಾಯುತ್ತಿದೆ ಅನ್ನುವದನ್ನ ಮರೆಯಬೇಡ..

ಹೀಗೆ ಅನಾಯಾಸವಾಗಿ ಆತ್ಮಹತ್ಯೆ ಮಾಡಿಕೊಂಡು ಸತ್ತು ಹೋದ್ರೆ ಸ್ವರ್ಗ ಸಿಗುತ್ತೋ ನರಕ ಸಿಗುತ್ತೋ ಯಾರಿಗೂ ಗೊತ್ತಿಲ್ಲ… ತೀರಿ ಹೋದವರ ಕಷ್ಟಗಳು ತೀರಬಹುದಷ್ಟೇ ಆದರೆ ನಿಮ್ಮನ್ನೇ ನಂಬಿದವರ ಕಷ್ಟವಂತೂ ಖಂಡಿತ ತೀರುವದಿಲ್ಲ ಸಾವು ಅನ್ನುವದು ಬದುಕಿನ ಸೋಲಿಗೆ ಪರಿಹಾರ ಅಲ್ಲವೇ ಅಲ್ಲ…ಆತ್ಮಹತ್ಯೆ ನಮ್ಮನ್ನು ಆ ಕ್ಷಣಕ್ಕೆ ನೋಯಿಸಿದರೂ ಹಿಂದೆ ಉಳಿದವರನ್ನ ಶಾಸ್ವತವಾಗಿ ನೋವಿನ ಆಳಕ್ಕೆ ತಳ್ಳುತ್ತದೆ..ಈ ಕ್ಷಣ ಬದುಕು ನಿನಗೆ ನರಕ ಅನ್ನಿಸಿರಬಹುದು ಆದರೆ ಮನಸು ಮಾಡಿದ್ರೆ ಸ್ವರ್ಗವನ್ನೆ ಧರೆಗೆ ಇಳಿಸುವ ಶಕ್ತಿ ಇರುವದು ಮನುಷ್ಯನಿಗೆ ಮಾತ್ರ

ಅಂದ ಹಾಗೆ ಇವತ್ತು ನಿನ್ನ ಎಸ್ ಎಸ್ ಎಲ್ ಸಿ
ಫಲಿತಾಂಶ ಬಂತಾ? ಫೇಲ್ ಆಗಿದಿಯಾ? ಅಥವಾ ಅಂದುಕೊಂಡಷ್ಟು ಅಂಕ ಬಂದಿಲ್ಲವಾ? ಜಸ್ಟ್ ಲೀವ್ ಇಟ್…ಯಾಕೆಂದರೆ ಬದುಕು ತುಂಬಾ ದೊಡ್ಡದಿದೆ ಡಿಯರ್… ಸಾಧ್ಯವಾದರೆ ದೀರ್ಘವಾದ ಒಂದು ಉಸಿರನ್ನು ಒಳಗೆ ಎಳೆದು ಹೊರಗೆ ಬಿಡುತ್ತ ನಿರಾಳವಾಗಿ ಬಿಡು…

ನಿನ್ನ ಮುಂದಿನ ಭವಿಷ್ಯ ಖಂಡಿತ ಚೆನ್ನಾಗಿರುತ್ತದೆ ಈ ಕ್ಷಣಕ್ಕೆ ನಿನಗೆ ನೀನೆ ಹೇಳಿಕೊಂಡು ಬಿಡು ವಿಲ್ ಡೈ ಅನದರ್ ಡೇ…!

ದೀಪಕ ಶಿಂಧೇ
9482766018

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಗಣಪತಿ ಸಚ್ಚಿದಾನಂದ ಸ್ವಾಮಿಗಳ 82ನೇ ವರ್ಧಂತ್ಯುತ್ಸವ

ದತ್ತಸೇನೆ ಮತ್ತು ವಿಪ್ರ ವಕೀಲರ ಪರಿಷತ್ ವತಿಯಿಂದ ಶೋಭಾಯಾತ್ರೆ, ನ್ಯಾಯಾಲಯದಲ್ಲಿ ಲಡ್ಡು ವಿತರಣೆ ಮೈಸೂರು -ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ 82ನೇ ವರ್ಧಂತ್ಯುತ್ಸವದ ಅಂಗವಾಗಿ ನಗರದ ದತ್ತಸೇನೆ ಮತ್ತು...
- Advertisement -

More Articles Like This

- Advertisement -
close
error: Content is protected !!
Join WhatsApp Group