ವೈದ್ಯರ ದಿನಾಚರಣೆಯ ಸಂದರ್ಭದಲ್ಲಿಯೇ ವೈದ್ಯರಿಂದ ಅಮಾನವೀಯ ಕೃತ್ಯ
ಭ್ರೂಣ ಕೊಲೆಗಡುಕರಿಗೆ ಕಠಿಣ ಶಿಕ್ಷೆಯಾಗಲಿ
ಮೂಡಲಗಿ – ಕಳೆದ ವರ್ಷ ಮೂಡಲಗಿಯ ಪ್ರತಿಷ್ಠಿತ ಆಸ್ಪತ್ರೆಯೊಂದರಲ್ಲಿ ನಡೆದಿದೆಯೆಂದು ಆರೋಪಿಸಲಾಗಿದ್ದ ಭ್ರೂಣ ಹತ್ಯಾ ಪ್ರಕರಣದ ನೆನಪು ಮಾಸುವ ಮುನ್ನವೇ ಇದೀಗ ಮತ್ತೊಂದು ಭ್ರೂಣ ಲಿಂಗ ಪತ್ತೆ ಹಾಗೂ ಭ್ರೂಣ ಹತ್ಯಾ ಪ್ರಕರಣವೊಂದರಲ್ಲಿ ಮೂಡಲಗಿಯ ವೈದ್ಯರೊಬ್ಬರು ಭಾಗಿಯಾಗಿದ್ದು ಮತ್ತೊಂದು ಕಳಂಕ ಮೂಡಲಗಿಗೆ ತಟ್ಟಿದೆ.
ಇದೀಗ ವೈದ್ಯರ ದಿನ ಆಚರಣೆಯ ಸಂದರ್ಭದಲ್ಲಿಯೇ ಇಂಥದೊಂದು ಘಟನೆ ನಡೆದಿದ್ದು ಇಡೀ ವೈದ್ಯ ಕುಲಕ್ಕೇ ಮಸಿಬಳಿಯುವಂತಾಗಿದ್ದು ಸುಳ್ಳಲ್ಲ. ಪ್ರಾಣ ನೀಡುವ ವೈದ್ಯರು ಗರ್ಭದಲ್ಲಿಯೇ ಶಿಶುಗಳ ಹತ್ಯೆಗೆ ನಿಂತಿದ್ದು ಅತ್ಯಂತ ವಿಪರ್ಯಾಸಕರ ಹಾಗೂ ನಾಗರಿಕ ಸಮಾಜ ತಲೆತಗ್ಗಿಸಬೇಕಾದ ಸಂಗತಿ.
ಗೋಕಾಕದ ಇಕ್ರಾ ಆಸ್ಪತ್ರೆಯಲ್ಲಿ ಬಹಿರಂಗವಾದ ಭ್ರೂಣ ಲಿಂಗ ಪತ್ತೆ ಹಾಗೂ ಭ್ರೂಣ ಹತ್ಯಾ ಪ್ರಕರಣದಲ್ಲಿ ಮೂಡಲಗಿಯ ಬಿಎಎಮ್ಎಸ್ ವೈದ್ಯರೊಬ್ಬರು ಭಾಗಿಯಾಗಿದ್ದು ಬಹಿರಂಗವಾಗಿದೆ.
ತಾವೊಬ್ಬ ವೈದ್ಯರೆಂಬ ನಕಲಿ ಬೋರ್ಡ್ ಹಾಕಿಕೊಂಡು ಸ್ಥಳೀಯ ಪುಢಾರಿಗಳ ಮರ್ಜಿಯಲ್ಲಿ ರಾಜಕಾರಣ ಮಾಡುತ್ತ ಕೇವಲ ಪುಡಿಗಾಸಿನ ಕಮಿಷನ್ ಆಸೆಗೆ ಭ್ರೂಣ ಲಿಂಗ ಪತ್ತೆ ಹಾಗೂ ಭ್ರೂಣ ಹತ್ಯೆಯಂಥ ಕರ್ಮಗಳಲ್ಲಿ ಭಾಗಿಯಾಗುತ್ತಾರೆ. ಇಂಥವರಿಂದ ಊರಿಗೂ ಕೆಟ್ಟ ಹೆಸರು. ಭ್ರೂಣ ಹತ್ಯೆ ಮಹಾಪಾಪ ಅಲ್ಲದೆ ಕಾನೂನು ಬಾಹಿರವೆಂದು ಸರ್ಕಾರ ಸಾರಿ ಸಾರಿ ಹೇಳುತ್ತಿದ್ದರೂ ವೈದ್ಯರು ಜೀವ ರಕ್ಷಕರು ಎಂಬುದನ್ನೂ ಮರೆತು ಇವರು ಹಡಬೆಯಾಸೆಗಾಗಿ ಭ್ರೂಣ ಹತ್ಯೆಗೆ ನಿಂತಿರುವುದು ತೀರಾ ಖಂಡನೀಯ. ಇಂಥವರಿಂದಲೇ ಇಂದು ಹೆಣ್ಣಿನ ಸಂಖ್ಯೆ ಕಡಿಮೆಯಾಗಿ ಗಂಡು ಮಕ್ಕಳು ಕನ್ಯೆಯರು ಸಿಗದೆ ಮದುವೆಯಾಗದೆ ಉಳಿಯುವಂತಾಗಿದೆ.
ಎರಡು ದಿನಗಳ ಹಿಂದೆ ಗೋಕಾಕದ ಇಕ್ರಾ ದವಾಖಾನೆಯಲ್ಲಿ ಭ್ರೂಣ ಲಿಂಗ ಪತ್ತೆ ಹಾಗೂ ಭ್ರೂಣ ಹತ್ಯೆಯಲ್ಲಿ ಭಾಗಿಯಾದ ಪ್ರಕರಣವನ್ನು ರಾಜ್ಯ ಆರೋಗ್ಯಾಧಿಕಾರಿಗಳು ಪತ್ತೆ ಹಚ್ಚಿದ್ದಾರೆ
ಗರ್ಭಧಾರಣಾ ಪೂರ್ವ ಮತ್ತು ಪ್ರಸವಪೂರ್ವ ಭ್ರೂಣಲಿಂಗ ಪತ್ತೆ ತಂತ್ರಗಳ ಅಧಿನಿಯಮದ (ಪಿಸಿಪಿಎನ್‌ಡಿಟಿ) ಅಧಿಕಾರಿಗಳ ತಂಡವು ಗೋಕಾಕ, ಮೂಡಲಗಿ ಹಾಗೂ ಮಮದಾಪುರ ಗ್ರಾಮದ ಆಸ್ಪತ್ರೆಗಳ ಮೇಲೆ ದಾಳಿ ನಡೆಸಿದೆ. ‘ಗೋಕಾಕದ ಇಕ್ರಾ ಆಸ್ಪತ್ರೆ ಸ್ತ್ರೀರೋಗ ತಜ್ಞ ಡಾ.ಕುಟೆಜುಲ್ಲಾ ಕುಬ್ರಾ, ಮೂಡಲಗಿಯ ಡಾ.ಎಸ್.ಎಸ್.ಪಾಟೀಲ, ಏಜೆಂಟ್ ತುಕಾರಾಮ ಭೀಮಪ್ಪ ಖೋತ ಅವರನ್ನು ವಶಕ್ಕೆ ಪಡೆಯಲಾಗಿದೆಯೆನ್ನಲಾಗಿದೆ. ಈ ಎರಡೂ ಆಸ್ಪತ್ರೆಗಳಲ್ಲಿ ಅಂದಾಜು 80 ಭ್ರೂಣಲಿಂಗ ಪತ್ತೆ ಮಾಡಿದ ದಾಖಲೆಗಳು ಸಿಕ್ಕಿವೆ. ಅದರಲ್ಲಿ 40 ಮಂದಿಗೆ ಈಗಾಗಲೇ ಗರ್ಭಪಾತ ಮಾಡಿಸಲಾಗಿದೆ. ಮಮದಾಪುರದ ವೈದ್ಯ ಡಾ. ಪೂಜಾರಿ ಎಂಬುವವನು ತಲೆಮರೆಸಿಕೊಂಡಿದ್ದು, ತನಿಖೆ ಪ್ರಕ್ರಿಯೆ ನಡೆದಿದೆ ಎಂದು ಪಿಸಿಪಿಎನ್‌ಡಿಟಿ ಕಾಯ್ದೆ ಉಪನಿರ್ದೇಶಕ ಡಾ.ವಿವೇಕ್ ತಿಳಿಸಿದ್ದಾರೆ.
ಮೂಡಲಗಿಯಲ್ಲಿ ಈ ಹಿಂದೆ ಒಂದು ಪ್ರಕರಣ ಬೆಳಕಿಗೆ ಬಂದಿತ್ತು. ಇಲ್ಲಿನ ಪ್ರತಿಷ್ಠಿತ ದವಾಖಾನೆಯ ಪ್ರತಿಷ್ಠಿತ ವೈದ್ಯರು ಭ್ರೂಣ ಹತ್ಯೆಯಲ್ಲಿ ಶಾಮೀಲಾಗಿರುವುದಾಗಿ ವರದಿಯಾಗಿತ್ತು. ಅನಂತರದ ದಿನಗಳಲ್ಲಿ ಆ ಪ್ರಕರಣ ಮತ್ತು ಅದರ ತನಿಖೆ ಹಳ್ಳ ಹಿಡಿದು ಹೋಯಿತೆಂಬುದು ಸರ್ವವಿದಿತ. ಈ ಪ್ರಕರಣ ಕೂಡ ಅದೇ ದಾರಿಯಲ್ಲಿ ಸಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ ಯಾಕೆಂದರೆ, ಮೂಡಲಗಿ ಮತ್ತು ಮಮದಾಪೂರದ ವೈದ್ಯರುಗಳು ಈಗಾಗಲೇ ಅರೆಸ್ಟ್ ಆಗಿ ಜನತೆಯ ಮುಂದೆ ಬರಬೇಕಾಗಿತ್ತು. ಗೋಕಾಕದಲ್ಲಿ ಇಕ್ರಾ ಹಾಸ್ಪಿಟಲ್ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆಂಬ ವಿಡಿಯೋ ಒಂದು ಫೇಸ್ ಬುಕ್ ನಲ್ಲಿ ಹರಿದಾಡುತ್ತಿತ್ತು. ನಂತರ ಕೆಲವೇ ಗಂಟೆಗಳಲ್ಲಿ ಅದು ಡಿಲೀಟ್ ಆಗಿದೆ. ಆಮೇಲೆ ತಾಲೂಕಾ ಆರೋಗ್ಯಾಧಿಕಾರಿಗಳ ನೇತೃತ್ವದಲ್ಲಿ ಮೂಡಲಗಿಯ ಎಸ್ ಎಸ್ ಪಾಟೀಲ ದವಾಖಾನೆಯನ್ನು ಸೀಜ್ ಮಾಡಿದ ನಾಟಕ ಮಾಡಲಾಗಿದೆಯಲ್ಲದೆ ದವಾಖಾನೆಯಲ್ಲಿ ಯಾವುದೇ ರೀತಿಯ ಸಲಕರಣೆಗಳು ದೊರಕಿಲ್ಲ ಎಂದು ವರದಿಯಾಗಿದೆ. ಒಂದು ಘೋರ ಅಪರಾಧ ಎಸಗಿರುವ ವೈದ್ಯನೊಬ್ಬನನ್ನು ಪೊಲೀಸರು ಮೊದಲು ವಶಕ್ಕೆ ಪಡೆಯಬೇಕಿತ್ತು. ಅದಕ್ಕೆ ಆರೋಗ್ಯಾಧಿಕಾರಿಗಳು ಪೊಲೀಸರ ನೆರವು ಪಡೆಯಬೇಕಿತ್ತು. ಆದರೆ ಅದ್ಯಾವುದೂ ಆಗದೆ ಸದರಿ ವೈದ್ಯನೊಬ್ಬನನ್ನು ವಶಕ್ಕೆ ಪಡೆದು ಇನ್ನೊಬ್ಬ ಪರಾರಿಯಾಗಲು ಅವಕಾಶ ನೀಡಿದಂತಾಗಿದೆ.
ಸ್ಥಳೀಯ ಆರೋಗ್ಯ ಇಲಾಖೆ ಅಧಿಕಾರಿಗಳನ್ನೂ ದೂರವಿಟ್ಟು ನಾವು ದಾಳಿ ನಡೆಸಿದ್ದೇವೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗೆ ಮಾಹಿತಿ ನೀಡಿ ಆಸ್ಪತ್ರೆಗೆ ಬಂದ್ ಮಾಡಲಾಗಿದೆ ಎಂದೂ ಡಾ. ವಿವೇಕ ಅವರು ಹೇಳಿದ್ದಾರೆ.
ದಾಳಿ ವೇಳೆ ಆಸ್ಪತ್ರೆಯಲ್ಲಿ ಗರ್ಭಿಣಿಯರಿಂದ ಸಂಗ್ರಹಿಸಿದ್ದ ರೂ.1.08 ಲಕ್ಷ ಹಣ, ರೂ. 20 ಸಾವಿರ ಫೋನ್ ಪೇ ವರ್ಗಾವಣೆ ಆಗಿದ್ದ ಹಣ, ಸ್ಕ್ಯಾನಿಂಗ್ ಯಂತ್ರಗಳನ್ನು ವಶಕ್ಕೆ ಪಡೆಯಲಾಗಿದೆ. ಇಬ್ಬರೂ ವೈದ್ಯರು ನಾಲ್ಕು ವರ್ಷಗಳಿಂದ ಈ ಅಕ್ರಮ ನಡೆಸುತ್ತಿರುವುದಾಗಿ ವಿಚಾರಣೆ ವೇಳೆ ಗೊತ್ತಾಗಿದೆ’ ಎಂದಿದ್ದಾರೆ.
ಈ ಅಕ್ರಮ ಪತ್ತೆ ಮಾಡಲು ಗರ್ಭಿಣಿಯೊಬ್ಬರು ಅಧಿಕಾರಿಗಳ ತಂಡಕ್ಕೆ ನೆರವಾದರು ಎನ್ನಲಾಗಿದೆ. ಸೋಮವಾರ ನಾಲ್ವರು ಗರ್ಭಿಣಿಯರು ಏಜೆಂಟ್ ಮೂಲಕ ಗರ್ಭಪಾತಕ್ಕೆ ಆಸ್ಪತ್ರೆಗೆ ಬಂದಿದ್ದರು. ಅದರಲ್ಲಿ ತಂಡದೊಂದಿಗೆ ಇದ್ದ ಮಹಿಳೆ ಕೂಡ ಸೇರಿಕೊಂಡರು. ಏಜೆಂಟ್‌ಗೆ ₹15 ಸಾವಿರ ಹಾಗೂ ಗರ್ಭಪಾತ ಮಾಡುವ ವೈದ್ಯರಿಗೆ ₹20 ಸಾವಿರ ನಿಗದಿ ಮಾಡಲಾಗಿತ್ತು. ಹಣ ವರ್ಗಾವಣೆ ಆಗುತ್ತಿದ್ದಂತೆಯೇ ಅಧಿಕಾರಿಗಳು ದಾಳಿ ನಡೆಸಿದರು.ಅಕ್ರಮ ಬಯಲಿಗೆಳೆಯಲು ನೆರವಾದಮಹಿಳೆಗೆ ಅಧಿಕಾರಿಗಳು ₹1 ಲಕ್ಷ ಬಹುಮಾನ ಘೋಷಿಸಿದ್ದಾರೆ. ಅಲ್ಲದೇ, ಗರ್ಭಪಾತಕ್ಕೆ ಒಳಗಾಗಲು ಬಂದಿದ್ದ ಉಳಿದ ಮೂವರ ಮೇಲೂ ಪ್ರಕರಣ ದಾಖಲಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಬೇಟಿ ಬಚಾವೋ ಬೇಟಿ ಪಢಾವೋ ಎಂದು ಸರ್ಕಾರಗಳು ಹೇಳುತ್ತವೆ, ಹೆಣ್ಣು ಸಂಸಾರದ ಕಣ್ಣು ಎನ್ನಲಾಗುತ್ತದೆ ಆದರೆ ಹೆಣ್ಣೆಂದರೆ ಬೀಳುಗಳೆಯುವ ದುರುಳರು ಸಮಾಜದಲ್ಲಿದ್ದಾರೆ ಅವರು ಅನಾಗರಿಕರು, ಅಸಂಸ್ಕೃತರು ಆಗಿರಬಹುದು ಆದರೆ ವೈದ್ಯರು ಅನಾಗರಿಕರಾಗಬಾರದು. ವೈದ್ಯರು, ಶಿಕ್ಷಕರು, ಮಠಾಧೀಶರು ಅನಾಗರಿಕರಾದರೆ ಈ ಮನುಷ್ಯ ಜನ್ಮಕ್ಕೆ ಉಳಿಗಾಲವಿಲ್ಲ ಎಂಬುದನ್ನು ಪ್ರತಿಯೊಬ್ಬರೂ ಮನಗಾಣಬೇಕು. ಭ್ರೂಣ ಹತ್ಯೆಯಂಥ ಮಹಾಪಾಪ ಮಾಡಿದ ವೈದ್ಯರಿಗೆ ಕಠಿಣ ಶಿಕ್ಷೆಯಾಗಬೇಕಾಗಿದೆ.
ಉಮೇಶ ಬೆಳಕೂಡ, ಮೂಡಲಗಿ