spot_img
spot_img

ಲಿಂಗಕ್ಕೆ ಭಾಜನರಲ್ಲ ವೇಷಧಾರಿಗಳು.

Must Read

- Advertisement -

ಲಿಂಗಾಯತ ತತ್ವಗಳನ್ನು ದಾಸ್ಯತ್ವದಿಂದ ಮುಕ್ತಗೊಳಿಸಬೇಕು

 

ಕೇಶ ಕಾಷಾಯಾಂಬರ ವೇಷ ಲಾಂಛನವಾದಡೇನೊ !
ಗ್ರಾಸಕ್ಕೆ ಭಾಜನರಲ್ಲದೆ ಲಿಂಗಕ್ಕೆ ಭಾಜನರಲ್ಲ .
ಈ ಆಶೆಯ ವೇಷವ ಕಂಡಡೆ ಕಾರ ಹುಣ್ಣಿಮೆಯ ಹಗರಣವೆಂಬೆ ಕಾಣಾ .
ಕೂಡಲ ಚೆನ್ನಸಂಗಮದೇವ -ಚೆನ್ನ ಬಸವಣ್ಣ

- Advertisement -

ಶರಣ ವಿಚಾರ ವಾಹಿನಿಯು ವೈಚಾರಿಕ ವೈಜ್ಞಾನಿಕ ಪ್ರಜ್ಞೆಯನ್ನು ಬೆಳೆಸುವ ಮನಸಿನ ದೃಢ ಸಂಕಲ್ಪವನ್ನು ಹೆಚ್ಚಿಸುವ ಸಾಮಾಜಿಕ ವಿಚಾರ ಧಾರೆಯಾಗಿದೆ.
ಲಿಂಗಾಯತ ತತ್ವಗಳಲ್ಲಿ ಅಷ್ಟಾವರಣ ಪಂಚಾಚಾರ ಷಟಸ್ಥಲ ಪ್ರಮುಖ ಅಂಗಗಳು ಮತ್ತು ಇವು ನಿಸರ್ಗದತ್ತವಾದ ಕಾಯ ಗುಣಗಳ ಅರಿವು.ಲಿಂಗವೆಂಬುದು ಅರಿವಿನ ಕುರುಹು . ಸಮಷ್ಟಿಯ ಪ್ರಜ್ಞೆಯ ಸಂಕೇತವೇ ಲಿಂಗ ಜ್ಞಾನ. ಲಿಂಗ ಸಮಷ್ಟಿ ಭಾವದ ಗಟ್ಟಿ ಮುಟ್ಟದ ಲಾಂಛನ . ಶರಣರು ಲಾಂಛನಗಳಿಗೆ ಮನೆ ಹಾಕದೆ ತತ್ವಕ್ಕೆ ಬೆಲೆ ಕೊಟ್ಟರು.

ಬಸವ ಧರ್ಮದಲ್ಲಿ ವೇಷ ಭೂಷಣ ಕಾವಿ ಕಾಷಾಯಂಬರವಿಲ್ಲ ,ಜುಟ್ಟು ಜಡೆ ತುರುಬು ಗಡ್ಡ ಮೀಸೆ ತಲೆ ಬೋಳು ಹೀಗೆ ಮನುಷ್ಯನ ಸಹಜದತ್ತವಾದ ರೂಪವನು ವಿಕಾರಗೊಳಿಸಿ ವೈರಾಗ್ಯದ ಹೆಸರಿನಲ್ಲಿ ಬೌದ್ಧಿಕ ಕ್ಷೋಭೆಗೆ ಒಳಗಾದ ತತ್ವನಿಷ್ಠರಲ್ಲದ ಸನ್ಯಾಸಿಗಳು ಕಾವಿಧಾರಿಗಳು ಶ್ವೇತ ವಸ್ತ್ರ ಧಾರಿಗಳು ಪೂಜ್ಯರು ಗುರುಗಳು ಮಾತೆಯರು ಅಕ್ಕನವರು ಅಣ್ಣನವರು ಹೀಗೆ ಬೇರೆ ಬೇರೆ ಅಭಿಧಾನವನ್ನು ಪಡೆದು ಸಮಾಜದಲ್ಲಿ ದುಡಿಯದೆ ಬದುಕುವ ಸಮೂಹವನ್ನು ಕಂಡು ಚೆನ್ನ ಬಸವಣ್ಣ ಅತ್ಯಂತ ಉಗ್ರವಾಗಿ ಟೀಕಿಸಿದ್ದಾನೆ.

ಕೇಶ ಕಾಷಾಯಾಂಬರ ವೇಷ ಲಾಂಛನವಾದಡೇನೊ ! ಬಾಹ್ಯದಲ್ಲಿ ಕೇಶ ಕಾಷಾಯಾಂಬರ ಲಾಂಛನ ಧರಿಸಿ ಬಾಹ್ಯದಲ್ಲಿ ಅನುಭಾವಿಗಳಂತೆ ಕಂಡು ಬರುವ ಸೋಗಲಾಡಿಗಳು ಸಂಗ ದೋಷದಿಂದ ವಿಷಯಾದಿ ಚಪಲತೆಗಳಿಂದ ಆಧ್ಯಾತ್ಮಿಕ ಸಾಧನೆ ಸಿದ್ಧಿಯನ್ನು ಪಡೆಯಲಾರರು . ಶ್ರೇಣೀಕೃತವಲ್ಲದ ಶರಣರ ತತ್ವಗಳಲ್ಲಿ ಇನ್ನೊಂದು ಗೌರವಯುತ ಸ್ಥಾನ ಪೀಠ ಮಾಡಿಕೊಂಡು ತಮ್ಮ ಬಳಿ ಬರುವ ಮುಗ್ಧ ಭಕ್ತರನ್ನು ಶೋಷಿಸುವ ಸುಲಿಗೆ ಮಾಡುವ ಉದ್ಯೋಗಕ್ಕೆ ನಿಲ್ಲುತ್ತಾರೆ ವೇಷಧಾರಿ ಗುರುಗಳು .
ಶರಣ ತತ್ವದಂತೆ ಸತ್ಯ ಶುದ್ಧ ಕಾಯಕ ದಾಸೋಹ ಮಾಡಲಾಗದೆ ಜನರಿಂದ ದಾನ ಭಿಕ್ಷೆ ಎತ್ತಿ ಶಾಲೆ ಕಾಲೇಜು ನಡೆಸಿ ಮಠಗಳನ್ನು ವ್ಯಾಪಾರಿ ಕೇಂದ್ರಗಳನ್ನಾಗಿ ಮಾಡಿದ್ದಾರೆ.
ಸುಲಭ ಜೀವನ ನಡೆಸಲು ಸನ್ಯಾಸಿ ವೇಷವ ಹಾಕಿ ಉದರ ಪೋಷಣೆ ಮಾಡುವ ಸಾಧಕರಿಂದ ತತ್ವಗಳು ಪ್ರಚಾರವಾಗುವದಿಲ್ಲ.

- Advertisement -

ಇಂತಹ ಸೋಗಲಾಡಿಗಳು ಗ್ರಾಸಕ್ಕೆ ಭಾಜನವಾಗುತ್ತಾರಲ್ಲದೆ ಲಿಂಗಕ್ಕೆ ಸಮಷ್ಟಿಗೆ ಸಮಾಜಕ್ಕೆ ಭಾಜನವಾಗುವದಿಲ್ಲವೆಂದು ಚೆನ್ನ ಬಸವಣ್ಣ ಅಭಿಪ್ರಾಯ ಪಟ್ಟಿದ್ದಾರೆ .ಸಮಾಜದಲ್ಲಿ ತಮ್ಮ ಪ್ರಭಾವ ಬೀರಲು ಭಾಷಣ ಪ್ರವಚನ ಕೀರ್ತನೆ ಹೇಳುವ ಸಾಧು ಸನ್ಯಾಸಿಗಳು ಹೊರಗಡೆ ಅನೇಕ ಲಾಂಛನಗಳನ್ನು ಧರಿಸಿ ಶಬ್ದದ ಸಂತೆಯಲ್ಲಿ ಲಜ್ಜೆ ತರುವ ಕಾರ್ಯಕ್ಕೆ ಮೂಲವಾಗುತ್ತಾರೆ. ಅಂತರಂಗ ಶುದ್ಧಿಯಿಲ್ಲದ ವೇಷಧಾರಿಗಳು ತಾವೇ ಈಶ ಧಾರಿಗಳೆಂದು ಭ್ರಮಿಸಿ ಜನರನ್ನು ಮೌಢ್ಯಕ್ಕೆ ತಳ್ಳುತ್ತಾರೆ.

ಶರೀರದೊಳಗೆ ಅನೇಕ ಆಶೆ ಆಮಿಷಗಳನ್ನೊಳಗೊಂಡ ಬಾಹ್ಯದಲ್ಲಿ ವೇಷ ಭೂಷಣ ತೊಟ್ಟು ಸಾಧಕರಂತೆ ತೋರಿಕೊಳ್ಳುವುದು ಅನುಭವದ ಕೇಡು .
ಇಂತಹ ಸಾಧಕ ಸ್ವಾಮಿಗಳು ಸಮಾಜದಲ್ಲಿ ಪರಿವರ್ತನೆ ತರುವುದಕ್ಕಿಂತ ಪರಿವರ್ತನೆಗೆ ಮಾರಕವಾಗುತ್ತಾರೆ.. ಪ್ರವಚನವಿರಲಿ ಪುರಾಣ ಪುಣ್ಯ ಕಥೆಗಳಿರಲಿ ಶಬ್ದಗಳ ಕರ್ಕಶ ನಾದಕ್ಕೆ ಭಕ್ತರನ್ನು ಆಕರ್ಷಿಸುವ ಒಂದು ಕುತಂತ್ರ ಪದ್ಧತಿಯಾಗಿದೆ.

ಹೀಗೆ ಹೊರಗೆ ವೇಷಗಳನ್ನು ಲಾಂಛನಗಳನ್ನು ಧರಿಸಿ ಅಂತರಂಗದಲ್ಲಿ ವಿಷಯಗಳಿಗೆ ಚಡಪಡಿಸುವ ಇಂತಹ ವೇಷ ಧಾರಿಗಳ ಕಂಡರೆ ಅದು ಕಾರ ಹುಣ್ಣಿಮೆಯ ಹಬ್ಬದ ಗದ್ದಲ ಗೊಂದಲ ಕೇಕೆ ಹುಮ್ಮಸು ಉನ್ಮಾದ ರಂಗು ರಂಗಿನ ಜಾತ್ರೆ ಮಾತ್ರ .
ಕಾರ ಹುಣ್ಣೆಮೆಯ ಸಂದರ್ಭದಲ್ಲಿ ರೈತರು ಕಾರ್ಮಿಕರು ತಮ್ಮ ಬಿಡುವಿನ ಸಮಯದಲ್ಲಿ ಮೋಜು ಮಸ್ತಿಗಾಗಿ ಹೋರಿಗಳನ್ನು ಶೃಂಗರಿಸಿ ಓಡಿಸುವುದು ಎತ್ತಿನ ಬಂಡಿಗಳ ಓಟದ ಸ್ಪರ್ಧೆ ಏರ್ಪಡಿಸುವುದು ಗಾಳಿ ಪಟಗಳ ಹಾರಾಟ ಅದೊಂದು ಕ್ಷಣಿಕ ಸಾಂದರ್ಭಿಕ ಸಂತಸವನ್ನು ಉಂಟು ಮಾಡುವ ಸನ್ನಿವೇಶ ಮಾತ್ರ .
ಚೆನ್ನ ಬಸವಣ್ಣನವರು ಇಂತಹ ಬಾಹ್ಯ ಲಾಂಛನ ವೇಷ ಹಾಕುವ ಸೋಗಲಾಡಿಗಳ ಆಚರಣೆಯನ್ನು ಕಾರ ಹುಣ್ಣಿಮೆ ದೇಸಿ ಹಬ್ಬಕ್ಕೆ ಹೋಲಿಸಿ ಕೇವಲ ಉತ್ಸಾಹ ಉನ್ಮಾದ ಕ್ಷಣಿಕ ಸುಖ ನೀಡುವ ಆಚರಣೆಗಳನ್ನು ನೀಡುವ ವೇಷಧಾರಿಗಳು ಬದುಕಿನ ನೈಜ ತತ್ವಗಳನ್ನು ನೀಡಲಾರರು.

ಲಿಂಗಕ್ಕೆ ಭಾಜನವಾಗುವದೆಂದರೆ ಭಕ್ತ ತನ್ನನ್ನು ಸಮಷ್ಟಿಗೆ ಅರ್ಪಿಸಿಕೊಳ್ಳುವುದು.
ಅಷ್ಟಾವರಣಗಳ ಕಾಯಗುಣಗಳನ್ನು ಅರಿತು . ಪಂಚಾಚಾರಗಳ ಪ್ರಾಣ ಸ್ವಾಯತ ಮಾಡಿ ,ಷಟಸ್ಥಲಗಳ ಆತ್ಮವನು ಸನ್ನಿಹಿತಗೊಳಿಸುವ ಅದಮ್ಯ ಜ್ಞಾನವೇ ಲಿಂಗ ಯೋಗ.
ಇಂತಪ್ಪ ಸತ್ಯ ಶುದ್ಧ ಕಾಯಕ ನಿಷ್ಠ ದಾಸೋಹ ಪ್ರೇಮಿ ಜಂಗಮ ಜೀವಿಯ ಪ್ರತಿ ನುಡಿಯು ಮಂತ್ರವಾಗುತ್ತವೆ.
ಭಕ್ತನಂಗಳವೇ ವಾರಣಾಸಿ. ಶರಣರು ಸಾಂಸ್ಥಿಕರಣವಲ್ಲದ ಸಹಜವಾದ ಧರ್ಮವನ್ನು ನಿರ್ಮಿಸಿದರು.ಹನ್ನೆರಡನೆಯ ಶತಮಾನದಲ್ಲಿಯೂ ಇಂತಹ ವೇಷಧಾರಿಗಳು ಇದ್ದರು.
ಕಾವಿ ಕಾಷಾಯಾಂಬರವ ಲಾಂಛನಗಳ ತೊಟ್ಟವರನ್ನು ಶರಣರು ಸಮಗ್ರವಾಗಿ ಧಿಕ್ಕರಿಸಿದರು.
ಆದರೆ ವ್ಯತ್ಯಾಸವೆಂದರೆ ಇಂತಹ ವೇಷಧಾರಿಗಳು ಕಾವಿ ಕಾಷಾಯಾಂಬರವ ಲಾಂಛನಗಳನ್ನು ಧರಿಸಿ ತಮ್ಮ ಶ್ರೇಷ್ಠತೆ ಮೆರೆಯುವವರಿಗೆ ಶರಣ ಸಮಾಜವು ಮಣೆ ಹಾಕುತ್ತಿರುವುದು ದುರಂತವೇ ಸರಿ. ಲಿಂಗವನರಿಯದೆ ಏನನ್ನರಿದರೂ ಫಲವಿಲ್ಲ . ಲಿಂಗವನರಿತ ಬಳಿಕ ಮತ್ತನ್ನೇನೂ ಅರಿತರೂ ಫಲವಿಲ್ಲಎಂದಿದ್ದಾರೆ ಶರಣರು.
ಒಟ್ಟಾರೆ ವೇಷ ಭೂಷಣ ಲಾಂಛನ ನೋಡಿ ಮರುಳಾಗದೆ ಅನುಭವ ತತ್ವಗಳ ಬದ್ಧತೆಗೆ ಆದ್ಯತೆ ನೀಡಿ ದಾಸ್ಯತ್ವದಿಂದ ಲಿಂಗಾಯತ ತತ್ವಗಳನ್ನು ಮುಕ್ತಗೊಳಿಸುವ ಕೈಂಕರ್ಯಕ್ಕೆ ನಾವೆಲ್ಲಾ ಮುಂದಾಗಬೇಕು.

ಡಾ.ಶಶಿಕಾಂತ.ಪಟ್ಟಣ ರಾಮದುರ್ಗ -ಪುಣೆ

- Advertisement -
- Advertisement -

Latest News

ವೇದವ್ಯಾಸರ ಸ್ಮರಣಾರ್ಥ ಗುರು ಪೂರ್ಣಿಮಾ

ಗುರುಪೂರ್ಣಿಮಾ ವಿಶೇಷ ಅರಿವಿಗೆ ಅನಂತ ಶಯನನಾಗಿ ಜ್ಞಾನ ಜ್ಯೋತಿ ಬೆಳಗುತ್ತಿರುವ ಗುರಿತೋರುವ ನೇತಾರ ಬದುಕು ಭವಿಷ್ಯದ ಹಾದಿಯ ದಿಟ್ಟ ಹೆಜ್ಜೆಯಿಡಲು ಗುರಿ ತೋರುವ ದೈವದ ಗುರಿಕಾರ ಜ್ಞಾನದ ತೃಷೆಯನ್ನು ತಣಿಸಿದ ಬದುಕನ್ನು ಹದಗೊಳಿಸುವ ಗುರುಬಲದ ಶಿಲ್ಪಿಗಾರ ಸಕಲ ಜ್ಞಾನವಾಹಿನಿ ಜಾಗೃತಿ ಜಗಕೆ...
- Advertisement -

More Articles Like This

- Advertisement -
close
error: Content is protected !!
Join WhatsApp Group