ಬೀದರ – ಬಿಜೆಪಿ ಸರ್ಕಾರದ ಅವಧಿಯಲ್ಲಿನ ಯೋಜನೆಗಳ ವಿರುದ್ದ ಕಾಂಗ್ರೆಸ್ ದ್ವೇಷ ರಾಜಕಾರಣ ಮಾಡುತ್ತಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಭಗವಂತ ಖೂಖಾ ವಾಗ್ದಾಳಿ ನಡೆಸಿದರು.
ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರ ಪ್ರಸ್ತಾಪಿಸಿ ಮಾತನಾಡಿದ ಅವರು, ದ್ವೇಷ ರಾಜಕಾರಣ ಮಾಡ್ತಿರುವ ಕಾಂಗ್ರೆಸ್‌ಗೆ ಜನ ಮುಂದಿನ ದಿನಗಳಲ್ಲಿ ಪಾಠ ಕಲಿಸ್ತಾರೆ. ಕಾಂಗ್ರೆಸ್ ಒಲೈಕೆ ರಾಜಕಾರಣ ಮಾಡದೇ ಸರ್ಕಾರದ ಸ್ಥಿರತೆ ಕಾಪಾಡುವ ಕೆಲಸ ಮಾಡಬೇಕು. ಕಾಂಗ್ರೆಸ್‌ಗೆ ದೇಶ ಅಖಂಡವಾಗಿ ಇರುವುದು ಇಷ್ಟವಿಲ್ಲ, ಛಿದ್ರ ಛಿದ್ರ ಮಾಡೊದು ಇಷ್ಟವಾಗಿದೆ ಎಂದು ತಿವಿದರು.
ಕೈಗಾರಿಕೆಗಳು ಅಭಿವೃದ್ದಿ ಆಗಬೇಕಂದ್ರೆ, ಕಡಿಮೆ ದರದಲ್ಲಿ ವಿದ್ಯುತ್ ನೀಡಬೇಕು.
ಬಿಜೆಪಿ ಅವಧಿಯಲ್ಲೆ ವಿದ್ಯುತ್ ದರ ಏರಿಕೆ ಪ್ರಸ್ತಾಪ ಬಂದಾಗ ನಾವು ಒಪ್ಪಿರಲಿಲ್ಲ ಅಂತ ತಿಳಿಸಿದ್ದೇವೆ. ಈಗ ಕಾಂಗ್ರೆಸ್‌ನವರು ಯಾಕೆ ಒಪ್ಪಿಕೊಂಡಿದ್ದಾರೆ ಎಂದು ಪ್ರಶ್ನೆ ಮಾಡಿದ ಖೂಬಾ, ರಾಜ್ಯ ಸರ್ಕಾರ ಮತಾಂತರ ಕಾಯ್ದೆ ವಾಪಸ್ ತೆಗೆದುಕೊಂಡಿದೆ, ಪಠ್ಯ ಹಿಂತೆಗೆದುಕೊಂಡಿದೆ ಅದೇ ಥರ ವಿದ್ಯುತ್ ದರ ಹೆಚ್ಚಳವನ್ನ ಹಿಂತೆಗೆದುಕೊಳ್ಳಲಿ. ಬೇರೆಯವರಿಗೆ ಯಾಕೆ ಗೂಬೆ ಕೂರಿಸ್ತಿರಿ ಎಂದು ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್‌ನಲ್ಲಿ ಪೂರ್ಣಾವಧಿ ಸಿಎಂ ವಿಚಾರ ಕುರಿತಂತೆ ಮಾತನಾಡಿದ ಅವರು, ಸಿಎಂ ಸ್ಥಾನದ ಕುರಿತು ಇಬ್ಬರ ಮಧ್ಯೆ ಹೊಂದಾಣಿಕೆ ಆಗಿದೆಯೋ ಅಥವಾ ಇಲ್ಲವೋ ಅನ್ನೋದನ್ನು ಕಾಂಗ್ರೆಸ್ ಸಿಎಂ ಹಾಗೂ ಡಿಸಿಎಂ ಇಬ್ಬರೂ ಸಾರ್ವಜನಿಕವಾಗಿ ಸ್ಪಷ್ಟಪಡಿಸಲಿ ಎಂದು ಒತ್ತಾಯಿಸಿದರು.
ವರದಿ: ನಂದಕುಮಾರ ಕರಂಜೆ, ಬೀದರ