ನಾನಾ ಪರೀಕ್ಷೆಗಳ ಮಾಡುವನು ಪರಮೇಷ್ಠಿ
ಸುಖದುಃಖಗಳ ಕೊಟ್ಟು ನೋಡುತಿಹನು
ಸಮಚಿತ್ತವನು ಬಿಡದೆ ಬದುಕಿ ಬಾಳುವವರನ್ನು
ಮೆಚ್ಚಿ ಮೇಲೆತ್ತುವನು – ಎಮ್ಮೆತಮ್ಮ
ಶಬ್ಥಾರ್ಥ
ಪರಮೇಷ್ಠಿ = ಪರಮೇಶ,ಭಗವಂತ
ತಾತ್ಪರ್ಯ
ದೇವರು ಅಷ್ಟು ಸುಲಭವಾಗಿ ಒಲಿಯುವುದಿಲ್ಲ. ಆತನು
ಅನೇಕ ಕಷ್ಟ ಕೊಟ್ಟು ಭಕ್ತನ ಗುಣ ಪರೀಕ್ಷೆ ಮಾಡುತ್ತಾನೆ.
ಆಗ ಆತನು ಸ್ಥಿತಪ್ರಜ್ಞನಾಗಿ ಅವುಗಳನ್ನು ತಾಳಿಕೊಂಡರೆ
ಬಳಿಗೆ ಬರುತ್ತಾನೆ. ದೇವರ ದಾಸಿಮಯ್ಯ ಮಗ್ಗದಲ್ಲಿ
ಒಂದು ಸುಂದರವಾದ ಬಟ್ಟೆ ನೇದು ಮಾರಾಟ ಮಾಡಲು
ಪೇಟೆಗೆ ಹೋಗುತ್ತಾನೆ. ಬೆಳಗಿನಿಂದ ಬೈಗಿನವರೆಗೆ ಕೊಳ್ಳಲು
ಯಾರು ಬರುವುದಿಲ್ಲ. ಕಡೆಗೆ ದೇವ ಮುದುಕನ ವೇಷದಲ್ಲಿ
ಬಂದು ಬೆಲೆ ಕೇಳುತ್ತಾನೆ.ಅದನ್ನು ಎರಡು ತುಂಡು ಮಾಡಿ
ಬೆಲೆ ಕೇಳುತ್ತಾನೆ .ದಾಸಿಮಯ್ಯ ತಾಳ್ಮೆಯಿಂದ ಅರ್ಧ ಬೆಲೆ
ಹೇಳುತ್ತಾನೆ. ಮತ್ತೆ ನಾಲ್ಕು ತುಂಡು ಮಾಡಿ ಬೆಲೆ ಕೇಳುತ್ತಾನೆ.
ದಾಸ ಅದರ ಗಿರ್ದ ಬೆಲೆ ಹೇಳುತ್ತಾನೆ.ಹಾಗೆ ತುಂಡು ಮಾಡಿ
ಕೇಳಿದಂತೆ ಸಹನೆಯಿಂದ ದಾಸ ಹೇಳುತ್ತ ಹೋಗುತ್ತಾನೆ.
ಆಗ ಶಿವ ಪ್ರತ್ಯಕ್ಷವಾಗಿ ಆತನಿಗೆ ಎಂದೂ ಬರಿದಾಗದ
ಅಕ್ಷಯವಾಗುವ ತವನಿಧಿ ನೀಡುತ್ತಾನೆ. ಆ ಸಂದರ್ಭದಲ್ಲಿ
ದಾಸಿಮಯ್ಯ ಒಂದು ವಚನ ಬರೆಯುತ್ತಾನೆ. “ಹರ ತನ್ನ
ಭಕ್ತರನು ತಿರಿವಂತೆ ಮಾಡುವನು, ಅರೆದು ನೋಡುವನು
ಚಂದನದ ಕೊರಡಿನಂತೆ, ಅರೆದು ನೋಡುವನು ಕಬ್ಬಿನ
ಕೋಲಿನಂತೆ, ಒರೆದು ನೋಡುವನು ಸುವರ್ಣದ ಚಿನ್ನದಂತೆ,
ಬೆದರದೆ ಬೆಚ್ಚದೆ ಇದ್ದಡೆ ಕರವಿಡಿದೆತ್ತಿಕೊಂಬ ರಾಮನಾಥ”
ಸಹನೆಯಿದ್ದವನಿಗೆ ಸದಾಶಿವನೊಲಿಯುವುದು ಖಚಿತ.
ರಚನೆ ಮತ್ತು ವಿವರಣೆ ಎನ್.ಶರಣಪ್ಪ ಮೆಟ್ರಿ
ಮೊ. 9449030990