ಮೂಡಲಗಿ – ದಿ. ೨೮ ರಂದು ಮೂಡಲಗಿ ಪುರಸಭೆಗೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ನಡೆಯಲಿದೆ ಇದರಿಂದಾಗಿ ನಗರದಲ್ಲಿ ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿವೆ ಎಂಬುದಾಗಿ ಜನತೆ ಮಾತನಾಡುತ್ತಿದ್ದಾರೆ.
ಅದರಲ್ಲೇನಿದೆ, ಅರಭಾವಿ ಶಾಸಕರು ಯಾರ ಹೆಸರು ಹೇಳುತ್ತಾರೋ ಅವರೇ ಅಧ್ಯಕ್ಷ ಉಪಾಧ್ಯಕ್ಷರಾಗುತ್ತಾರೆ. ಅವರು ಯಾರೇ ಇರಲಿ, ಹೇಗೇ ಇರಲಿ ಶಾಸಕರ ಕಣ್ಣಿಗೆ ಹಾಗೂ ಕೃಪಾದೃಷ್ಟಿಗೆ ಬೀಳಬೇಕು ಅಷ್ಟೇ ಎಂಬುದಾಗಿಯೂ ಸಾರ್ವಜನಿಕರು ಮಾತನಾಡಿಕೊಳ್ಳುತ್ತಿರುವುದು ಸುಳ್ಳಲ್ಲ. ಇದು ಮೂಡಲಗಿ ತಾಲೂಕಿನ ಪಟ್ಟಣ ಪಂಚಾಯಿತಿಯ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯಲ್ಲೂ ಸಾಬೀತಾಗಿರುವುದು ಸುಳ್ಳಲ್ಲ.
ಅದೇನೇ ಇರಲಿ, ಯಾರೇ ಅಧ್ಯಕ್ಷರಾದರೂ ಜನರು ನಿರೀಕ್ಷೆ ಮಾಡುವುದು ಊರಿನ ಬೆಳವಣಿಗೆ ಮಾತ್ರ. ನಗರದಲ್ಲಿ ರಸ್ತೆಗಳು ಚೆನ್ನಾಗಿರಬೇಕು, ಬೀದಿ ದೀಪಗಳು ಚೆನ್ನಾಗಿರಬೇಕು, ಗಟಾರುಗಳು ಗಬ್ಬು ನಾತದಿಂದ ತುಂಬಿರಬಾರದು, ಸಾರ್ವಜನಿಕ ಶೌಚಾಲಯಗಳು ಸ್ವಚ್ಛವಾಗಿರಬೇಕು, ಹಂದಿಗಳ ಕಾಟ ಇರಬಾರದು, ಬೀದಿ ನಾಯಿಗಳು ಯಾರಿಗೂ ತೊಂದರೆ ಮಾಡಬಾರದು…..ಇವೇ ಮೊದಲಾದ ಸಮಸ್ಯೆಗಳ ಬಗ್ಗೆ ಜನ ಚಿಂತಿತರಾಗಿರುತ್ತಾರೆ.
ಇನ್ನೊಂದು ಸಂಗತಿಯೆಂದರೆ ಮನೆಪಾಳಿ, ನೀರಪಾಳಿಯ ಹೆಸರಿನಲ್ಲಿ ಜನರ ಲೂಟಿಯಾಗದಂತೆ ಆಡಳಿತ ಮಂಡಳಿಯವರು ತಡೆಯಬೇಕು ಇದರಲ್ಲಿ ಸರ್ಕಾರದ ಪಾತ್ರ ಇರುತ್ತದೆಯಾದರೂ ಕೆಲವೊಮ್ಮೆ ಭಿಕ್ಷುಕರ ನಿಧಿ, ಶಿಕ್ಷಣ ನಿಧಿ, ಸ್ವಚ್ಛತಾ ನಿಧಿ ಅಂತೆಲ್ಲ ವಿನಾಕಾರಣ ದುಡ್ಡು ಪೀಕುವ ಕೆಲಸ ನಡೆದಿರುತ್ತದೆ. ಆದರೆ ಯಾವ ಭಿಕ್ಷುಕನ ಉದ್ಧಾರವಾಗುತ್ತದೆ ? ಯಾವ ಶಾಲೆಗೆ ಪುರಸಭೆಯವರು ನಿಧಿ ಒದಗಿಸುತ್ತಾರೆ ? ಯಾವ ಬೀದಿಯಲ್ಲಿ ಸ್ವಚ್ಛತೆ ಇರುತ್ತದೆ ? ಎಲ್ಲ ಕಡೆಯೂ ತಿಪ್ಪೆಗಳದ್ದೇ ದರ್ಬಾರು ಇರುತ್ತದೆ. ಇಂಥ ಸಮಸ್ಯೆಗಳ ಬಗ್ಗೆ ಅಧ್ಯಕ್ಷ ಉಪಾಧ್ಯಕ್ಷರು ಗಮನ ಕೊಡಬೇಕು.
ಇಲ್ಲಿಯವರೆಗೆ ಬಂದ ಅಧ್ಯಕ್ಷ ಉಪಾಧ್ಯಕ್ಷರಷ್ಟೇ ಅಲ್ಲ ಇಡೀ ಆಡಳಿತ ಮಂಡಳಿಯೇ ಮೂಡಲಗಿ ನಗರದ ಅಭಿವೃದ್ಧಿ ಯಲ್ಲಿ ಪಾಲ್ಗೊಂಡು ಊರು ಉದ್ಧಾರ ಮಾಡಿದ್ದನ್ನು ನಗರದ ಜನರೇ ನೋಡಿದ್ದಾರೆ. ಅದರಲ್ಲೂ ಈ ಹಿಂದೆ ಇದ್ದ ಮುಖ್ಯಾಧಿಕಾರಿ ಹರ್ದಿಯವರ ದುರಾಡಳಿತ, ಭ್ರಷ್ಟಾಚಾರ ನಗರದ ವ್ಯವಸ್ಥೆಯನ್ನೇ ಹದಗೆಡಿಸಿದ್ದು ಸುಳ್ಳಲ್ಲ. ಅವರ ವಿರುದ್ಧ ಪೊಲೀಸ್ ದೂರು ಕೊಟ್ಟರೂ ನಾವೇನೂ ಮಾಡಲಾಗಲಿಲ್ಲ ಅಷ್ಟೊಂದು ಪವರ್ ಫುಲ್ ಆಗಿದ್ದರು ಹರ್ದಿ ಸಾಹೇಬರು. ಪುರಸಭೆಯ ಜಾಗವನ್ನು ಅವರು ಯಾರಿಗೇ ಕೊಟ್ಟರೂ ನಡೆಯುತ್ತಿತ್ತು, ಯಾರದೇ ಜಾಗದಲ್ಲಿ ಬೇರೆ ಯಾರಾದರೂ ಶೆಡ್ ಹಾಕಿಕೊಂಡು ಇರಬಹುದಿತ್ತು ಹಾಗೆ ಅವರು ಜನರ ಮೇಲೆ ಕೃಪಾದೃಷ್ಟಿ ಬೀರಿದ್ದರು. ಅವರ ದುರಾಡಳಿತದ ಬಗ್ಗೆ ಎಷ್ಟು ಮಾತನಾಡಿದರೂ ಸಾಲದು….ಹೋಗಲಿ ಬಿಡಿ. ಈಗಿರುವ ಮುಖ್ಯಾಧಿಕಾರಿಗಳು ಸ್ವಲ್ಪ ಭರವಸೆ ಮೂಡಿಸಿದ್ದಾರೆ. ಗಬ್ಬೆದ್ದು ಹೋಗಿದ್ದ ಪುರಸಭೆಯ ಆವರಣ ಲಕಲಕ ಎನ್ನುತ್ತಿದೆ. ನಗರದ ಕೆಲವು ಕಡೆ ಸ್ವಚ್ಛತೆ ಕಾಣುತ್ತಿದೆ. ಸಿಬ್ಬಂದಿಗಳಲ್ಲಿ ಚುರುಕು ಮೂಡಿದೆ, ಮುಖ್ಯಾಧಿಕಾರಿಗಳ ಖಡಕ್ ಆದೇಶದ ಭಯವಿದೆ. ನೂತನವಾಗಿ ಅವರು ಆಗಮಿಸಿದಾಗ ಭೇಟಿಯಾಗಲು ಹೋದ ಪತ್ರಕರ್ತರಿಗೆ ಅವರು ಭರವಸೆ ನೀಡಿದ್ದಾರೆ. ಯಾವುದೇ ಸಮಸ್ಯೆ ಇದ್ದರೂ ಮೊದಲು ನನ್ನ ಗಮನಕ್ಕೆ ತನ್ನಿ, ಅದು ಆಗದಿದ್ದರೆ ನಿಮ್ಮ ಪತ್ರಿಕೆಗಳಲ್ಲಿ ಬರೆಯಿರಿ ಎಂದಿದ್ದಾರೆ……ಕಾದು ನೋಡೋಣ….
ಇದೆಲ್ಲದರ ಜೊತೆಗೆ ಮೂಡಲಗಿ ನಗರದ ನೂತನ ಅಧ್ಯಕ್ಷ ಉಪಾಧ್ಯಕ್ಷರಿಂದಲಾದರೂ ನಗರ ಅಭಿವೃದ್ಧಿ ಕಾಣಲಿ ಎಂಬುದೇ ನಮ್ಮೆಲ್ಲರ ಆಶಯ. ಒಂದು ವೇಳೆ ಅವರೂ ಎಲ್ಲರಂತೆ ಗುಮ್ಮನ ಗುಸಗ ಆಡಳಿತ ಮಾಡಿಬಿಟ್ಡರೆ ಮೂಡಲಗಿ ಪರಿಸ್ಥಿತಿ ಮಾತ್ರ ನಿಂತ ನೀರಾಗುವುದರಲ್ಲಿ ಸಂದೇಹವಿಲ್ಲ
ಉಮೇಶ ಬೆಳಕೂಡ, ಮೂಡಲಗಿ