ಬೇಕಾದುದೇನೆಂದು ತಿಳಿದಿಲ್ಲ ಈ ವರೆಗು ಸಾಕೆನುವ ಸದ್ಬುದ್ಧಿ ಹೊಳೆಯಲಿಲ್ಲ. ವಾಕರಿಕೆ ಬರುವಷ್ಟು ಬೇಡಾದ ವಿಷಯಗಳು ತೇಕಾಟ ತರುತಿಹವು ವಿಶ್ವಗುರುವೆ.
ಅಂಚೆಯೊಂದಿಗೆ ಪತ್ರ ವ್ಯವಹಾರ ಸುಲಲಿತವು
ಲಂಚವಿಲ್ಲದ ವೈದ್ಯ ಆರೋಗ್ಯವು
ವಂಚಿಸದ ಲೆಕ್ಕಪರಿಶೋಧಕನು ಉತ್ತಮನು
ಮಿಂಚುವರು ಬದುಕಿನಲಿ ವಿಶ್ವಗುರುವೆ.
ನಾಳೆ ಹೇಗೆಂಬುದನು ಇಂದೇಕೆ ಯೋಚಿಸುವೆ
ದಾಳ ಉರುಳಿಸುವಾತ ಚತುರನಿಹನು
ಬಾಳ ಚದುರಂಗದಲಿ ಸಿಹಿ ಕಹಿಯ ಫಲಗಳನು
ಕೇಳಿ ಕೊಡುವನೆ ಹೇಳು ವಿಶ್ವಗುರುವೆ.
ಗುರುವಿನಿಂ ಜ್ಞಾನವನು ತಂದೆಯಿಂ ಶಿಸ್ತನ್ನು
ವರವಾಗಿ ತಾಯಿಯಿಂ ಸಂಸ್ಕಾರವ
ಅರಿವಿನಿಂ ಪಡೆದುಳಿದ ಕರಕುಶಲ ನೀ ಕಲಿಯೊ
ಹಿರಿದಾದ ಜಗದೊಳಗೆ ವಿಶ್ವಗುರುವೆ.
ಅವನೊಬ್ಬ ಕಲೆಗಾರ ಅವನಿ ಮಾಡಿಹನಲ್ಲ
ಪವನ ರೂಪದಿ ಭುವನ ಸುತ್ತುತಿಹನು
ನೆವ ಮಾಡಿ ಆಗಾಗ ಜವರಾಯನಂತಾಗಿ
ಅವತಾರ ತೋರುವನು ವಿಶ್ವಗುರುವೆ.
ಸಂಸಾರವೆಂಬುವುದು ಸಂಕಟದ ರಸದೂಟ
ಸಂಶಯದ ಎಳೆಯೊಂದು ನುಸುಳದಿರಲಿ
ಕಂಸನಂತವನೊಬ್ಬ ಹಿಂಸಾತ್ಮನೊಡನಾಟ
ವಂಶಾಂತರಕುಬೇಡ ವಿಶ್ವಗುರುವೆ.
ಅಂಬರದ ಅಂಗಳದಿ ತೇಲುತಿಹ ಮೋಡಗಳು
ಉಂಬಳಿಯ ಮಳೆಹನಿಯ ಸುರಿಸುತಿಹವು
ಸಂಭ್ರಮದ ಸೋಗಿನಲಿ ಜಂಭಪಡುತಿದೆ ಭುವನ
ಶಂಭುಶಂಕರನಾಟ ವಿಶ್ವಗುರುವೆ.
ಬಾಳ ಬಂಡಿಯ ಹೂಡು ವೇಳೆ ಗಮನಿಸಿ ನೋಡು
ದಾಳಿ ಮಾಡುವ ವಿಧಿಯ ಸಲುಗೆಬೇಡ
ತಾಳ ತಪ್ಪಿಸಿ ಹಾಳು ಗೀಳುಗಳ ಪಸರಿಪನು
ಊಳಿಗವ ಮರೆಯದಿರು ವಿಶ್ವಗುರುವೆ.
ನೋಡುತಲಿ ಹಿಂದಕ್ಕೆ ಅನುಭವಾಮೃತ ಪಡೆದು
ದೂಡುತಿರು ಜೀವನವ ಭವಿತದೆಡೆಗೆ
ಕಾಡುತಿರೆ ಸುತ್ತಲೂ ಅರಿವನೆಸಗುವ ಮಾತು
ನೀಡು ಪಾದಕೆ ಚಲನೆ ವಿಶ್ವಗುರುವೆ.
ಸಾರವಿಲ್ಲದ ನುಡಿಯ ಯಾರು ನುಡಿದರು ಸರಿಯೆ
ದಾರಿ ತೋರುವ ಕುರುಹು ಆಗಬಹುದೆ
ಭಾರವಾಗುವ ಹಾಗೆ ಕ್ರೂರ ಮಾತಿನ ವರಸೆ
ಮಾರಕವು ಮನಸಿಂಗೆ ವಿಶ್ವಗುರುವೆ.
ನಂಬಿಕೆಯ ಬಲದಿಂದ ಇಂಬು ದೊರೆವುದು ನೋಡು
ಹಂಬಲವು ಇರಬೇಕು ನೀತಿಯೊಡನೆ
ಬೆಂಬಲವು ದೊರೆಯುವುದು
ಶಂಭು ಶಂಕರನಾಣೆ
ಸಂಭವಿಸುವನು ಮನದಿ ವಿಶ್ವಗುರುವೆ.
ಶರಭಯ್ಯ ಸ್ವಾಮಿ ಹಿರೇಮಠ ತುರ್ವಿಹಾಳ.