spot_img
spot_img

ಪದ್ಮಶ್ರೀ ಬಿ ಜಯಶ್ರೀ

Must Read

- Advertisement -

ಶ್ರೀಮತಿ ಬಿ ಜಯಶ್ರೀ ಅವರು ಹುಟ್ಟಿದ್ದು ಜೂನ್ 9, 1950 ರಂದು. ತಂದೆ ಬಸವರಾಜ್ ಅವರು, ತಾಯಿ ಜಿ ವಿ ಮಾಲತಮ್ಮನವರು.

ಗುಬ್ಬಿ ವೀರಣ್ಣನವರ ಮೊಮ್ಮಗಳಾದ ಬಿ ಜಯಶ್ರೀ ಅವರು ನಾಲ್ಕು ವರ್ಷದ ವಯಸ್ಸಿನಲ್ಲೇ ನಾಟಕ ರಂಗಕ್ಕೆ ಬಂದವರು. ಮೊದಲು ವೃತ್ತಿ ರಂಗಭೂಮಿ, ನಂತರದಲ್ಲಿ ಹವ್ಯಾಸಿ ರಂಗಭೂಮಿಗೆ ಬಂದು, ಮುಂದೆ ಸಿನಿಮಾ ಮತ್ತು ದೂರದರ್ಶನದಲ್ಲೂ ತಮ್ಮ ಪ್ರತಿಭೆ ಮಾತ್ರದಿಂದ ಪ್ರಕಾಶಿಸುತ್ತಿರುವ ಬಿ ಜಯಶ್ರೀ ಅವರು ರಾಜ್ಯಸಭಾ ಸದಸ್ಯರೂ ಆಗಿದ್ದರು.

ದೆಹಲಿಯ ರಾಷ್ಟ್ರೀಯ ನಾಟಕಶಾಲೆಯಲ್ಲಿ ತರಬೇತು ಪಡೆದ ಜಯಶ್ರೀ ಅವರು ಕನ್ನಡ ಹವ್ಯಾಸಿ ರಂಗಭೂಮಿಯಲ್ಲಿ ಪ್ರಧಾನ ಹೆಸರು ಮಾಡಿರುವ ‘ಸ್ಪಂದನ’ ನಾಟಕ ತಂಡವನ್ನು ಹುಟ್ಟುಹಾಕಿದವರು. ಅವರು ಆದರ್ಶ ಫಿಲಂ ಇನ್‌ಸ್ಟಿಟ್ಯೂಟಿನ ಉಪನ್ಯಾಸಕಿಯಾಗಿ ಸಹಾ ಜವಾಬ್ಧಾರಿ ನಿರ್ವಹಿಸಿದ್ದಾರೆ. ಬಾಲಭವನದಂತಹ ಕೇಂದ್ರಗಳಲ್ಲಿ ಕ್ರಿಯಾತ್ಮಕವಾಗಿ ದುಡಿದಿದ್ದಾರೆ.

- Advertisement -

ನಾಟಕಗಳಲ್ಲಿ ಅಭಿನಯ, ನಿರ್ದೇಶನಗಳನ್ನು ಒಳಗೊಂಡಂತೆ ಎಲ್ಲ ರೀತಿಯಲ್ಲಿ ಸಕ್ರಿಯರಾಗಿದ್ದ ಜಯಶ್ರೀ ಅವರ ಕಂಚಿನ ಕಂಠ ಮೋಹಕವಾದದ್ದು. ಉತ್ತಮ ಪ್ರತಿಭೆಗಳನ್ನು ಬಳಸುವುದರಲ್ಲಿ ವಿಳಂಬ ಮಾಡುವ ಚಿತ್ರರಂಗ ಬಿ. ಜಯಶ್ರೀ ಅವರ ವಿಚಾರದಲ್ಲೂ ಹಾಗೆಯೇ ಮಾಡಿತು. ಎಂ. ಎಸ್. ಸತ್ಯು, ನಾಗಾಭರಣ ಅಂತಹವರ ಕೆಲವು ಚಿತ್ರಗಳಲ್ಲಿ ಅಲ್ಲಲ್ಲಿ ಮಾತ್ರ ನಟಿಸಿದ ಜಯಶ್ರೀ ಅವರು ಹಾಡಿರುವ ಚಿತ್ರಗೀತೆಗಳಲ್ಲಿ ಚಕ್ಕೋತ ಚಕ್ಕೋತ, ಕಾರ್ ಕಾರ್ ಕಾರ್ ಮುಂತಾದ ಹಾಡುಗಳು ಅಪಾರ ಜನಪ್ರಿಯವಾಗಿವೆ.

ನಾಗಮಂಡಲ, ತಾಯಿ, ಬ್ಯಾರಿಸ್ಟರ್, ಕರಿಮಾಯಿ, ಲಕ್ಷಾಪತಿ ರಾಜನ ಕತೆ, ವೈಶಾಖ ಮುಂತಾದ ಹಲವಾರು ನಾಟಕಗಳು ಬಿ. ಜಯಶ್ರೀ ಅವರ ಅನನ್ಯ ಕಲಾಸೇವೆಯನ್ನು ನಿರಂತರ ಸ್ಮರಿಸುವಂತೆ ಮಾಡಿವೆ. ಗುಬ್ಬೀ ಕಂಪೆನಿಯ ಪ್ರಸಿದ್ಧ ನಾಟಕವಾದ ‘ಸದಾರಮೆ’ಗೆ ಕೂಡಾ ಅವರು ಇತ್ತೀಚಿನ ವರ್ಷದಲ್ಲಿ ಪುನರ್ಜೀವ ಕೊಟ್ಟರು. ದೇಶ ವಿದೇಶಗಳಲ್ಲಿ ಅವರ ನಿರ್ಮಾಣ, ನಿರ್ದೇಶನ, ಅಭಿನಯಗಳು ಜನಮೆಚ್ಚುಗೆ ಪಡೆದಿವೆ.

1996ರ ವರ್ಷದ ಅಖಿಲ ಭಾರತ ಸಂಗೀತ ನಾಟಕ ಅಕಾಡೆಮಿ ಗೌರವದ ಪುರಸ್ಕಾರವನ್ನೂ ಒಳಗೊಂಡಂತೆ ಜಯಶ್ರೀ ಅವರಿಗೆ ವಿವಿಧ ರೀತಿಯ ಗೌರವಗಳು ಸಂದಿವೆ. ರಂಗಭೂಮಿಯಲ್ಲಿ ಅಪಾರ ಸೇವೆ ಸಲ್ಲಿಸುವುದರ ಮೂಲಕ ರಂಗಾಯಣದ ನಿರ್ದೇಶಕಿಯಾಗಿ ಸಹಾ ಕೆಲವು ಕಾಲ ಕೆಲಸ ಮಾಡಿ ಹೊರಬಂದ ಜಯಶ್ರೀ ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡಿದಾಗ ಇಡೀ ಕನ್ನಡ ನಾಡೇ ಸಂತಸಪಟ್ಟಿತು.

- Advertisement -

ಇತ್ತೀಚಿನ ವರ್ಷದಲ್ಲಿ ಅವರಿಗೆ ಪದ್ಮಶ್ರೀ ಗೌರವ ಸಂದಿರುವುದು ಕನ್ನಡಿಗರ ಸಂತಸವನ್ನು ಇಮ್ಮಡಿಸಿದೆ.

ಕಲೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿರುವ
ಶ್ರೀಮತಿ ಬಿ ಜಯಶ್ರೀ ಅವರಿಗೆ ಜನ್ಮದಿನದ ಹಾರ್ದಿಕ ಶುಭ ಹಾರೈಕೆಗಳನ್ನು ಸಲ್ಲಿಸೋಣ.

- Advertisement -
- Advertisement -

Latest News

ಕವನ : ಗೊಂಬೆಗಳ ಕಣ್ಣೀರು

ಗೊಂಬೆಗಳ ಕಣ್ಣೀರು ಅಂದು ನಾವು ಅಪ್ಪ ಅವ್ವನನ್ನು ಕಾಡಿ ಬೇಡಿ ಗೊಂಬೆಗಳಿಗಾಗಿ ಅಳುತ್ತಿದ್ದೆವು ಜಾತ್ರೆ ಉತ್ಸವದಲ್ಲಿ ಹಿರಿಯರಿಗೆ ದೇವರ ಮೇಲಿನ ಭಕ್ತಿ ನಮಗೋ ಬಣ್ಣ ಬಣ್ಣದ ಗೊಂಬೆಗಳ ಮೇಲೆ ಆಸಕ್ತಿ ಅವ್ವ ಹೇಗೋ ಮಾಡಿ ಅಪ್ಪನ ತುಡುಗಿನಲಿ ತನ್ನಲಿದ್ದ ದುಡ್ಡು ಕೊಟ್ಟು ತಂದಳು ಗೊಂಬೆಗಳ ಮಿತಿ ಇರಲಿಲ್ಲ...
- Advertisement -

More Articles Like This

- Advertisement -
close
error: Content is protected !!
Join WhatsApp Group