ಬಸವಣ್ಣ ನಿನ್ನ ಹೆಸರಲಿ
ಬಸವಣ್ಣ
ಶತ ಶತಮಾನ ಕಳೆದವು
ಕತ್ತಲು ಕಗ್ಗತ್ತಲು.
ಮೇಲೆ ಕಾರ್ಮೋಡ
ಮಿಣುಕು ಬೆಳಕಿನ ಮಧ್ಯೆ
ನಡುಕ ಹುಟ್ಟುವ ಪಯಣ.
ನಿನ್ನ ಹೆಸರಲ್ಲಿ
ಕಾವಿಗಳ ಕಾಟ
ಜಾತ್ರೆ ಯಾತ್ರೆ
ಮೋಜು ಮಸ್ತಿ
ಮಠದ ಮುಂದೆ
ನಿಂತಿಲ್ಲ ಕುಸ್ತಿ
ನಿಮ್ಮ ವಚನ
ತಿರುಚಿದ್ದಾರೆ ಕದ್ದಿದ್ದಾರೆ
ಆದರೂ ಮೆರೆಯುತ್ತಾರೆ .
ನಿನ್ನ ಧರ್ಮಕ್ಕೆ ನಡೆದವು
ಅಬ್ಬರದ ಸಮಾವೇಶ
ಹಾಕಿದೆವು ಕೂಗು ಕೇಕೆ
ಸಿಗಲಿಲ್ಲ ಮಾನ್ಯತೆ
ಹೀಗಾಗಿ ಈಗ
ಕೋರ್ಟ್ ನಲ್ಲಿ ವ್ಯಾಜ್ಯ
ನೀನು ಬರಬೇಕು
ಸಾಕ್ಷಿ ಹೇಳಲು .
ಬೇರೆ ಬೇರೆ ಎಂದವರೇ
ಈಗ ಒಂದು ಎಂದು
ಕೈ ಕೈ ಮಿಲಾಯಿಸಿದೆವು .
ನಿನ್ನ ಹೆಸರಲ್ಲಿ ಗುಡಿ ಮಠ
ಆಚಾರ್ಯರ ಹೆಸರಲ್ಲಿ
ನಿಗಮ ಮಂಡಳಿ
ದಲಿತರ ಹೊಟ್ಟೆಯ ಮೇಲೆ
ಕಾಲಿಟ್ಟಿದ್ದೇವೆ.
ಅವರ ಹಕ್ಕು ಕಸಿದುಕೊಳ್ಳುತ್ತೇವೆ
ನಿನ್ನ ನಂಬಿದವರೆಲ್ಲರಿಗೂ
ಓ ಬಿ ಸಿ ಸವಲತ್ತು .
ಬಡವರಿಗೆ ದಲಿತರಿಗೆ ಕುತ್ತು .
ಕಾವಿಗಳ ಖಾದಿಗಳ ಮಿಲನ
ಸರಕಾರ ಉಳಿಸಿಕೊಳ್ಳುವ ಯತ್ನ
ಹೊ… ಮರೆತಿದ್ದೆ
ಮೊನ್ನೆ ಪಾರ್ಲಿಮೆಂಟಲ್ಲಿ
ಅವ್ವ ನಿಮ್ಮ ಹೆಸರು ಹೇಳಿ
ಬಜೆಟ್ ಮಂಡಿಸಿದಳು
ಕಾಯಕ ದಾಸೋಹದ ಜೊತೆಗೆ
ಹಾದಿಯನ್ನು ನೆನೆದಳು
ಟಿ ವಿ ಫೇಸ್ ಬುಕ್ ವಾಟ್ಸ್ ಅಪ್
ತುಂಬಾ ಅದೇ ಸುದ್ಧಿ
ನಾವು ಹಿಗ್ಗಿ ಹೀರೆಕಾಯಿಯಾಗಿದ್ದೆವು.
ಬಸವಣ್ಣ ಈಗೀಗ ಇಲ್ಲಿಕೆಲವರು
ಮತ್ತೆ ಕಲ್ಯಾಣ ಹುಡುಕುತ್ತಿದ್ದಾರೆ .
ಬದುಕುತ್ತಿದ್ದೇವೆ ಬಸವಣ್ಣ
ನಾವೆಲ್ಲಾ ನಿನ್ನ ಹೆಸರು ಹೇಳುತ್ತಾ
ತೇರು ಎಳೆದು ಸ್ವಾಮಿ ಹೊತ್ತು
ಬದುಕಿದ್ದೇವೆ ಮುಂದೆಯೂ
ಬದುಕುತ್ತೇವೆ ನಿನ್ನ ಸ್ಮರಣೆ ಹೊತ್ತು
ಡಾ. ಶಶಿಕಾಂತ .ಪಟ್ಟಣ ರಾಮದುರ್ಗ. 9002002338