spot_img
spot_img

ಹೊಸ ಪುಸ್ತಕ ಓದು: ಸ್ಮರಣೀಯರು

Must Read

- Advertisement -

ಸ್ಮರಣೀಯರು

ಲೇಖಕರು: ನಗರ್ಲೆ ಶಿವಕುಮಾರ

ಪ್ರಕಾಶಕರು: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ನಗರ ಘಟಕ ಮೈಸೂರು ೨೦೨೩

ಸಂಪರ್ಕವಾಣಿ: ೯೮೪೫೬೦೯೬೫೨ 

- Advertisement -

ಇತಿಹಾಸವೆಂಬುದು ಅಸಂಖ್ಯಾತ ಜೀವನಚರಿತ್ರೆಗಳ ಸಾರಸರ್ವಸ್ವ ಎನ್ನುತ್ತಾನೆ ಕಾರ್ಲೈಲ್. ಜೀವನ ಚರಿತ್ರೆಗಳು ರಸಾರ್ದ್ರವಾದಾಗ ಇತಿಹಾಸವೂ ರಸದರ್ಶನವೆನಿಸುತ್ತದೆ. ಇಡೀ ಜನಾಂಗದ ಕನಸು-ಕನವರಿಕೆಗಳ, ಆದರ್ಶ-ಯಥಾರ್ಥಗಳ, ಹೋರಾಟ-ಗೆಲವುಗಳ, ಸೋಲು-ಛಲಗಳ, ಆತ್ಮವಿಕಾಸದ ಮೆಟ್ಟಿಲುಮೆಟ್ಟಿಲುಗಳ, ಸಂಸ್ಕೃತಿ ಸಂದೋಹದ, ವೈಚಾರಿಕ ದೋಹನದ, ನಾಗರಿಕತೆಯ ವಿಕಸನದ, ಮಾನವತೆಯ ಮಹಾಯಾತ್ರೆಯ ಕಲಾತ್ಮಕ ನಿರೂಪಣೆಯಾಗುತ್ತದೆ. ಆಯಾ ಕಾಲದ ಮೌಲ್ಯಪ್ರಜ್ಞೆಗೆ ಅನುಗುಣವಾಗಿ ಸಾರ್ವಕಾಲಿಕ ಮೌಲ್ಯದ ಪುನರ್ದರ್ಶನದ ವಿವರಣೆಯಾಗುತ್ತದೆ.

ಮೇಲಿನ ಮಾತುಗಳ ಹಿನ್ನೆಲೆಯಲ್ಲಿ ನಗರ್ಲೆ ಶಿವಕುಮಾರ ಅವರು ‘ಸ್ಮರಣೀಯರು’ ಎಂಬ ತಮ್ಮ ನೂತನ ಕೃತಿಯಲ್ಲಿ ಪ್ರಾತಃಸ್ಮರಣೀಯ ವ್ಯಕ್ತಿಗಳ ಜೀವನ ಸಾಧನೆಯ ವಿವರಗಳನ್ನು ನೀಡುವ ಪ್ರಯತ್ನ ಮಾಡಿದ್ದಾರೆ. ಅವರು ಈ ಕೃತಿಯಲ್ಲಿ ಚಿತ್ರಿಸಿದ ಹಿರಿಯರೆಲ್ಲರೂ ನಾಡಿಗೆ ಆದರ್ಶಪ್ರಾಯರು, ಸಮಾಜಕ್ಕೆ ಒಳಿತನ್ನು ಬಯಸುವ ಉದಾರ ಮನೋಭಾವದವರು ಎಲ್ಲಕ್ಕೂ ಮಿಗಿಲಾಗಿ ಪಾಶ್ಚಿಮಾತ್ಯ ವಿದ್ವಾಂಸ ಬೆಂಜಾಮಿನ್ ಫ್ರಾಂಕ್ಲಿನ್ ಹೇಳುವಂತೆ-

If you would not be forgotton

- Advertisement -

As soon as you are dead and rotton

Either write thing worth reading;

Or do thing worth writing 

[ಸಾವನಪ್ಪಿ ದೇಹ ಕೊಳೆತು ಹೋದರೂ

ನಿನ್ನ ಹೆಸರು ಅಮರವಾಗಿ ಉಳಿಯಲು

ಜನರು ಓದಿ ಒಳಿತು ಪಡೆವ ಗ್ರಂಥವೊಂದ ಬರೆ;ಇಲ್ಲ, ಇಂಥ ರಚನೆಗೆ ತಿರುಳು ನೀಡುವ ಕಾರ್ಯವೊಂದಗೈ]

ನಗರ್ಲೆ ಶಿವಕುಮಾರ ಅವರು ಚಿತ್ರಿಸಿರುವ ವ್ಯಕ್ತಿಗಳೆಲ್ಲರೂ ಬೆಂಜಾಮಿನ್ ಫ್ರಾಂಕ್ಲಿನ್ ಹೇಳಿದ ಎರಡೂ ಕಾರ್ಯಗಳಿಗೆ ಭಾಜನರಾದವರು. ಅವರು ಜನರು ಕುಳಿತು ಓದಿ ಒಳಿತು ಪ್ರೇರಣೆ ಸ್ಫೂರ್ತಿ ಪಡೆವ ಪುಸ್ತಕಗಳನ್ನೂ ರಚಿಸಿದ್ದಾರೆ; ತಮ್ಮೆಲ್ಲ ಅಪಾರ ಸಾಧನೆಯಿಂದ ಅವರನ್ನು ಕುರಿತು ಗ್ರಂಥ ರಚನೆಗೆ ಕಾರಣವಾಗುವ ಕಾರ್ಯವನ್ನೂ ಮಾಡಿದ್ದಾರೆ. 

ಜ್ಞಾನದಾಸೋಹಿ ಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳು, ಛಂದೋವಿಹಾರಿ ಸಂತಕವಿ ಶ್ರೀ ಕುಮಾರ ನಿಜಗುಣ ಸ್ವಾಮಿಗಳು, ಬಹುಮುಖ ಪ್ರತಿಭೆಯ ನ್ಯಾಯವಾದಿ ಹೆಚ್. ಗಂಗಾಧರನ್, ಕೃಷಿ ವಿಜ್ಞಾನಿ ಭತ್ತದ ತಳಿ ಸಂಶೋಧಕ ಡಾ. ಎಂ. ಮಹಾದೇವಪ್ಪ, ಪ್ರವಚನ ಕಲಾಪ್ರವೀಣ ಪ್ರೊ. ಎಸ್. ನಂಜುಂಡಯ್ಯ, ಆದರ್ಶ ಪ್ರಾಧ್ಯಾಪಕ ಪ್ರೊ. ಮಗಂ. ರೇಣುಕಪ್ರಸನ್ ಈ ಆರು ಜನ ಮಹನೀಯರ ಕುರಿತು ಬರೆದ ಲೇಖನಗಳ ಸಂಗ್ರಹ ಪ್ರಸ್ತುತ ಕೃತಿ. 

ಈ ಆರೂ ಜನ ವಿದ್ವತ್ಪ್ರಪಂಚದಲ್ಲಿ ಅಜರಾಮರ ಕೀರ್ತಿ ಸಂಪಾದಿಸಿದವರು. ತಮ್ಮ ನಡೆನುಡಿಗಳಿಂದ ನಾಡಿಗೆ ಮಾದರಿಯಾದವರು. ಪೂಜ್ಯ ಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳವರಂತೂ ಲೋಕಸಂತರೆಂದು ಖ್ಯಾತರಾದವರು.

ಈ ಎಲ್ಲ ಮಹನೀಯರನ್ನು ಶಿವಕುಮಾರ ಅವರು ತುಂಬ ಹತ್ತಿರದಿಂದ ಕಂಡವರು. ಅವರ ಒಡನಾಟದಲ್ಲಿ ಕೆಲವು ಅಮೂಲ್ಯ ಕ್ಷಣಗಳನ್ನು ಕಳೆದವರು. ಹೀಗಾಗಿ ಅವರ ಬರವಣಿಗೆಯ ಹಿಂದೆ ಆ ಆಪ್ತತೆಯ ಅಭಿವ್ಯಕ್ತಿ ಮೂಡಿ ಬಂದಿದೆ. ಶ್ರೀ ಸಿದ್ಧೇಶ್ವರ ಶ್ರೀಗಳ ಅಧ್ಯಾತ್ಮ ಪ್ರವಚನ, ನಿಸರ್ಗ ಪ್ರೇಮ, ಬಹುಭಾಷಾ ಪಾಂಡಿತ್ಯ, ಕೀರ್ತಿಯನ್ನು ಶನಿಯೆಂದು ದೂರವಿಟ್ಟ ಪರಿ, ಸುತ್ತೂರು ಮಠದೊಂದಿಗೆ ಅವರ ಹಾರ್ದಿಕ ಸಂಬಂಧಗಳನ್ನು ಕುರಿತು ವಿವರಿಸುತ್ತ ‘ಶ್ರೀಗಳು ಪುರಾಣಕಾಲದ ಋಷಿಸದೃಶ ವ್ಯಕ್ತಿತ್ವ ಹೊಂದಿದ್ದ ಜ್ಞಾನನಿಧಿಗಳಾಗಿ, ಜ್ಯೋತಿರ್ಲಿಂಗ ಸ್ವರೂಪದ ದಾರ್ಶನಿಕರಾಗಿದ್ದರು’ ಎಂದು ಹೇಳುವಲ್ಲಿ  ಸಿದ್ಧೇಶ್ವರ ಅಪ್ಪಗಳ ಪೂರ್ಣಚಿತ್ರಣ ನಮ್ಮ ಕಣ್ಣುಮುಂದೆ ಬಂದು ನಿಲ್ಲುತ್ತದೆ. 

ಛಂದೋವಿಹಾರಿ ಸಂತಕವಿ ಕುಮಾರ ನಿಜಗುಣರು ನಮ್ಮ ನಾಡು ಕಂಡ ಅಪರೂಪದ ಸಾಧಕರು. ನಿಜಗುಣ ಶಿವಯೋಗಿಗಳ ಷಡಸ್ತ್ರಗಳನ್ನು ಜನಮನಕ್ಕೆ ಮುಟ್ಟಿಸಿದವರು. ಲೌಕಿಕ ಸುಖವನ್ನು ತ್ಯಾಗ ಮಾಡಿ ವಿರಕ್ತಿಯ ಬದುಕಿಗೆ ಬಂದವರು. ಛಂದಃಶಾಸ್ತ್ರದಲ್ಲಿ ಅವರು ಸಾಧಿಸಿದ ಪರಿಣಿತಿ ಅನನ್ಯ-ಅಪರೂಪ. ಅಂತಹ ಹಿರಿಯರು ಲಿಂಗೈಕ್ಯರಾದ ಸಂದರ್ಭದಲ್ಲಿ ರಚಿಸಿದ ಲೇಖನ ಈ ಕೃತಿಯಲ್ಲಿದೆ. ಹೆಚ್. ಗಂಗಾಧರನ್ ಲೇಖಕರು ಹೇಳುವಂತೆ ನಿಜಕ್ಕೂ ಬಹುಮುಖ ವ್ಯಕ್ತಿತ್ವವುಳ್ಳವರು. ನ್ಯಾಯವಾದಿಯಾಗಿ, ಎರಡುಬಾರಿ ಶಾಸಕರಾಗಿ, ಸಾಹಿತ್ಯ ನಿರ್ಮಾತೃಗಳಾಗಿ ಅವರು ನಾಡು ನುಡಿಗೆ ಸಲ್ಲಿಸಿದ ಸೇವೆ ಅವಿಸ್ಮರಣೀಯವಾದುದು.

ಗಂಗಾಧರನ್ ಅವರ ಸಾಧನೆಯ ಒಳನೋಟಗಳನ್ನು ಕರಿಯು ಕನ್ನಡಿಯೊಳಡಗಿಸಿದಂತೆ, ಸಂಕ್ಷಿಪ್ತವಾಗಿಯಾದರೂ ಸಮಗ್ರವಾಗಿ ಚಿತ್ರಿಸಿದ್ದಾರೆ. ಕರ್ನಾಟಕದ ಕೃಷಿ ವಿಜ್ಞಾನಿಗಳಲ್ಲಿ ಎತ್ತರದ ಸ್ಥಾನವನ್ನು ಹೊಂದಿದವರು ಡಾ. ಎಂ. ಮಹಾದೇವಪ್ಪನವರು. ಭಾರತವು ಕೃಷಿ ಪ್ರಧಾನ ದೇಶ. ಈ ದೇಶದಲ್ಲಿ ರೈತ ಚೆನ್ನಾಗಿದ್ದರೆ ದೇಶ ಬೆಳೆಯುತ್ತದೆ ಎಂಬ ಆಶಯದೊಂದಿಗೆ ಕೃಷಿಯಲ್ಲಿ ಅನೇಕಾನೇಕ ಹೊಸ ಹೊಸ ಸಂಶೋಧನೆಗಳನ್ನು ಮಾಡಿ, ಭತ್ತದ ತಳಯೊಂದನ್ನು ರೈತಸಮುದಾಯಕ್ಕೆ ನೀಡಿದ ಡಾ. ಎಂ. ಮಹಾದೇವಪ್ಪನವರು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳಾಗಿ ಸೇವೆ ಸಲ್ಲಿಸಿದವರು.

ಇಂತಹ ಶ್ರೇಷ್ಠ ಕೃಷಿವಿಜ್ಞಾನಿಯ ಒಟ್ಟು ಸಾಧನೆಯನ್ನು ಲೇಖಕರು ತುಂಬ ಆಪ್ತವಾಗಿ ಕಟ್ಟಿಕೊಟ್ಟಿದ್ದಾರೆ.  ಪ್ರವಚನ ಕಂಠೀರವ ಎಂಬ ಬಿರುದು ಪಡೆದಿದ್ದ ಎಸ್. ನಂಜುಂಡಯ್ಯ ಅವರು ಕನ್ನಡ ಉಪನ್ಯಾಸಕರಾಗಿ, ಪ್ರಾಧ್ಯಾಪಕರಾಗಿ ತಮ್ಮ ಸೇವೆ ಪ್ರಾರಂಭಿಸಿ, ನಿವೃತ್ತಿಯ ನಂತರ ಸುತ್ತೂರು ಶ್ರೀಮಠದ ಪೂಜ್ಯರ ಸಾನ್ನಿಧ್ಯ ಸಂಪರ್ಕಕ್ಕೆ ಬಂದು ಅನೇಕ ವಿಧಾಯಕ ರಚನಾತ್ಮಕ ಕಾರ್ಯಗಳನ್ನು ಮಾಡಿದವರು. ಶರಣ ಸಾಹಿತ್ಯ ಕುರಿತು ಅನೇಕ ಕೃತಿಗಳನ್ನು ರಚಿಸುವುದರ ಮೂಲಕ ಸಾಹಿತ್ಯ ಲೋಕಕ್ಕೆ ವಿನೂತನ ಕಾಣ್ಕೆಯನ್ನು ನೀಡಿದವರು.

ಇಂತಹ ಬಹುಶ್ರುತ ವಿದ್ವಾಂಸರ ಜೀವನ ಸಾಧನೆಯ ಜೊತೆಗೆ ತಮ್ಮೊಂದಿಗೆ ಇರುವ ಒಡನಾಟದ ಕ್ಷಣಗಳನ್ನು ಇಲ್ಲಿ ದಾಖಲಿಸಿದ್ದಾರೆ. ಪ್ರೊ. ಮ.ಗಂ. ರೇಣುಕ ಪ್ರಸನ್ನ ಒಬ್ಬ ಶ್ರೇಷ್ಠ ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ, ಸಾಹಿತಿಗಳಾಗಿ ಇಡೀ ನಾಡಿಗೆ ಚಿರಪರಿಚಿತರು. ಅವರ ವೈಯಕ್ತಿಕ ಜೀವನದ ಅನೇಕ ಮಗ್ಗಲುಗಳನ್ನು ಲೇಖಕರು ಇಲ್ಲಿ ತುಂಬ ಅರ್ಥಪೂರ್ಣವಾಗಿ ದಾಖಲಿಸಿದ್ದಾರೆ. ರೇಣುಕ ಪ್ರಸನ್ನ ಅವರ ತಂದೆ ರಂಭಾಪುರಿ ಪೀಠದಲ್ಲಿ ಸೇವೆ ಸಲ್ಲಿಸಿದವರು.

ಧಾರ್ಮಿಕ ಪ್ರಭಾವಲಯದಲ್ಲಿ ಬೆಳೆದು ಬಂದ ರೇಣುಕಪ್ರಸನ್ನ ಅವರು ತಮ್ಮ ಮಗ ಅಂತರಜಾತಿಯ ಹುಡುಗಿಯನ್ನು ಇಷ್ಟಪಟ್ಟಾಗ ತಾವೇ ಮುಂದೆ ನಿಂತು ಮದುವೆ ಮಾಡಿಸಿ, ನಿಜವಾದ ಬಸವತತ್ವವನ್ನು ಅನುಷ್ಠಾನಕ್ಕೆ ತಂದವರು. ಇಂತಹ ಒಳ್ಳೆಯ ವ್ಯಕ್ತಿಗಳ ಹತ್ತು ಹಲವು ವಿವರಗಳನ್ನು ಒಳಗೊಂಡ ‘ಸ್ಮರಣೀಯರು’ ಕೃತಿ ಓದುಗರಲ್ಲಿ ಒಂದು ರೀತಿಯ ಕುತೂಹಲವನ್ನು ಮೂಡಿಸುತ್ತದೆ. 

ಕೃತಿ ಗಾತ್ರದಲ್ಲಿ ಚಿಕ್ಕದಾದರೂ ಅದು ನೀಡುವ ಅನುಭವ ಅಪಾರವಾದುದು. ಇಲ್ಲಿಯ ಕೆಲವು ಹೃದಯಸ್ಪರ್ಶಿ ಸನ್ನಿವೇಶಗಳು ಮನಸ್ಸಿನಾಳದಲ್ಲಿ ಬಹುಕಾಲ ಉಳಿಯುತ್ತವೆ. ಲೇಖಕರ ಮಾತಿನಲ್ಲಿ ಬರೆದಿರುವ ಒಂದು ಆಲಸ್ಯ ಗರುಡ ಕ್ರಿಯಾಶೀಲವಾಗುವ ಕಥೆ ತುಂಬ ಆಪ್ಯಾಯಮಾನವಾಗಿದೆ.

ನಮ್ಮ ನಾಡಿನ ಶ್ರೇಷ್ಠ ವಿದ್ವಾಂಸರಾದ ಡಾ. ಓ.ಎಲ್.ನಾಗಭೂಷಣ ಸ್ವಾಮಿ ಅವರು ಮುನ್ನುಡಿ ತೋರಣ ಕಟ್ಟಿಕೊಟ್ಟಿದ್ದಾರೆ. ಪತ್ರಕರ್ತರಾದ ಈಚನೂರು ಕುಮಾರ್ ಅವರು ಬೆನ್ನುಡಿಯಲ್ಲಿ ಕೃತಿಯ ಒಟ್ಟು ಸಾರವನ್ನು ಚಿತ್ರಿಸಿದ್ದಾರೆ.

ಈ ಕೃತಿ ಪ್ರಕಟಣೆಗೆ ದಾಸೋಹ ಸೇವೆ ಸಲ್ಲಿಸಿದ ಶ್ರೀಮತಿ ಎನ್.ಎನ್.ಲಿಂಗಮ್ಮಣ್ಣಿ ಮತ್ತು ಪ್ರೊ. ಎಸ್. ನಂಜುಂಡಯ್ಯ ದಂಪತಿಗಳನ್ನು  ಅಭಿನಂದಿಸಬೇಕು. ಶರಣ ಸಾಹಿತ್ಯ ಪರಿಷತ್ತು ಮೈಸೂರು ನಗರ ಘಟಕ ಪ್ರಕಟಿಸಿದ ಈ ಕೃತಿ ಪ್ರಕಟಣೆಗೆ ದಾಸೋಹಿಗಳ ನೆರವು ಕಾರಣವಾಗಿ ಗ್ರಂಥ ಅತ್ಯಂತ ಸುಂದರವಾಗಿ ಪ್ರಕಟವಾಗಿದೆ. ಇಂತವರ ಸಂತತಿ ಹೆಚ್ಚಾದಂತೆ, ಸಾಹಿತ್ಯ ಸಂಸ್ಕೃತಿಗಳ ಬೆಳವಣಿಗೆ ಸಾರೋದ್ಧಾರವಾಗಿ ಸಾಗುವುದರಲ್ಲಿ ಎರಡು ಮಾತಿಲ್ಲ.

 ನಮ್ಮ ನಾಡು ಕಂಡ ಶ್ರೇಷ್ಠ ವ್ಯಕ್ತಿಗಳ ಜೀವನ ಸಾಧನೆಯ ವಿವರಗಳನ್ನು ಸಂಕ್ಷಿಪ್ತವಾಗಿಯಾದರೂ ಸಮಗ್ರವಾಗಿ ಸಮೃದ್ಧ ವಿವರಗಳೊಂದಿಗೆ ನೀಡಿದ  ಶಿವಕುಮಾರ ನಗರ್ಲೆ ಅವರಿಗೆ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸುವೆ.


ಪ್ರಕಾಶ ಗಿರಿಮಲ್ಲನವರ

- Advertisement -
- Advertisement -

Latest News

ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು- ಸಲೀಂ ನದಾಫ

ಬೆಳಗಾವಿ: "ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು.ವಿಕಚೇತನರಿಗೆ ಅನುಕಂಪದ ಬದಲು ಅವಕಾಶ ನೀಡುವ ಅಗತ್ಯವಿದೆ. ಶಾಲಾ ಸಿದ್ಧತಾ ಕೇಂದ್ರಗಳ ಬಲವರ್ಧನೆ ಕೂಡ ಅವಶ್ಯಕ. ಈ ತರಬೇತಿ ಸದುಪಯೋಗ...
- Advertisement -

More Articles Like This

- Advertisement -
close
error: Content is protected !!
Join WhatsApp Group