spot_img
spot_img

ಶಾಸ್ತ್ರಿಗಳ ಸಾಹಿತ್ಯ ಕಾಲ

Must Read

- Advertisement -

ಕಾವ್ಯ ಮೀಮಾಂಸೆ: ಇನ್ನೊಂದಿಷ್ಟು ವಿಚಾರಗಳು.

ನಿನ್ನೆ ಭಾರತೀಯ ಕಾವ್ಯ ಮೀಮಾಂಸೆ ಬಗ್ಗೆ ಕೆಲ ವಿಚಾರ ಹಾಕಿದ್ದೆ. ಹಲವರು ಅದಕ್ಕೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತಪಡಿಸುತ್ತ ಇನ್ನಷ್ಟು ವಿಚಾರ ಅಪೇಕ್ಷಿಸಿದ್ದಾರೆ.
ಹೊಸಗನ್ನಡ ಸಾಹಿತ್ಯಕ್ಕೆ ಶ್ರೀಕಾರ ಹಾಕಿದ ಇಬ್ಬರು ” ಶ್ರೀ ” ಗಳು ಬಿಎಂಶ್ರೀ ಮತ್ತು ತೀನಂಶ್ರೀ. ಕನ್ನಡದ ಆಚಾರ್ಯ ಪುರುಷ ಬಿಎಂಶ್ರೀ ಭಾವಗೀತೆಗಳ ಯುಗ ಆರಂಭಿಸಿದರು. ತೀನಂಶ್ರೀ ಅವರು ಕಾವ್ಯ ಮೀಮಾಂಸೆಯಂತಹ ಮಹತ್ವದ ಕೊಡುಗೆ ನೀಡಿದರು. ಅದಕ್ಕೆ ೧೯೮೮ ರಲ್ಲಿ ಪಂಪ ಪ್ರಶಸ್ತಿ ಗೌರವ ದೊರಕಿತು.

ಕಾವ್ಯ ಲಕ್ಷಣ, ಭಾಷಾ ಶಾಸ್ತ್ರ ಗಳಿಗೆ ಸಂಬಂಧಿಸಿದ ಗ್ರಂಥಗಳು ಮೊದಲು ಸಂಸ್ಕೃತ ದಲ್ಲಿ ಬಂದವು.ಅದು ಸಾವಿರ ವರ್ಷಗಳ ಹಿಂದೆ. ಸಾವಿರ ವರ್ಷಗಳ ಈಚೆಗೆ ಕನ್ನಡದಲ್ಲೂ ಬಂದವು. ಸಂಸ್ಕೃತ ಭಾಷೆಯಲ್ಲಿ ಅಜಿತಸೇನ, ಉದ್ಭಟ, ಅಪ್ಪಯ್ಯ ದೀಕ್ಷಿತ, ಜಯದೇವ, ಭಟ್ಟ ತೌತ, ಆನಂದವರ್ಧನ, ರಾಜಶೇಖರ, ರುದ್ರಭಟ್ಟ, ಮಮ್ಮಟ, ಭೋಜರಾಜ, ದಂಡಿ, ಅಭಿನವಗುಪ್ತ ಮೊದಲಾದ ೫೦ ಕ್ಕೂ ಪಂಡಿತರು, ಕವಿಗಳು ಗ್ರಂಥ ರಚಿಸಿದ್ದಾರೆ. ಅವುಗಳನ್ನೇ ಆಧರಿಸಿ ಮುಂದೆ ಕನ್ನಡದಲ್ಲಿ ಉದಯಾದಿತ್ಯ, ಕವಿಕಾಮದೇವ, ತಿಮ್ಮ, ಜಾಯೇಂದ್ರ, ತಿರುಮಲಾರ್ಯ, ಸಾಳ್ವ, ನಾಗವರ್ಮ, ಶ್ರೀವಿಜಯ, ಮಾಧವ ಮೊದಲಾದವರು ಕೃತಿ ರಚನೆ ಮಾಡಿದರು. ನಂತರ ಹೊಸಗನ್ನಡ ಸಾಹಿತ್ಯದ ಸಂದರ್ಭದಲ್ಲೂ ಹಲವರು ಬರೆದಿದ್ದಾರೆ. ಡಿವಿಜಿ, ಮಾಸ್ತಿ, ಮುಗಳಿ, ಧಾರವಾಡಕರ, ಡಿ. ಎಸ್. ಕರ್ಕಿ, ಪ್ರ. ಗೋ. ಕುಲಕರ್ಣಿ ಇತ್ಯಾದಿ.

- Advertisement -

ಕಾವ್ಯದ ಮೂಲ ಬೀಜವೇ ಪ್ರತಿಭೆ. ಆದರೆ ಪ್ರತಿಭೆ ಕಾವ್ಯ ವಾಗಿ ಅರಳಬೇಕಿದ್ದರೆ ಅದಕ್ಕೆ ಪೂರಕವಾದ ಪರಿಕರಗಳು ಬೇಕು. ಕವಿ- ಕಾವ್ಯಗಳನ್ನು ಕಾರ್ಖಾನೆಯಲ್ಲಿ ಬೇರೆ ವಸ್ತುಗಳನ್ನು ನಿರ್ಮಾಣ ಮಾಡುವಂತೆ ಮಾಡಲಾಗುವದಿಲ್ಲ. ಕಮ್ಮಟಗಳಿಂದಲೂ ಕವಿಸೃಷ್ಟಿ ಆಗುವುದಿಲ್ಲ. ಮೂಲ ಪ್ರತಿಭೆಗೆ ಉಳಿದ ಅಂಶಗಳೂ ಸೇರಿಕೊಂಡಾಗ ಪ್ರತಿಭೆ ತನ್ನ ಸೃಷ್ಟಿ ಕಾರ್ಯ ಆರಂಭಿಸುತ್ತದೆ. ಎಲ್ಲರೂ ಕವಿಗಳಾಗಲು ಸಾಧ್ಯವಿಲ್ಲ. ಅದಕ್ಕಾಗಿ ಯಾರೂ ಬೇಸರಿಸಬೇಕಾದ ಅಗತ್ಯವೂ ಇಲ್ಲ. ಉಳಿದವರಿಗಿಂತ ಕವಿ ಬೇರೆಯಾಗುವದು ತನ್ನ ವಿಶಿಷ್ಟ ದೃಷ್ಟಿಯಿಂದ. ರವಿ ಕಾಣದ್ದನ್ನು ಕವಿ ಕಾಣುತ್ತಾನೆ ಎಂಬ ಮಾತು ಹುಟ್ಟಿದ್ದೇ ಅದಕ್ಕಾಗಿ.
” ಅಪಾರೇ ಕಾವ್ಯ ಸಂಸಾರೇ ಕವಿರೇವ ಪ್ರಜಾಪತಿ: ”
” ನಾನೃಷಿ: ಕುರುತೇ ಕಾವ್ಯಂ” ಋಷಿ ಅಂದರೆ ದೃಷ್ಟಾರ. ” ದರ್ಶನ’ ವುಳ್ಳವನು. ಕವಿ ಇತರರಿಗಿಂತ ಭಿನ್ನವಾಗುವುದು ಇದರಿಂದಲೇ.

ಕಾವ್ಯ ಮೀಮಾಂಸೆ ಯಲ್ಲಿ ರಾಜಶೇಖರ ಹೇಳಿದಂತೆ ಎಂಟು ಅಂಶಗಳಿಂದ ಕವಿಶಕ್ತಿ ಉದ್ದೀಪನಗೊಳ್ಳುತ್ತದೆ. ಪ್ರತಿಭೆ ಯೊಡನೆ ದೇಹಮನಸ್ಸುಗಳ ಸ್ವಸ್ಥತೆ ಬೇಕು ಎನ್ನುತ್ತಾನೆ ಆತ. ಅಸ್ವಸ್ಥ ಮನಸ್ಥಿತಿಯ ಮನುಷ್ಯ ಅದು ಹೇಗೆ ಆರೋಗ್ಯಕರ ಸಾಹಿತ್ಯ ರಚಿಸಬಲ್ಲ? ಹಾಗೆಯೇ ವಿದ್ವಾಂಸರೊಡನೆ ಮಾತುಕತೆ ಎಂಬ ಇನ್ನೊಂದು ಅಂಶವಿದೆ. ಹೊಸ ಕವಿಗಳು ಹಿರಿಯರೊಡನೆ ಸಮಾಲೋಚನೆ ನಡೆಸಿ ಅವರಿಂದ ಮಾರ್ಗದರ್ಶನ ಪಡೆಯುವದೊಳ್ಳೆಯದು ಎನ್ನುವದನ್ನು ಸೂಚಿಸುತ್ತದೆ.

ಲಕ್ಷಣ ಗ್ರಂಥಗಳು, ಲಾಕ್ಷಣಿಕರು
ಮತ್ತು ಪ್ರತಿಭೆಯ ಮೂಲ ಅಂಶಗಳು

- Advertisement -

ಕವಿ ಕಾವ್ಯ ಲಕ್ಷಣಗಳನ್ನು ತಿಳಿಸುವ ಲಕ್ಷಣ ಗ್ರಂಥಗಳನ್ನು ಬರೆದವರಿಗೆ ಲಾಕ್ಷಣಿಕರೆನ್ನುತ್ತಾರೆ. ಈ ಗ್ರಂಥಗಳ ಮುಖ್ಯ ಉದ್ದೇಶ ಕಾವ್ಯ ರಚನೆಗೆ ಅಗತ್ಯವಾದ ಮೂಲ ಅಂಶಗಳನ್ನು ಪರಿಚಯಿಸುವುದು. ಭರತಮುನಿಯ ” ನಾಟ್ಯಶಾಸ್ತ್ರ” ವೇ ಈ ವಿಷಯದಲ್ಲಿ ಆದಿಗ್ರಂಥವೆನಿಸಿದೆ. ಇದನ್ನು ನಾಟ್ಯವೇದವೆಂದೂ ಕರೆಯುತ್ತಾರೆ. ಹಾಗಿದ್ದರೆ ನಾಟ್ಯಶಾಸ್ತ್ರಕ್ಕೂ ಕಾವ್ಯಕ್ಕೂ ಏನು ಸಂಬಂಧ ಎಂಬ ಪ್ರಶ್ನೆ ಸಹಜ. ಕಾವ್ಯಮೀಮಾಂಸೆಗೆ ಸಂಬಂಧಪಟ್ಟ ಹಲವು ವಿಷಯಗಳೂ ಈ ಕೃತಿಯಲ್ಲಿ ಚರ್ಚಿಸಲ್ಪಟ್ಟಿವೆ. ಮುಖ್ಯವಾಗಿ ರಸಭಾವಗಳ ವಿಷಯ ಇದರಲ್ಲಿ ಪ್ರಸ್ತಾಪಿಸಲ್ಪಟ್ಟಿದೆ. ರಸತತ್ವವೇ ಭಾರತೀಯ ಕಾವ್ಯ ಮೀಮಾಂಸೆಯ ಒಳತಿರುಳಾದ್ದರಿಂದ ಲಕ್ಷಣ ಗ್ರಂಥಗಳನ್ನು ಬರೆಯುವವರಿಗೆ ಈ ನಾಟ್ಯಶಾಸ್ತ್ರವು ಪ್ರಮುಖ ಆಕರ ಗ್ರಂಥವೆನಿಸುತ್ತದೆ. ಕಾವ್ಯದಲ್ಲಿ ರಸಭಾವಗಳ ಪಾತ್ರ ಎಷ್ಟು ಮಹತ್ವದ್ದೆನ್ನುವುದನ್ನು ನಂತರ ಯೋಚಿಸೋಣ.

ಲಕ್ಷಣ ಗ್ರಂಥಗಳು ಮೊದಲು ರಚಿಸಲ್ಪಟ್ಟಿದ್ದು ಸಂಸ್ಕೃತದಲ್ಲಿ. ಅವುಗಳಲ್ಲಿ ರಾಜಶೇಖರನ ಕಾವ್ಯಮೀಮಾಂಸಾ, ವಾಗ್ಭಟನ ವಾಗ್ಭಟಾಲಂಕಾರ, ರುದ್ರಟನ ಕಾವ್ಯಾಲಂಕಾರ, ಅಜಿತಸೇನನ ಅಲಂಕಾರ ಚಿಂತಾಮಣಿ, ಅಭಿನವ ಗುಪ್ತನ ಅಭಿನವ ಭಾರತಿ, ಆನಂದವರ್ಧನನ ಧ್ವನ್ಯಾಲೋಕ, ಉದ್ಭಟನ ಕಾವ್ಯಾಲಂಕಾರ ಸಾರಸಂಗ್ರಹ, ಜಗನ್ನಾಥ ಕವಿಯ ರಸಗಂಗಾಧರ, ಭಟ್ಟ ತೌತನ ಕಾವ್ಯಕೌತುಕ, ಮಮ್ಮಟನ ಕಾವ್ಯಪ್ರಕಾಶ, ಭಾಮಹನ ಕಾವ್ಯಾಲಂಕಾರ, ದಂಡಿಯ ಕಾವ್ಯಾದರ್ಶ, ಕ್ಷೇಮೇಂದ್ರನ ಕವಿಕಂಠಾಭರಣ, ಅಪ್ಪಯ್ಯ ದೀಕ್ಷಿತನ ಕುವಲಯಾನಂದ, ಭಾನುದತ್ತನ ರಸಮಂಜರಿ ಮೊದಲಾದವು ಪ್ರಮುಖವಾಗಿ ಪ್ರಸ್ತಾಪಿಸಲ್ಪಡುತ್ತವೆ. ನಮ್ಮ ಪ್ರಾಚೀನ ಕನ್ನಡ ಕವಿಗಳಲ್ಲೂ ಹಲವರು ಲಕ್ಷಣ ಗ್ರಂಥಗಳನ್ನು ಬರೆದಿದ್ದು ಅವುಗಳಲ್ಲಿ ಉದಯಾದಿತ್ಯನ ಅಲಂಕಾರ, ಕವಿ ಕಾಮದೇವನ ಶೃಂಗಾರ ರತ್ನಾಕರ, ತಿಮ್ಮಯ್ಯ ಕವಿಯ ಅಲಂಕಾರ ರಸ ಸಂಗ್ರಹ, ಎರಡನೆ ನಾಗವರ್ಮನ ಕಾವ್ಯಾವಲೋಕನ, ಸಾಳ್ವ ಕವಿಯ ರಸರತ್ನಾಕರ, ಶ್ರೀವಿಜಯನ ಕವಿರಾಜಮಾರ್ಗ ಮೊದಲಾದವು ಉಲ್ಲೇಖನಾರ್ಹವಾಗಿವೆ. ಮುಂದೆ ಆಧುನಿಕ ಕನ್ನಡ ಸಾಹಿತ್ಯದ ಕಾಲಘಟ್ಟದಲ್ಲೂ ಹಲವರು ಅಲಂಕಾರ, ಛಂದಸ್ಸು , ರಸಭಾವ, ಧ್ವನಿ , ವ್ಯುತ್ಪತ್ತಿ ಮೊದಲಾದ ವಿಷಯಗಳನ್ನೆತ್ತಿಕೊಂಡು ಗ್ರಂಥಗಳನ್ನು ರಚಿಸಿದ್ದಾರೆ.
ನಾವು ಈ ಗ್ರಂಥಗಳಲ್ಲಿ ಗಮನಿಸಬಹುದಾದ ಒಂದು ಸಮಾನ ಅಂಶವೆಂದರೆ ಈ ಎಲ್ಲ ಕವಿ – ವಿದ್ವಾಂಸರುಗಳೂ ಹೆಚ್ಚಾಗಿ ರಸಾಲಂಕಾರಗಳ ಬಗ್ಗೆ ಬರೆದಿದ್ದಾರೆ. ಅಂದರೆ ಕಾವ್ಯರಚನೆ ಮುಖ್ಯವಾಗಿ ಈ ರಸಾಲಂಕಾರಗಳನ್ನೇ ಆಧರಿಸಿವೆಯೆನ್ನುವುದು ಸ್ಪಷ್ಟ. ಹಾಗಿದ್ದರೆ ಈ ರಸಭಾವಗಳ ಕುರಿತು ನಾವು ತಿಳಿದುಕೊಳ್ಳದೇ ಮುಂದೆ ಹೋಗುವ ಹಾಗಿಲ್ಲವೆಂದಂತಾಯಿತು. ನಾನು ಆ ಎಲ್ಲ ಲಾಕ್ಷಣಿಕರ ಅಭಿಪ್ರಾಯಗಳನ್ನು ಕ್ರೋಡೀಕರಿಸಿ ಕಾವ್ಯಲಕ್ಷಣ ಅಥವಾ ಕಾವ್ಯ ಗುಣಗಳ ಕುರಿತು ಹೇಳಬಯಸಿದ್ದೇನೆ.

ಮೊದಲ ಭಾಗದಲ್ಲಿ ” ಪ್ರತಿಭೆ” ಎಂಬ ಶಬ್ದದ ಉಲ್ಲೇಖವಿದೆ. ಪ್ರತಿಭೆಯ ಕುರಿತು ಈ ಲಕ್ಷಣ ಗ್ರಂಥಕಾರರು ಹೇಳುವುದೇನು? ಹಲವರು ಹಲವು ರೀತಿಯಲ್ಲಿ ಅದನ್ನು ಬಣ್ಣಿಸುತ್ತಾರೆ. ಒಂದೊಂದಾಗಿ ಅವನ್ನು ಗಮನಿಸೋಣ.
” ಹೊಸ ಹೊಸ ಭಾವಗಳನ್ನು ಸಂತತವಾಗಿ ಕಾಣುವ – ಕಟ್ಟುವ ಪ್ರಜ್ಞೆಯೇ ಪ್ರತಿಭೆ. ‌ ಈ ಪ್ರತಿಭೆಯ ಉಸಿರಿನಿಂದ ಜೀವ ತುಂಬಿ ವರ್ಣಿಸಬಲ್ಲ ನಿಪುಣನೇ ಕವಿ. ಕವಿ ಕರ್ಮವೇ ಕಾವ್ಯ”.                                                                         *

“ಕವಿಸೃಷ್ಟಿಯ ರಹಸ್ಯವೆಲ್ಲ ಈ ” ಪ್ರತಿಭೆ” ಎಂಬ ಮೂರು ಅಕ್ಷರಗಳಲ್ಲೇ ಅಡಗಿದೆ”

ಸರಿ, ಆದರೆ ಈ ಕವಿಪ್ರತಿಭೆಯಿಂದ ಕಾವ್ಯ ಹೇಗೆ ಹೊರಹೊಮ್ಮುತ್ತದೆ, ಈ ನಿರ್ಮಾಣ ಕಾರ್ಯದಲ್ಲಿ ಕವಿಗೆ ಬೇಕಾದ ಶಕ್ತಿ, ದೃಷ್ಟಿ , ಪರಿಕರ ಯಾವವು ಎನ್ನುವುದನ್ನು ತಿಳಿದುಕೊಳ್ಳಬೇಕಾಗುತ್ತದೆ.
‌ ಲಕ್ಷಣಗ್ರಂಥಕಾರ ಭಟ್ಟತೌತನ ಪ್ರಕಾರ –
” ಪ್ರಜ್ಞಾ ನವ ನವೋಲ್ಲೇಖಶಾಲಿನೀ ಪ್ರತಿಭಾಮತಾ
ತದನುಪ್ರಾಣನಾ ಜೀವದ್ವರ್ಣನಾ ನಿಪುಣಃ ಕವಿಃ ತಸ್ಯ ಕರ್ಮಸ್ಮೃತಂ ಕಾವ್ಯಃ”
*
“ಪ್ರತಿಭೆ ಎನ್ನುವುದು ಒಂದು ವಿಶಿಷ್ಟ ಶಕ್ತಿ. ಅದಕ್ಕೆ ” ಹೊಳಹು” ಎಂಬ ಅರ್ಥವೂ ಇದೆ. ಪ್ರತಿಭೆ ಬುದ್ಧಿಯ ಕಣ್ಣಲ್ಲ. ಹೃದಯದ ಕಣ್ಣು. ಈ ಒಳಗಣ್ಣು ತೆರೆದಾಗ ವಿಶ್ವದ ಹೃದಯವೇ ತೆರೆಯುತ್ತದೆ”( ಧ್ವನ್ಯಾಲೋಕ)
*
ಮಹಿಮ ಭಟ್ಟನ ಪ್ರಕಾರ ” ರಸಾನುಗುಣವಾದ ಶಬ್ದಾರ್ಥಗಳನ್ನು ಕವಿ ಚಿಂತಿಸುವಾಗ ಅವನಲ್ಲಿ ಪ್ರತಿಭೆ ಉಕ್ಕುತ್ತದೆ”.
*
ಕವಿಯ ಹೃದಯದಲ್ಲಿ ರಸದ ಕಾವು ಉಂಟಾದಾಗಲೇ ಅವನ ಪ್ರತಿಭೆ ಉಜ್ವಲಿಸುವುದು. ತನ್ನ ರಸಾನುಭವದ ಅಭಿವ್ಯಕ್ತಿಗಾಗಿಯೇ ಕವಿ ಕಾವ್ಯ ರಚಿಸುವುದರಿಂದ ಅವನ ಪ್ರತಿಭೆ ರಸಾನುಗುಣವಾಗಿ ವರ್ತಿಸುತ್ತದೆ. ಅಂದರೆ ಕವಿ‌ ರಸಪರವಶನಾಗಿರುವಾಗ ಅವನ ಶಕ್ತಿವಿಶೇಷವಾದ ಪ್ರತಿಭೆ ಕೂಡ ರಸದ ಆಳ್ವಿಕೆಗೊಳಪಡುತ್ತದೆ, ಹೊಸ ಅರ್ಥ ಕಾಣುತ್ತದೆ, ಕಟ್ಟುತ್ತದೆ, ಉಲ್ಲೇಖಿಸುತ್ತದೆ.”
*
” ಪ್ರತಿಭೆ ಉಕ್ಕಲು ರಸಾವೇಶ ಬೇಕು. ಹಾಗಂತ ರಸಿಕರೆಲ್ಲರೂ ಕವಿಗಳಲ್ಲ. ರಚನಾತ್ಮಕ ಪ್ರತಿಭೆ ಕೆಲವರಲ್ಲಿ ಮಾತ್ರವಿರುತ್ತದೆ. ”
*
” ಪ್ರತಿಭೆ ಚುರುಕಾಗಿ ಓಡುವ ಕುದುರೆಯಂತೆ. ಕವಿಯ ರಸಾವೇಶವೇ ಅದರ ಸಾರಥಿ”
ಇಂತಹ ಮಾತುಗಳೆಲ್ಲ ನಮಗೆ ಪ್ರತಿಭೆಯ ಸ್ವರೂಪವನ್ನು ಹೇಳುವುದರ ಸಂಗಡ ರಸದ ಅಗತ್ಯ ಮತ್ತು ಮಹತ್ವಗಳನ್ನೂ ತಿಳಿಸುತ್ತವೆ. ಮುಖ್ಯವಾಗಿ ನಾವು ತಿಳಿದುಕೊಳ್ಳಬೇಕಾದ್ದೇನೆಂದರೆ ಯಾರಲ್ಲೇ ಆದರೂ ಪ್ರತಿಭೆ ಇದ್ದರೆ ಸಾಲದು, “ಪ್ರತಿಭೆಯ ಬಾಗಿಲು ತೆರೆಯುವ ಬೀಗದ ಕೈ ಒಂದು ಬೇಕಾಗುತ್ತದೆ”
ಕಾವ್ಯ ಮೀಮಾಂಸೆಯ ಕರ್ತೃ ರಾಜಶೇಖರ ” ಕವಿತ್ವಕ್ಕೆ ಎಂಟು ಮಂದಿ ತಾಯಂದಿರು ” ಎನ್ನುತ್ತಾನೆ.
” ಸ್ವಾಸ್ಥ್ಯಂ,ಪ್ರತಿಭಾಭ್ಯಾಸೋ ಭಕ್ತಿರ್ವಿದ್ವತ್ಕಥಾ ಬಹುಶ್ರುತತಾ,
ಸ್ಮೃತಿದಾರ್ಢ್ಯಮನಿರ್ವೇದಶ್ಚ, ಮಾತರೋಷ್ಟೌ ಕವಿತ್ವಸ್ಯ”
ಅಂದರೆ – ” ದೇಹ ಮನಸ್ಸುಗಳ ಸ್ವಸ್ಥತೆ, ಪ್ರತಿಭೆ, ಅಭ್ಯಾಸ, ಭಕ್ತಿ, ವಿದ್ವಾಂಸರೊಡನೆ ಮಾತುಕತೆ, ಪಾಂಡಿತ್ಯ, ದೃಢವಾದ ಜ್ಞಾಪಕಶಕ್ತಿ ಮತ್ತು ಉತ್ಸಾಹ ಇವೇ ಆ ಎಂಟು ಅಗತ್ಯಗಳು”
ಪ್ರತಿಭೆ ಹೆತ್ತ ತಾಯಿ ಇದ್ದಹಾಗೆ. ಉಳಿದವು ಸಾಕು ತಾಯಿಯಂತೆ ಅಥವಾ ಸೂಲಗಿತ್ತಿಯರಂತೆ. ಕಾವ್ಯರಚನೆಗೆ ಈ ಎಂಟು ಅಂಶಗಳೂ ಬಹಳ ಮಹತ್ವದ್ದೆನಿಸುತ್ತವೆ. ಪ್ರತಿಭೆಯೊಂದಿಗೆ ಇತರ ಅಂಶಗಳೂ ಒಂದುಗೂಡಿದಾಗ ಮಾತ್ರ ಕವಿ ಕಾವ್ಯರಚನೆಯ ಶಕ್ತಿ ಪಡೆದುಕೊಳ್ಳುತ್ತಾನೆ. ” ಕವಿತ್ವ ಬೀಜಂ ಪ್ರತಿಭಾನಂ” / ” ಕವಿತ್ವಸ್ಯ ಬೀಜಂ ಜನ್ಮಾಂತರ್ಗತ ಸಂಸ್ಕಾರ ವಿಶೇಷ:” ಇಂತಹ ಮಾತುಗಳು ಕವಿಯಾಗುವವನಲ್ಲಿರಲೇಬೇಕಾದ ವಿಶೇಷ ಶಕ್ತಿಯನ್ನು ಪ್ರಸ್ತಾಪಿಸುತ್ತವೆ. ಆದ್ದರಿಂದ ಕವಿಯಾಗುವುದು ಬಹಳ ಸುಲಭ ಎನ್ನುವ ಭಾವನೆಯನ್ನು ನಾವು ಮೊದಲು ನಮ್ಮ ಮನಸ್ಸಿನಿಂದ ತೆಗೆದುಹಾಕಬೇಕಾಗುತ್ತದೆ. ಅಷ್ಟೆಲ್ಲ ಅದು ಸುಲಭವೆಂದಾದರೆ ಇಷ್ಟೊಂದು ವಿದ್ವಾಂಸ ಕವಿಗಳು ಇಷ್ಟೆಲ್ಲ ಲಕ್ಷಣ ಗ್ರಂಥಗಳನ್ನು ಬರೆದು ಶ್ರಮ ಪಡಬೇಕಾದ ಅಗತ್ಯವಾದರೂ ಏನಿತ್ತು? ಇದು ಯೋಚಿಸಬೇಕಾದ ವಿಚಾರವಲ್ಲವೆ!

ರಸ, ಭಾವ, ಅಲಂಕಾರ, ಗುಣ, ಕಲ್ಪನೆ, ಧ್ವನಿ, ಔಚಿತ್ಯ, ವ್ಯುತ್ಪತ್ತಿ ಇವೆಲ್ಲ ಸೇರಿಯೇ ಕಾವ್ಯ. ಕಾವ್ಯಸ್ಯಾತ್ಮಾ ಧ್ವನಿ: , ವಾಕ್ಯಂ ರಸಾತ್ಮಕಂ ಕಾವ್ಯಂ, ರಮಣೀಯಾರ್ಥ ಪ್ರತಿಪಾದಕ ಶಬ್ದ: ಕಾವ್ಯಂ, ಶಬ್ದಾರ್ಥೌ ಸಹಿತೌ ಕಾವ್ಯಂ ಇವೆಲ್ಲ ಕಾವ್ಯದ ಕುರಿತು ಇರುವ ವ್ಯಾಖ್ಯೆಗಳು. ಆದ್ದರಿಂದ ಕಾವ್ಯ ರಚನೆಗೆ ಮುನ್ನ ನಾವು ಅರಿತುಕೊಳ್ಳಬೇಕಾದ ಹಲವು ಸಂಗತಿಗಳಿವೆ ಎನ್ನುವ ಎಚ್ಚರ ಇಟ್ಟುಕೊಂಡರೆ ಒಳ್ಳೆಯದು. ಅದು ನಮ್ಮ ಶ್ರೇಷ್ಠ ಕಾವ್ಯ ರಚನೆಗೆ ಹಾದಿ ಮಾಡಿಕೊಡುತ್ತದೆ. ಅಂತಹ ಶ್ರೇಷ್ಠ ಕಾವ್ಯ ರಚನೆ ಮಾಡಿದವರು ಮಾತ್ರ ಕಾವ್ಯದ ಹಾದಿಯಲ್ಲಿ ಶಾಶ್ವತ ಹೆಜ್ಜೆ ಗುರುತುಗಳನ್ನು ಮೂಡಿಸಬಲ್ಲರು. ಇಲ್ಲದಿದ್ದರೆ ನಮ್ಮ ಹೆಜ್ಜೆ ಮರಳಿನಲ್ಲಿ ಮೂಡಿದ ಹೆಜ್ಜೆಗಳಂತೆ ಕ್ಷಣಾರ್ಧದಲ್ಲಿ ಮಾಯವಾಗಿಬಿಡುತ್ತದೆ.

ಎಲ್ ಎಸ್ ಶಾಸ್ತ್ರಿ

- Advertisement -
- Advertisement -

Latest News

ವಿದ್ಯಾರ್ಥಿ ಜೀವನದ ನಿಜವಾದ ಕೌಶಲ ಆಲಿಸುವಿಕೆ – ನಟ ಮಾಸ್ಟರ್ ಮಂಜುನಾಥ ಅಭಿಮತ

ವಿದ್ಯಾರ್ಥಿ ಜೀವನದಲ್ಲಿ ಕೇಳುವಿಕೆ ಹಾಗೂ ಅರ್ಥಮಾಡಿಕೊಳ್ಳುವಿಕೆಯು ನಿಜವಾದ ಕೌಶಲ್ಯವಾಗಿದೆ ಎಂದು ಕನ್ನಡದ ಪ್ರಸಿದ್ಧ ನಟ ಮಾಸ್ಟರ್ ಮಂಜುನಾಥ ಅಭಿಪ್ರಾಯಪಟ್ಟರು. ಬೆಂಗಳೂರಿನ ಕ್ರಿಸ್ತು ಜಯಂತಿ ಕಾಲೇಜಿನ ಸಮಾಜ ವಿಜ್ಞಾನ...
- Advertisement -

More Articles Like This

- Advertisement -
close
error: Content is protected !!
Join WhatsApp Group