ಕವನ: ಎಂಥ ಭಾಗ್ಯವೋ ಕೃಷ್ಣ….!

Must Read

ಎಂಥ ಭಾಗ್ಯವೋ ಕೃಷ್ಣ….!

ಎಂಥ ಭಾಗ್ಯವೋ ಕೃಷ್ಣ
ಆ ಕೊಳಲಿನದು !
ನಿನ್ನ ಮೃದು ತುಟಿಗಳ ಸ್ಪರ್ಶದ ಜೊತೆಗೆ
ರಾಗವಾಗಿ ನುಲಿಯುವ ಭಾಗ್ಯ !
ನಿನ್ನುಸಿರಿನ ಜೀವಸೆಲೆಯ ಪಡೆದು
ಮೃದುವಾದ ತಾಡನಕ್ಕೆ
ನಲಿಯುವ ಭಾಗ್ಯ!

ಎಂಥ ಭಾಗ್ಯವೋ ಕೃಷ್ಣ
ಆ ನವಿಲುಗರಿಯದು !
ನಿನ್ನ ಮುಡಿಯ ಶಿಖರವೇರಿ
ಜಂಭದಿಂದ ತಲೆಯೆತ್ತಿ ನಿಲ್ಲುವ ಭಾಗ್ಯ !
ಲೋಕದಲ್ಲಿ ತಾನೇ ಉನ್ನತವೆಂಬ ಭಾವ
ಹೊಂದಿ ಸವರ್ಣ ಅಕ್ಷಿಗಳಿಂದ
ಲೋಕ ನೋಡುವ ಭಾಗ್ಯ!

ಎಂಥ ಭಾಗ್ಯವೋ ಕೃಷ್ಣ
ಆ ಶ್ಯಮಂತಕ ಮಣಿಯದು !
ನಿನ್ನೆದೆಯ ಪರ್ವತದ ಮೇಲೆ ವಿರಾಜನಾಗಿ
ವಿಶ್ವಕೆಲ್ಲ ಬೆಳಕು ಬೀರುವ ಹಮ್ಮು
ಸ್ವತಃ ಹೊಳೆಯುತ್ತ ನಗು ಬೀರುವ ಬಿಮ್ಮು !

ಎಂಥ ಭಾಗ್ಯವೋ ಕೃಷ್ಣ
ಆ ಗೋವಿನದು !
ನಿನ್ನ ಮುರಳಿ ನಾದದ ಸವಿಯುಂಡು
ಕೆಚ್ಚಲ ತುಂಬಿಕೊಂಡು ನೊರೆ ಹಾಲ್ಗರೆವ
ಹಸು ತಾನು ಪಡೆದ ಮನೋಲ್ಲಾಸಕೆ
ಧನ್ಯತೆ ಪಡೆಯಿತು ಗೋಪಾಲಕ

ನನಗೂ ನೀಡು ಕೃಷ್ಣ
ಈ ಭಾಗ್ಯದ ಬದುಕನು
ನಿನ್ನ ಉಸಿರಿಗೆ ಮುರಳಿಯಾಗಿ
ಶಿರಕೆ ನವಿಲಗರಿಯಾಗಿ
ನಿನ್ನೆದೆಯ ಮಣಿಯಾಗಿ
ನಿನ್ನ ಮಮತೆಗೆ ಗೋವಾಗಿ
ಸಾರ್ಥಕ್ಯ ಹೊಂದುವ ಕೃಪೆಯನ್ನೊಮ್ಮೆ
ನೀಡಿ ಬಿಡು ಕೃಷ್ಣ


ಉಮೇಶ ಬೆಳಕೂಡ, ಮೂಡಲಗಿ
( ಹೊಸ ದಿಗಂತ ಪತ್ರಿಕೆಯ ದಶಮಾನೋತ್ಸವ ಸಂಭ್ರಮದ ಪುರವಣಿ ‘ ಉತ್ತರ ಮುಖಿ ‘ ಯಲ್ಲಿ ಪ್ರಕಟಿತ )

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group