ಯಾವುದೇ ವ್ಯಕ್ತಿಯಾದರೂ ಸರಿ ಜನಿಸಿದ ಮೇಲೆ ತನ್ನನು ತಾನು ಗುರುವಿಗೆ ಸಮರ್ಪಿಸಿಕೊಳ್ಳದಿದ್ದರೆ /ಶರಣಾಗತನಾಗದಿದ್ದರೆ ಆತನಿಗೆ ಮುಕ್ತಿ ಹಾಗು ಜೀವನದ ಏಳಿಗೆಗಳೇ ಇರುವುದಿಲ್ಲ.
ಸಾಯಿಬಾಬಾ
ಈ ಮಾತನ್ನು ಬಾಬಾ ಅವರು ತಮ್ಮ ಭಕ್ತರಿಗೆ ನೀಡಿದ ಉಪದೇಶದಲ್ಲಿ ಹೇಳಿದ್ದು ಎಂಬ ಸಂಗತಿಯನ್ನು ಬಾಬಾ ಅವರ ಚರಿತ್ರೆಯಲ್ಲಿ ತಿಳಿಯಬಹುದು.ಇದು ಸತ್ಯವೂ ಕೂಡ. ನಮ್ಮ ದೈನಂದಿನ ಜೀವನದಲ್ಲಿ ನಾವು ಭಕ್ತಿಯಿಂದ ಗುರುವಿಗೆ ಸಮರ್ಪಿಸಿಕೊಳ್ಳಲೇಬೇಕು. ಹರ ಮುನಿದರೂ ಗುರು ಕಾಯ್ವನು ಎಂಬುದು ಜನಜನಿತ.ಇಂದು ಮಹಾರಾಷ್ಟ್ರ ಹೊರತು ಪಡಿಸಿದರೆ ಶಿರ್ಡಿ ಸಾಯಿಬಾಬಾರ ಭಕ್ತರು ಅನುಯಾಯಿಗಳು ತಾವಿರುವ ಸ್ಥಳದಲ್ಲಿ ಬಾಬಾರ ಮಂದಿರವನ್ನು ನಿರ್ಮಿಸುವ ಮೂಲಕ ಪ್ರತಿ ನಿತ್ಯವೂ ಅವರ ಆರಾಧನೆಯಲ್ಲಿ ತೊಡಗಿರುವದನ್ನು ತಾಣುತ್ತೇವೆ. ಅಂತಹ ಮಂದಿರವೊಂದು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುನವಳ್ಳಿಯಲ್ಲಿದೆ.
ಬೆಳಗಾವಿ ಜಿಲ್ಲೆಯ “ಮುನವಳ್ಳಿ” ಮುನಿಗಳ ನಾಡು ಎಂದು ಐತಿಹಾಸಿಕ ಚರಿತ್ರೆಯಲ್ಲಿ ಉಲ್ಲೇಖಿತವಾದ ಗ್ರಾಮ.ಸವದತ್ತಿಯಿಂದ ೧೬ ಕಿ.ಮೀ ಅಂತರದಲ್ಲಿರುವ ಈ ಊರಲ್ಲಿ ಅನೇಕ ಮಠಮಾನ್ಯಗಳು, ದೇವಾಲಯಗಳು, ಪಕ್ಕದಲ್ಲಿ ಹರಿಯುವ ಮಲಪ್ರಭಾ ನದಿ.ರೇಣುಕಾ ಸಕ್ಕರೆ ಕಾರ್ಖಾನೆಗಳ ಮೂಲಕ ವಾಣಿಜ್ಯ ಕ್ಷೇತ್ರವಾಗಿ ಹೆಸರುವಾಸಿ.ಇಂಥ ಗ್ರಾಮದಲ್ಲಿ ಇತ್ತೀಚಿನ ವರ್ಷಗಳಲ್ಲಿ “ಶಿರಡಿ ಸಾಯಿಬಾಭಾ ಮಂದಿರ ” ತಲೆ ಎತ್ತಿನಿಂತು ತನ್ನದೇ ಆದ ಭಕ್ತವೃಂದವನ್ನು ಕೈಬೀಸಿ ಕರೆಯುತ್ತಿದೆ.
ಸಾಯಿ ಬಾಬಾ ಭಕ್ತನ ಕಥೆ
ಇತಿಹಾಸದ ಪುಟಗಳಲ್ಲಿ ಯುದ್ದಗಳು,ದೇವಾಲಯಗಳು ರೂಪಗೊಂಡ ಬಗ್ಗೆ ಚರಿತ್ರೆಯನ್ನು ಗ್ರಂಥಗಳಲ್ಲಿ, ಶಾಸನಗಳಲ್ಲಿ ಕಾಣುತ್ತೇವೆ. ಹಾಗೆಯೇ ಇಲ್ಲಿನ ಓರ್ವ ವ್ಯಕ್ತಿ ಸಾಯಿಬಾಬಾನ ಭಕ್ತನಾಗುವ ಮೂಲಕ ದೇವಾಲಯ ಬೆಳೆಯುವ ಮಟ್ಟಿಗೆ ತನ್ನೊಂದಿಗೆ ಯುವಪಡೆಯನ್ನು ಕಟ್ಟಿಕೊಂಡು ಇಂದು ಸಹಸ್ರಾರು ಜನರಿಗೆ ಸಾಯಿಬಾಬಾ ಮಂದಿರ ಮೂಲಕ ಧಾರ್ಮಿಕ ಚಟುವಟಿಕೆಗೆ ನಾಂದಿ ಹಾಡಿದ ಘಟನೆ ನೆನೆದರೆ ನಿಜಕ್ಕೂ ಅಚ್ಚರಿಯಾಗುತ್ತದೆ.
ಸುಮಾರು ಮೂವತ್ತು ವರ್ಷಗಳ ಹಿಂದಿನ ಮಾತು ಮುನವಳ್ಳಿಯ ದಿವಂಗತ ವೇದಮೂರ್ತಿ ಕರಬಸಯ್ಯಶಾಸ್ತ್ರೀಯವರ ಹಿರಿಯ ಮಗ ಮಹಾಂತಯ್ಯ, ಕ.ವಿರುಪಯ್ಯನವರಮಠ ಇವರು ತಮ್ಮ ವೈಯುಕ್ತಿಕ ಕರ‍್ಯ ನಿಮಿತ್ಯ ವಾಣಿಜ್ಯ ನಗರಿ ಹುಬ್ಬಳ್ಳಿಗೆ ಹೋಗುವುದು ವಾಡಿಕೆ.
ದೇವರೆಂದರೆ ಅಷ್ಟು ಆಸಕ್ತಿ ಇರದ ಇವರು ಹುಬ್ಬಳ್ಳಿಯ ಚಲನಚಿತ್ರ ಮಂದಿರವೊಂದರಲ್ಲಿ ಅಂದು “ಶಿರಡಿ ಸಾಯಿಬಾಬಾ” ಕುರಿತ ಚಲನಚಿತ್ರವೊಂದನ್ನು ವೀಕ್ಷಿಸಿದರು.ಚಿತ್ರಮಂದಿರದಿಂದ ಹೊರಬಂದ ಇವರಿಗೆ “ಬಾಬಾನ” ಮಹಿಮೆ ಎದೆಯಾಂತರದಲ್ಲಿ ಮೂಡಿ ಶರೀರದ ಮೇಲೆ ಧರಿಸಲು “ಬಾಬಾ” ಚಿತ್ರವಿರುವ ಲಾಕೆಟ್ ಏನಾದರೂ ಇಲ್ಲಿ ಸಿಗಬಹುದೇ ಎಂದುಕೊಂಡು ಅಲ್ಲಿನ ಎಲ್ಲ ಅಂಗಡಿಗಳಲ್ಲಿ ಹುಡುಕಾಡಿದರು.ಬಾಬಾ ಚಿತ್ರವಿರುವ ಸರವಾಗಲಿ ಲಾಕೆಟ್ ಆಗಲಿ ಇವರಿಗೆ ಅಂದು ದೊರೆಯಲಿಲ್ಲ.
ಮನದಲ್ಲಿ ಆವತ್ತಿನಿಂದ ಬಾಬಾ ಹೆಸರು ಒಡಮೂಡಿತು. ಇವರ ಹುಬ್ಬಳ್ಳಿ ಒಡನಾಟ ಇದ್ದೇ ಇತ್ತು.ಮತ್ತೊಂದು ಸಲ ಹುಬ್ಬಳ್ಳಿಗೆ ಬಂದಾಗಲೂ ಹುಡುಕಾಡಿದರು ದೊರೆಯಲಿಲ್ಲ. ಆದರೂ ಇವರಿಗೆ ಬಾಬಾ ಬಗ್ಗೆ ಎಲ್ಲಿಲ್ಲದ ಭಕ್ತಿ ಆರಂಭವಾಯಿತು, ಗ್ರಾಮೀಣ ಪ್ರದೇಶದಲ್ಲಿ ಹಬ್ಬ ಹರಿದಿನ ಬಂದಾಗ ಹೊಸ ಬಟ್ಟೆ ಹೊಲಿಸುವುದು ವಾಡಿಕೆ. ಇವರೂ ಆ ವರ್ಷ ಹಬ್ಬಕ್ಕೆಂದು ಬಟ್ಟೆ ಹೊಲಿಸಿ ಮನೆಗೆ ತಂದು ತಮ್ಮಲ್ಲಿದ್ದ ಹಣವನ್ನು ಪೈಜಾಮ್ ಜೇಬಿನಲ್ಲಿರಿಸಿ ಮಲಗಿದರು.
ಆ ದಿನ ವ್ಯವಹಾರದ ದುಡ್ಡು ಎಷ್ಟು ಬಂದಿತ್ತು ಎನ್ನುವುದರ ಪರಿವೆಯೇ ಇಲ್ಲದಂತೆ ನಿದ್ರಾದೇವಿ ಇವರನ್ನು ಆವರಿಸಿ ಬಿಟ್ಟಳು. ಮರುದಿನ ಹಬ್ಬ ಇದ್ದ ಕಾರಣ ಸ್ನಾನ ಕರ್ಮಾದಿಗಳನ್ನೆಲ್ಲ ಮುಗಿಸಿ ಬಟ್ಟೆ ಧರಿಸಿ ಮನೆಯಿಂದ ಆಚೆ ಬಂದ ಮಹಾಂತಯ್ಯನಿಗೆ ಜೇಬಿನಲ್ಲಿ ದುಡ್ಡು ನೆನಪಾಯಿತು. ನಿನ್ನೆಯ ದಿನ ವ್ಯವಹಾರ ಎಷ್ಟಾಗಿತ್ತು ಎಂಬುದನ್ನು ಮನೆಗೆ ಹೋಗಿ ಲೆಕ್ಕ ಮಾಡಿ ಜೇಬಲ್ಲಿದ್ದ ಹಣ ತೆಗೆದಿಟ್ಟು ಬರಬೇಕು ಎಂದುಕೊಂಡು ಮನೆಗೆ ನಡೆದರು.
ಮನೆ ತಲುಪಿ ಜೇಬಲ್ಲಿದ್ದ ಹಣ ತೆಗೆಯ ಹೋದಾಗ ಅಚ್ಚರಿಯೊಂದು ಕಾದಿತ್ತು ಇವರ ಹಣದೊಡನೆ ಬಾಬಾ ಚಿತ್ರವಿದ್ದ ಲಾಕೆಟ್ ಇತ್ತು. ಇವರಿಗೆ ನಂಬಲಾಗದ ಆಶ್ಚರ್ಯ. ಇದು ತನ್ನ ಜೇಬಿಗೆ ಹೇಗೆ ಬಂತು.? ಕಳೆದೊಂದು ತಿಂಗಳಿಂದ ಮೈಮೇಲೆ ಧರಿಸಲೆಂದು ಎಲ್ಲೆಲ್ಲಿಯೂ ಹುಡುಕಿದರೂ ಸಿಗದ ಈ ಲಾಕೆಟ್ ಜೇಬಲ್ಲಿ ಬಂದಿದ್ದಾದರೂ ಹೇಗೆ,? ಎಂದು ಮನೆಯವರನ್ನೆಲ್ಲ ವಿಚಾರಿಸಿದರು.
ಮನೆಯಲ್ಲಿ ಯಾರೂ ಇವರ ಬಟ್ಟೆ ಮುಟ್ಟುವ ಗೋಜಿಗೆ ಹೋಗಿಲ್ಲವೆಂದರು.ಬಟ್ಟೆ ಹೊಲಿದವರ ಬಳಿ ಕೇಳಲು ಅವರೂ ಗೊತ್ತಿಲ್ಲವೆಂದರು. ಬಾಬಾ ನನ್ನ ಬಳಿ ಬಂದಿದ್ದಾನೆಂದುಕೊಂಡು ಅಂದಿನಿಂದ ಹೆಚ್ಚು ಹೆಚ್ಚು ಬಾಬಾ ಚಿಂತನೆಯಲ್ಲಿ ಕಾಲ ಕಳೆಯತೊಡಗಿದರು. ಜೊತೆಗೆ ಶಿರಡಿಗೂ ಪ್ರಯಾಣ ಬೆಳೆಸಿದರು.
ಶಿರಡಿಗೆ ಹೋಗಿ ಬಂದ ನಂತರ ಇವರಿಗೆ ಹೊಳೆದದ್ದು ಬಾಬಾ ಹೆಸರಿಗೆ ಮಂದಿರವೊಂದು ನಮ್ಮೂರಲ್ಲಿ ಇರಬೇಕು. ಅದಕ್ಕೆ ಅನೇಕ ಭಕ್ತರು ನೆರೆಯಬೇಕು ಎಂಬ ಇಚ್ಛೆ ಆರಂಭವಾಯಿತು. ಅದಕ್ಕೆ ಸ್ಥಳ ಬೇಕು ಎಂದುಕೊಂಡು ಮೊದಲು ತಮಗಿದ್ದ ಹೊಲದಲ್ಲಿ ಪುಟ್ಟದಾದ ದೇವಾಲಯ ನಿರ್ಮಿಸಿ ಅದರಲ್ಲಿ ಶಿರಡಿ ಬಾಬಾನ ಮೂರ್ತಿ ಪ್ರತಿಷ್ಠಾಪಿಸಿ ಅಲ್ಲಿ ಪೂಜಿಸತೊಡಗಿದರು.
ಬಾಬಾ ಮಂದಿರ ನಿರ್ಮಾಣಕ್ಕೆ ಸಾಕ್ಷಿಯಾಯಿತು ಯುವಕರ ಪಡೆ
ಮುನವಳ್ಳಿ ಊರಿನಲ್ಲಿ ಬಾಬಾ ಮಂದಿರ ದೊಡ್ಡ ಪ್ರಮಾಣದಲ್ಲಿ ನೆಲೆಗೊಂಡರೆ ಅನುಕೂಲ ಎಂಬ ಚಿಂತನೆ ಇವರೊಂದಿಗೆ ಹಲವು ಯುವಕರಲ್ಲಿ ಮೂಡಿತು.ಅವರೆಲ್ಲ ಮುನವಳ್ಳಿ ಗ್ರಾಮದ ಬೆಟ್ಟದ ಮೇಲೆ ಬಂದು ಅಲ್ಲಿರುವ ಜಾಗೆಯನ್ನು ಗುರುತಿಸಿದರು.
ಎಲ್ಲ ಸ್ನೇಹಿತರಿಗೆ ಇಲ್ಲಿ ಸಾಯಿಮಂದಿರ ನಿರ್ಮಿಸಿದರೆ ಇದೊಂದು ಶಾಂತಿಧಾಮ ಆಗುವುದರಲ್ಲಿ ಸಂದೇಹವೇ ಇಲ್ಲಲ್ಲೆಂಬ ಭಾವ ಮೂಡಿತು. ಸ್ನೇಹಿತರಾದ ಗದಿಗೆಪ್ಪ(ಅಪ್ಪು).ತಾಂದಳೆ, ಕಾಶೀನಾಥಯ್ಯ, ಘಟವಾಳಿಮಠ, ಬಸವರಾಜ ಅಂಗಡಿ, ವಿಜಯ ಅಮಠೆ, ಈಶ್ವರ ಅಮಠೆ, ಸಂಜು ತುಳಜನ್ನವರ, ಸುಧೀರ ಪಾಲನಕರ.ಪ್ರಕಾಶ ಯಕ್ಕುಂಡಿ, ಅಮೀತ ಕರೀಕಟ್ಟಿ,
ಉಮೇಶ ಚುಳಕಿ.ಈರಣ್ಣ ಮುದಗಲ್.ಮೊದಲಾದವರು ಈ ದಿಸೆಯಲ್ಲಿ ಯೋಚಿಸಿ ಆ ಜಾಗೆಯನ್ನು ತಮಗೆ ದೊರೆಯುವಂತೆ ಮಾಡಲು ಟ್ರಸ್ಟ ರಚಿಸಿ ಪ್ರಯತ್ನದಲ್ಲಿ ತೊಡಗಿದರು ಸರಕಾರಿ ಗೈರಾಣೆ ಜಾಗೆ ಇವರ ಟ್ರಸ್ಟಗೆ ೧೯೯೩-೯೪ ರಲ್ಲಿ ಎರಡು ಎಕರೆ ದೊರೆಯಿತು. ಆಗ ಇಲ್ಲಿ ಪುಟ್ಟದಾದ ಸಾಯಿ ಮಂದಿರ ನೆಲೆಕಾಣುವಂತಾಯಿತು.ಆ ದೇವಾಲಯಕ್ಕೆ ಮೂರು ಫೂಟ ಅಳತೆಯ ಮೂರ್ತಿಯನ್ನು ಈಶ್ವರ ಶಿವಪೇಟಿ ನೀಡಿದರು.
ಈಶ್ವರ ಅಮಠೆ.ಸಂಜು ತುಳಜನ್ನವರ.ಸುಧೀರ ಪಾಲನಕರ.ಪ್ರಕಾಶ ಯಕ್ಕುಂಡಿ. ಅಮೀತ ಕರೀಕಟ್ಟಿ. ಉಮೇಶ ಚುಳಕಿ.ಈರಣ್ಣ ಮುದಗಲ್,ರಾಜು ಶಾಸ್ತ್ರೀ.ಮಹಾಂತಯ್ಯ ವಿರುಪಯ್ಯನವರ ಮಠ.ಶ್ರೀಶೈಲ ಹಿರೇಮಠ.ರವಿ ಗೊಂದಿ.ಕಾಶೀನಾಥ ಘಟವಾಳಿಮಠ.ಶಿವಲಿಂಗಯ್ಯ ಹಿರೇಮಠ.ಪ್ರಭುಕುಮಾರ.ಹನಸಿ. ಸೋಮನಗೌಡ ದ್ಯಾಮನಗೌಡರ, ಮೊದಲಾದ ಸಾಯಿ ಯುವಕ ಮಂಡಳದ ಸದಸ್ಯರು ಸೇರಿದಂತೆ ಸಾಯಿಬಾಬಾನ ಭಕ್ತರು ಸೇರಿ ಇಲ್ಲಿ ಜರಗುವ ಎಲ್ಲ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಸಾಯಿಬಾಬಾನ ಕೃಪೆಗೆ ಪಾತ್ರರಾಗುತ್ತಿರುವರು.
ದಿನದಿನಕ್ಕೆ ಹೆಚ್ಚಿದ ಬಾಬಾ ಮಹಿಮೆ
೬-೫-೨೦೦೧ ರಂದು ಈ ಸಾಯಿಮಂದಿರ ಲೋಕಾರ್ಪಣೆಗೊಂಡು ಮುನವಳ್ಳಿಯ ಜನತೆ ನಿತ್ಯವೂ ಈ ಬೆಟ್ಟದ ಮೇಲಿನ ಮಂದಿರಕ್ಕೆ ಬೇಟಿ ನೀಡತೊಡಗಿದರು. ಮೊದ ಮೊದಲು ಇಲ್ಲಿ ಪ್ರತಿ ದಿನ ನಾಲ್ಕು ಹೊತ್ತು ಪೂಜೆ ಕರ‍್ಯಕ್ರಮ .ಪ್ರತಿ ಗುರುವಾರ ಸಂಜೆ ಭಜನಾ ಕರ‍್ಯಕ್ರಮ ಜರುಗತೊಡಗಿದವು. ನಂತರದ ವರ್ಷಗಳಲ್ಲಿ ಭಕ್ತ ಸಮೂಹ ಹೆಚ್ಚತೊಡಗಿದಂತೆ ನಿರಂತರ ಅಭಿಷೇಕಕ್ಕೆಂದು ೧೦೦೧ ರೂ.ಗಳ ಡಿಪಾಜಿಟ್ ಪಡೆಯುವ ಮೂಲಕ ನಿರಂತರ ಅಭಿಷೇಕ ಜರುಗತೊಡಗಿತು. ಕುಂಕುಮಾರ್ಚನೆ(೫೧ ರೂ),ಅಭಿಷೇಕ (೧೦೧ ರೂ) ಪೂಜೆಗಳ ಸೇವೆಯೂ ಆರಂಭಗೊಂಡಿತು. ಇಷ್ಟಕ್ಕೇ ಸೀಮಿತವಾಗದೇ ಮುನವಳ್ಳಿಯ ಯುವಕ ಈಶ್ವರ ಅಡಿವೆಪ್ಪ ಶಿವಪೇಟಿ ಈತ ದೇವಾಲಯ ಸ್ಥಾಪನೆಯ ಆರನೆಯ ವಾರ್ಷಿಕೋತ್ಸವ ಅಂಗವಾಗಿ ತನ್ನ ವಿವಾಹದ ಜೊತೆಗೆ ಹನ್ನೊಂದು ಜೋಡಿ ನವವಧುವರರ ವಿವಾಹವನ್ನು ಉಚಿತವಾಗಿ ಈ ದೇವಾಲಯದಲ್ಲಿ ಜರುಗಿಸುವ ಮೂಲಕ ಸರ್ವಧರ್ಮ ಸಮನ್ವಯ ಉಚಿತ ಸಾಮೂಹಿಕ ವಿವಾಹ ಕರ‍್ಯಕ್ಕೆ ಚಾಲನೆ ನೀಡಿದ ಈ ಕಾರ್ಯ ಮಂದಿರದ ಟ್ರಸ್ಟನ ಯುವಕರಿಗೆ ಮಾದರಿಯಾಯಿತು.
ಅದರ ಮರು ವರ್ಷ ಎಲ್ಲ ಯುವ ಗೆಳೆಯರ ಬಳಗ ಸೇರಿ ಪ್ರತಿ ವರ್ಷ ಸರ್ವಧರ್ಮ ಸಾಮೂಹಿಕ ವಿವಾಹಗಳನ್ನು ವಾರ್ಷಿಕೋತ್ಸವ ಅಂಗವಾಗಿ ಸಾಯಿ ಮಂದಿರದಲ್ಲಿ ಜರುಗಿಸುತ್ತ ಬಂದಿರುವರು.
ಸಾಯಿ ಮಂದಿರದಲ್ಲಿ ಜರಗುವ ವಿಶಿಷ್ಟ ಕಾರ್ಯಕ್ರಮಗಳು
ಇಲ್ಲಿ ರಾಮನವಮಿ ಆಚರಿಸಲಾಗುತ್ತದೆ.ಈ ದಿನದಂದು ಪಾಲಕಿ ಉತ್ಸವ,ಭಜನೆ,ತೊಟ್ಟಿಲು ಕರ‍್ಯಕ್ರಮ ಜರುಗಿಸುವರು.ಗೋಕುಲಾಷ್ಟಮಿಯಂದು ಮಕ್ಕಳಿಗಾಗಿ ವೇಷಭೂಷಣ ಸ್ಪರ್ಧೆ,ತೊಟ್ಟಿಲು ಕಾರ‍್ಯಕ್ರಮ.ಭಜನೆ ಜರುಗುವುದು.ಗುರುಪೂರ್ಣಿಮೆಯ ದಿನದಂದು ಸತ್ಯನಾರಾಯಣ ಪೂಜೆ.ಮಹಾಪ್ರಸಾದ ಶಿವರಾತ್ರಿಯಂದು ಜಾಗರಣೆ, ಬಿಲ್ವಾರ್ಚನೆ,ಕಾರ್ತಿಕ ಮಾಸದಲ್ಲಿ ಕಾರ್ತಿಕೋತ್ಸವ,ವಿಜಯದಶಮಿ ಸಂದರ್ಭದಲ್ಲಿ ಅನ್ನಯ್ಯಸ್ವಾಮಿ (ದುಂಡಯ್ಯ) ಘಟವಾಳಿಮಠ ಇವರು ದೇವಿ ಪುರಾಣ ಪಾರಾಯಣ ಮಾಡುವರು..ಪ್ರತಿ ಗುರುವಾರ ಸಂಜೆ ಏಳು ಗಂಟೆಗೆ ಬಾಳು.ಹೊಸಮನಿಯವರು ಸಚ್ಚರಿತ್ರೆ ಪಾರಾಯಣವನ್ನು ನಿರಂತರವಾಗಿ ಜರುಗಿಸಿಕೊಂಡು ಬರುತ್ತಿದ್ದು.
ಆ ದಿನ ಸುರೇಶ ಈರಪ್ಪ.ಆಲೂರ ಎಂಬ ಸದ್ಬಕ್ತರು ಭಕ್ತ ಜನರಿಗೆ ಅಂಬಲಿ ನೀಡುವ ಮೂಲಕ ತಮ್ಮ ಸೇವೆಗೈಯುತ್ತಿರುವರು. ಜೊತೆಗೆ ಅಂದು ಭಕ್ತರು ಮಹಾಪ್ರಸಾದ ನೀಡುವ ಪರಂಪರೆ ಬೆಳೆಸಿಕೊಂಡು ಬಂದಿರುವರು.ಇತ್ತೀಚಿನ ವರ್ಷಗಳಲ್ಲಿ ದೇವಾಲಯ ಆವರಣದಲ್ಲಿ ಗಿಡಮರಗಳನ್ನು ನೆಟ್ಟು ಅವುಗಳ ಪೋಷಣೆ ಜೊತೆಗೆ ಇಲ್ಲಿ ಪ್ರಸಾದ ನಿಲಯ ನಿರ್ಮಾಣಗೊಂಡಿದ್ದು.
ಒಂದೂವರೆ ಕೋಟಿ ರೂಪಾಯಿಗಳ ವೆಚ್ಚದಲ್ಲಿ ದೇವಾಲಯ ಮಂದಿರ ನಿರ್ಮಾಣ ಮಾಡಿದ್ದು ಪ್ರತಿ ವರ್ಷವೂ ಇಲ್ಲಿಯ ಯುವಕರು ಒಗ್ಗಟ್ಟಿನಿಂದ ಜಾತ್ರೆ ಉತ್ಸವ ನಡೆಸಿಕೊಂಡು ಮುನವಳ್ಳಿ ಗ್ರಾಮದಲ್ಲಿ ಇದೊಂದು ಮಾದರಿ ದೇಗುಲ ಮಾಡಿರುವರು.
೨೨ ನೆಯ ವರ್ಷದ ವಾರ್ಷಿಕೋತ್ಸವದ ಧಾರ್ಮಿಕ ಕಾರ್ಯಕ್ರಮಗಳು
ಶ್ರೀ ಸಾಯಿಮಂದಿರ ಸೇವಾ ಸಮೀತಿಯ ೨೨ ನೇ ವರ್ಷದ ವಾರ್ಷಿಕೋತ್ಸವದ ಧಾರ್ಮಿಕ ಕಾರ್ಯಕ್ರಮಗಳು ಇಂತಿವೆ. ರವಿವಾರ ೨೩ ರಂದು ಮುಂಜಾನೆ ಕಾಕಡಾರತಿ, ರುದ್ರಾಭಿಷೇಕ, ನಂತರ ೧೦.೩೦ ಕ್ಕೆ ಶ್ರೀ ಸಾಯಿ ಮಂದಿರ ಎದುರುಗಡೆ ಇರುವ ಅರಳಿಮರದ ಕೆಳಗೆ ನೂತನ “ನಾಗದೇವತೆ ಪ್ರತಿಷ್ಠಾಪನೆ” ಕಾರ್ಯಕ್ರಮವು ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಶ್ರೀ.ಮ.ನಿ.ಪ್ರ.ಸ್ವ.ಮುರುಘೇಂದ್ರ ಮಹಾಸ್ವಾಮಿಗಳು.ಶ್ರೀ ಸೋಮಶೇಖರ ಮಠ.ಮುನವಳ್ಳಿ ಹಾಗೂ ಶ್ರೀ ನಿತ್ಯಾನಂದ ಸತ್ಸಂಗ ಆಶ್ರಮ ಶಿಂದೋಗಿ-ಮುನವಳ್ಳಿಯ ಶ್ರೋತ್ರೀಯ ಬ್ರಹ್ಮನಿಷ್ಠ ಸದ್ಗುರು ಶ್ರೀ ಮುಕ್ತಾನಂದ ಮಹಾಸ್ವಾಮಿಗಳು ಈ ಇರ್ವರೂ ಪೂಜ್ಯರ ಅಮೃತ ಹಸ್ತದಿಂದ ನೆರವೇರುವುದು.
ಮದ್ಯಾಹ್ನ ೩ ಗಂಟೆಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಇಂದ್ರಪ್ರಸ್ಥ ರಾಜವೈಭವದ ರಥದಲ್ಲಿ ಶ್ರೀ ಶಿರಡಿ ಸಾಯಿಬಾಬಾರವರ ಭಾವಚಿತ್ರದ ಭವ್ಯ ಮೆರವಣಿಗೆ ವಿಜೃಂಭಣೆಯಿಂದ ಜರಗುವುದು. ಇದರಲ್ಲಿ ವಿಶೇಷವಾಗಿ ನಂದಿಯೊಂದಿಗೆ ಭಜನಾಮೇಳ, ಜಗ್ಗಲಗಿ ಮೇಳ, ಡೊಳ್ಳಿನ ಮೇಳ, ಆರತಿ ಪೂರ್ಣಕುಂಭಗಳ ಸುಮಂಗಲೆಯರು ಪಾಲ್ಗೊಂಡು ಶೋಭೆ ತರುವರು.
ಸೋಮವಾರ ದಿನಾಂಕ ೨೪-೪-೨೦೨೩ ರಿಂದ ಗುರುವಾರ ದಿನಾಂಕ ೨೭-೪-೨೦೨೩ ರ ವರೆಗೆ ಪ್ರತಿದಿನ ಸಂಜೆ ೬.೩೦ ರಿಂದ ೮.೩೦ ರ ವರೆಗೆ ಪ್ರವಚನಪಟು ಪೂಜ್ಯ ಸದ್ಗುರು ಚಿದ್ವನಾನಂದ ಭಾರತಿ ಮಹಾಸ್ವಾಮಿಗಳು ಜೋಡಕುರುಳಿ ಚಿಕ್ಕೋಡಿ ತಾಲೂಕು ಇವರಿಂದ ಶ್ರೀ ಸಿದ್ದಾರೂಢ ಮಹಾತ್ಮೆ ಪ್ರವಚನ ಜರಗುವುದು. ಪ್ರತಿದಿನ ಪ್ರವಚನ ಮುಗಿದ ನಂತರ ಪ್ರಸಾದ ವ್ಯವಸ್ಥೆ ಕೂಡ ಇರುವುದು.
ವೈ.ಬಿ.ಕಡಕೋಳ