ಮೂಡಲಗಿ – ಪ್ರತಿವರ್ಷ ಮಾರ್ಚ್ ತಿಂಗಳು ಎಲ್ಲ ವ್ಯವಹಾರಸ್ಥರ ಪಾಲಿಗೆ ಅತ್ಯಂತ ಪ್ರಮುಖ ತಿಂಗಳು. ಬ್ಯಾಂಕುಗಳು, ಸಹಕಾರ ಸಂಘಗಳಿಗಂತೂ ತಮ್ಮ ಸಾಲ ವಸೂಲಿಗೆ ಪ್ರಮುಖವಾದ ತಿಂಗಳು. ಮಾರ್ಚ್ ಕೊನೆಯೊಳಗಾಗಿ ಎಲ್ಲ ಸಾಲಗಾರರೂ ತಮ್ಮ ಸಾಲ ಅಲ್ಲದಿದ್ದರೂ ಬಡ್ಡಿಯನ್ನಾದರೂ ತುಂಬಿ ಮುನ್ನಡೆಯಬೇಕಾಗಿರುತ್ತದೆ ಇಂಥದರಲ್ಲಿ ಸಾರ್ವಜನಿಕರಿಗೆ, ರೈತರಿಗೆ ಬರಬೇಕಾದ ಬಾಕಿಗಳು, ಆದಾಯಗಳು ಬಂದರೆ ಅನುಕೂಲವಾಗುತ್ತದೆ.
ನಾವು ರೈತರ ಆದಾಯವನ್ನೇ ನೋಡಬೇಕಾದರೆ ವರ್ಷದ ಕೊನೆಗೆ ಅಂದರೆ ಡಿಶೆಂಬರ್- ಜನವರಿ ತಿಂಗಳಲ್ಲಿ ಕಬ್ಬು ಬೆಳೆಯನ್ನು ಕಾರ್ಖಾನೆಗೆ ಕಳಿಸಿರುವ ರೈತ ಮಾರ್ಚ್ ತಿಂಗಳಲ್ಲಿ ತನ್ನ ಸಾಲದ ಕಂತನ್ನೋ ಬಡ್ಡಿಯನ್ನೋ ಕಟ್ಟಲು ಕಬ್ಬಿನ ಬಿಲ್ ದಾರಿ ಕಾಯುತ್ತಾನೆ ಆದರೆ ಕೋಟಿಗಟ್ಟಲೆ ವ್ಯವಹಾರ ಮಾಡುವ ಸಕ್ಕರೆ ಕಾರ್ಖಾನೆಗಳು ರೈತರ ಬಿಲ್ ಬಾಕಿ ಉಳಿಸಿಕೊಂಡರೆ ರೈತ ಏನು ಮಾಡಬೇಕು ?
ಸಹಕಾರಿ ಸಂಘಗಳಲ್ಲಿ, ಬ್ಯಾಂಕುಗಳಲ್ಲಿ ಸಾಲದ ಕಂತನ್ನು ಅಥವಾ ಮಾರ್ಚ್ ಕೊನೆಯ ಬಡ್ಡಿಯನ್ನು ಬಾಕಿ ಉಳಿಸಿಕೊಂಡರೆ ದಂಡದ ರೂಪದಲ್ಲಿ ಶೇಕಡಾ ಎರಡರಷ್ಟು ಹೆಚ್ಚವರಿಯಾಗಿ ವಸೂಲು ಮಾಡುತ್ತವೆ. ಮೂರು ತಿಂಗಳ ಮೊದಲೇ ತನ್ನ ಕಬ್ಬು ಕಳಿಸಿ ಸಕಾಲಕ್ಕೆ ಬಿಲ್ಲ ಕಾಣದ ರೈತ ವಿನಾಕಾರಣ ದಂಡ ಕಟ್ಟುವುದು ಎಷ್ಟು ಸರಿ ? ರೈತರ ಹಿತ ಕಾಪಾಡಬೇಕೆನ್ನುವ ಯಾವುದೇ ಸಕ್ಕರೆ ಕಾರ್ಖಾನೆಯೂ ರೈತರ ಬಿಲ್ ಬಾಕಿ ಉಳಿಸಿಕೊಳ್ಳಬಾರದು.
ಈಗ ಬ್ಯಾಂಕುಗಳ ಸಿಬ್ಬಂದಿ ಸಾಲ ವಸೂಲಾತಿಗೆಂದು ಹೋದರೆ ರೈತರ ಬಾಯಿಂದ ಬರುವುದು ಒಂದೇ ಮಾತು….ಇನ್ನೂ ಕಬ್ಬಿನ ಬಿಲ್ಲ ಬಂದಿಲ್ಲ ಬಂದ ಮೇಲೆ ತುಂಬುತ್ತೇನೆ ಎನ್ನುವುದು. ಅನ್ನದಾತನಾದ ರೈತನ ಬಿಲ್ ಬಾಕಿ ಉಳಿಸಿಕೊಳ್ಳುವುದು ಸರ್ವಥಾ ಸರಿಯಲ್ಲ. ಕಾರ್ಖಾನೆಗಳು ಕೋಟ್ಯಂತರ ರೂಪಾಯಿಗಳ ವ್ಯವಹಾರ ಮಾಡುತ್ತವೆ. ಕೇವಲ ಸಕ್ಕರೆಯಿಂದ ಮಾತ್ರವಲ್ಲದೆ ಇಥೆನಾಲ್, ಸ್ಪಿರಿಟ್, ಅಂತೆಲ್ಲ ಹಲವು ಮೂಲಗಳಿಂದ ಕಾರ್ಖಾನೆಗಳಿಗೆ ಆದಾಯ ಬರುತ್ತಿರುತ್ತದೆ. ಅದನ್ನೆಲ್ಲ ನೋಡಿದರೆ ರೈತರ ಕಬ್ಬಿನ ಬಿಲ್ ಒಂದು ಹೊರೆಯೇ ಅಲ್ಲ ಹಾಗೆ ನೋಡಿದರೆ ಬಿಲ್ ನಾಳೆ ಕೊಡುತ್ತೇನೆ, ಮುಂದಿನ ವಾರ ಕೊಡುತ್ತೇನೆ ಎಂಬ ಮಾತೇ ಕಾರ್ಖಾನೆಗಳಿಂದ ಬರಬಾರದು.
ಬೆಳಗಾವಿ ಜಿಲ್ಲೆಯಲ್ಲಿ ಸಾಕಷ್ಟು ಸಕ್ಕರೆ ಕಾರ್ಖಾನೆಗಳಿವೆ. ಮೊದಲಿನಗಿಂತಲೂ ಈಗ ಕಾರ್ಖಾನೆಗಳ ಸಂಖ್ಯೆ ಮೂರ್ನಾಲ್ಕು ಪಟ್ಟು ಹೆಚ್ಚಳವಾಗಿದೆ. ರೈತರ ಕಬ್ಬಿನ ಬೆಳೆ ಕ್ಷೇತ್ರವೂ ಹೆಚ್ಚಾಗಿದೆ ಹಾಗಾಗಿ ಕಾರ್ಖಾನೆಗಳ ಆದಾಯಕ್ಕೆ ಏನೂ ತೊಂದರೆಯಿಲ್ಲ. ಆದ್ದರಿಂದ ರೈತರ ಬಿಲ್ ಕೊಡಲು ಕಾರ್ಖಾನೆಗಳು ರೈತರನ್ನು ಸತಾಯಿಸದೇ ಮೊದಲು ಕೊಡಬೇಕು.
ಬಿಲ್ ವಿಷಯದಲ್ಲಿ ಮಾತ್ರ ಎಲ್ಲ ಕಾರ್ಖಾನೆಗಳೂ ಒಂದೇ. ಆದ್ದರಿಂದ ಇಲ್ಲಿ ಯಾವುದೇ ಕಾರ್ಖಾನೆಯ ಹೆಸರು ಹೇಳಲು ಹೋಗುವುದಿಲ್ಲ. ಯಾರು ಬಾಕಿ ಉಳಿಸಿಕೊಂಡಿದ್ದಾರೋ ಅವರು ರೈತನ ಖಾತೆಗೆ ಹಣ ಬೇಗ ಹಾಕಬೇಕು ಆ ಮೂಲಕ ಬಡ ರೈತನ ಬಾಳು ಹಸನಾಗಿಸಬೇಕು ಯಾಕೆಂದರೆ, ಕಬ್ಬು ಹಚ್ಚಿ ವರ್ಷಗಟ್ಟಲೆ ಅದರ ದೇಖರೇಕಿ ಮಾಡಿ ಅದರಿಂದ ಬರುವ ಆದಾಯದ ಮೇಲೆಯೇ ಹಲವಾರು ಕನಸುಗಳನ್ನು ರೈತ ಕಟ್ಟಿಕೊಂಡಿರುತ್ತಾನೆ. ಒಬ್ಬನ ಮಗಳ ಮದುವೆ, ಅಪ್ಪನ ದವಾಖಾನೆ, ಮಗನ ಉನ್ನತ ಶಿಕ್ಷಣ ಶುಲ್ಕ, ಮನೆ ಕಟ್ಟಡ…..ಹೀಗೆ ಹಲವು ಕನಸುಗಳ ಹಿಂದೆ ರೈತ ಓಡಿದ್ದೇ ಬಂತು ಈ ಕಾರ್ಖಾನೆಗಳು ಬಿಲ್ ಕೊಡದೇ ಸತಾಯಿಸಿದರೆ ರೈತನ ಪರಿಸ್ಥಿತಿ ಬಿಗಡಾಯಿಸುತ್ತದೆ. ಇದೆಲ್ಲ ಗೊತ್ತಿದ್ದೂ ಬಂಡವಾಳ ಶಾಹಿಗಳು, ಸರ್ಕಾರಗಳು ರೈತರ ಕಲ್ಯಾಣದ ಹೆಸರಿನಲ್ಲಿ ರಾಜಕಾರಣ ಮಾಡುತ್ತಲೇ ಇರುತ್ತವೆ. ಇದು ತೊಲಗಬೇಕು. ರೈತ ದೇಶದ ಬೆನ್ನೆಲುಬು. ಆ ಬೆನ್ನೆಲುಬು ಗಟ್ಟಿಯಾಗಿದ್ದರೆ ಮಾತ್ರ ದೇಶ ಉಳಿಯುತ್ತದೆ ದೇಶದ ಜನತೆಗೆ ಅನ್ನ ಸಿಗುತ್ತದೆ ಎಂಬ ಸಹಜ ಅರಿವು ಎಲ್ಲರಿಗೂ ಇರಬೇಕು.
ಉಮೇಶ ಬೆಳಕೂಡ, ಮೂಡಲಗಿ