spot_img
spot_img

ತೇನ್ಸಿಂಗ್ ಮೌಂಟ್ ಎವರೆಸ್ಟ್ ಶಿಖರ ತಲುಪಲು ಕಾರಣ ಕಾಯಕದಲ್ಲಿಯ ಶ್ರದ್ಧೆ, ನಿಷ್ಠೆ.

Must Read

- Advertisement -

(ತೇನ್ಸಿಂಗ್, ಮೌಂಟ್ ಎವರೆಸ್ಟ್‌ ಶಿಖರ ತಲುಪಿದ ದಿನದ ಪ್ರಯುಕ್ತ ಪ್ರಸ್ತುತ ಲೇಖನ)

ಪರ್ವತಾರೋಹಣವೆಂದರೆ ನಮಗೆ ಮೊದಲು ನೆನಪಿಗೆ ಬರುವ ಹೆಸರು ತೇನ್ಸಿಂಗ್. ಎಡ್ಮಂಡ್ ಹಿಲರಿ ಅವರೊಂದಿಗೆ ವಿಶ್ವದಾದ್ಯಂತ ಎತ್ತರದ ‘ಎವರೆಸ್ಟ್’ ಶಿಖರವನ್ನು ತಲುಪಿದ ತೇನ್ಸಿಂಗ್ ನೋರ್ಗೆ ಅವರನ್ನು ಅರಿಯದ ಭಾರತೀಯನಿಲ್ಲ. ಈಶಾನ್ಯ ನೇಪಾಳದ ಖುಂಬು ಪ್ರದೇಶದ ತೆಂಗ್ಬೋಚೆ ಎಂಬಲ್ಲಿ ಶೇರ್ಪ ಪಂಗಡಕ್ಕೆ ಸೇರಿದ ಕುಟುಂಬವೊಂದರಲ್ಲಿ ತೇನ್ಸಿಂಗರು ಜನಿಸಿದರು. ಅವರ ತಂದೆ ತಾಯಂದಿರು ಟಿಬೆಟ್ನಿಂದ ನೇಪಾಳಕ್ಕೆ ವಲಸೆ ಬಂದವರು.

ತೇನ್ಸಿಂಗರ ಹುಟ್ಟಿದ ವರ್ಷ 1914 ಎಂಬುದು ಒಂದು ಊಹೆ. ದಿನಾಂಕದ ಸ್ಪಷ್ಟತೆ ಇಲ್ಲ. ಪರ್ವತಾರೋಹಣ ಮಾಡುತ್ತಿದ್ದ ಸಾಹಸಿಗರಿಗೆ, ಕೂಲಿಯಾಗಿ ಹೊರೆಹೊತ್ತು ಹೊಟ್ಟೆ ಪಾಡು ಅರಸುತ್ತಿದ್ದ ಈ ಯುವಕನಿಗೆ ತನ್ನ ಹುಟ್ಟುಹಬ್ಬದ ವಿಷಯದಲ್ಲಿ ಆಸಕ್ತಿ ಹುಟ್ಟುವುದಾದರೂ ಎಂತು ಹೇಳಿ, ಆದರೆ ಈತ ತಾನು ಮಾಡಿದ ಕಾಯಕದಲ್ಲಿ ಕಂಡುಕೊಂಡ ನಿಷ್ಠೆ, ಶ್ರದ್ಧೆ ಮತ್ತು ನೀಡಿದ ಅಮೋಘ ಸೇವೆ ಒಂದು ದಿನ ಈತನೇ ವಿಶ್ವದ ತುತ್ತ ತುದಿಯನ್ನು ಮುಟ್ಟುವಂತೆ ಮಾಡಿತು. ಹಾಗಾಗಿ ತಾನು ಮೌಂಟ್ ಎವರೆಸ್ಟ್ ತುದಿಯನ್ನು ಮುಟ್ಟಿದ ದಿನವನ್ನೇ ತನ್ನ ಹುಟ್ಟುಹಬ್ಬದ ದಿನ ಎಂದು ಈತ ಪರಿಗಣಿಸಿದ. ಹೀಗಾಗಿ ಎಡ್ಮಂಡ್ ಹಿಲರಿ ಅವರೊಂದಿಗೆ ಎವರೆಸ್ಟ್ ಶಿಖರಾರೋಹಣ ಮಾಡಿದ ಮೇ 29 ರ ದಿನವೇ ತೇನ್ಸಿಂಗರ ಹುಟ್ಟುಹಬ್ಬದ ಆಚರಣೆಯ ದಿನವೆಂದು ಪ್ರಸಿದ್ಧ.

- Advertisement -

ಖುಂಬು ಎವರೆಸ್ಟ್ ಶಿಖರದ ಬಳಿ ಇದೆ. ಅದನ್ನು ಟಿಬೆಟಿಯನ್ನರು ಹಾಗೂ ಶೇರ್ಪಾಗಳು ‘ಚೋಮೋಲುಂಗ್ಮಾ’ ಎಂದು ಕರೆಯುತ್ತಾರೆ, ಅಂದರೆ ಟಿಬೆಟಿಯನ್ ಭಾಷೆಯಲ್ಲಿ ಭೂಮಿಯ ಮೇಲಿನ ತಾಯಿದೇವತೆ ಎಂದರ್ಥ. ನೇಪಾಳಿಗಳು ಇದನ್ನೇ ‘ಸಾಗರಮಾತಾ’ ಎಂದು ಕರೆಯುತ್ತಾರೆ. ಶೆರ್ಪಾಗಳು ಹಾಗೂ ಟಿಬೆಟಿಯನ್ನರ ಪಾರಂಪರಿಕ ಧರ್ಮದಂತೆ ತೇನ್ಸಿಂಗ್ ಬೌದ್ಧ ಧರ್ಮಕ್ಕೆ ಸೇರಿದವರು. ತೇನ್ಸಿಂಗರ ತಂದೆ ಘಾನ್ಗಲ ಮಿಂಗ್ಮ. ತಾಯಿ ದೊಕ್ಮೊ ಕಿಮ್ ಜೋಮ್. ಈ ದಂಪತಿಗಳಿಗೆ 13 ಮಕ್ಕಳು ಜನಿಸಿದರಂತೆ ಮತ್ತು ಹೀಗೆ ಜನಿಸಿದ ಬಹುತೇಕ ಮಕ್ಕಳು ಚಿಕ್ಕಂದಿನಲ್ಲೇ ತೀರಿಹೊದವಂತೆ. ತೇನ್ಸಿಂಗ್ ಈ ದಂಪತಿಗಳಿಗೆ ಜನಿಸಿದ ಹನ್ನೊಂದನೆಯ ಮಗು.

ತೇನ್ಸಿಂಗ್ ಮೊದಲು ಕಠಮಂಡುವಿಗೆ ಮತ್ತು ಡಾರ್ಜಿಲಿಂಗಿಗೆ ಎಂದು ಎರಡು ಬಾರಿ ಮನೆಬಿಟ್ಟು ಓಡಿ ಹೋದರು. ಒಮ್ಮೆ ಅವರನ್ನು ತೆಂಗ್ ಬೊಝೆ ಆಶ್ರಮಕ್ಕೆ ಭಿಕ್ಷುವಾಗಲು ಕಳುಹಿಸಲಾಯಿತು. ಆದರೆ ಅದು ತಮಗೆ ಒಗ್ಗಿದ್ದಲ್ಲವೆಂದು ತೇನ್ಸಿಂಗ್ ಅರಿತುಕೊಂಡರು. ಕಡೆಗೆ ತಮ್ಮ 19ನೆಯ ವಯಸ್ಸಿನಲ್ಲಿ ಭಾರತದ ಪಶ್ಚಿಮ ಬಂಗಾಳದ ಡಾರ್ಜಿಲಿಂಗಿಗೆ ಬಂದ ಅವರು ಟೂಸಾಂಗ್ ಭುಸ್ತಿಯಲ್ಲಿ ಶೆರ್ಪಾ ಸಮಾಜದಲ್ಲೊಬ್ಬರಾಗಿ ನೆಲೆನಿಂತರು.

1935ರ ವರ್ಷದಲ್ಲಿ ‘ಬ್ರಿಟಿಷ್ ಮೌಂಟ್ ಎವರೆಸ್ಟ್ ರೆಕನಸ್ಸೈನ್ಸ್ ಕಾರ್ಯಾಚರಣೆ’ ತಂಡದ ನಾಯಕರಾಗಿ ನೇಮಕಗೊಂಡ ಎರಿಕ್ ಶಿಪ್ಟನ್ ಅವರು ಮೌಂಟ್ ಎವರೆಸ್ಟ್ ಆರೋಹಣದ ಮೊದಲ ಅವಕಾಶವನ್ನು ತೇನ್ಸಿಂಗ್ ನೋರ್ಗೆ ಅವರಿಗೆ ನೀಡಿದರು. ಆ ವರ್ಷದಲ್ಲಿ ಇದ್ದ ಇಬ್ಬರು ಅಭ್ಯರ್ಥಿಗಳು ವೈದ್ಯಕೀಯ ಪರೀಕ್ಷೆಗಳಲ್ಲಿ ಅನುತ್ತೀರ್ಣರಾದ ಹಿನ್ನೆಲೆಯಲ್ಲಿ 19 ವರ್ಷದ ತೇನ್ಸಿಂಗರಿಗೆ ಈ ಅವಕಾಶ ಒದಗಿ ಬಂತು. ಬ್ರಿಟಿಷ್ ಪರ್ವತಾರೋಹಣ ತಂಡದಲ್ಲಿದ್ದ ಅಂಗ್ ಥರ್ಕೆ ಎಂಬ ಸರ್ದಾರ್ ಒಬ್ಬರೊಂದಿಗೆ ಬೆಳೆದ ಆತ್ಮೀಯತೆ ತೇನ್ಸಿಂಗರಿಗೆ ಈ ಅವಕಾಶವನ್ನು ಒದಗಿಸಿತು. ಜೊತೆಗೆ ಎರಿಕ್ ಶಿಪ್ಟನ್ ಅವರಿಗೆ ತೇನ್ಸಿಂಗರ ಮುಗ್ದ ನಗುವೆಂದರೆ ತುಂಬಾ ಆಕರ್ಷಣೆ. ಹೀಗೆ ಪ್ರಾರಂಭವಾದ ಮೌಂಟ್ ಎವರೆಸ್ಟ್ ಯಾನ ಅವರನ್ನು ಅತ್ಯಂತ ಎತ್ತರಕ್ಕೆ ಕರೆದೊಯ್ಯುವಲ್ಲಿ ಪ್ರಥಮ ಪ್ರಮುಖ ಹೆಜ್ಜೆಯಾಯಿತು.

- Advertisement -

1930ರ ದಶಕದಲ್ಲಿ ಉತ್ತರದ ಟಿಬೆಟ್ ಮಾರ್ಗದಿಂದ ಎವರೆಸ್ಟ್ ಶಿಖರವನ್ನು ಏರಲು ಯತ್ನಿಸಿದ ಮೂರು ಅಧಿಕೃತ ಬ್ರಿಟಿಷ್ ಪ್ರಯತ್ನಗಳಲ್ಲಿ ತೇನ್ಸಿಂಗ್ ಹೊರೆಹೊತ್ತ ಆಳಾಗಿ ಕಾರ್ಯನಿರ್ವಹಿಸಿದರು. 1936ರ ವರ್ಷದಲ್ಲಿ ಅವರು ಜಾನ್ ಮೊರಿಸ್ ಅವರೊಂದಿಗೆ ಕಾರ್ಯನಿರ್ವಹಿಸಿದರು. ಎವರೆಸ್ಟ್ ಆರೋಹಣವೇ ಅಲ್ಲದೆ ಭಾರತದ ಉಪಖಂಡದಲ್ಲಿ ನಡೆದ ಇತರ ಆರೋಹಣಗಳಲ್ಲೂ ತೇನ್ಸಿಂಗ್ ಪಾತ್ರ ನಿರ್ವಹಿಸಿದ್ದರು.

1940ರ ವರ್ಷದಿಂದ ಮೊದಲ್ಗೊಂಡಂತೆ ತೇನ್ಸಿಂಗರು ಚಿತ್ರಾಲ್ ರಾಜಸಂಸ್ಥಾನದಲ್ಲಿ ಮೇಜರ್ ಚಾಪ್ಮನ್ ಎಂಬ ಅಧಿಕಾರಿಗೆ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಸ್ವಾತಂತ್ರ್ಯಾನಂತರದಲ್ಲಿ ಆ ಪ್ರದೇಶ ಪಾಕಿಸ್ತಾನಕ್ಕೆ ಸೇರಿದ್ದರಿಂದ ಅವರು 1947ರ ವರ್ಷದಲ್ಲಿ ಡಾರ್ಜಿಲಿಂಗಿಗೆ ಹಿಂದಿರುಗಿದರು. ಚಿತ್ರಾಲ್ ಪ್ರದೇಶದಲ್ಲಿದ್ದ ಸಂದರ್ಭದಲ್ಲಿ 1944ರ ವರ್ಷದಲ್ಲಿ ತೇನ್ಸಿಂಗರ ಪತ್ನಿ ನಿಧನರಾದರು. ಈ ದಂಪತಿಗಳಿಗಿದ್ದ ನಾಲ್ಕು ವರ್ಷದ ಒಂದೇ ಮಗು ಕೂಡಾ ಅಸುನೀಗಿತು. ಹೀಗಾಗಿ ಅವರು ತಮ್ಮ ಮೊದಲ ಪತ್ನಿಯ ಸಂಬಂಧಿ ಕನ್ಯೆಯನ್ನು ಮದುವೆ ಆದರು. ಮುಂದೆ ಈ ದಂಪತಿಗಳಿಗೆ ಮಕ್ಕಳಾಗಲಿಲ್ಲ. ಹೀಗಾಗಿ ತಮ್ಮ ಎರಡನೇ ಪತ್ನಿ ಇರುವಾಗಲೇ ತಮ್ಮ ಶೆರ್ಪಾ ಸಂಪ್ರದಾಯದಲ್ಲಿರುವ ಸಹಮತದಂತೆ ಮತ್ತೊಂದು ಮದುವೆ ಆದರು. ಈ ದಂಪತಿಗಳಿಗೆ ಮೂರು ಗಂಡು ಮಕ್ಕಳು ಮತ್ತು ಒಂದು ಹೆಣ್ಣು ಮಕ್ಕಳಾದವು.

ಮುಂದೆ ತೇನ್ಸಿಂಗರು 1947ರಲ್ಲಿ ಎವರೆಸ್ಟ್ ಆರೋಹಣದ ಅಯಶಸ್ವಿ ಪ್ರಯತ್ನವೊಂದರಲ್ಲಿ ಭಾಗವಹಿಸಿದರು. ಕೆನಡಾ ಸಂಜಾತ ಆರ್ಲ್ ಡೆನ್ಮನ್, ಆಂಗೆ ದವ ಶೆರ್ಪ ಮತ್ತು ತೇನ್ಸಿಂಗ್ ಅವರು ಎವರೆಸ್ಟ್ ಆರೋಹಣಕ್ಕಾಗಿ ಅಂದು ಅಗತ್ಯವಿದ್ದ ಯಾವುದೇ ಪರವಾನಗಿಯನ್ನೂ ಪಡೆಯದೆಯೇ ಟಿಬೆಟ್ ಅನ್ನು ಅಕ್ರಮವಾಗಿ ಪ್ರವೇಶಿಸಿದರು. ಈ ತಂಡದ ಪ್ರಯತ್ನ 22 ಸಾವಿರ ಅಡಿ ಎತ್ತರದ ಪ್ರದೇಶದಲ್ಲಿದ್ದಾಗ ಅಪ್ಪಳಿಸಿದ ಬಿರುಗಾಳಿಯ ದೆಸೆಯಿಂದಾಗಿ ಭಗ್ನಗೊಂಡಿತು. ಅಂತೂ ತಂಡದ ಮೂವರೂ ಜೀವಸಹಿತ ಹಿಂದಿರುಗಿದರು. 1947ರ ವರ್ಷದಲ್ಲಿ ಮತ್ತೊಂದು ಸ್ವಿಸ್ ಆರೋಹಣ ಕಾರ್ಯಾಚರಣೆಯ ಸಂದರ್ಭದಲ್ಲಿ ಸಿರದಾರ್ ವಾಂಗ್ಡಿ ನೋರ್ಬು ಅವರು ಕೆಳಕ್ಕೆ ಉರುಳಿ ತೀವ್ರ ರೀತಿಯಲ್ಲಿ ಅಪಘಾತಗೊಳಗಾಗುತ್ತಿದ್ದ ಸಂದರ್ಭದಲ್ಲಿ ಅಪ್ರತಿಮ ಸಾಹಸ ಮೆರೆದು ಅವರ ಪ್ರಾಣ ಉಳಿಸಿದ ತೇನ್ಸಿಂಗರು ಮೊಟ್ಟ ಮೊದಲಬಾರಿಗೆ ಸಿರದಾರ್ ಆದರು. ತೇನ್ಸಿಂಗರನ್ನು ಒಳಗೊಂಡ ಈ ತಂಡ 22769 ಅಡಿ ಎತ್ತರದ ಕೇದಾರನಾಥ್ ಶಿಖರವನ್ನು ತಲುಪಿತು.

ತೇನ್ಸಿಂಗರು 1952ರಲ್ಲಿ ಎಡ್ವರ್ಡ್ ವಿಸ್ ಡ್ಯುನಾಂಟ್ ಮತ್ತು ಗ್ರೆಬ್ರಿಯಲ್ ಚವೆಲ್ಲಿ ನೇತೃತ್ವದ ಎರಡು ಸ್ವಿಸ್ ತಂಡಗಳ ಎವರೆಸ್ಟ್ ಆರೋಹಣ ಕಾರ್ಯಾಚರಣೆಗಳಲ್ಲಿ ಭಾಗವಹಿಸಿದರು. 1950 ಮತ್ತು 1951ರ ವರ್ಷಗಳಲ್ಲಿ ಬ್ರಿಟಿಷ್ ಮತ್ತು ಅಮೆರಿಕ ತಂಡಗಳು ನಡೆಸಿದ ಅಯಶಸ್ವಿ ಪ್ರಯತ್ನಗಳ ನಂತರದಲ್ಲಿ ದಕ್ಷಿಣ ನೇಪಾಳದ ಕಡೆಯಿಂದ ಮೌಂಟ್ ಎವರೆಸ್ಟ್ ಏರುವ ಗಂಭೀರ ಪ್ರಯತ್ನ ಇದಾಗಿತ್ತು. ಈ ಪ್ರಯತ್ನದಲ್ಲಿ ತೇನ್ಸಿಂಗ್ ಮತ್ತು ರೇಮಂಡ್ ಲಂಬರ್ಟ್ ಅವರು ಅದುವರೆವಿಗೂ ಅತ್ಯಧಿಕವಾದ 28115 ಅಡಿ ಎತ್ತರದ ಆರೋಹಣವನ್ನು ದಾಖಲಿಸಿದರು. ಈ ಆರೋಹಣದಲ್ಲಿ ತೇನ್ಸಿಂಗ್ ಅವರು ತಂಡದ ಪ್ರಮುಖ ಅಭ್ಯರ್ಥಿ ಎಂದು ಮೊತ್ತ ಮೊದಲಬಾರಿಗೆ ಗುರುತಿಸಲ್ಪಟ್ಟು ಸ್ವಿಸ್ ತಂಡದ ಆತ್ಮೀಯ ಗೆಳೆತನದ ಗೌರವಕ್ಕೆ ಪಾತ್ರಧಾರಿಯಾದರು. ಆ ವರ್ಷದ ಎರಡನೆಯ ಸ್ವಿಸ್ ಆರೋಹಣದ ಪ್ರಯತ್ನ ಪ್ರತೀಕೂಲ ಹವಾಮಾನದ ದೆಸೆಯಿಂದಾಗಿ 26,575 ಅಡಿ ಆರೋಹಣಕ್ಕೆ ಮೊಟಕುಗೊಂಡಿತು.

1953ರ ವರ್ಷದಲ್ಲಿ ತೇನ್ಸಿಂಗರು ಜಾನ್ ಹಂಟರ ನೇತೃತ್ವದ ಐತಿಹಾಸಿಕ ಎವರೆಸ್ಟ್ ಆರೋಹಣದಲ್ಲಿ ಭಾಗಿಯಾದರು. ಅದು ಜಾನ್ ಹಂಟರ ಏಳನೆಯ ಎವರೆಸ್ಟ್ ಆರೋಹಣ ಪ್ರಯತ್ನವಾಗಿದ್ದು ಎಡ್ಮಂಡ್ ಹಿಲೆರಿಯವರು ಆ ತಂಡದ ಸದಸ್ಯರಾಗಿದ್ದರು. ಈ ಕಾರ್ಯಾಚರಣೆಯ ಸಂದರ್ಭದಲ್ಲಿ ಹಿಲೆರಿ ಅವರು ಹಿಮನದಿಯ ಕಂದಕವೊಂದರಲ್ಲಿ ಉರುಳುತ್ತಿದ್ದರು ಎನ್ನುವಂತ ಸಂದರ್ಭದಲ್ಲಿ, ತೇನ್ಸಿಂಗರು ಸಮಯೋಚಿತ ಬುದ್ಧಿವಂತಿಕೆ ಮತ್ತು ಸಾಮರ್ಥ್ಯದಿಂದ ತಮ್ಮ ಮಂಜಿನ ಕೊಡಲಿಯನ್ನು ಉಪಯೋಗಿಸಿ ಹಗ್ಗವನ್ನು ಸುರಕ್ಷಿತವಾಗಿ ಹಿಡಿದುಕೊಂಡ ದೆಸೆಯಿಂದಾಗಿ ಹಿಲೆರಿ ಅವರು ಪ್ರಪಾತಕ್ಕೆ ಬಿದ್ದುಹೋಗುವ ಅಪಘಾತದಿಂದ ಪಾರಾದರು. ತೇನ್ಸಿಂಗರಿಗೆ ಇಲ್ಲಿಂದ ಕೃತಜ್ಞರಾದ ಹಿಲೆರಿಯವರು ತಮ್ಮ ಮುಂದಿನ ಏನೊಂದೂ ಆರೋಹಣದ ಪ್ರಯತ್ನಕ್ಕೂ ಅವರನ್ನೇ ಜೊತೆ ಮಾಡಿಕೊಳ್ಳುವ ನಿರ್ಧಾರ ಮಾಡಿದರು.

ಜಾನ್ ಹಂಟ್ ಅವರ ಈ ಕಾರ್ಯಾಚರಣೆಯು 400ಕ್ಕೂ ಹೆಚ್ಚು ಸದಸ್ಯರನ್ನೊಳಗೊಂಡಿದ್ದು ಅದರಲ್ಲಿ 362 ಹೊರೆಯಾಳುಗಳು ಮತ್ತು 20 ಶೆರ್ಪಾ ಮಾರ್ಗದರ್ಶಕರಿದ್ದರು. ಸಾಗಣೆಗೊಂಡಿದ್ದ ಒಟ್ಟು ಸಾಮಾನಿನ ತೂಕವೇ 10000 ಪೌಂಡುಗಳಷ್ಟಿತ್ತು. ಹೀಗಾಗಿ ಅದೊಂದು ಬೃಹತ್ ತಂಡದ ಪರಿಶ್ರಮವಾಗಿತ್ತು.

ಮಾರ್ಚ್ 1953ರಲ್ಲಿ ತನ್ನ ಪ್ರಾರಂಭಿಕ ಶಿಬಿರವನ್ನು (base camp) ಸ್ಥಾಪಿಸಿಕೊಂಡ ಈ ಆರೋಹಣ ತಂಡ ಸಾವಧಾನವಾಗಿ ಮುಂದುವರೆಯುತ್ತಾ 25900 ಅಡಿ ಎತ್ತರದಲ್ಲಿ ತನ್ನ ಪೂರ್ವಾಂತಿಮ ಶಿಬಿರವನ್ನು ಸ್ಥಾಪಿಸಿಕೊಂಡಿತು. ಮೇ 26ರ ದಿನಾಂಕದಂದು ತಂಡದ ಸದಸ್ಯರಾದ ಟಾಮ್ ಬೋರ್ಡಿಲೋನ್ ಹಾಗೂ ಚಾರ್ಲ್ಸ್ ಇವಾನ್ಸ್ ಅವರು ಆರೋಹಣವನ್ನು ಕೈಗೊಂಡು ದಕ್ಷಿಣ ಶೃಂಗವನ್ನು ಮುಟ್ಟಿ ಎವರೆಸ್ಟ್ ಶಿಖರದ ತುತ್ತ ತುದಿಗೆ 300 ಅಡಿ ಸಮೀಪಕ್ಕೆ ಕ್ರಮಿಸಿದ್ದರಾದರೂ ಇವಾನ್ಸ್ ಅವರ ಆಮ್ಲಜನಕ ವ್ಯವಸ್ಥೆ ವಿಫಲವಾದ್ದರಿಂದ ಹಿಂದಿರುಗಬೇಕಾಯಿತು. ನಂತರದಲ್ಲಿ ನಾಯಕ ಜಾನ್ ಹಂಟರು ತೇನ್ಸಿಂಗ್ ಮತ್ತು ಹಿಲೆರಿಯವರನ್ನು ಆರೋಹಣಕ್ಕೆ ಆದೇಶಿಸಿದರು.

ಆಂಗ್ ನ್ಯಿಮ, ಆಲ್ಫ್ರೆಡ್ ಗ್ರೆಗೊರಿ ಹಾಗೂ ಜಾರ್ಜ ಲೊವೆ ಈ ಮೂವರ ಬೆಂಬಲದೊಂದಿಗೆ ತೇನ್ಸಿಂಗ್ ಮತ್ತು ಹಿಲೆರಿ ಆರೋಹಣ ಸಾಹಸಕ್ಕೆ ಹೊರಟರು. ದಕ್ಷಿಣ ಶೃಂಗದಲ್ಲಿ ಸುರಿಯುತ್ತಿದ್ದ ಹಿಮ ಮತ್ತು ಬರದಿಂದ ಬೀಸುತ್ತಿದ್ದಗಾಳಿ ಇವರುಗಳನ್ನು ಎರಡು ದಿನಗಳ ಕಾಲ ಚಲನೆಯಿಲ್ಲದಂತೆ ನಿರ್ಬಂಧಿಸಿತ್ತು. ಮೇ 28ರ ದಿನದಂದು, ಮೇಲ್ಕಂಡ ಮೂವರು ಬೆಂಬಲಿಗರು ಪರ್ವತದಿಂದ ಕೆಳಗಿಳಿದು ಹೋದ ಹಾಗೆ, ಆರೋಹಣದತ್ತ ಸಾಗಿದ ತೇನ್ಸಿಂಗ್ ಮತ್ತು ಹಿಲೆರಿ ಮೇ 28ರ ದಿನದಂದು 27,900 ಅಡಿ ಎತ್ತರದಲ್ಲಿ ತಮ್ಮ ಒಂದು ಡೇರೆಯನ್ನು ಸ್ಥಾಪಿಸಿದರು. ಮಾರನೆಯ ದಿನ ಬೆಳಗಾಗುತ್ತಿದ್ದಂತೆ, ಹಿಲೆರಿ ಅವರು ಡೇರೆಯ ಹೊರಗಿಟ್ಟಿದ ಬೂಟುಗಳು ಪೂರ್ಣ ಹೆಪ್ಪುಗೊಂಡುಬಿಟ್ಟಿದ್ದವು.

ಪುನಃ ಬೂಟುಗಳನ್ನು ಉಪಯೋಗಿಸುವ ಸ್ಥಿತಿಗೆ ತಂದುಕೊಳ್ಳಲು ಎರಡು ಗಂಟೆಗಳು ಶ್ರಮಿಸಿದ ನಂತರದಲ್ಲಿ ತೇನ್ಸಿಂಗ್ ಮತ್ತು ಹಿಲೆರಿ ತಮ್ಮ ಹದಿನಾಲ್ಕು ಕೆ.ಜಿ.ತೂಕದ ಬೆನ್ನು ಮೂಟೆಗಳೊಡನೆ ಅಂತಿಮ ಘಟ್ಟದ ಆರೋಹಣದೆಡೆಗೆ ಕಾರ್ಯಪ್ರವೃತ್ತರಾದರು. ಈ ಅಂತಿಮ ಆರೋಹಣದಲ್ಲಿ ಅವರಿಗೆ 40 ಅಡಿ ಎತ್ತರದ ಒಂದು ಬಂಡೆ ಇರುವುದು ಅನುಭವಕ್ಕೆ ಬಂತು. ಮುಂದೆ ಈ ಬಂಡೆಯನ್ನು ‘ಹಿಲೆರಿ ಸ್ಟೆಪ್’ ಎಂದು ಹೆಸರಿಸಲಾಗಿದೆ. ಹಿಲೆರಿ ಅವರು ದಟ್ಟಣೆಯ ಹಿಮದಿಂದಾವೃತವಾಗಿದ್ದ ಈ ಬಂಡೆಯ ಗೋಡೆಯ ಮೇಲೆ ಹಿಮಗಡ್ಡೆಗಳ ನಡುವಿನಲ್ಲಿ ಪಾದ ಊರುವುದಕ್ಕೆ ಅವಕಾಶಗಳನ್ನು ಅರಸುತ್ತಾ ಸಾಗಿದಂತೆ, ತೇನ್ಸಿಂಗ್ ಅವರನ್ನು ಹಿಂಬಾಲಿಸಿದರು. ಈ ಬಂಡೆಯ ಎತ್ತರವನ್ನು ಅತ್ಯಂತ ಸಾಹಸದಿಂದ ಪೂರೈಸಿದ ಈ ಜೋಡಿಗೆ ಮುಂದಿನ ಭಾಗದ ಏರುವಿಕೆ ಕಡಿಮೆ ಕ್ಲಿಷ್ಟಕರ ಅನಿಸಿದ್ದು ಅಚ್ಚರಿಯೇನಲ್ಲ! ಹಿಲೆರಿ ಅವರ ಮಾತುಗಳಲ್ಲೇ ಹೇಳುವುದಾದರೆ “ಮುಂದೆ ಹೆಪ್ಪುಗಟ್ಟಿಕೊಂಡಿದ್ದ ಹಿಮಗಡ್ಡೆಗಳಿಗೆ ಕೆಲವು ಉಳಿಸ್ಪರ್ಶ ನೀಡುವುದರೊಂದಿಗೆ ನಾವು ತುದಿಯನ್ನೇರಿಬಿಟ್ಟಿದ್ದೆವು”. ಹೀಗೆ ಯಶಸ್ಸಿನ ಆರೋಹಣಗೈದ ಈ ಅಪ್ರತಿಮ ಜೋಡಿ 29028 ಅಡಿ ಅಥವ 8848 ಮೀಟರಿನ ವಿಶ್ವದ ಅತಿ ಎತ್ತರದ ತುದಿಯಾದ ಮೌಂಟ್ ಎವರೆಸ್ಟ್ ಶೃಂಗವನ್ನು ಮೇ 29, 1953ರ ದಿನದ ಬೆಳಿಗ್ಗೆ 11.40 ರ ಸಮಯದಲ್ಲಿ ಮುಟ್ಟಿದ್ದರು.

ವಿಶ್ವದೆತ್ತರದ ಈ ಎವರೆಸ್ಟ್ ಪರ್ವತದ ತುದಿಯಲ್ಲಿ ಹಿಲೆರಿ ಮತ್ತು ತೇನ್ಸಿಂಗ್ ಹದಿನೈದು ನಿಮಿಷಗಳನ್ನು ಕಳೆದರು. ತೇನ್ಸಿಂಗರು ತಮ್ಮ ಕೊಡಲಿಯನ್ನು ಹಿಡಿದುಕೊಂಡಿರುವ ಪ್ರಸಿದ್ಧ ಚಿತ್ರವನ್ನು ಹಿಲೆರಿ ತಮ್ಮ ಕ್ಯಾಮರಾದಲ್ಲಿ ಸೆರೆಹಿಡಿದುಕೊಂಡರು. ಒಂದು ವರದಿಯ ಪ್ರಕಾರ ತೇನ್ಸಿಂಗ್ ಕ್ಯಾಮೆರಾವನ್ನೂ ಎಂದೂ ಉಪಯೋಗಿಸಲು ಕಲಿತಿಲ್ಲದಿದ್ದ ಕಾರಣದಿಂದ ಹಿಲೆರಿ ಅವರ ಚಿತ್ರ ಮೂಡಿಬರುವುದು ಸಾಧ್ಯವಾಗಲಿಲ್ಲ. ಆದರೆ ತೇನ್ಸಿಂಗರು ತಮ್ಮ ಆತ್ಮಚರಿತ್ರೆ ‘ಮ್ಯಾನ್ ಆಫ್ ಮೌಂಟ್ ಎವರೆಸ್ಟ್’ ಕೃತಿಯಲ್ಲಿ ತಾವು ಹಿಲೆರಿ ಅವರಿಗೆ “ನಾನು ನಿಮ್ಮ ಚಿತ್ರ ತೆಗೆಯುತ್ತೇನೆ ಎಂದಾಗ ಅವರು ಯಾವುದೋ ಕಾರಣದಿಂದ ಬೇಡವೆಂದು ತಲೆ ಆಡಿಸಿಬಿಟ್ಟರು, ಅವರಿಗೆ ಅದು ಬೇಕೆನಿಸಲಿಲ್ಲ” ಎಂದು ನುಡಿದಿದ್ದಾರೆ. ತಾವು ಮೇಲೇರಿದ್ದು ಸುಳ್ಳಲ್ಲವೆಂದು ನಿರೂಪಿಸುವ ಇನ್ನೂ ಹಲವಾರು ಚಿತ್ರಗಳನ್ನು ಮೇಲಿನಿಂದ ಕೆಳಮುಖವಾಗಿ ತೆಗೆದುಕೊಂಡರು. ಅಲ್ಲಿಂದ ಕೆಳಗಿಳಿಯುವುದು ಕೂಡಾ ಸುಲಭವಾಗಿರಲಿಲ್ಲ. ಸಡಿಲಗೊಂಡ ಹಿಮ ಹಾದಿಯನ್ನೆಲ್ಲಾ ಮುಚ್ಚಿಕೊಂಡುಬಿಟ್ಟು ಇವರು ಸರಿದುಹೋಗಿದ್ದ ದಾರಿ ಕಾಣದಂತಾಗಿದ್ದರಿಂದ ಮತ್ತೊಮ್ಮೆ ಸಾಹಸ ಮತ್ತು ಜಾಗರೂಕತೆಗಳಿಂದ ಕೂಡಿದ ಎಚ್ಚರವನ್ನು ಕಾಯ್ದುಕೊಳ್ಳಬೇಕಾಯಿತು. ಇವರು ಕೆಳಗಿಳಿಯುತ್ತಿದ್ದಂತೆ ಇವರು ಮೊದಲು ಕಂಡ ವ್ಯಕ್ತಿ ಇವರಿಗಾಗಿ ಬಿಸಿ ಬಿಸಿ ಸೂಪ್ ಅನ್ನು ಪ್ರೀತಿಯಿಂದ ಹೊತ್ತು ತಂದ ಲೋವೆ.

ಮುಂದೆ ತೇನ್ಸಿಂಗರು ಭಾರತ ಮತ್ತು ನೇಪಾಳಗಳಲ್ಲಿ ಪ್ರಶಂಸೆಯ ಸುರಿಮಳೆಯನ್ನೇ ಅನುಭವಿಸಿದರು. ಹಿಲೆರಿ ಮತ್ತು ಜಾನ್ ಹಂಟ್ ಅವರಿಗೆ ಎರಡನೇ ಎಲಿಜಬೆತ್ ಮಹಾರಾಣಿಯವರ ನೈಟ್ ಗೌರವ ದೊರಕಿತು. ತೇನ್ಸಿಂಗರಿಗೂ ಈ ಗೌರವವನ್ನು ಪ್ರಕಟಿಸಲಾಗಿತ್ತಾದಾರೂ, ಭಾರತೀಯ ಪ್ರಜೆಯನ್ನು ‘knighted’ ಎಂದೆಣಿಸುವುದಕ್ಕೆ ಭಾರತ ಸರ್ಕಾರಕ್ಕಿದ್ದ ಅಸಮ್ಮತಿಯ ಮನೋಧರ್ಮವನ್ನು ಗೌರವಿಸಿದ ಯುನೈಟೆಡ್ ಕಿಂಗ್ಡಂ ಅದಕ್ಕೆ ಬದಲಾಗಿ ತೇನ್ಸಿಂಗರಿಗೆ ಆರೋಹಣ ಕಾರ್ಯಾಚರಣೆಯಲ್ಲಿನ ಉತ್ಕೃಷ್ಟ ಪರಿಶ್ರಮಕ್ಕಾಗಿ ಜಾರ್ಜ್ ಪದಕವನ್ನು ನೀಡಿ ಗೌರವಿಸಿತು.

ತೇನ್ಸಿಂಗರ ಮಾತಿನಲ್ಲೇ ಅವರ ಬದುಕನ್ನು ಕುರಿತು ಕೇಳುವುದಾದರೆ “ಇದೊಂದು ಸುದೀರ್ಘ ಪಯಣ! ಪರ್ವತಗಳಲ್ಲಿನ ಕೂಲಿಯಾಗಿ ಎಷ್ಟೆಷ್ಟೋ ಮಣಗಳ ಹೊರೆಹೊತ್ತವನಾಗಿ ಮೊದಲ್ಗೊಂಡು, ಸಮತಟ್ಟಾದ ನೆಲದಲ್ಲಿ ನಿಂತು ಅಚ್ಚುಕಟ್ಟಾದ ಕೋಟನ್ನು ಧರಿಸಿ ಅದರ ಮೇಲೆ ಸಾಲು ಸಾಲಾದ ಪದಕಗಳ ಹಾರವನ್ನೇ ಧರಿಸಿ ಆದಾಯ ತೆರಿಗೆಯ ಕುರಿತು ಚಿಂತಿಸುವವನವರೆಗೆ ನನ್ನದೀ ಸುದೀರ್ಘ ಪಯಣ.”

ಊರ ಮಳೆ ನಿಂತರೂ ಮರದಿಂದ ಮಳೆ ನಿಲ್ಲುವುದಿಲ್ಲ ಎನ್ನುವಂತೆ ಪತ್ರಿಕಾ ಮಹಾಶಯರು ಸುಮ್ಮನೇ ಬಿಡುವವರಲ್ಲ. “ಇಬ್ಬರೂ ಮೌಂಟ್ ಎವರೆಸ್ಟ್ ಏರಿದರು ಸರಿ. ಆದರೆ ಅದನ್ನು ಮೊದಲು ಮೆಟ್ಟಿದವರ್ಯಾರು?” ಇದು ಪತ್ರಕರ್ತರ ಪ್ರಶ್ನೆ. ಅದನ್ನು ಈಗಲೂ ಪ್ರಶ್ನಿಸುತ್ತಿರುವ ವಿಚಿತ್ರ ಮನಗಳು ಸಾಕಷ್ಟಿವೆ. ಅದಕ್ಕೆ ತಂಡದ ನಾಯಕರಾಗಿದ್ದ ಕೊಲೆನೆಲ್ ಹಂಟ್ ಅವರು “ಈ ಈರ್ವರೂ ಒಂದು ತಂಡವಾಗಿ ಮೇಲೇರಿದರು” ಎಂದು ಹೇಳಿದ ಮಾತು ಅತ್ಯಂತ ಸಮರ್ಪಕವಾದದ್ದು ಮತ್ತು ಎಲ್ಲ ಕ್ರೀಡಾಮನೋಧರ್ಮಗಳ ಆಶಯದಿಂದ ಗೌರವಾನ್ವಿತವಾದದ್ದು. ಈ ಯಶಸ್ಸನ್ನು ಸಮವಾಗಿ ಮತ್ತು ಪಾರಸ್ಪರಿಕವಾದ ಗೌರವದೊಂದಿಗೆ ಭಾವಿಸಿಕೊಂಡ ತೇನ್ಸಿಂಗ್ ಮತ್ತು ಹಿಲೆರಿ ಅವರಂತೂ ಜೀವನ ಪರ್ಯಂತ ಅತ್ಯಂತ ಒಳ್ಳೆಯ ಗೆಳೆಯರಾಗಿ ಬಾಳಿದರು. ಭಾರತೀಯ ಉಪಖಂಡದ ನಾವು ತೇನ್ಸಿಂಗರ ಕುರಿತಾದ ಪ್ರೀತಿಯನ್ನು ಹೆಚ್ಚಿಗೆ ಹೇಳುವುದರ ಜೊತೆ ಜೊತೆಗೆ ಎಡ್ಮಂಡ್ ಹಿಲೆರಿಯ ಸಹಾಯ ಸಹಕಾರವಿಲ್ಲದೆ ಮೌಂಟ್ ಎವರೆಸ್ಟ್ ಆರೋಹಣ ಮಾಡುವುದು ಶಕ್ಯವಿರಲಿಲ್ಲ ಎಂಬುದನ್ನು ಅರಿಯುವುದು ಅವಶ್ಯ. ಎಡ್ಮಂಡ್ ಹಿಲೆರಿ ಅವರು ಮಾಡಿದ ಸಮಾಜ ಸೇವಾ ಕಾರ್ಯ ಕೂಡಾ ಅತ್ಯಂತ ಹಿರಿಯಮಟ್ಟದ್ದು. ಹೀಗಾಗಿ ಮೊದಲು ಮೌಂಟ್ ಎವರೆಸ್ಟ್ ಆರೋಹಣಕ್ಕೆ ನಾವು ಎಡ್ಮಂಡ್ ಹಿಲೆರಿಯವರನ್ನೂ ಯಾವುದೇ ರೀತಿಯಲ್ಲೂ ಕಡಿಮೆ ಇಲ್ಲದಂತೆ ಸ್ಮರಿಸುವುದು ಒಳ್ಳೆಯ ಸಂಪ್ರದಾಯವಾದೀತು.

ಮುಂದೆ ತೇನ್ಸಿಂಗರು 1954ರಲ್ಲಿ ಡಾರ್ಜಿಲಿಂಗ್ನಲ್ಲಿ ಸ್ಥಾಪಿತಗೊಂಡ ಹಿಮಾಲಯನ್ ಮೌಂಟೇನೇರಿಂಗ್ ಇನ್ಸ್ಟಿಟ್ಯೂಟ್ ಸಂಸ್ಥೆಯ ನಿರ್ದೇಶಕರಾದರು. 1978ರ ವರ್ಷದಲ್ಲಿ ಅವರು ತಮ್ಮದೇ ಆದ ತೇನ್ಸಿಂಗ್ ನೋರ್ಗೆ ಅಡ್ವೆಂಚರ್ಸ್ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ಮುಂದೆ ಅವರ ಪುತ್ರರಾದ ಜಮ್ಲಿಂಗ್ ತೇನ್ಸಿಂಗ್ ನೋರ್ಗೆ ಅವರು ಈ ಸಂಸ್ಥೆಯನ್ನು 2003 ರ ವರ್ಷದವರೆಗೆ ನಡೆಸಿದರಲ್ಲದೆ ಸ್ವತಃ ಅವರು ಕೂಡಾ 1996ರ ವರ್ಷದಲ್ಲಿ ಮೌಂಟ್ ಎವರೆಸ್ಟ್ ಆರೋಹಣವನ್ನು ಯಶಸ್ವಿಯಾಗಿ ಕೈಗೊಂಡರು.

ತೇನ್ಸಿಂಗರಿಗೆ ಅವರು ಕ್ರಮಿಸಿದ ಬದುಕಿನ ಹಾದಿಯಲ್ಲಿ ದೊರೆತ ಗೌರವಗಳು ಅನೇಕ. 1938 ರ ವರ್ಷದಲ್ಲಿ ಎವರೆಸ್ಟ್ ಏಕ್ಸ್ಪೆಡಿಶನ್ ಕಾರ್ಯದಲ್ಲಿ ಅವರು ನಡೆಸಿದ ಅಮೂಲ್ಯ ಸೇವೆಗಾಗಿ ‘ಅತ್ಯಂತ ಎತ್ತರದ ಪರ್ವತಪ್ರದೇಶಗಳಲ್ಲಿನ ಕಾರ್ಯನಿರ್ವಹಣೆಗಾಗಿನ ಟೈಗರ್ ಮೆಡಲ್’ ಸಂದಿತು. ಈಗಾಗಲೇ ಹೇಳಿದಂತೆ 1953 ರಲ್ಲಿ ಎವರೆಸ್ಟ್ ಸಾಧನೆಗಾಗಿ ಜಾರ್ಜ್ ಪದಕಗೌರವ ಸಂದಿತು. ಅದೇ ವರ್ಷದಲ್ಲಿ ಅವರಿಗೆ ನೇಪಾಳದ ‘ಆರ್ಡರ್ ಆಫ್ ದಿ ಸ್ಟಾರ್ ಆಫ್ ನೇಪಾಳ್’ ಗೌರವ ಸಂದಿತು. 1959 ರ ವರ್ಷದಲ್ಲಿ ಭಾರತ ಸರ್ಕಾರ ಅವರಿಗೆ ಪದ್ಮಭೂಷಣ ಗೌರವವನ್ನರ್ಪಿಸಿತು.

ತೇನ್ಸಿಂಗರು 9ನೇ 1986 ರ ವರ್ಷದಲ್ಲಿ ಈ ಲೋಕವನ್ನಗಲಿದರು. ಸೆಪ್ಟೆಂಬರ್ 2013 ರ ವರ್ಷದಲ್ಲಿ ನೇಪಾಳ ಸರ್ಕಾರವು ತನ್ನ 25971 ಅಡಿ ಎತ್ತರದ ಶಿಖರಕ್ಕೆ ತೇನ್ಸಿಂಗ್ ಪೀಕ್ ಎಂದು ಹೆಸರಿಸಲು ತೀರ್ಮಾನಿಸಿತು. ಹಲವಾರು ಕಷ್ಟದ ಕಣಿವೆಗಳು, ಪ್ರದೇಶಗಳಿಗೆ ತೇನ್ಸಿಂಗರ ಹೆಸರು ಆಗಾಗ ನಾಮಕರಣಗೊಳ್ಳುತ್ತಲೇ ಇದೆ. ತೇನ್ಸಿಂಗ್ ಮತ್ತು ಹಿಲೆರಿ ಹೆಸರನ್ನು ಒಂದು ವಿಮಾನ ನಿಲ್ದಾಣಕ್ಕೂ ಇಡಲಾಗಿದೆ. ಇವೆಲ್ಲಕ್ಕೂ ಮಿಗಿಲಾಗಿ ಒಬ್ಬ ಸಾಮಾನ್ಯ ಕೂಲಿ ಆಳು ಕೂಡಾ ತಾನು ಮಾಡಿದ ಕಾಯಕದಲ್ಲಿ ನಿಷ್ಠೆ, ಶ್ರದ್ಧೆ, ಸಾಹಸಗಳಿಂದ ಹೇಗೆ ಔನ್ನತ್ಯದಲ್ಲಿ ಇರಬಹುದೆಂಬುದಕ್ಕೆ ತೇನ್ಸಿಂಗ್ ನಮ್ಮ ನೆನಪಿಗೆ ಬರುವ ಪ್ರಮುಖ ಹೆಸರು. ಈ ಮಹಾನ್ ಚೇತನದ ಹೆಸರು ವಿಶ್ವದಲ್ಲೆಂದೆಂದೂ ಚಿರಶಾಶ್ವತ.

ಎನ್.ಎನ್.ಕಬ್ಬೂರ
ಶಿಕ್ಷಕರು, ತಾ-ಸವದತ್ತಿ ಜಿ-ಬೆಳಗಾವಿ
ಮೊಬೈಲ್-9740043452
mutturaj.kabbur@gmail.com

- Advertisement -
- Advertisement -

Latest News

“ಅಪ್ನಾದೇಶ” ಬೆಳೆದು ಬಂದ ಹಿನ್ನೆಲೆ

೨೦೧೧ ರಲ್ಲಿ ಧಾರವಾಡದಲ್ಲಿ “ಅಪ್ನಾದೇಶ” ಎಂಬ ಸಂಘಟನೆ ಜನ್ಮ ತಾಳಿತು.ಇದಕ್ಕೆ ಸ್ಪೂರ್ತಿ ಅಂದಿನ ಐ.ಎ.ಎಸ್. ಅಧಿಕಾರಿ ಭರತಲಾಲ್ ಮೀನಾ. ಶಿಕ್ಷಕರು, ಸಮಾಜ ಚಿಂತಕರು, ನ್ಯಾಯವಾದಿಗಳು, ವಿವಿಧ...
- Advertisement -

More Articles Like This

- Advertisement -
close
error: Content is protected !!
Join WhatsApp Group