‘ಎಲ್ಲಾ ರಂಗದಲ್ಲೂ ಮಹಿಳೆಯರ ಪಾತ್ರ ಹಿರಿದು’ – ಚಲನಚಿತ್ರ ನಟಿ ರೇಖಾದಾಸ್

0
168

ಮೈಸೂರು – ನಗರದ ಸ್ವರಲೋಕ ಸಾಂಸ್ಕೃತಿಕ ಕಲಾ ವೇದಿಕೆ ವತಿಯಿಂದ ಇಂದು ಮೈಸೂರಿನ ಪುರಭವನದಲ್ಲಿ ವಿಶ್ವ ಮಹಿಳಾ ದಿನಾಚರಣೆ ಹಾಗೂ ಕರೋಕೆ ಗಾಯನ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.

       ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಚಲನಚಿತ್ರ ಹಾಸ್ಯನಟಿ ಶ್ರೀಮತಿ ರೇಖಾದಾಸ್ ಅವರು ಜ್ಯೋತಿ ಬೆಳಗಿಸಿ, ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಎಲ್ಲಾ ರಂಗಗಳಲ್ಲಿಯೂ ಮಹಿಳೆಯರಿಗೆ ಸಮಾನ ಸ್ಥಾನವನ್ನು ಸರ್ಕಾರವು ಕಲ್ಪಿಸಿದೆ. ಇದು ಅತ್ಯಂತ ಹರ್ಷದಾಯಕ ಸಂಗತಿ. ಮಹಿಳೆಯು ನಾಲ್ಕೂ ಕೋಣೆಗಳ ಮಧ್ಯೆ ಜೀವನ ನಡೆಸುತ್ತಿದ್ದ ಕಾಲವೊಂದಿತ್ತು. ಆದರೆ ಪ್ರಸ್ತುತ ದಿನಗಳಲ್ಲಿ ಎಲ್ಲಾ ರಂಗಗಳಲ್ಲಿಯೂ ಮಹಿಳೆಯರು ಹೆಚ್ಚಿನ ಸ್ಥಾನವನ್ನು ಪಡೆದಿದ್ದಾರೆ. ರಾಜಕೀಯ, ಚಲನಚಿತ್ರ, ರಂಗಭೂಮಿ, ನೌಕಾಪಡೆ, ವಾಯುಪಡೆ, ವೈದ್ಯಕೀಯ, ವಿಜ್ಞಾನ ಕ್ಷೇತ್ರಗಳಲ್ಲಿ ಹೆಣ್ಣು ಮಕ್ಕಳು ಗಣನೀಯ ಪ್ರಮಾಣದಲ್ಲಿ ಸಾಧನೆ ಮಾಡಿರುವುದು ಇದಕ್ಕೆ ಸಾಕ್ಷಿಯಾಗಿದೆ ಎಂದರು. 

     ಈಗಾಗಲೇ ಚಲನಚಿತ್ರ ಹಾಗೂ ರಂಗಭೂಮಿಯಲ್ಲಿ ಸ್ತ್ರೀ ಪಾತ್ರಗಳ ಅಭಿನಯದಿಂದ ಸಮಾಜದಲ್ಲಿ ಉತ್ತಮವಾದ, ಆರೋಗ್ಯಕರವಾದ ಬದಲಾವಣೆಯನ್ನು ಕಾಣುತ್ತಿದ್ದೇವೆ ಎಂದು ಅಭಿಪ್ರಾಯಪಟ್ಟರು.     

       ಹಿಂದೆ ಚಲನಚಿತ್ರ ಮತ್ತು ರಂಗಭೂಮಿ ಕಲೆಗಳಿಗೆ ಹೆಣ್ಣು ಮಕ್ಕಳ ಅಭಿನಯಕ್ಕೆ ಸಂಖ್ಯೆ ಕಡಿಮೆ ಇರುತ್ತಿತ್ತು. ಆದರೆ ಇಂದಿನ ಸ್ಪರ್ಧಾ ಯುಗದಲ್ಲಿ ಪೈಪೋಟಿ ಹೆಚ್ಚಿ, ಮಹಿಳೆಯರು ಭಾಗವಹಿಸುತ್ತಿರುವುದು ಸಂತೋಷವಾಗಿದೆ ಎಂದರು.

     ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಆಗಮಿಸಿದ್ದ ಹಿನ್ನೆಲೆ ಗಾಯಕಿ ಜೋಗಿ ಸುನಿತಾ ಅವರು ಮಾತನಾಡಿ, ಚಲನಚಿತ್ರ ಮತ್ತು ಜಾನಪದ ಕ್ಷೇತ್ರಗಳಲ್ಲಿ ಮಹಿಳೆಯರು ಹೆಚ್ಚು ಗಾಯನ, ಸಂಗೀತ, ನೃತ್ಯ ಕ್ಷೇತ್ರಗಳಲ್ಲಿ ಭಾಗವಹಿಸಿರುವುದು ಹೆಮ್ಮೆಯ ವಿಷಯ ಎಂದರು. 

     ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ವರಲೋಕ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷರಾದ ಹಾಗೂ ಆಯೋಜಕರಾದ ಯಶಸ್ವಿನಿ ಲೋಕೇಶ್ವರ್ ಅವರು ಮಾತನಾಡಿ, ಕರೋಕೆ ಗೀತೆಗಳನ್ನು ಹಾಡಿದ ಗಾಯಕ, ಗಾಯಕಿಯರಿಗೆ ಶುಭ ಹಾರೈಸಿದರು.

      ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳೆಯರಾದ ಡಾ.ರೇಖಾ ಅರುಣ್, ನಳಿನಿ ತಮ್ಮಯ್ಯ, ಇನ್ಸ್ ಪೆಕ್ಟರ್ ಮಮತಾ ಹಾಗೂ ಧನಲಕ್ಷ್ಮಿ, ಶುಶ್ರೂಷಕಿ ಕೆ.ಕೆ.ಯಶೋಧ, ರಂಗಭೂಮಿ ಕಲಾವಿದೆ ಮೇರಿ ವಸಂತ್, ಪ್ರಾಧ್ಯಾಪಕಿ ಪ್ರಿಯಾಂಕರವರನ್ನು ಸನ್ಮಾನಿಸಿ, ಗೌರವಿಸಲಾಯಿತು. 

      ಕಾರ್ಯಕ್ರಮದಲ್ಲಿ ಗೌರವ ಅಧ್ಯಕ್ಷರಾದ ಕಲಾವಿದ ಗೋಪಾಲ್‍ರಾವ್, ಉಪಾಧ್ಯಕ್ಷ ಲೋಕೇಶ್ ಕೆ.ಎಸ್., ವಿಜಯಶ್ರೀ, ಪ್ರಧಾನ ಕಾರ್ಯದರ್ಶಿ ಪ್ರಿಯಾ ಎಸ್. ಕಾರ್ಯದರ್ಶಿ ಕವಿತಾ, ಖಜಾಂಚಿ ಅಂಕಿತಾ, ಸಂಘಟನಾ ಕಾರ್ಯದರ್ಶಿ ಶಿವರಾಜ್ ಸಿ.ಎಸ್. ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೆ 153ಕ್ಕೂ ಹೆಚ್ಚು ವಿವಿಧ ಜಿಲ್ಲೆಗಳಿಂದ ಗಾಯಕ, ಗಾಯಕಿಯರು ಕರೋಕೆ ಗಾಯನದಲ್ಲಿ ಭಾಗವಹಿಸಿದ್ದರು.