spot_img
spot_img

ಕಾಯಕವೇ ಕೈಲಾಸ ಎಂದು ಸಾರಿದ ಬಸವಣ್ಣ

Must Read

- Advertisement -

ಮನೆ ನೋಡಾ ಬಡವರು.ಮನ ನೋಡಾ ಘನ ಸೋಂಕಿನಲ್ಲಿ ಶುಚಿ. ಸರ್ವಾಂಗ ಕಲಿಗಳು.ಪಸರಕ್ಕನುವಿಲ್ಲ.ಬಂದ ತತ್ಕಾಲಕ್ಕೆ ಉಂಟು ಕೂಡಲಸಂಗನ ಶರಣರು ಸ್ವತಂತ್ರ ಧೀರರು

ಎಂದು ಬಸವಣ್ಣವರು ಕಾಯಕ ಜೀವಿಗಳಾದ ಆಯ್ದಕ್ಕಿ ಲಕ್ಕಮ್ಮ ಮತ್ತು ಮಾರಯ್ಯನವರ ವ್ಯಕ್ತಿತ್ವವನ್ನು ಕುರಿತು ಹೇಳುವಾಗ ಅವರು ಘನಮನದವರು ಪರಿಶುದ್ಧರು ಸ್ವತಂತ್ರ ಧೀರರು ಆಗಿದ್ದಾರೆ ಎಂದು ಶರಣರು ತಮ್ಮ ದುಡಿಮೆಯ ಮೂಲಕ ಸ್ವತಂತ್ರ ಧೀರರು ಎಂಬುದನ್ನು ತಿಳಿಸಿರುವರು. ಶರಣ ಪರಂಪರೆಯಲ್ಲಿ ಕಾಯಕಕ್ಕೆ ಇರುವ ಮಹತ್ವವನ್ನು ಎಷ್ಟು ಸ್ಮರಿಸಿದರು ಕಡಿಮೆಯೇ. ದುಡಿದು ತಿನ್ನಬೇಕು.ದುಡಿಯುತ್ತ ದಾನ ಮಾಡಬೇಕು.ಬಡವನಾದರೂ ಚಿಂತೆಯಿಲ್ಲ ಪ್ರಾಮಾಣಿಕತೆಯ ಬದುಕು ನಮ್ಮದಾಗಿರಬೇಕು ಎಂದು ಸಂದೇಶ ನೀಡಿದ ಬಸವಣ್ಣನವರ ಬದುಕಿನ ಮೌಲ್ಯಗಳು ಇಂದಿಗೂ ಪ್ರಸ್ತುತ.

ನಾವು ಎಷ್ಟು ಹೊತ್ತು ಕೆಲಸ ಮಾಡುತ್ತೇವೆ ಎಂಬುದು ಮುಖ್ಯವಲ್ಲ ಹೇಗೆ ಮಾಡುತ್ತೇವೆ ಎಂಬುದು ಮುಖ್ಯ. ಅಧಿಕವಾಗಿ ಮಾಡುವುದಕ್ಕಿಂತ ಸರಿಯಾಗಿ ಮಾಡುವುದು ಶ್ರೇಷ್ಠ.ಇದು ಇಂದಿನ ದಿನಗಳಲ್ಲಿ ಯಾವುದೇ ಕೆಲಸ ಮಾಡಿ ಅದರಲ್ಲಿ ನಿಮ್ಮತನವಿರಲಿ ಎಂಬುದಕ್ಕೆ ಒಂದು ಮಾತು.ಬಸವಣ್ಣನವರು ಕಾಯಕ ನಿಷ್ಠೆಯ ಬಗ್ಗೆ ತಮ್ಮ ಹಲವಾರು ವಚನಗಳಲ್ಲಿ ಹೇಳಿದ್ದಾರೆ. ಬಸವಣ್ಣನವರ ಕಾಯಕ ತತ್ವಪ್ರೇರಣೆಯಿಂದ ಅನೇಕ ಶರಣ ಶರಣೆಯರು ವಿವಿಧ ಕಾಯಕದಲ್ಲಿ ತೊಡಗಿದರು.ಅವರ ಕಾಯಕದಿಂದ ಅವರ ಹೆಸರುಗಳು ಇತರರಿಗೆ ಪ್ರೇರಕ ಶಕ್ತಿಯಾದವು ಉದಾಹರಣೆಗೆ ಆಯ್ದಕ್ಕಿ ಲಕ್ಕಮ್ಮ. ಅಮುಗೆ ರಾಯಮ್ಮ.ಮೋಳಿಗೆ ಮಹಾದೇವಿ.ಇಂತಹ ಹಲವಾರು ಶರಣೆಯರು ಕೂಡ ಕಾಯಕ ತತ್ವದ ಮೂಲಕ ಸ್ವಾತಂತ್ರö್ಯ ಅನುಭವಿಸಿದರು.

- Advertisement -

WORK IS WORSHIP ಅಂದರೆ ಕಾಯಕವೇ ಕೈಲಾಸ ಎಂದಿದ್ದಾರೆ ಬಸವಣ್ಣನವರು. ನಾವು ಮಾಡುವ ದಿನ ನಿತ್ಯದ ಕೆಲಸಗಳು ಶೃದ್ಧೆ, ಪ್ರಾಮಾಣಿಕತೆ, ನಿಷ್ಠೆಯಿಂದ ಮಾಡಿದರೆ ‘ಕಾಯಕವೇ ಕೈಲಾಸ’ ಎಂಬ ಮಾತಿಗೆ ನಾವು ಸಲ್ಲಿಸಿದ ಋಣ. ಏಕೆಂದರೆ ಪ್ರತಿಯೊಬ್ಬರಿಗೂ ತಮ್ಮದೇ ಆದ ಜವಾಬ್ದಾರಿಗಳಿವೆ. ಆ ಜವಾಬ್ದಾರಿ ಅರಿತರೆ ಸಾಕು ಅವರವರ ಕಾರ್ಯ ಸುಗಮವಾದಂತೆ. ಕೆಲಸ ಯಾರ ಗೌರವವನ್ನು ತಗ್ಗಿಸುವುದಿಲ್ಲ. ಆದರೆ ತಾವು ಮಾಡುತ್ತಿರುವ ಕೆಲಸದಲ್ಲಿ ಶೃದ್ಧೆ ತೋರದೆ ಆ ಕೆಲಸದ ಗೌರವವನ್ನು ತಾವೇ ತಗ್ಗಿಸುವ ಸಂಪ್ರದಾಯ ಇಂದು ಕಂಡು ಬರುತ್ತಿದೆ.

ದೇಶದಲ್ಲಿ, ಹಲವಾರು ಭ್ರಷ್ಟಾಚಾರ, ಲಂಚ, ಕೊಲೆ-ಸುಲಿಗೆ ಅನೈತಿಕತೆಯಂಥ ಹೇಯ ಕೃತ್ಯಗಳು ಜರುಗುತ್ತಿರುವುದಕ್ಕೆ ಕಾರಣ ನಮ್ಮಲ್ಲಿ ಶ್ರದ್ಧೆ, ಭಕ್ತಿ, ನಿಷ್ಠೆ ಪ್ರಾಮಾಣಿಕತೆಯ ಕೊರತೆ ಇರುವುದೇ ಕಾರಣ. ಮನಸ್ಸು ಹೇಯ ಕೃತ್ಯಗಳತ್ತ ತೊಡಗಿದರೆ ಅದರಿಂದ ‘ಹೇಯ’ ಪರಿಣಾಮ ಎದುರಿಸಬೇಕಾಗುತ್ತದೆ. ಅಂದರೆ ಮಾಡಬಾರದ ಕೃತ್ಯ ಮಾಡಿದರೆ ಆಗಬಾರದ್ದು ಆಗಿಯೇ ತೀರುತ್ತದೆ ಎಂಬ ಮಾಡಿದ್ದುಣ್ಣೋ ಮಹಾರಾಯ” ಗಾದೆಯಂತಾಗುತ್ತದೆ.

- Advertisement -

ಮಹಾತ್ಮಾ ಗಾಂಧೀಜಿಯವರು ಸಾಬರಮತಿ ಆಶ್ರಮದಲ್ಲಿದ್ದಾಗ ಒಂದು ದಿನ ಹಲವಾರು ಜನ ಗಾಂಧೀಜಿ ಭೇಟಿ ಮಾಡಲೆಂದು ಬೆಳಿಗ್ಗೆ ಅಲ್ಲಿಗೆ ಬಂದರಂತೆ, ಆಗ ಗಾಂಧೀಜಿ ಆಶ್ರಮದಲ್ಲಿರಲಿಲ್ಲ. ಹುಡುಕಿದರೆ ಒಂದು ಮೇಕೆಯ ಹಾಲು ಕರೆಯುತ್ತಿದ್ದರಂತೆ. ಅಂದರೆ ‘ಸ್ವಾವಲಂಬನೆ’ಯ ಬದುಕು ಅವರು ತೋರಿಸಿದ ಪಾಠ, ನಮ್ಮ ಮನೆಯ ಒಳಗೆ ಹೊರಗೆ ನಮ್ಮ ಪ್ರಥಮ ಕರ್ತವ್ಯ ನಾವು ಮಾಡಿದರೆ ನಿರುದ್ಯೋಗ ಸಮಸ್ಯೆಯೇ ಇರದು. ನಾವು ಕರ್ತವ್ಯ ಭ್ರಷ್ಟರಾಗಿ ಪರಾವಲಂಬಿಗಳಾದರೆ ಅಲ್ಲಿ ಸೋಮಾರಿತನ ಹೆಚ್ಚಾಗುತ್ತದೆ.

ನಮ್ಮ ದೇಶ ವಿಶಾಲ ಸಂಪದ್ಭರಿತ ನಾಡು, ಇಲ್ಲಿ ಸಂಪನ್ಮೂಲಗಳ ಕೊರತೆ ಇಲ್ಲ. ಇರುವಂತಹ ಪರಿಸರ, ಸಂಪನ್ಮೂಲಗಳನ್ನು ಸರಿಯಾಗಿ ಬಳಸಿಕೊಂಡರೆ ಜಗತ್ತಿನಲ್ಲಿಯೇ ‘ಭಾರತ’ದಂತಹ ಮುಂದುವರಿದ ರಾಷ್ಟ್ರ ಯಾವುದೂ ಆಗಲು ಸಾಧ್ಯವಿಲ್ಲ. ಆದರೆ ನಮ್ಮಲ್ಲಿ ಕರ್ತವ್ಯ ಪ್ರಜ್ಞೆ’ ಇಲ್ಲದಿರುವುದೇ ಇಂದಿನ ಪ್ರಚಲಿತ ವಿದ್ಯಮಾನಕ್ಕೆ ಕಾರಣ. ಸರಕಾರದ ಯಾವ ಯೋಜನೆಗಳಿಗೂ ಸರಿಯಾದ ಸ್ಪಂದನೆ ಎಲ್ಲಿಯವರೆಗೂ ಇರುವುದಿಲ್ಲವೋ ಅಲ್ಲಿಯವರೆಗೂ ಅದರ ದಾರಿಯಲ್ಲಿ ಎಡರು-ತೊಡರುಗಳು ಸಹಜ.

 

ಪಾಲಿಗೆ ಬಂದದ್ದು ಪಂಚಾಮೃತ’ ಎನ್ನುವಂತೆ ಸಣ್ಣ ಕೆಲಸವೇ ಇರಲಿ, ದೊಡ್ಡ ಕೆಲಸವಿರಲಿ, ಕೆಲಸದ ಬಗ್ಗೆ ಉದಾಸೀನ ಮಾಡದೇ ಕಾರ್ಯ ಮಾಡುತ್ತಾ ಹೋದಂತೆ ಕಾರ್ಯಕ್ಷಮತೆ ತನ್ನಿಂದ ತಾನೆ ನೆಲೆಗೊಳ್ಳುತ್ತಾ ಹೋಗುತ್ತದೆ. ಸ್ವಾಮಿ ವಿವೇಕಾನಂದರು ಕೂಡ ಯಾವುದಾದರೊಂದು ಕೆಲಸ ಮಾಡುತ್ತಿರುವಾಗ, ಅದರಿಂದಾಚೆಗಿನ ಯಾವ ವಿಷಯವನ್ನು ಯೋಚಿಸಬಾರದು’ ಎಂದು ಹೇಳಿದ್ದಾರೆ. ಮನುಷ್ಯ ಮಾಡುವ ಪ್ರತಿಯೊಂದು ಕೆಲಸಕ್ಕೂ ಉಚಿತ ಸಮಯವೊಂದಿದೆ ಮತ್ತು ಪ್ರತಿ ಸಮಯಕ್ಕೆ ಆತ ಮಾಡಬೇಕಾದ ಉಚಿತ ಕೆಲಸವೊಂದಿದೆ.ಇಂದಿನ ದಿನದಲ್ಲಿ ಸರ್ಕಾರಿ ಕೆಲಸ ಸಿಗುವುದು ತುಂಬ ಕಷ್ಟ ಕಲಿತವರೆಲ್ಲರೂ ಸರ್ಕಾರಿ ಕೆಲಸಕ್ಕೆ ಕಾಯುವ ಬದಲು ತಮ್ಮ ಮನೆತನದ ಕೆಲಸವನ್ನೋ. ವ್ಯವಸಾಯವನ್ನೋ, ಸ್ವಂತ ಉದ್ದಿಮೆಯನ್ನೋ ಅವಲಂಬಿಸಿದರೆ ಅದಕ್ಕಿಂತ ಹೆಚ್ಚಿನ ಕಾಯಕ ಬೇರೊಂದಿಲ್ಲ.ಇದ್ದುದರಲ್ಲಿಯೇ ತೃಪ್ತಿ ಕಾಣಬೇಕು.

ಸುಖಬೇಕೆ.? ಕಾಯುತ್ತಿರುವ ಕರ್ತವ್ಯಗಳನ್ನು ಆಗಿಂದಾಗ್ಗೆ ಮಾಡಿ ಮುಗಿಸಿ ಎಂದು ಐರ್ಲೆಂಡ್ ಗಾದೆ ಮಾತಿದೆ. ಒಳ್ಳೆಯ ಕಾರ್ಯಗಳಿಗೆ ತಕ್ಕ ಉತ್ತಮ ಫಲಗಳು ಬರುವುದು ನಿಶ್ಚಿತ. ಯಶಸ್ಸಿನ ಗುಟ್ಟು ಯಾವುದು ಗೊತ್ತೆ? ಹಿಡಿದ ಕೆಲಸದಲ್ಲಿ ದೃಢ ಸಂಕಲ್ಪದಿಂದಿರುವುದು.

ಲಂಚವಂಚನಕ್ಕೆ ಕೈಯಾನದ ಭಾಷೆ,
ಬಟ್ಟೆಯಲ್ಲಿ ಹೊನ್ನು ವಸ್ತ್ರ ಬಿದ್ದಿದಡೆ
ಕೈ ಮುಟ್ಟಿ ಎತ್ತಿದೆನಾದಡೆ,ಅಯ್ಯಾ ನಿಮ್ಮಾಣೆ
ನೀವಿಕ್ಕಿದ ಭಿಕ್ಷೆಯೊಳಗಿಪ್ಪೆನಯ್ಯಾ
ಶಂಭುಜಕ್ಕೇಶ್ವರದೇವಯ್ಯಾ ! ನಿಮ್ಮಾಣೆ

ಎನ್ನುವ ಮೂಲಕ ಮೋಸ,ಲಂಚಗುಳಿತನ ಮುಂತಾದವು ನನಗೆ ಬೇಡ ಎಂಬ ದಿಟ್ಟ ವಚನವನ್ನು ನುಡಿದಿರುವುದು ಹನ್ನೆರಡನೆಯ ಶತಮಾನದ ಶರಣರ ನುಡಿಗಳಿಂದ ಕಂಡು ಬರುತ್ತದೆ. ಶರಣೆ ಸತ್ಯಕ್ಕನ ಬದುಕು ಕಲ್ಪನೆಗೂ ನಿಲುಕಲಾರದ್ದು.ಬೇರೆಯವರ ಮನೆಯ ಬಾಗಿಲಿನ ಕಸಗುಡಿಸುವ ಕಾಯಕದಲ್ಲಿ ಜೀವನೋಪಾಯದ ಮಾರ್ಗ ಹುಡುಕಿಕೊಂಡಿರುವುದರ ಜೊತೆಗೆ ಶರಣರ ದಾಸೋಹಕ್ಕೆ ಕೂಲಿನಾಲಿ ಮಾಡಿ ಬಂದ ಹಣವನ್ನು ವಿನಿಯೋಗಿಸುತ್ತಿದ್ದ ಸಂಗತಿ ಸಣ್ಣ ವಿಷಯವಾಗದೆ ಘನತೆವೆತ್ತದಾಗಿದೆ.ಈ ವಚನಕಾರ್ತಿಯ ಮೇಲಿನ ವಚನದ ಶ್ರೇಷ್ಟತೆ ಮತ್ತು ಚಿಂತನೆ ಅದರ ತಿರುಳನ್ನು ಕಂಡಾಗ ಅವಳ ವಿಚಾರದ ಹೊಳಹು ಗೋಚರವಾಗುತ್ತದೆ.ಶರಣರ ಕಾಲದಲ್ಲಿಯೂ ಮೋಸ, ಲಂಚಗುಳಿತನ, ಬೆಲೆಯೇರಿಕೆ, ನಿರುದ್ಯೋಗ, ಭ್ರಷ್ಟಾಚಾರಗಳು ಇದ್ದರೂ ಕೂಡ ಶರಣರು ಈ ಎಲ್ಲ ರೋಗಗಳನ್ನು ಉದ್ಯೋಗ ಮತ್ತು ದಾಸೋಹ ಮೂಲಕ ಕಾಯಕ ಸಿದ್ದಾಂತ ಎತ್ತಿ ಹಿಡಿಯುವ ಮೂಲಕ ಸಮಾಜದ ಓರೆಕೋರೆಗಳನ್ನು ತಮ್ಮ ಬದುಕಿನ ಆದರ್ಶಗಳ ಮೂಲಕ ತಿದ್ದಿದರು.ಎನಗಿಂತ ಕಿರಿಯರಿಲ್ಲ ಶಿವಭಕ್ತರಿಗಿಂತ ಹಿರಿಯರಿಲ್ಲ ಎಂಬ ಆದರ್ಶವನ್ನು ಅಳವಡಿಸಿಕೊಂಡು ಬದುಕಿ ಶರಣರೆನಿಸಿಕೊಂಡರು. ಇಂತಹ ಶರಣರ ಬದುಕಿನ ಆದರ್ಶ ಮೌಲ್ಯ ಗಳನ್ನು ನಾವು ಅಳವಡಿಸಿ ಕೊಂಡು ನಮ್ಮ ಬದುಕನ್ನು ಪಾವನಗೊಳಿಸಿಕೊಳ್ಳುವ ಅವಶ್ಯಕತೆ ಇಂದಿನ ದಿನಗಳಲ್ಲಿ ಇರುವುದು. ಆ ನಿಟ್ಟಿನಲ್ಲಿ ಅವರ ಸ್ಮರಣೆ ಕೂಡ ಜರುಗಬೇಕು.


ವೈ.ಬಿ.ಕಡಕೋಳ
ಶಿಕ್ಷಕ ಸಂಪನ್ಮೂಲ ವ್ಯಕ್ತಿಗಳು
ಮುನವಳ್ಳಿ ೫೯೧೧೧೭
೯೪೪೯೫೧೮೪೦೦ ೮೯೭೧೧೧೭೪೪೨

- Advertisement -
- Advertisement -

Latest News

ಇದು ಇಂದಿನ ಹಾಸ್ಟೆಲ್ ಹುಡುಗ ಹುಡುಗಿಯರಿಗೆ ನಾವೆಲ್ಲ ಹೇಳಬೇಕಾದ ಖಾಸ್ ಬಾತ್

ಸರ್... ಓ ಸರ್...ಕಾಂಬಳೆ ಸರ್  ... ಸರ್ ನಮಸ್ಕಾರ್ರಿ ಆರಾಮ ಅದೀರಿ?? ನಾ ಯಾರ್ ಹೇಳ್ರಿ ಅನ್ನುತ್ತಿದ್ದಂತೆಯೇ ನಿವೃತ್ತಿ ಹೊಂದಿ ಐದಾರು ವರ್ಷ ಆಗಿದ್ದ ಬಿಸಿಎಮ್...
- Advertisement -

More Articles Like This

- Advertisement -
close
error: Content is protected !!
Join WhatsApp Group