ರೂಪವತಿ ಸತಿಯಿದ್ದು ಮುದ್ದಾದ ಮಗನಿದ್ದ
ಕೊರತೆಯೇನಿರಲಿಲ್ಲ ಸಿದ್ಧಾರ್ಥಗೆ
ಜ್ಞಾನಶೋಧನೆಗಾಗಿ ತೊರೆದನರಮನೆಯನ್ನು
ಅದಕಿಂತ ಸಿರಿಯುಂಟೆ ? – ಎಮ್ಮೆತಮ್ಮ
ಶಬ್ಧಾರ್ಥ
ಶೋಧನೆ – ಕಂಡುಹಿಡಿಯುವುದು
ತಾತ್ಪರ್ಯ
ಸಿದ್ಧಾರ್ಥ ಎಂಬುದು ಗೌತಮಬುದ್ಧನಿಗೆ ತಂದೆತಾಯಿಗಳು
ಹುಟ್ಟಿದಾಗ ಇಟ್ಟ ಹೆಸರು. ಶುದ್ಧೋದನ ರಾಜನ ಪತ್ನಿ
ಮಾಯದೇವಿಯ ಗರ್ಭದಲ್ಲಿ ನೇಪಾಳದ ಲುಂಬಿನಿಯಲ್ಲಿ
ಜನಿಸಿದನು. ಹರೆಯಕ್ಕೆ ಬಂದ ಮೇಲೆ ಯಶೋಧರೆಯನ್ನು ತಂದು ಮದುವೆಮಾಡಿದರು. ಒಂದು ವರ್ಷದ ಮೇಲೆ ರಾಹುಲ ಎಂಬ ಮಗ ಜನಿಸಿದನು. ಅರಮನೆಯ ಐಷಾರಾಮಿ ಜೀವನ, ಸುಂದರವಾದ ಸತಿ ಮತ್ತು ಮುದ್ದಾದ ಮಗನಿದ್ದು ಆತನಿಗೆ ಯಾವುದೇ ಕೊರತೆ ಇರಲಿಲ್ಲ. ಆದರೆ ಒಮ್ಮೆ ನಗರ ನೋಡಲು ಸಾರಥಿ ಚೆನ್ನನೊಂದಿಗೆ ರಥದಲ್ಲಿ ಹೋದಾಗ ರೋಗಿ, ಮುದುಕ ಮತ್ತು ಶವಗಳನ್ನು ನೋಡಿ ಜಗತ್ತಿನಲ್ಲಿ ದುಃಖ ತುಂಬಿದೆ ಎಂದು ಅರಿವಾಗುತ್ತದೆ. ಆಗ ಒಬ್ಬ ಸನ್ಯಾಸಿ ಭೇಟಿಯಾಗುತ್ತಾನೆ . ಆದಕಾರಣ ಈ ದುಃಖಕ್ಕೆ ಪರಿಹಾರ ಕಂಡುಹಿಡಿಯಬೇಕೆಂದು ತಂದೆತಾಯಿ ಮಡದಿಮಗ ಅರಮನೆ ಬಿಟ್ಟು ಅರಣ್ಯದ ಕಡೆಗೆ ಹೊರಡುತ್ತಾನೆ. ಎಷ್ಟೋ ವರ್ಷ ಗುರುಗಳನ್ನು ಕಂಡು ಸಾಧನೆ ಮಾಡಿದರು ಫಲಿಸಲಿಲ್ಲ. ಕೊನೆಯಲ್ಲಿ ಗಯಾದಲ್ಲಿರುವ ಬೋಧಿವೃಕ್ಷದ ಕೆಳೆಗೆ ಒಂದು ವಾರ ಧ್ಯಾನದಲ್ಲಿ ಕೂಡುತ್ತಾನೆ. ಆತನಿಗೆ ಜ್ಞಾನೋದಯವಾಗಿ ಶಾಂತಿಸಮಾಧಾನ ದೊರಕುತ್ತದೆ. ಆನಾಪಾನಸತಿ ಧ್ಯಾನ
ಕಂಡುಹಿಡಿದು ಎಲ್ಲರಿಗೆ ಬೋಧಿಸುತ್ತಾನೆ. ಶಾಂತಿ ಕೊಡುವ ಧ್ಯಾನವೆ ನಿಜವಾದ ಸಂಪತ್ತು ಎಂದು ಇದರಿಂದ ತಿಳಿಯುತ್ತದೆ.
ರಚನೆ ಮತ್ತು ವಿವರಣೆ ಎನ್.ಶರಣಪ್ಪ ಮೆಟ್ರಿ
ಮೊ. 9449030990