ಈ ಮೇಲಿನ ಶೀರ್ಷಿಕೆಯನ್ನು ಓದಿದ ತಕ್ಷಣಕ್ಕೆ ಸಿಗುವ ಸಹಜ ಉತ್ತರಗಳು ಈಗಿನ ದಿನಗಳಲ್ಲಿ ಇದೆಲ್ಲ ಸಾಧ್ಯವಾ? ಅಯ್ಯೋ ಸರ್ ನೀವು ಇನ್ನೂ ಯಾವ ಜಮಾನಾದಲ್ಲಿ ಇದ್ದೀರಿ? ಯಾರನ್ನೂ ನಂಬಬೇಡಿ ಸಾರ್…ಎಲ್ರೂ ಮೋಸಾ ಮಾಡ್ತಾರೆ…ಅನ್ನುವವರ ನಡುವೆ ಆಧ್ಯಾತ್ಮಿಕ ಸಂತರು,ಅವಧೂತರು,ಸತ್ಸಂಗ ಪರಿತ್ಯಾಗಿಗಳು,ಮತ್ತು ಬದುಕಿನಲ್ಲಿ ತೀರಾ ಅತಿಯಾಗಿ ನೊಂದವರು ಹೇಳುವ ಮಾತು ಅಂದರೆ ದೇವರನ್ನು ಪ್ರೀತಿಸಿ ಸರ್ ದೇವರು ಮಾತನಾಡುವದಿಲ್ಲ,ನಿಮ್ಮನ್ನು ಉಳಿದವರಂತೆ ನಗಿಸುವದಿಲ್ಲ, ನೀವು ಅತ್ತರೆ ಸಮಾಧಾನಿಸುವದಿಲ್ಲ ಆದರೆ ಖಂಡಿತ ನಿಮ್ಮೊಳಗೆ ನೀವು ಗಟ್ಟಿಯಾಗುವಂತೆ ಮಾಡುತ್ತಾನೆ,ಆತ ನಿಮಗೊಂದು ಪ್ರೇರಣೆ ಆಗುತ್ತಾನೆ,ಯಾವತ್ತಿಗೂ ನಿಮ್ಮೊಂದಿಗೆ ಇರುತ್ತಾನೆ ಅನ್ನುವ ಮಾತುಗಳು ಕೇಳಲು ಸಿಗಬಹುದು.
“ಏಯ್ ತಲೆ ಕೆಟ್ಟವನೇ ಸಾಧ್ಯವಾದರೆ ನಿನ್ನ ಹೆಂಡತಿ, ಮಕ್ಕಳನ್ನು ಪ್ರೀತಿಸು,ಅವರಿಗಿಂತ ಹೆಚ್ಚು ತನ್ನ ಜೀವವನ್ನೇ ಒತ್ತೆ ಇಟ್ಟು ನಿನ್ನನ್ನು ಹೊತ್ತು ಹೆತ್ತ ಅಮ್ಮನನ್ನ ಪ್ರೀತಿಸು,ನಿನ್ನ ಅಭ್ಯುದಯಕ್ಕೆಜೀವ ತೇಯ್ದ ಅಪ್ಪನನ್ನ ಪ್ರೀತಿಸು” ಅನ್ನುವದು ಬಹಳಷ್ಟು ಜನ ಪ್ರಜ್ಞಾವಂತರ ಮಾತು.
ಆದರೆ ಇದೆಲ್ಲವನ್ನೂ ಮೀರಿ ರಾಧೆ ಕೃಷ್ಣನನ್ನು ಪ್ರೀತಿಸಿದಷ್ಟು, ಶಬರಿ ರಾಮನಿಗೆ ಕಾಯ್ದಷ್ಟು,ಕೃಷ್ಣ ಸುಧಾಮನನ್ನ ಗೌರವಿಸಿದಷ್ಟು,ಪ್ರೀತಿ ಮತ್ತು ಸ್ನೇಹಗಳು ನಿಮಗೆ ಎಲ್ಲಿಯಾದರೂ ಸಿಕ್ಕಿವೆ ಅನ್ನುವದಾದರೆ ಅಷ್ಟರಮಟ್ಟಿಗೆ ನೀವು ಅದೃಷ್ಟವಂತರು ಅನ್ನುವದು ನನ್ನ ಮಾತು.
ಬಹಳಷ್ಟು ಸಲ ನಮಗೆ ಸಿಕ್ಕ ಸ್ನೇಹಿತರಲ್ಲಿ, ಪರಿಚಿತರಲ್ಲಿ, ಸಂಸಾರದ ಆಚೆಗೆ ಶುರುವಿಟ್ಟುಕೊಂಡ ಈ ಜಗದ ದೃಷ್ಟಿಯಲ್ಲಿ ಅನೈತಿಕ ಅನ್ನಿಸಿಕೊಂಡ ಅಫೇರುಗಳ ಗೆಳೆಯ ಅಥವಾ ಗೆಳತಿಯೊಂದಿಗಿನ ಸಮ್ಮಿಲನದಲ್ಲಿ,ಮತ್ತು ನಮ್ಮ ಅಕ್ಕನ ಗಂಡ,ತಮ್ಮನ ಹೆಂಡತಿ,ಅಣ್ಣನ ಮಡದಿ,ಅಪ್ಪನ ಅವ್ವ ಹೀಗೆ ಅತ್ತಿಗೆ, ಮೈದುನ,ಮಾವ,ಚಿಕ್ಕಪ್ಪ,ಚಿಕ್ಕಮ್ಮ ಅನ್ನುವ ಹೆಸರು ಹೊತ್ತ ಸಂಬಂಧಿಕರಲ್ಲಿ ನಾವು ಹುಡುಕಲು ಹೊರಡುವದು ಅವರು ನಮಗೆ ಕೊಡಬಹುದಾದ ಪ್ರೀತಿಯೊಳಗೂ ನಿಷ್ಕಲ್ಮಷ ಮತ್ತು ನಿಸ್ವಾರ್ಥದ ಪ್ರೀತಿಯನ್ನ.
ಬಹುತೇಕ ಬಾರಿ ಎಲ್ಲ ಕಡೆಯೂ “ಅಯ್ಯೋ ಬಿಡಿ ಸಾರ್…. ಎಲ್ರೂ ಸ್ವಾರ್ಥಿಗಳು,ಮಕ್ಕಳು ಚೆನ್ನಾಗಿರಲಿ ಅಂತ ಇಷ್ಟು ವರ್ಷ ಕಷ್ಟ ಬಿದ್ವಿ,ಉಪವಾಸನೋ ವನವಾಸನೋ ಅನುಭವಿಸಿ ಅವರನ್ನ ದೊಡ್ಡೋರನ್ನಾಗಿಸಿ ಹರೆಯದ ವಯಸ್ಸಿನಲ್ಲಿ ಹಾದಿ ಬಿಡಬಾರದು ಅಂತ ಮದುವೆನೂ ಮಾಡಿದ್ವಿ ಈಗ ಆಸ್ತೀಲಿ ಪಾಲು ಕೊಡು ಅನ್ನೋ ಈ ಮಕ್ಕಳು ಮುಂದೆ ನಾನೊಮ್ಮೆ ಸತ್ತೋದ್ರೆ ಅಸ್ತಿಗೆ ಮೋಕ್ಷ ಕೊಡ್ತಾರೆ ಅನ್ನೋ ನಂಬಿಕೆ ಇದೆಯಾ ಸ್ವಾಮಿ” ಅಂತ ಕೇಳುವ ಅದೆಷ್ಟೋ ಅಪ್ಪ ಅಮ್ಮಂದಿರ ಆತ್ಮದ ಮರ್ಮರವನ್ನ ಕೇಳಿಸಿಕೊಂಡವನು ನಾನು.
“ಅಯ್ಯೋ ಮುದ್ದು ನೀನೆ ನನ್ನ ಜೀವಾ ಬಂಗಾರಾ ನಿನ್ನ ಬಿಟ್ಟು ನನಗಾದರೂ ಯಾರಿದ್ದಾರೆ? ಲವ್ ಯೂ ಡಿಯರ್ ” ಅನ್ನುತ್ತಲೇ ಸವರನ್ನಗಟ್ಟಲೇ ಚಿನ್ನದ ಓಲೆ, ಝುಮುಕಿ, ನೆಕ್ಲೆಸ್ಸು, ಟಿಕ್ಕಿ ಸರ, ಚೈನು, ಬ್ರೆಸಲೇಟು ಅಂತೆಲ್ಲ ಬಂಗಾರ ದೋಚಿದ ಬಳಿಕ ತಮ್ಮ ಸಂಗಾತಿಯ ದುಡಿಮೆ ಕಡಿಮೆ ಆಯಿತು ಅಂತಲೋ ಅವರಿಗಿಂತ ಸ್ಪುರದ್ರೂಪಿ,ಹ್ಯಾಂಡ್ಸಮ್ ಬಾಯ್ ಅಥವಾ ಬ್ಯೂಟಿಪುಲ್ ಗರ್ಲ್ ಒಬ್ಬಳು ಸಿಕ್ಕು ಬಿಟ್ಟಳು ಅಂತಲೋ ಮರದ ಒಂದು ರೆಂಬೆಯಿಂದ ಮತ್ತೊಂದು ರೆಂಬೆಗೆ ಜಿಗಿಯುವ ಅದೆಷ್ಟೋ ಜೋಡಿಗಳು ನಿಮಗೆ ಉದಾಹರಣೆ ಆಗಿ ಸಿಗಬಹುದು.
ಅಷ್ಟೇ ಯಾಕೆ “ಬಾ ದೋಸ್ತಾ ಚಾ ಕುಡಿಯೋಣು” ಅನ್ನುತ್ತ ನಾಲ್ಕಾರು ಬಾರಿ ಚಹಾ ಕುಡಿಸಿದ ಗೆಳೆಯ ಪ್ರತಿಬಾರಿಯೂ ತಾನೇ ಬಿಲ್ ಪೇಯ್ಡ್ ಮಾಡಿದ ಬಳಿಕ ದೊಡ್ಡದೊಂದು ಡಿನ್ನರ್ ಪಾರ್ಟಿಯಲ್ಲಿ ನಿಮ್ಮಿಂದ ಅನಾಮತ್ತು ಖರ್ಚಿನ ನಿರೀಕ್ಷೆ ಇಟ್ಟುಕೊಂಡು ಅದು ನಿಮ್ಮಿಂದ ಆಗಲಿಲ್ಲ ಅನ್ನುವ ಕಾರಣಕ್ಕೆ ನೀವು ಎದುರಿಗೆ ಸಿಕ್ಕಾಗಲೂ ಮಾತನಾಡಿಸದೆ ನಿರ್ಲಕ್ಷ್ಯ ತೋರಿಸಲು ಆರಂಭಿಸಿ ಬಿಡಬಹುದು.
ಸ್ವಾರ್ಥಿಗಳ ಪ್ರಪಂಚದಲ್ಲಿ ನಿಸ್ವಾರ್ಥಿಗಳನ್ನ ಹುಡುಕುವದು, ಹಿರಿಯ ಮಗಳು ತನ್ನ ತಂಗಿ ಅಥವಾ ತಮ್ಮನಷ್ಟು ಅಪ್ಪ ಅಮ್ಮ ನನ್ನ ಕೇರ್ ಮಾಡುತ್ತಿಲ್ಲ ಅಂತ ಕಣ್ಣೀರು ಸುರಿಸಿ ನಿಮ್ಮನ್ನು ತನ್ನತ್ತ ಸೆಳೆಯುವ ಪ್ರಯತ್ನ ಮಾಡುವದು ಒಂದಷ್ಟು ತಮಾಷೆಯಾಗಿ ಕಂಡರೂ ಕೂಡ,ಅಲ್ಲಿ ನೀವು ನಿಮ್ಮ ಅರಿವಿಗೆ ಬರದಂತೆ ಮಾಡಿದ ಎಡವಟ್ಟುಗಳು ಎದ್ದು ಕಂಡಿರಬಹುದು.
ನನ್ನ ಗಂಡ ಮೊದಲಿನಷ್ಟು ನನ್ನ ಮೇಲೆ ಪ್ರೀತಿ ಇಟ್ಟುಕೊಂಡಿಲ್ಲ ಅನ್ನುವ ಹೆಂಗಸರಿಂದ ಹಿಡಿದು ಏನಿದೆ ಬಾಸು ಅದೇ ರೋಡು,ಅದೇ ಕಾರ್ನರ್ರು, ಮತ್ತೆ ಡೋರು, ಅದೇ ಹಸಿರು ಕಲರ್ ನೈಟಿ ಅದೇ ಸಪ್ಪೆ ಮುಖದ ಹೆಂಡತಿ ಅನ್ನುವ ಗಂಡಸಿನ ವ್ಯಾಕುಲತೆಯೂ ಇರಬಹುದು.
ಎಲ್ಲರೂ ಬಯಸುವದು ಒಂದಷ್ಟು ನಿಸ್ವಾರ್ಥದ,ನಿಷ್ಕಲ್ಮಷ ಮನೋಭಾವದ ಪ್ರೀತಿ ಮತ್ತು ಸ್ನೇಹವನ್ನೇ ಆದರೂ ಮನುಷ್ಯನಿಗೆ ಸಹಜವಾಗಿ ಎದುರಾಗುವ ಆರ್ಥಿಕ ಸಂಕಷ್ಟ, ಯಾವುದೋ ಕಷ್ಟಕಾದಲ್ಲಿ ನೀವು ಇನ್ಯಾರಿಂದಲೋ ಕೇಳಿರಬಹುದಾದ ಸಹಾಯ,ಜಾತ್ರೆಯಲ್ಲಿ ಒಂದು ಗೊಂಬೆ ಖರೀದಿಸಿದ ಬಳಿಕವೂ ಮಗುವೊಂದು ಮತ್ತೊಂದು ಗೊಂಬೆ ನೋಡಿ ಹಠ ಮಾಡಿದಂತೆ ಮತ್ತೇನನ್ನೋ ಬಯಸುವ,ಇನ್ಯಾರನ್ನೋ ಆರಾಧಿಸುವ ನಿಮ್ಮ ಮಗುವಿನಂತ ಮನಸ್ಸು ಖಂಡಿತ ನಿಮಗೆ ಉಳಿದವರು ಸ್ವಾರ್ಥಿಗಳಾಗಿ ಕಂಡಂತೆಯೇ ನಿಮ್ಮನ್ನು ಕೂಡ ಮತ್ತೊಬ್ಬರ ದೃಷ್ಟಿಯಲ್ಲಿ ಸ್ವಾರ್ಥಿಗಳಾಗಿ ಬಿಂಬಿಸಿ ಬಿಡಬಹುದು.
ಪ್ರೀತಿ ಮಾಯೆ ಹುಷಾರು,ಬದುಕು ಮಾರೋ ಬಜಾರು ಅನ್ನುವ ಹಾಡನ್ನೊಮ್ಮೆ ಗುಣುಗಿಕೊಂಡು ನೋಡಿ ನಿಮ್ಮನ್ನು ನೀವು ಪ್ರೀತಿಸಿ,ನಿಮ್ಮನ್ನು ನೀವು ಗೌರವಿಸಿ,ಸೆಲ್ಪ್ ರಿಸ್ಪೆಕ್ಟ್ ಈಜ್ ಬೆಸ್ಟ್ ರಿಸ್ಪೆಕ್ಟ್ ಲವ್ ಯುವರ್ ಸೆಲ್ಪ್ ಅನ್ ಟಿಲ್ ಯುವರ ಲಾಸ್ಟ್ ಬ್ರೀಥ್ ಅನ್ನುವ ಮಾತುಗಳು ನಿಮಗೆ ಬೆಸ್ಟ್ ಅನ್ನಿಸಿದಷ್ಟು ಮತ್ಯಾವದೂ ಅನ್ನಿಸಲಿಕ್ಕಿಲ್ಲ.
ಅಂದಹಾಗೆ “ಹುಡುಕುತ್ತ ಹೊರಟರೆ ಸರ್ವಶಕ್ತ ಅನ್ನಿಸಿಕೊಂಡ ಪರಮಾತ್ಮನೂ ಕೂಡ ಯಾವುದೋ ಒಂದು ರೂಪದಲ್ಲಿ ನಿಮಗೆ ಸಿಕ್ಕು ಬಿಡುತ್ತಾನೆ” ಅನ್ನುವ ಹಿರಿಯರ ಮಾತಿನ ಮರ್ಮ ನಿಮಗೆ ತಿಳಿದಿದೆ ಅನ್ನುವದಾದರೆ ಮತ್ತು ನಿಮ್ಮಲ್ಲಿ ಯಾವ ಸ್ವಾರ್ಥವೂ ಇಲ್ಲದೇ,ದೇಹದ ಸ್ಪರ್ಶಕ್ಕೆ ಹಾತೊರೆಯದೆ, ಹಣದ ಆಸೆಗೆ ಇಂಬು ಕೊಡದೇ,ಅಪ್ಪಟ ಸ್ನೇಹ,ಅಥವಾ ಪ್ರೀತಿಯನ್ನ ನೀವು ಹುಡುಕಿದ್ದೇ ಆದರೆ ಕಾಮಾಟಿಪುರದ ವೇಶ್ಯೆಯ ಒಳಗೂ ಒಬ್ಬ ತಾಯಿ,ತಂಗಿ,ಅಕ್ಕನನ್ನ, ಮತ್ತು ಬಸ್ ಸ್ಟ್ಯಾಂಡಿನ ಯಾವುದೋ ಮೂಲೆಯಲ್ಲಿ ದಿಕ್ಕಿಲ್ಲದೆ ಅನಾಥವಾಗಿ ಮಲಗಿದ ಮುದುಕನೊಬ್ಬನಲ್ಲಿ ನೀವು ಕಳೆದುಕೊಂಡ ಅಪ್ಪನನ್ನ, ಮನೆಯಲ್ಲಿ ಸಾಕಿದ ನಾಯಿ ಅಥವಾ ಬೆಕ್ಕಿನಲ್ಲಿ ಒಬ್ಬ ಒಳ್ಳೆಯ ಗೆಳೆಯನನ್ನ ನೀವು ಕಂಡುಕೊಂಡು ಬಿಡಬಹುದು.
ಸದ್ಯದ ಮಟ್ಟಿಗೆ ನನ್ನನ್ನು ನಿಷ್ಕಲ್ಮಷವಾಗಿ ಪ್ರೀತಿಸುವವರು ಬೇಕಾಗಿದ್ದಾರೆ ಅಂತ ಕೊರಗುತ್ತ ಬೋರ್ಡು ಹಾಕಿಕೊಳ್ಳುವ ಧೈರ್ಯ ಇಲ್ಲದವರು ನಿಮ್ಮ ಆಂತರ್ಯದ ಒಳಗಣ್ಣು ತೆರೆದು ನೋಡಿದರೆ ದೂರದಲ್ಲಿ ಎಲ್ಲೋ ಇರಬಹುದಾದ ಅಪರಿಚಿತ ಹೆಣ್ಣು,ಗಂಡು ಅಥವಾ ನಿಮ್ಮ ಕಲ್ಪನೆಯ ಲೋಕದಲ್ಲಿಯೂ ನೀವು ಹುಡುಕುತ್ತಿರುವ ಪ್ರೀತಿ ಸಿಕ್ಕು ನಿಮ್ಮ ಹಸಿದ ಹೃದಯವನ್ನು, ತಣಿಸಿ ಬಿಡಬಹುದು.
ಅಂದ ಹಾಗೆ ಈ ಜಗತ್ತಿಗೆ ನೀವು ಏನನ್ನೂ ಕೊಡುತ್ತಿರೋ ಅದನ್ನೇ ನೀವು ಮರಳಿ ಪಡೆಯುತ್ತೀರಿ ಅನ್ನುವದು ನಾನು ಕಂಡುಕೊಂಡ ಸತ್ಯ ಆದ್ದರಿಂದ ಪರಸ್ಪರ ನಿಷ್ಕಲ್ಮಷ ಪ್ರೀತಿ ಸ್ನೇಹವನ್ನೇ ಹಂಚಿ ಅದನ್ನೇ ಮರಳಿ ಪಡೆಯೋಣ
ಏನಂತೀರೀ…
ದೀಪಕ ಶಿಂಧೇ
9482766018