spot_img
spot_img

ಹೊಸ ಪುಸ್ತಕ ಓದು

Must Read

- Advertisement -

ದತ್ತ ಕಾವ್ಯದ ಓದಿಗೆ ವಿಸ್ತಾರದ ಭಿತ್ತಿ

ಪುಸ್ತಕದ ಹೆಸರು : ಸಖ್ಯದ ಆಖ್ಯಾನ : ಬೇಂದ್ರೆ ಕಾವ್ಯಾನುಸಂಧಾನ
ಲೇಖಕರು : ಡಾ. ಬಸವರಾಜ ಸಾದರ
ಪ್ರಕಾಶಕರು : ಯಾಜಿ ಪ್ರಕಾಶನ, ಹಂಪಿ, ೨೦೨೩
ಪುಟ : ೧೧೪ ಬೆಲೆ : ರೂ. ೧೬೦
ಲೇಖಕರ ಸಂಪರ್ಕವಾಣಿ : ೯೮೮೬೯೮೫೮೪೭
* * * * * * *

ಕನ್ನಡಕ್ಕೆ ಜ್ಞಾನಪೀಠ ತಂದುಕೊಟ್ಟ ದಿವ್ಯತೆಯ ಕವಿ ಬೇಂದ್ರೆ ನಮ್ಮ ನಾಡಿನ ಭುವನದ ಭಾಗ್ಯ. ಬೇಂದ್ರೆ ಅವರ ಕಾವ್ಯದ ಉಜ್ವಲ ದೃಷ್ಟಿ, ಪ್ರಕೃತಿಯದ್ಭುತ ಚಿತ್ರ, ಐಂದ್ರಜಾಲಿಕ ಶೈಲಿ ಜನಮನದಲ್ಲಿ ಇಂದಿಗೂ ಹಾಸುಹೊಕ್ಕಾಗಿದೆ. ಜೀವನದ ರಸ ವಿರಸಗಳ ಸೂಕ್ಷ್ಮ ವಿವರಣೆಯು ಅವರ ಕಾವ್ಯಕೃತಿಗಳಲ್ಲಿ ಮೈವೆತ್ತು ನಿಂತಿದೆ. ವೈವಿಧ್ಯ-ಸೌಂದರ್ಯ ತತ್ವ ವೇದಾಂತ ದರ್ಶನದ ಅನುಪಮ ವಿಮರ್ಶೆಯ ಶಕ್ತಿಯನ್ನು ಒಳಗೊಂಡ ಅವರ ವಾಗ್ಮಿತೆಯಂತೂ ಅಲೌಕಿಕ ಮೋಡಿಯನ್ನುಂಟು ಮಾಡಿದೆ. ಈ ಜಗದ ಜೀವನ ಕ್ಷಣಿಕ ಎಂದು ಹೇಳುವರು, ಆದರೆ ಚಿತ್ರನೇಮಿಯ ಹಾಗೆ ಸುಖ ದುಃಖ ಬಂದರೂ ಜೀವನದಲ್ಲಿ ರಸಿಕತೆಯ ತೋರಿ ಬೆಳಕಾದ ಕವಿ ಬೇಂದ್ರೆ ಇಂದಿಗೂ ನೆನಪಾಗಿ ಕಾಡುವರು.

- Advertisement -

ಜಿ. ಎಸ್. ಆಮೂರ ಅವರು ಬರೆದ ‘ಭುವನದ ಭಾಗ್ಯ’ ಕೃತಿಯನ್ನು ಒಳಗೊಂಡಂತೆ, ಬೇಂದ್ರೆಯವರ ಕಾವ್ಯ-ಸಾಹಿತ್ಯ ಕುರಿತು ಅನೇಕ ಕೃತಿಗಳು ರಚನೆಗೊಂಡಿವೆ. ಬೇಂದ್ರೆ ಅಜ್ಜ ಗತಿಸಿ ನಾಲ್ಕು ದಶಕಗಳೇ ಆದರೂ, ಅವರ ಸಾಹಿತ್ಯ ಚಿಂತನೆಯ ಕೃತಿಗಳು ಮೇಲಿಂದ ಮೇಲೆ ಪ್ರಕಟಗೊಳ್ಳುತ್ತಲೇ ಇರುವುದು ಅವರ ಕಾವ್ಯಕ್ಕಿರುವ ಒಂದು ಅತುಲ ಸಾಮರ್ಥ್ಯವನ್ನು ತೋರಿಸುತ್ತದೆ. ಕುವೆಂಪು-ಬೇಂದ್ರೆ ನಮ್ಮ ನಾಡು ಕಂಡ ಶ್ರೇಷ್ಠ ಕವಿಗಳು. ಕುವೆಂಪು ಸಾಮಾನ್ಯ ಕುಟುಂಬದಲ್ಲಿ ಜನಿಸಿ, ಕಾಡಿನ ಕವಿ ಎನಿಸಿಕೊಂಡರೂ ಸಂಸ್ಕೃತ ಭೂಯಿಷ್ಠ ಕಾವ್ಯವನ್ನು ಬರೆದರು. ಆದರೆ ಬೇಂದ್ರೆ ಅವರು ಮಡಿವಂತ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರೂ ಜಾನಪದ ದೇಶೀಯತೆಯ ಪ್ರತಿಭೆಯಲ್ಲಿ ಅರಳಿದ ದತ್ತ ಪ್ರತಿಭೆಯಾಗಿ ಕಂಗೊಳಿಸಿದರು. ಕುವೆಂಪು ಅವರ ಸಂಸ್ಕೃತ ಭೂಯಿಷ್ಠ ಕಾವ್ಯ, ಬೇಂದ್ರೆಯವರ ಜಾನಪದ ಸೊಗಡಿನ ದೇಶಿ ಕಾವ್ಯ ಕನ್ನಡಕ್ಕೊಂದು ಹೊಸ ಬೆಳಕನ್ನು ನೀಡಿದವು. ಬೇಂದ್ರೆ ಎಲ್ಲ ವರ್ಗದ ವಿದ್ವಜ್ಜನರನ್ನು ಆಕರ್ಷಿಸಿದ ಕವಿ. ಡಾ. ಬಸವರಾಜ ಸಾದರ ಅವರು ಧಾರವಾಡದಲ್ಲಿ ಅಧ್ಯಯನ ಮಾಡುವ ಕಾಲಕ್ಕೆ ಬೇಂದ್ರೆ ಅಜ್ಜನ ಪ್ರಭಾವಕ್ಕೆ ಒಳಗಾದವರು. ಸ್ನಾತಕೋತ್ತರ ಅಧ್ಯಯನ ಮಾಡುವ ಸಂದರ್ಭದಲ್ಲಿ ವಿಶ್ವವಿದ್ಯಾಲಯಕ್ಕೆ ಬೇಂದ್ರೆಯವರನ್ನು ಮುಖ್ಯ ಅತಿಥಿಗಳಾಗಿ ಕರೆಯಿಸಿ, ಅವರಿಂದ ಆಶೀರ್ವಾದ ಪಡೆದವರು. ಬೇಂದ್ರೆ ಅವರ ಕಾವ್ಯದ ಅನುಸಂಧಾನವನ್ನು ಮೂರು ದಶಕಗಳಿಗಿಂತ ಹೆಚ್ಚು ಮಾಡುತ್ತ ಬಂದ ಪರಿಣಾಮವೇ ಪ್ರಸ್ತುತ ಕೃತಿ ‘ಸಖ್ಯದ ಆಖ್ಯಾನ : ಬೇಂದ್ರೆ ಕಾವ್ಯಾನುಸಂಧಾನ’.

ಕಲ್ಪನಾ ವಿಲಾಸ ಮಾತ್ರವೆ ಕವಿಯ ಚರಮ ಸಿದ್ಧಿಯಲ್ಲ. ಅದು ಭಾವಲೋಕದಲ್ಲಿ ಬೆರೆತ ಬುದ್ಧಿಯ ಚಮತ್ಕಾರ ಮಾತ್ರ. ಆದರೆ ಅದು ಬುದ್ಧಿಗೂ ಮೀರಿದ ದರ್ಶನ ‘ಕಾಣ್ಕೆ’ಯ ಅಪೇಕ್ಷೆಯುಳ್ಳದು. ಹೃದಯಂಗಮವಾದ ಕಾವ್ಯವು ಬುದ್ಧಿಯ ಒರೆಗೆ ನಿಲುಕುತ್ತದೆಯೋ, ಭಾವನೆಯೊಡನಿಳಿದು ಆತ್ಮದರ್ಶನಕ್ಕೆ ಅನುಕೂಲವಾಗುತ್ತದೆಯೋ ಎಂಬುದನ್ನು ಡಾ. ಸಾದರ ಅವರಲ್ಲಿ ಅಡಗಿರುವ ಸಹೃದಯ ವಿಮರ್ಶಕನೇ ನಿರ್ಣಯಿಸಿದ್ದಾನೆ. ಕವಿ ರಸಋಷಿಯಾಗಬೇಕಾದರೆ, ಅವನ ದೃಷ್ಟಿಯಲ್ಲಿ ವಾಸ್ತವತೆ ಬೇಕು, ಅವನ ಜೀವನದಲ್ಲಿ ಆತ್ಮ ತುಷ್ಟಿಯಿರಬೇಕು. ಇದಕ್ಕೆ ಜತೆಯಾಗಿ ಭಾವಸಂಕಲ್ಪ ಜೀವನ ಸೌಂದರ್ಯಗಳ ನಿತ್ಯ ಪುಷ್ಟಿಯು ಅತ್ಯವಶ್ಯ. ತನ್ನ ಜೀವನವನ್ನು ತಾನು ತಣಿಸಿಕೊಂಡಾಗಲೆ ಅವನಿಗೆ ಆತ್ಮಸಾಕ್ಷಿಯಾಗಿ ಅರಿವಾಗುತ್ತದೆ. ‘ನಾನು ನೆರೆಯವರ ನೋವು ಕಳೆಯಲು ಹಾಡಬೇಕು’ ಆದರೆ ಕವಿಗಿದು ಜಂಭದಿಂದ ಬರುವ ಮಾತಲ್ಲ. ಅವನ ಅನುಭವಗಳ ಒತ್ತಡ ಹಾಗೆ ಹೇಳಿಸುತ್ತದೆ. ಇದು ನಿಜವಾದ ಕವಿಯ ವ್ಯಕ್ತಿತ್ವ. ಕಾವ್ಯ ಓದಿದಾಗ ಸಹೃದಯನು ಇಂತಹ ಅಭಿನಿವೇಶ ಕಂಡರೆ ಕವಿಯ ರಸ ಸಮಾರಾಧನೆಗೆ ಸಾರ್ಥಕ್ಯದ ಭಾವ ಮೂಡುತ್ತದೆ. ಈ ಹಿನ್ನೆಲೆಯಲ್ಲಿ ಡಾ. ಸಾದರ ಅವರ ಬರಹಗಳು ಈ ಕೃತಿಯಲ್ಲಿ ಎಡೆಪಡೆದಿವೆ.

ಪ್ರಸ್ತುತ ಕೃತಿಯಲ್ಲಿ ಒಟ್ಟು ಏಳು ಲೇಖನಗಳಿವೆ. ಎಲ್ಲ ಲೇಖನಗಳು ಭಿನ್ನ ಆಯಾಮಗಳನ್ನು ಒಳಗೊಂಡಿವೆ. ಮೊದಲ ಲೇಖನ ‘ದಾಂಪತ್ಯ ಸಖ್ಯದ ಆಖ್ಯಾನ’, ‘ಅದಕು ಇದಕು ಎದಕು’ ಲೇಖನಗಳು ಅತ್ಯುತ್ತಮ ರಸವಿಮರ್ಶೆಯ ಪರಿಪಾಕವಾದರೆ, ‘ಉಂಡಮ್ಯಾಲ’, ‘ಗಟ್ಯಾಗಿರಬೇಕು ತಮ್ ಬಿಗಿ (ತಂಬಿಗಿ….’ ಲೇಖನಗಳು ಶ್ರೇಷ್ಠ ಲಲಿತಪ್ರಬಂಧಗಳಾಗಿವೆ. ‘ಇದು ಬರಿ ಬೆಳಗಲ್ಲೊ ಅಣ್ಣಾ’ ಲೇಖನ ಡಾ. ಸಾದರ ಅವರು ಆಕಾಶವಾಣಿಯಲ್ಲಿದ್ದಾಗ ಬೇಂದ್ರೆ ಜನ್ಮಶತಮಾನೋತ್ಸವ ನಿಮಿತ್ಯ ಹಮ್ಮಿಕೊಂಡಿದ್ದ ವಿಚಾರ ಸಂಕಿರಣದ ಒಟ್ಟು ನೋಟ ಮತ್ತು ಆ ಹೆಸರಿನ ಕೃತಿಗೆ ಬರೆದ ಸುದೀರ್ಘ ಪ್ರಸ್ತಾವನೆಯಾಗಿದೆ. ಹೀಗೆ ಇಲ್ಲಿಯ ಲೇಖನಗಳು ರಸವಿಮರ್ಶೆ, ಪ್ರಬಂಧ, ಪ್ರಸ್ತಾವನೆ ರೂಪದಲ್ಲಿ ಮೂಡಿವೆ. ಬೇಂದ್ರೆಯವರ ಕಾವ್ಯವನ್ನು ಹೊಸರೀತಿಯಲ್ಲಿ ಅನುಸಂಧಾನ ಮಾಡಿದ ಬರಹಗಳು ಇಲ್ಲಿವೆ.

- Advertisement -

ಡಾ. ಸಾದರ ಅವರ ಗುರುಗಳಾಗಿದ್ದ ಡಾ. ಗುರುಲಿಂಗ ಕಾಪಸೆ ಅವರು ಬೇಂದ್ರೆ-ಮಧುರಚೆನ್ನರ ಸಖ್ಯಯೋಗ ಎಂಬ ಕೃತಿಯನ್ನು ರಚಿಸಿ, ಅವರಿಬ್ಬರ ಅಮರಪ್ರೀತಿಯ ಸ್ನೇಹದೌನ್ನತ್ಯವನ್ನು ಗುರುತಿಸಿದ್ದರು. ಈಗ ಡಾ. ಸಾದರ ಅವರು ಬೇಂದ್ರೆ ಅವರ ದಾಂಪತ್ಯ ಬದುಕಿನ ಸಖ್ಯಯೋಗವನ್ನು ಶೋಧಿಸಿದ್ದಾರೆ. ಸಖಿಗೀತ ಬೇಂದ್ರೆ ಅವರ ಅಜರಾಮರ ಕೃತಿ. ಅದೊಂದು ಅವರ ಅವ್ಯಕ್ತ ಅತ್ಮಕತೆ. ಜೀವನದ ವೈಭವದ ಅಧ್ಯಾತ್ಮದನುಭವದ ಕಾಂತಿಯನ್ನು ಹೊರಸೂಸಿದ ಅಮೂಲ್ಯ ಕೃತಿ. ಈ ಕೃತಿಯಲ್ಲಿ ದಾಂಪತ್ಯ ಕುರಿತಾದ ಕವಿ ಬೇಂದ್ರೆ ಅವರ ವಿಚಾರಧಾರೆಯ ಕವನಗಳನ್ನು ವಿಶ್ಲೇಷಣಾ ಕಕ್ಷೆಗೆ ಒಳಪಡಿಸಿದ ಡಾ. ಸಾದರ ಅವರು ಅಪರೂಪವೆನ್ನುವ ಹೊಸ ಹೊಳವುಗಳನ್ನು ಕಟ್ಟಿಕೊಟ್ಟಿದ್ದಾರೆ. ಸಖಿಗೀತದಲ್ಲಿ ಕೇವಲ ಸಾಂಪ್ರದಾಯಿಕ ಶೃಂಗಾರ ಕರುಣೆಗಳ ಬಿರುಗಾಳಿ ಇಲ್ಲ. ಅದನ್ನು ಮೀರಿ ಸ್ನೇಹ ಸ್ಥಾಯೀಭಾವದ ಯಾವುದೋ ಒಂದು ರಸಧ್ವನಿ ಆ ಕಾವ್ಯದಲ್ಲಿದೆ ಎಂಬ ಸ್ವಾರಸ್ಯವನ್ನು ಡಾ. ಸಾದರ ಆಪ್ತವಾಗಿ ಹಂಚಿಕೊಂಡಿದ್ದಾರೆ. ದಾಂಪತ್ಯದಲ್ಲಿಯ ಸುಸ್ನೇಹ ರಸಾಸ್ವಾದವು, ನಿಜಶೃಂಗಾರ ಪರಿಣತಿಯ ಚಿಹ್ನೆ. ಬೇಂದ್ರೆಯವರ ಕಾವ್ಯದ ಸಖಿ ಹೇಳುವ ಮಾತಿನಲ್ಲಿ ಕೇವಲ ಕರುಣ ನಿರೂಪಣೆಯಿಲ್ಲ. ಸಖನಲ್ಲಿ ಆತ್ಮನಿರೂಪಣ ಬುದ್ಧಿಯಿದೆ. ಕಾಮದೀಪ್ತಿಯಲ್ಲಿ ಪ್ರೇಮ ಪರಮಾತ್ಮನನ್ನು ಕಾಣುವ ಶೃಂಗಾರ ಪರಮ ದೃಷ್ಟಿಯಿದೆ. ಹೀಗಾಗಿ ಸಖೀಗೀತದಲ್ಲಿಯ ನಾಯಕ ನಾಯಕಿಯರಲ್ಲಿ ಸಖ್ಯವೇ ಸ್ಥಾಯಿಭಾವವಾಗಿ ನೆಲೆನಿಂತಿದೆ. ಅಂತೆಯೇ ಈ ಗೀತದಲ್ಲಿಯ ಸ್ನೇಹ ಧ್ವನಿಯು ಸಖ್ಯದ ಆಖ್ಯಾನವು ಜೀವನದಲ್ಲಿ ಪ್ರಸ್ತುತವಾದ ಅಮರತ್ವವನ್ನು ಜಾಗೃತಗೊಳಿಸುತ್ತದೆ; ಆತ್ಮತತ್ವದ ಅರಿವಿಗೆ ನೆರವಾಗುತ್ತದೆ ಎಂಬ ಅಂಶವನ್ನು ಡಾ. ಸಾದರ ಅವರು ತುಂಬ ಮನೋಜ್ಞವಾಗಿ ತಿಳಿಸಿದ್ದಾರೆ.

ಬೇಂದ್ರೆಯವರ ಅನುರೂಪದ ದಾಂಪತ್ಯ ಅವರ ಕಾವ್ಯದಲ್ಲಿ ರಸಗಂಗೋತ್ರಿಯಾಗಿ ಹರಿದಿದೆ. ಬೇಂದ್ರೆಯವರು ಬದುಕನ್ನು ಬಂದಂತೆ ಸ್ವೀಕರಿಸಿದವರು. ಸುಖ ದುಃಖ, ನೋವು-ನಲಿವುಗಳನ್ನು ಸಮಚಿತ್ತದಿಂದ ಕಂಡವರು. ಮದುವೆಯಾದ ಹೊಸದರಲ್ಲಿ ಇರುವ ಪ್ರೀತಿಯ ಉತ್ತುಂಗತೆ, ಮಕ್ಕಳಾದ ನಂತರ ಆಗುವ ಬದಲಾವಣೆಗಳು, ಅದರಲ್ಲೂ ಹುಟ್ಟಿದ ಮಕ್ಕಳು ಆಕಸ್ಮಿಕವಾಗಿ ಮರಣ ಹೊಂದಿದಾಗ ಅನುಭವಿಸಿದ ಆತಂಕ-ನೋವು ಸಂಕಟಗಳ, ಎದೆಯಾಳದ ತಳಮಳಗಳನ್ನು ಡಾ. ಸಾದರ ಅವರು ತುಂಬ ಸೂಕ್ಷ್ಮವಾಗಿ ಗ್ರಹಿಸಿದ್ದಾರೆ. ಬೇಂದ್ರೆಯವರ ಅನೇಕ ಕಾವ್ಯದ ಭಾಗಗಳನ್ನು ಉದಾಹರಿಸಿ, ದಾಂಪತ್ಯದ ಸಖ್ಯ ಎಂಬುದು ಎಂತಹ ದರ್ಶನದ ಕಾಣ್ಕೆಯಾಗಿತ್ತು ಎಂಬುದನ್ನು ಗುರುತಿಸಿದ್ದಾರೆ. ಬೇಂದ್ರೆ ಅವರು ಸಾಂಖ್ಯದರ್ಶನದ ಪ್ರಭಾವಕ್ಕೆ ಹೆಚ್ಚು ಒಳಗಾಗಿದ್ದರು. ಸಾಂಖ್ಯದ ಪುರುಷ-ಪ್ರಕೃತಿ, ಶಿವ-ಶಕ್ತಿ ವಿಕಾಸದ ಪರಮ ಗಂತವ್ಯವನ್ನು ಬೇಂದ್ರೆಯವರು ತಮ್ಮ ಕಾವ್ಯದ ಮೂಲಕ-ದಾಂಪತ್ಯ ಬದುಕಿನಲ್ಲಿ ಸಾಧಿಸಿದ್ದರು ಎಂಬುದನ್ನು ಡಾ. ಸಾದರ ಅವರು ತುಂಬ ಅರ್ಥಪೂರ್ಣವಾಗಿ ವಿಶ್ಲೇಷಿಸಿದ್ದಾರೆ.

‘ಉಂಡಮ್ಯಾಲೆ…. (ಒಂದು ಐತಿಹ್ಯಾತ್ಮಕ ಲಹರಿ) ಎಂಬ ಪ್ರಬಂಧ ರೂಪದ ಲೇಖನ ಓದುಗರಲ್ಲಿ ಹಾಸ್ಯರಸದ ಹೊಳೆಯನ್ನೇ ಹರಸುತ್ತದೆ. ಡಾ. ಸಾದರ ಅವರು ಮತ್ತು ಅವರ ಗೆಳೆಯರು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಅಧ್ಯಯನ ಮಾಡುತ್ತಿದ್ದ ಕೊನೆಯ ಘಟ್ಟದಲ್ಲಿ ವಿಶ್ವವಿದ್ಯಾಲಯಕ್ಕೆ ಯಾರನ್ನು ಮುಖ್ಯ ಅತಿಥಿಗಳನ್ನು ಕರೆಯಿಸಬೇಕೆಂಬ ಚರ್ಚೆ ಶುರುವಾಗುತ್ತದೆ. ಒಬ್ಬ ಗೆಳೆಯ ‘ಚಂಪಾ’ ಅವರನ್ನು ಕರೆಯಿಸಬೇಕೆಂದು ಹೇಳಿದಾಗ, ಕೆಲವರು ಚಂಪಾ ಎಂಬುದು ಸ್ತ್ರೀ ವಾಚಕವಾಗಿರುವುದರಿಂದ ‘ಆಕೀ ಯಾವ್ಳಲೇ? ಕಂಪ್ನೀ ನಾಟಕದಾಗ ಪಾರ್ಟ ಮಾಡೂ ಚಿಮಣಾನ ಹೆಸರಿದ್ದಾಂಗೈತಿ’ ಎಂದು ಹೇಳುವ ಪ್ರಸಂಗ, ಕಟ್ಟೀಮನಿಯವರನ್ನು ಕರೆಯಿಸಬೇಕೆಂಬ ಪ್ರಸ್ತಾಪ ಬಂದಾಗ, ಕಟ್ಟೀಮನಿ ಹೇಳಿಕೇಳಿ ಬಂಡಾಯದ ಮನುಷ್ಯ, ವೇದಿಕೆ ಮೇಲೆ ಮಠಾಧೀಶರನ್ನು-ಅಧ್ಯಾಪಕರನ್ನು ಟೀಕಿಸಿದರೆ ಗತಿ ಏನು? ಎಂದು ಹೆದರಿ, ಕೊನೆಗೆ ಬೇಂದ್ರೆಯವರನ್ನು ಮುಖ್ಯ ಅತಿಥಿಗಳಾಗಿ ಕರೆಯಲು ತೀರ್ಮಾನಿಸುತ್ತಾರೆ. ಬೇಂದ್ರೆಯವರನ್ನು ಒಪ್ಪಿಸಲು ಅವರ ಮನೆಗೆ ಹೋಗಿ ಹೇಳಿದಾಗ, ಬೇಂದ್ರೆಯವರು ಒಂದೇ ಮಾತಿಗೆ ಕಾರ್ಯಕ್ರಮಕ್ಕೆ ಬರಲು ಒಪ್ಪಿಕೊಳ್ಳುತ್ತಾರೆ. ಕರೆಯಲು ಹೋದವರು ಇಬ್ಬರು. ಅವರಲ್ಲಿ ಡಾ. ಸಾದರ ಅವರು ಒಬ್ಬರು. ಬೇಂದ್ರೆಯವರು ಇಬ್ಬರನ್ನು ‘ಏನು ಕಲಿಯುತ್ತಿರುವಿರಿ?’ ಎಂದು ಕೇಳುತ್ತಾರೆ. ತಕ್ಷಣ ಇವರು ‘ಎಂ.ಎ. ಫೈನಲ್’ ಎನ್ನುತ್ತಾರೆ. ಆಗ ಬೇಂದ್ರೆ ‘ಚಲೋ ಆತು ಚಲೋ ಆತು, ಗ್ಯಾರಂಟೀ ಪಾಸಾಕ್ಕೀರಿ’ ಎನ್ನುತ್ತಾರೆ. ಡಾ. ಸಾದರ ಅವರ ಗೆಳೆಯನಿಗೆ ಇದೊಂದು ಸೋಜಿಗವೆನಿಸಿ, ‘ಅಲ್ಲಾ ಸಾರ್ ಇಷ್ಟು ಸರಳವಾಗಿ ಪಾಸಾಕ್ಕೀರಿ ಅಂತ ಹೇಳ್ತೀರೆಲ್ಲಾ ಅದ್ಹೆಂಗ?’ ಎಂದು ಕೇಳುತ್ತಾನೆ. ಅದಕ್ಕೆ ಬೇಂದ್ರೆಯವರು ತಕ್ಷಣ ನೀಡುವ ಉತ್ತರ ‘ಅಲೆ ಇವನ! ಎಂ. ಎ. ಪಾಸಾಗೋದು ಅದೇನ್ ಮಹಾನೋ, ಉಂಡ ಮ್ಯಾಲ…….?’ ಎಂದು ಹೇಳುತ್ತಾರೆ. ಇದನ್ನು ಓದುಗರು ಓದಿಯೇ ಅನುಭವಿಸಬೇಕು. ಅಷ್ಟೊಂದು ಥ್ರಿಲ್ ಈ ಉತ್ತರದಲ್ಲಿದೆ. ಒಂದು ಸಣ್ಣ ಘಟನೆಯನ್ನು ಪ್ರಬಂಧ ಮಾದರಿಯಲ್ಲಿ ಹೇಗೆ ಅಚ್ಚುಕಟ್ಟಾಗಿ ಕಟ್ಟಿಕೊಡಬಹುದು ಎಂಬುದಕ್ಕೆ ಈ ಲೇಖನ ನಿದರ್ಶನವಾಗಿದೆ.

‘ತುಟಿ ಕಚ್ಚಿ ಹಿಡಿಯದಿರು ಬಿಕ್ಕ….’ ಲೇಖನ ಓದುಗರ ಹೃದಯದಲ್ಲಿ ಕಂಪನವನ್ನುಂಟು ಮಾಡುತ್ತದೆ. ‘ನೀ ಹಿಂಗ ನೋಡಬ್ಯಾಡ ನನ್ನ’ ಎಂಬ ಕವಿತೆಯನ್ನು ಕೇಳಿದಾಗ ಸಹೃದಯನಿಗೆ ಉದ್ದೀಪ್ತವಾದ ಶೋಕವೆ ಹೃದಯಕ್ಕೆ ವ್ಯಾಪ್ತವಾದುದೆನಿಸುವುದಿಲ್ಲ. ಈ ಶೋಕದಾಚೆಗಿನ ಆನಂದ ತತ್ವವನ್ನು ಹೃದಯ ಹುಡುಕಿ, ಅನುಭವಿಸಿ ಅದರಲ್ಲಿ ಲೀನವಾಗುತ್ತದೆ. ಆ ಶೋಕದ ಕಾವು ಇನ್ನೊಂದು ಹೃದಯವನ್ನು ಮುಟ್ಟಿದಾಗಲೆ ರಸವೊಸರುವುದು ಎಂಬ ಸತ್ಯವನ್ನು ಡಾ. ಸಾದರ ಅವರು ಮಾರ್ಮಿಕವಾಗಿ ವಿವರಿಸಿದ್ದಾರೆ.

‘ಗಟ್ಟ್ಯಾಗಿರಬೇಕು ತಮ್ ಬಿಗಿ(ತಂಬಿಗಿ), ನಮ್ ಬಿಗಿ(ನಂಬಿಗಿ) : ಬೇಂದ್ರೆಯವರ ಒಂದು ಅನುಭಾವ ದರ್ಶನ ಲಹರಿ ಎಂಬ ಲೇಖನ ತುಂಬ ಮಾರ್ಮಿಕವಾಗಿದೆ. ಬೇಂದ್ರೆಯವರ ಮಾತಿನಲ್ಲಿ ಹತ್ತಾರು ಅರ್ಥಗಳು ಹೊರಹೊಮ್ಮುತ್ತಿದ್ದವು. ಅಂತಹ ಅರ್ಥ ಸಾದೃಶ್ಯಗಳನ್ನು ಬಳಸಿಕೊಂಡು ಡಾ. ಸಾದರ ಅವರು ಬೇಂದ್ರೆಯವರ ಈ ಮಾತುಗಳಲ್ಲಿ ಅಡಕವಾಗಿರುವ ದಾರ್ಶನಿಕ ಚಿಂತನೆಯ ಹೊಳವುಗಳನ್ನು ವಿವರಿಸಿದ್ದು ನಿಜಕ್ಕೂ ಸೋಜಿಗವೆನಿಸುತ್ತದೆ. ‘ಹಿಡಕೋ ಕೈ, ನಡೀ ಹೋಗೂನು ಬಯಲ್ಕಡೀಗೆ’ ಅನ್ನೋ ಮಾತಿನೊಳಗೂ, ಈ ಜಗತ್ತಿನ್ಯಾಗ ‘ನಂಬಿಗೀ’ಲೇ ಒಬ್ಬರೊಗೊಬ್ಬರು ಕೈ ಹಿಡಕೊಂಡು ‘ಬಯಲ’ ಕಡೀಗೆ (ಈ ಲೋಕದಿಂದ ದೂರವಾಗೋದು) ಹೋಗಬೇಕು ಅಂತ ವಿಶೇಷ ಅರ್ಥದ ಧ್ವನಿ ಇರೋದನ್ನೂ ಕಾಣಬೌದು” ಎಂಬ ಡಾ. ಸಾದರ ಅವರ ವಿವರಣೆ ಬೇಂದ್ರೆಯವರ ತತ್ವಶಾಸ್ತ್ರೀಯ ದೃಷ್ಟಿಯತ್ತ ನಮ್ಮ ಗಮನ ಸೆಳೆಯುತ್ತದೆ.

‘ಇದು ಬರಿ ಬೆಳಗಲ್ಲೋ ಅಣ್ಣಾ…’ ಬೇಂದ್ರೆಯವರ ಜನ್ಮಶತಮಾನೋತ್ಸವ ಕಾಲಕ್ಕೆ ಡಾ. ಸಾದರ ಅವರು ಆಕಾಶವಾಣಿಯಲ್ಲಿ ವಿಚಾರ ಸಂಕಿರಣವೊಂದನ್ನು ನೇರಪ್ರಸಾರ ಮಾಡಿದ್ದು ದಾಖಲಾರ್ಹ ಸಂಗತಿ. ಕುರ್ತಕೋಟಿ, ಮಲ್ಲೇಪುರಂ, ಸಿದ್ಧಲಿಂಗ ಪಟ್ಟಣಶೆಟ್ಟಿ, ಗುರುಲಿಂಗ ಕಾಪಸೆ, ಚೆನ್ನವೀರ ಕಣವಿ ಮೊದಲಾದ ಹಿರಿಯ ವಿದ್ವಾಂಸರಿಂದ ಬೇಂದ್ರೆಯವರ ಸಾಹಿತ್ಯದ ವಿವಿಧ ಆಯಾಮಗಳ ಕುರಿತಾದ ವಿಶೇಷ ಉಪನ್ಯಾಸಗಳನ್ನು ಏರ್ಪಡಿಸಿ, ನೇರ ಪ್ರಸಾರ ಮಾಡಿದ್ದರು. ಈ ಕಾರ್ಯಕ್ರಮ ಇಪ್ಪತ್ತೆöÊದು ವರ್ಷಗಳ ಹಿಂದೆ ತುಂಬ ಜನಪ್ರಿಯವಾಗಿತ್ತು. ಸ್ವತಃ ಕೀರ್ತಿನಾಥ ಕುರ್ತಕೋಟಿ ಅವರೇ ಡಾ. ಸಾದರ ಅವರ ಮುಂದೆ – “ಏ ತಮ್ಮಾ ಅದೇನ್ ಪ್ರೀತಿನೋ ನಿನಗ ಬೇಂದ್ರೆ ಅಅಂದ್ರ! ಅವರ ಜನ್ಮ ಶತಮಾನೋತ್ಸವದ ಹೊತ್ತಿನ್ಯಾಗ ಬೇಕಾದಷ್ಟು ಕಾರ್ಯಕ್ರಮಾ ಆಗ್ಯಾವ. ಆದ್ರ, ನೀ ಏನ್ ಮಾಡಿದೆಲ್ಲಾ, ಈ ಕಾರ್ಯಕ್ರಮಾ ಎಲ್ಲಾ ತಂತಿಗಳನ್ನು ಒಂದುಗೂಡಿಸ್ತು ನೋಡು. ಇದು ಖರೇವಂದ್ರೂ ‘ನಭೋವಾಣಿ’ ಆಗಿ ಬೇಂದ್ರೆಯವರಿಗೆ ಕೇಳ್ಸಿರತೈತಿ’ ಎಂದು ಮನದುಂಬಿ ಹೇಳಿದ ಮಾತುಗಳು ಆ ಕಾರ್ಯಕ್ರಮದ ಯಶಸ್ವಿಗೆ ಸಾಕ್ಷಿಯಾಗಿವೆ. ಇಡೀ ಕಾರ್ಯಕ್ರಮದ ಒಟ್ಟು ನೋಟವನ್ನು ಪ್ರಸ್ತಾವನೆ ರೂಪದಲ್ಲಿ ಬರೆದು, ವಿಚಾರ ಸಂಕಿರಣ ನಡೆದು ೨೫ ವರ್ಷಗಳ ತರುವಾಯ ಆ ಲೇಖನಗಳನ್ನು ಸಂಗ್ರಹಿಸಿ, ಬೇಂದ್ರೆ ೧೨೫ನೇ ಜನ್ಮದಿನದ ನೆನಪಿನಲ್ಲಿ ‘ಇದು ಬರಿ ಬೆಳಗಲ್ಲೊ ಅಣ್ಣಾ…’ ಎಂಬ ಕೃತಿಯನ್ನು ಸಂಪಾದಿಸಿ ಪ್ರಕಟಿಸಿದ ಡಾ. ಸಾದರ ಅವರ ಕಾರ್ಯ ಸಾರ್ಥಕ್ಯವಾದುದು.

‘ಅನುಭಾವದ ಕೃಷಿಯ ಕೋರಪಾಲು’ ಪುಸ್ತಕದ ಕೊನೆಯ ಲೇಖನ ಬೇಂದ್ರೆಯವರ ‘ಎದೆಯ ಒಕ್ಕಲಿಗೆ’ ಕವನದ ಅನನ್ಯ ರೂಪಕತೆಯನ್ನು, ಅದರ ವಿಸ್ತಾರ ವೈವಿಧ್ಯತೆಯನ್ನು ಡಾ. ಸಾದರ ಅವರು ವಿವರಿಸಿದ ಪರಿ ‘ಸ್ವಂತೋಪದೇಶದಮ್ಮಿತ’ದಿಂದ ಕೂಡಿದೆ. ಬಸವಣ್ಣನವರ ‘ಮನೆಯೊಳಗೆ ಮನೆಯೊಡೆಯ…’ ವಚನವನ್ನು ಉಲ್ಲೇಖಿಸಿ ಎದೆಯ ಒಕ್ಕಲಿಗೆ ಕವಿತೆಯ ಅಂತಃಸತ್ವವನ್ನು ಓದುಗರಿಗೆ ಉಣಬಡಿಸಿದ ಡಾ. ಸಾದರ ಅವರ ಬರಹ ತುಂಬ ಅಪ್ಯಾಯಮಾನವಾಗಿದೆ.

ಚನ್ನಪ್ಪ ಅಂಗಡಿ ಅವರ ‘ಸವಿನುಡಿ’ ಎಂಬ ದೀರ್ಘ ಪ್ರವೇಶಿಕೆ ಕೃತಿ ಒಡಲೊಳಗಿನ ರಸಪಾಕವನ್ನು ಉಣಬಡಿಸುತ್ತದೆ. ‘ಸಾಗರದೊಂದು ಹನಿಯ ಸ್ಪರ್ಶ’ ಎಂಬ ಲೇಖಕ ಡಾ. ಸಾದರ ವಿನಯ ಸೌಜನ್ಯ ತುಂಬಿದ ಲೇಖಕರ ನುಡಿಯಲ್ಲಿಯೂ ಈ ಲೇಖನಗಳ ಉಗಮದ ಬಗೆಗಿನ ಚಂದದ ವಿವರಣೆಯಿದೆ. ಕೆಲವು ಲೇಖನಗಳು ಧಾರವಾಡ ಪ್ರದೇಶದ ದೇಶಿ ನುಡಿಗಟ್ಟಿನಿಂದ ಕೂಡಿದವುಗಳಾಗಿವೆ. ಹೀಗಾಗಿ ಅಜ್ಜನೊಬ್ಬನ ಕುರಿತು ಮೊಮ್ಮಗ ಹೃದಯ ತುಂಬಿ ನಮ್ಮ ಕಣ್ಣು ಮುಂದೆ ಕುಳಿತು ಹೇಳುತ್ತಿರುವ ಭಾವ ಮೂಡುತ್ತದೆ. ಅಷ್ಟೊಂದು ಹೃದಯಸ್ಪರ್ಶಿ ಭಾಷೆಯ ಬಳಕೆ ಇಲ್ಲಿದೆ. ಬೇಂದ್ರೆಯವರನ್ನು ಅವರ ಕಾವ್ಯವನ್ನು ಅರಿತುಕೊಳ್ಳುವಲ್ಲಿ ಇಲ್ಲಿಯ ಬರಹಗಳು ಖಂಡಿತ ಹೊಸದೊಂದು ಹೊಳಪನ್ನು ತೋರಿಸುತ್ತವೆ ಎಂಬುದರಲ್ಲಿ ಸಂದೇಹವಿಲ್ಲ.

ಸಾರ್ಥಕ ೭೦ ವಸಂತಗಳನ್ನು ಕಂಡಿರುವ ಡಾ. ಬಸವರಾಜ ಸಾದರ ಅವರು ತಮ್ಮ ಬಿಡುವಿಲ್ಲದ ಕಾರ್ಯಬಾಹುಳ್ಯದಲ್ಲಿಯೂ ಇಂತಹ ಉತ್ತಮೋತ್ತಮ ಕೃತಿರತ್ನಗಳನ್ನು ಕನ್ನಡ ಸಾರಸ್ವತ ಪ್ರಪಂಚಕ್ಕೆ ನೀಡುತ್ತಿರುವುದು ಸಂತಸದ ಸಂಗತಿ. ಇಂತಹ ಅಪರೂಪದ ಕೃತಿಯನ್ನು ರಚಿಸಿದ ಡಾ. ಸಾದರ ಅವರಿಗೆ ವಂದನೆಗಳು.

ಪ್ರಕಾಶ ಗಿರಿಮಲ್ಲನವರ
ಬೆಳಗಾವಿ
ಮೊ: ೯೯೦೨೧೩೦೦೪೧

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಸಿಂದಗಿ ಮಂಡಲ ವತಿಯಿಂದ ರಸ್ತಾರೋಖೋ ಪ್ರತಿಭಟನೆ

ಸಿಂದಗಿ - ರಾಜ್ಯ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಮಾಡಿದ್ದು, ರಾಜ್ಯದಲ್ಲಿನ ಕಾನೂನ ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು ಹಾಗೂ ವಾಲ್ಮೀಕಿ ನಿಗಮದ ಹಗರಣದ...
- Advertisement -

More Articles Like This

- Advertisement -
close
error: Content is protected !!
Join WhatsApp Group