ಬೀದರ– ಗುರುವಾರ ಸಾಯಂಕಾಲ ಬೀದರನಲ್ಲಿ ಸುರಿದ ಭಾರಿ ಮಳೆಯಿಂದಾಗಿ ರಸ್ತೆ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು ನಗರದ ತಹಶೀಲ್ದಾರ ಕಚೇರಿ, ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣ ಮುಂಭಾಗದಲ್ಲಿರುವ ರಸ್ತೆ ಸಂಪೂರ್ಣ ಜಲಾವೃತಗೊಂಡು ರಸ್ತೆ ಸಂಚಾರಕ್ಕೆ ಸಾರ್ವಜನಿಕರು ಪರದಾಡುವಂತಾಗಿತ್ತು.
ನಗರದ ಗುಂಪಾ ರಸ್ತೆ, ಅಂಬೇಡ್ಕರ್ ರಸ್ತೆ, ಛತ್ರಪತಿ ಶಿವಾಜಿ ಮಹಾರಾಜ್ ವೃತ್ತ, ಕೆಇಬಿ ಕಛೇರಿ ಮುಂಭಾಗ ಮೋಹನ್ ಮಾರ್ಕೆಟ್ ಸೇರಿದಂತೆ ಹಲವು ರಸ್ತೆಗಳು ಜಲಾವೃತಗೊಂಡವು. ಒಂದೂವರೆ ತಾಸಿಗಿಂತಲೂ ಹೆಚ್ಚು ಕಾಲದಿಂದ ಎಡೆ ಬಿಡದೆ ಸುರಿದ ಮಳೆಗೆ ಬೀದರ್ ನಗರದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿತು. ನಗರದ ಪ್ರಮುಖ ರಸ್ತೆಗಳು ಕೆರೆ ಯಂತೆ ನಿರ್ಮಾಣವಾಗಿ ವಾಹನ ಸವಾರರ ಪರದಾಡಿದರು.
ಮಳೆಗಾಲದ ಅಂತ್ಯದಲ್ಲಿ ಸುರಿದ ಭಾರಿ ಮಳೆಗೆ ರಸ್ತೆಯಲ್ಲಿ ಹಳ್ಳದಂತೆ ಹರಿದ ನೀರು.
ಸುಮಾರು ಒಂದು ಕಿಲೋ ಮೀಟರ ಕಿಂತ ಹೆಚ್ಚು ಟ್ರಾಫಿಕ್ ಜಾಮ್ ಆಯಿತು. ಟ್ರಾಫಿಕ್ ನಿಯಂತ್ರಿಸಲು ಪೋಲಿಸರು ಹರಸಾಹಸ ಪಡುವಂತಾಯಿತು. ನಗರದ ಅಕ್ಕಮಹಾದೇವಿ ಮಹಿಳಾ ಕಾಲೇಜು ಕಾಂಪ್ಲೆಕ್ಸ್ ಅಂಗಡಿಗಳು ಸಂಪೂರ್ಣ ಜಲಾವೃತಗೊಂಡಿದ್ದು ಅಗ್ನಿಶಾಮಕ ದಳದವರು ಸುಮಾರು ಎರಡರಿಂದ ಮೂರು ಅಡಿ ಅಗ್ನಿಶಾಮಕ ವಾಹನಗಳಿಂದ ನೀರು ಹೊರ ಹಾಕಲು ಹರಸಾಹಸ ಪಟ್ಟರು.
ಅಂಗಡಿಯಲ್ಲಿ ಮೂರರಿಂದ ನಾಲ್ಕು ಅಡಿ ನೀರು ಸಂಗ್ರಹವಾಗಿ ಎಲೆಕ್ಟ್ರಾನಿಕ್ ವಸ್ತುಗಳು, ಬಟ್ಟೆ, ಹೋಟೆಲ್, ಗಿಫ್ಟ್ ಸೆಂಟರ್ ಸ್ಕ್ಯಾನಿಂಗ್ ಸೆಂಟರ್ ಗಳಲ್ಲಿನ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ನಷ್ಟವಾಗಿವೆ.
ವರದಿ: ನಂದಕುಮಾರ ಕರಂಜೆ, ಬೀದರ