ಮೊರೆ ಕೇಳು ಮಹಾದೇವ
ವರುಷದ ಮೊದಲ ಹಬ್ಬ ಯುಗಾದಿ
ತರಲಿ ನಮಗೆಲ್ಲ ಹರುಷ ಅನುದಿನದಿ
ಕೋಪ ತಾಪ ದ್ವೇಷ ಅಸೂಯೆ
ತನುಮನಗಳಿಂದ ದೂರಾಗಲಿ ಮಹಾದೇವ||
ಚಿಗುರೆಲೆಗಳು ಚಿಗುರುವಂತೆ
ತರುಲತೆಗಳು ಬೆಳೆಯುವಂತೆ
ನವ ಯುಗದಿ ನವ ತರುಣರು
ಸತ್ಕಾರ್ಯಗಳಲಿ ತೊಡಗಲಿ ಮಹಾದೇವ||
ಮಾವಿನ ಸಿಹಿ ಬೇವಿನ ಕಹಿ
ಜೀವನದ ಸಮರಸಕೆ ಮಾದರಿ
ಸಿಹಿಕಹಿಯ ಸಮಾನತೆಯಲಿ
ಸ್ವೀಕರಿಸುವಂತೆ ಮಾಡು ಮಹಾದೇವ ||
ದುಶ್ಚಟಗಳು ದೂರಾಗಲಿ
ಕಷ್ಟಗಳು ಮಾಯವಾಗಲಿ
ಹೊಸ ವರುಷಕೆ ಹುಮ್ಮಸ್ಸಿನಲಿ
ದುಡಿದುಣ್ಣುವ ಶಕ್ತಿ ನೀಡು ಮಹಾದೇವ||
ಕಾಲ ಸದ್ದಿಲ್ಲದೆ ಸರಿಯುತಿದೆ
ಸಾಧನೆ ಮಾತ್ರ ಶೂನ್ಯವಾಗಿದೆ
ಕಾಯಕ ಮಾಡುವ ಕೈಗಳಿಗೆ
ನವನಾವೀನ್ಯತೆಯ ಕರುಣಿಸು ಮಹಾದೇವ||
ವರುಷವೆಲ್ಲ ಹಬ್ಬಗಳ ಆಚರಣೆ
ಮಾಡುತಿಲ್ಲ ನಿಜವಾದ ಅನುಕರಣೆ
ಆಚರಣೆಗಳ ಹಿಂದಿರುವ ಮರ್ಮವ
ತಿಳಿವಂತೆ ಅರುಹಯ್ಯ ಮಹಾದೇವ||
ಕೋಶ ಓದಿದರೂ ದೇಶ ಸುತ್ತಿದರೂ
ಮತಿಯು ಮಿತಿಯಲಿಲ್ಲ ಕೇಳಯ್ಯಾ
ಬುವಿಯಲಿ ಅಲ್ಲೋಲ ಕಲ್ಲೋ
ಕಂಡರೂ ಕಾಣದಂತೇಕಿರುವೆ ಮಹಾದೇವ ||
ಹಳೆತನದ ಕೊಳೆ ಕೊಚ್ಚಿ
ಹೊಸತನದ ರೂಪ ಹಚ್ಚಿ
ಭಾರತಾಂಬೆಯ ಸುಸಂಸ್ಕೃತಿಯ
ತಿಳಿದು ಬದುಕುವಂತೆ ದಾರಿ ತೋರು ಮಹಾದೇವ||
ಶ್ರೀಮತಿ ಜ್ಯೋತಿ ಕೋಟಗಿ