spot_img
spot_img

ವೈರಾಗ್ಯ ಶಿಖರದ ಮೇರು ಪರ್ವತ: ಅಲ್ಲಮಪ್ರಭುದೇವ

Must Read

- Advertisement -

ವಚನ ವಾಙ್ಮಯವು ಕನ್ನಡನಾಡಿನ ನೆಲದ ಸತ್ವ ಹೀರಿಕೊಂಡು ಸಸಿಯಾಗಿ, ಗಿಡವಾಗಿ ಹೆಮ್ಮರವಾಗಿ ಬೆಳೆದು ವಿಶ್ವದ ಮನುಕುಲಕ್ಕೆ ಜೀವನಾಮೃತವನ್ನು ಕೊಟ್ಟಿದ್ದೇ 11-12 ನೇ ಶತಮಾನದ ಶರಣ ಸಾಹಿತ್ಯದ ವಚನವೃಕ್ಷ. ಮಧ್ಯಕಾಲೀನ ಸಂದರ್ಭದಲ್ಲಿ ಮಾನವ ಸಮೂಹಕ್ಕೆ ಸಾಮಾಜಿಕ, ಧಾರ್ಮಿಕ, ವೈಚಾರಿಕ ಹಾಗೂ ಮೌಲ್ಯಾಧಾರಿತ ವಿಚಾರಗಳನ್ನು ನೀಡುವ ಉದ್ದೇಶವನ್ನಿಟ್ಟುಕೊಂಡೇ ಶರಣರ ಅನುಭವ – ಅನುಭಾವಗಳಿಂದ ಮೂಡಿ ಬಂದ ಸಾಹಿತ್ಯವೇ ವಚನ ಸಾಹಿತ್ಯ. ತಾವು ಹೇಳುವ ಅಂತರಂಗದ ಅರಿವಿನ ಮಾತುಗಳು ಸಾಮಾನ್ಯ ಜನರಿಗೆ ತಲುಪಬೇಕೆಂಬ ಆಶಯದಿಂದ ಜನಸಾಮಾನ್ಯರ ಆಡುಭಾಷೆಯಲ್ಲಿಯೇ ಅವುಗಳನ್ನು ನಿರೂಪಿಸಿದರು. ಅವರ ಆತ್ಮನಿರೀಕ್ಷಣೆ ಆತ್ಮಾನುಭಾವಗಳೇ ವಚನ ರೂಪದಲ್ಲಿ ಅಭಿವ್ಯಕ್ತಿ ಪಡೆದವು. ಇದುವೇ ವಿಶ್ವಸಾಹಿತ್ಯಕ್ಕೆ  ವಚನ ಸಾಹಿತ್ಯ ವಿಶಿಷ್ಟ ಕೊಡುಗೆಯೆನಿಸಿದೆ.

ಶರಣರು ತಮ್ಮ ತಮ್ಮ ಪರಿಸರದೊಂದಿಗೆ ಸ್ಪಂದಿಸಿದ ಕ್ರಿಯೆಯ ಫಲವೇ ವಚನ ಸಾಹಿತ್ಯ. ಇವುಗಳ ಅಂತರಂಗದಲ್ಲಿ ಅವಿತುಕೊಂಡಿರುವ ಉದ್ದೇಶವೆಂದರೆ ನವಸಮಾಜವೊಂದರ ನಿರ್ಮಾಣಮಾಡುವುದಾಗಿದೆ. ಈ ವಚನಗಳ ಮೂಲಕ ಆ ಕಾಲದ ಇಡೀ ಜೀವನವನ್ನೇ ತಿಳಿಯಾಗಿಸಿದರು. ಹೊಸ ಆಲೋಚನಾ ಶಕ್ತಿಯೊಂದನ್ನು ಜನರಲ್ಲಿ ಮೂಡಿಸಿದರು.

ಅದರೊಂದಿಗೆ  ಜನಮಾನಸದಲ್ಲಿ ವೈಚಾರಿಕ  ಪ್ರಜ್ಞೆ ಮೂಡಿಸಿ ಆತ್ಮವಿಶ್ವಾಸವನ್ನು ಗಟ್ಟಿಗೊಳಿಸಿದರು. ಜಿಡ್ಡುಗಟ್ಟಿದ ಹಲವು ಪರಂಪರೆ ಸಂಪ್ರದಾಯಗಳಿಗೆ ಕೊನೆ ಹೇಳಿದರು. ಇದರಿಂದಾಗಿ ಅರ್ಥವಿಲ್ಲದ ವ್ಯವಸ್ಥೆಯ ಬೇರು ಅಲುಗಾಡುವಂತಾಯಿತು. ಶರಣರ ಆತ್ಮವಿಶ್ವಾಸದ ಉಪದೇಶ ಎಲ್ಲ ವರ್ಗದ ಜನಾಂಗವು ಒಂದುಗೂಡುವುದಕ್ಕೆ ನಾಂದಿಯಾಯಿತು.

- Advertisement -

ಆ ಕಾಲದ ಜನಸಮೂಹಕ್ಕೆ ಆಧ್ಯಾತ್ಮ, ಧರ್ಮ, ನೀತಿ, ದೇವರು, ಪೂಜೆ ವೃತ, ಪ್ರಾರ್ಥನೆ ಮುಂತಾದ ವಿಷಯಗಳ ತತ್ವಗಳನ್ನು ಸುಲಭ ನುಡಿಗಳಲ್ಲಿ ನಿರೂಪಿಸಿ, ಕನ್ನಡದ ಉಪನಿಷತ್ತುಗಳೆಂದು ವಚನಗಳನ್ನು ಸಾರ್ಥಕಗೊಳಿಸಿದರು.

ಮಾನವ ಪ್ರೇಮ, ನೀತಿ, ನಿಷ್ಠೆ, ಶಿವಭಕ್ತಿ, ಸಮಭಾವ, ಆತ್ಮಪರಿವೀಕ್ಷಣೆ ಮುಂತಾದ ಭಾವಗಳಿಂದ ತುಂಬಿದ ಹೊಸ ಸಮಾಜವನ್ನು ನಿರ್ಮಾಣ ಮಾಡಲು  ಮುಂದಾದರು.

ಇದಕ್ಕೆ ಮಾದರಿಯಾಗಿ ಸ್ಥಾಪಿತವಾಗಿರುವುದೇ ಅನುಭವ ಮಂಟಪ. ಇದನ್ನು ಸ್ಥಾಪಿಸಿ ನುಡಿದಂತೆ ನಡೆದು ಮನುಕುಲಕ್ಕೆ ಮಾರ್ಗದರ್ಶಕರಾದರು.

- Advertisement -

ನವಸಮಾಜ ನಿರ್ಮಾಣ ಮಾಡುವ ಶರಣರ ಸಂಕಲ್ಪಕ್ಕೆ ಮಾರ್ಗದರ್ಶನ ಮಾಡಿ ರಹದಾರಿ ತೋರಿಸಿದ ಮಹಾ ಮಾನವತಾವಾದಿಗಳೇ ಬಸವಣ್ಣ ಹಾಗೂ ಅಲ್ಲಮಪ್ರಭುದೇವರು.

ಹಾಗಾಗಿಯೇ ಹನ್ನೆರಡನೆಯ ಶತಮಾನದಲ್ಲಿ ಕಲ್ಯಾಣದಲ್ಲಿ ಭಕ್ತಿ, ಜ್ಞಾನ, ವೈರಾಗ್ಯ ಒಂದಾಗಿ ಚಂದಾಗಿ ಪ್ರಕಾಶಿಸಿದವು. ಬಸವಣ್ಣನ ಭಕ್ತಿ, ಚನ್ನಬಸವಣ್ಣನ ಜ್ಞಾನ, ಅಲ್ಲಮನ ವೈರಾಗ್ಯ ಇವುಗಳು ಉನ್ನತ ಶಿಖರವನ್ನೇರಿದವು. 

ಬಸವಣ್ಣನವರ ಸಕಲವಿಚಾರಧಾರೆಗಳಿಗೆ ಮತ್ತು ಹಲವು ರೀತಿಯ ಹೋರಾಟದ ಹಾದಿಗೆ ಮಾರ್ಗದರ್ಶನ ಮಾಡಿದ ವ್ಯಕ್ತಿಯೇ ಅಲ್ಲಮ ಪ್ರಭುದೇವ. ವೈರಾಗ್ಯದ ಮಹಾಮೇರು ಪರ್ವತದಂತಿದ್ದ ಅಲ್ಲಮಪ್ರಭುದೇವ ಕೇವಲ ಲೋಕಸಹಜವಾದ ಮಾನವನ ಬಾಳಿವೆಯ ಸೀಮಿತಕ್ಕೆ ಸಿಲುಕದೆ ತನ್ನದೇ ಆದ ಸ್ವತಂತ್ರ ನಿಲುವು ಮತ್ತು ಸಹಜ ಸ್ಥಿತಿಯನ್ನು ಪಡೆದ ವಚನಗಾರ. ಅದ್ಯಾತ್ಮಿಕ ಜಗತ್ತಿನ ಮಹಾಪುರುಷರ ಪಂಕ್ತಿಯಲ್ಲಿ ಕಂಡು ಬರುವ ಅಲ್ಲಮಪ್ರಭುದೇವರ ವ್ಯಕ್ತಿತ್ವ ವರ್ಣಾತೀತ. 

ಮಲೆನಾಡಿನ ಸೊಬಗಿನ ತಾಣವಾದ ಶಿವಮೊಗ್ಗೆಯ ಬಳ್ಳಿಗಾವಿ ಅಲ್ಲಮನ ಜನ್ಮಸ್ಥಳವಾಗಿದೆ. ತಂದೆ ನಿರಹಂಕಾರ ತಾಯಿ ಸುಜ್ಞಾನಿ ಈ ಶರಣ ದಂಪತಿಗಳು ಸಾತ್ವಿಕತೆ ತುಂಬಿದ ಭಕ್ತಿಜೀವನ ತಮ್ಮದಾಗಿಸಿಕೊಂಡಿದ್ದವರು. ಆದರೆ ಇವರಿಗೆ ಮಕ್ಕಳಿಲ್ಲದ ಚಿಂತೆಯಿಂದ ಸದಾ ಭಕ್ತಿ, ಪೂಜೆ ವೃತಾದಿಗಳನ್ನು ಮಾಡಿ ಕೊನೆಗೆ ವೈರಾಗ್ಯನಿಧಿಯಂತಿರುವ ಅಲ್ಲಮನಿಗೆ ಜನ್ಮವನ್ನು ಕೊಟ್ಟರು.

ಅಖಂಡ ಬೆಳಕಿನ ಕುಡಿಯಂತಿದ್ದ ಈ ಬಾಲಕ ಬಾಲಲೀಲೆಗಳನ್ನು ತೋರುತ್ತಾ ಬಾಲ್ಯಜೀವನ ಕಳೆದು ತಾರುಣ್ಯಾವಸ್ಥೆಯ ಆರಂಭದಲ್ಲಿಯೇ ಸಂಸಾರ ಬದುಕಿನ ಬಗ್ಗೆ ಸಹಜ ವೈರಾಗ್ಯ ಸ್ಥಿತಿಯನ್ನು ಹೊರಹೊಮ್ಮಿಸುವ ಘಟನೆ ಅಲ್ಲಮನ ಜೀವನದಲ್ಲಿ ಜರುಗಿತು.

ಬನವಾಸಿಯ ರಾಜನಾದ ಮಮಕಾರ ಭೂಪಾಲ ಹಾಗೂ ಆತನ ಅರಸಿ ಮೋಹಿನಿದೇವಿ ಇವರ ಮಗಳೇ ಮಾಯಾದೇವಿ. ಈ ದಂಪತಿಗಳು ದೈಹಿಕ ಬೆಳವಣ ಗೆಯೊಂದಿಗೆ ಸೌಂದರ್ಯವನ್ನು ಹೊಂದಿದ್ದ ಮಗಳ ಮದುವೆಯ ಯೋಚನೆಯಲ್ಲಿದ್ದಾಗ ರಾಜಗುರುಗಳು ಮಾಯೆಗೆ ಮಧುಕೇಶ್ವರ ದೇವಾಲಯದಲ್ಲಿ ಪ್ರತಿನಿತ್ಯ ಪೂಜೆ ಹಾಗೂ ನೃತ್ಯಸೇವೆ ಸಲ್ಲಿಸುವಂತೆ ಸಲಹೆ ನೀಡಿದರು.

ಆ ಹೊತ್ತಿಗಾಗಲೇ ಕಠೋರವಾದ ಯೋಗಾಭ್ಯಾಸ ಸಾಧನೆ, ಸಂಗೀತ ಮತ್ತು ಸಕಲ ವಿದ್ಯೆಗಳಲ್ಲಿ ತುಂಬಾ ಪರಿಣ ತಿಯನ್ನು ಪಡೆದಿದ್ದ ಅಲ್ಲಮನು ಹುಟ್ಟಿ ಬೆಳೆದ ಪರಿಸರದ ಪರಿಮಿತಿಯನ್ನು ಕಳಚಿಕೊಂಡು ಸ್ವತಂತ್ರವಾಗಿ ಸಂಚರಿಸತೊಡಗಿದ್ದನು.

ನಿಜದ ನಿಲುವನ್ನು ತಿಳಿಯುವ ಅಭಿಪ್ಸೆ ಹೊಂದಿ ಹೊರಟಿದ್ದ ಈತ ಬನವಾಸಿಗೆ ಬಂದನು. ಮಧುಕೇಶ್ವರ ದೇವಾಲಯದಲ್ಲಿ ಮದ್ದಳೆ ಬಾರಿಸುತ್ತ ಕುಳಿತುಕೊಂಡಿದ್ದನು. ಆ ಮದ್ದಳೆಯ ಧ್ವನಿಗೆ ಮನಸೋತ ಮಾಯೆ ಆ ನಾದದ ಲಯಕ್ಕೆ ಸರಿಯಾಗಿ ಹೆಜ್ಜೆ ಹಾಕಿ ನರ್ತಿಸತೊಡಗಿದಳು. ಅವಳ ನೃತ್ಯ ಮೀರಿ ತನ್ನ ಮದ್ದಳೆಯ ಬಾರಿಸತೊಡಗಿದನು.  ಅಲ್ಲಮನ ಸೌಂದರ್ಯ ಹಾಗೂ ಮದ್ದಳೆಯ ನುಡಿಸುವಿಕೆಗೆ ಮನಸೋತ ಮಾಯೆ ತನ್ನನ್ನು ಮದುವೆಯಾಗುವಂತೆ ನಿವೇದಿಸಿದಳು.

ಆದರೆ ಗುಹೇಶ್ವರ ಲಿಂಗದ ವಿರಹದಲ್ಲಿ ಬೆಂದು ವೈರಾಗ್ಯ ಭಾವದಲ್ಲಿ ಗಟ್ಟಿಯಾಗಿದ್ದ ಅಲ್ಲಮನಿಗೆ ಕಾಮದ ತಾಪದಲ್ಲಿ ಸಿಲುಕುವ ಆಸೆಯೇ ಇರಲಿಲ್ಲ. ಅವಳನ್ನು ತಿರಸ್ಕರಿಸಿ ಮುನ್ನಡೆದನು. ಇದರಿಂದಾಗಿ ಪ್ರಭುವಿನ ವಿರಕ್ತಭಾವ ಮತ್ತಷ್ಟು ಪ್ರಖರಗೊಂಡಿತು. ಅಲ್ಲದೇ ಸುಜ್ಞಾನಿಯಾದ ಅಲ್ಲಮನು ಸಂಚಾರ ಕೈಗೊಂಡಾಗ ತನಗಿದಿರಾದ ಶಿವಭಕ್ತರನ್ನು ಉದ್ಧರಿಸುತ್ತ ನಡೆದನು. ಕೃಷಿಕಾಯಕದ ಗೊಗ್ಗಯ್ಯ, ಮುಕ್ತಾಯಕ್ಕ, ಅಜಗಣ್ಣ, ಸಿದ್ಧರಾಮ, ಸಂಗನ ಬಸವಣ್ಣ, ಚೆನ್ನಬಸವಣ್ಣರಂತಹ ಹಲವಾರು ಶರಣರಿಗೆ ಲಿಂಗಾಂಗ ಸಾಮರಸ್ಯದ ಮಹತ್ವವನ್ನು ಅರುಹಿದನು. 

ಅಲ್ಲಮಪ್ರಭುದೇವ 12ನೇ ಶತಮಾನದ ಶರಣ ಸಂಕುಲದಲ್ಲಿಯೇ ಅತ್ಯಂತ ನೇರನುಡಿಯ ನಿಷ್ಠುರವಾದಿಯಾದವನು. ತನ್ನ ಮಹತ್ವದ ವಚನಗಳಿಂದಾಗಿ ಭಕ್ತಿ ವೈರಾಗ್ಯಗಳ ಅತೀ ಅವಶ್ಯಕತೆಯ ಅಂಶಗಳನ್ನು ಹಲವು ಶರಣರಿಗೆ ಉಪದೇಶಿಸಿ ಮಾರ್ಗದರ್ಶನ ಮಾಡಿದನು. ಅಲ್ಲದೇ ತನ್ನನ್ನೆ ತಾನು ಭಕ್ತಿಗೆ ಸಮರ್ಪಿಸಿಕೊಂಡು ಅಂತರಂಗ ಬಹಿರಂಗಗಳನ್ನು ಶೋಧಿಸಿಕೊಂಡನು.

“ಗುಹೇಶ್ವರ” ಎಂಬ ಅಂಕಿತದೊಂದಿಗೆ 1294 ವಚನಗಳನ್ನು  ರಚಿಸಿದ್ದಾನೆ. ಅವುಗಳಲ್ಲಿ ಅನೇಕ ವಚನಗಳು ಸ್ವರವಚನಗಳಾಗಿವೆ. ಈತನ ಬಹುತೇಕ ವಚನಗಳು ಆಧ್ಯಾತ್ಮ ಮಾರ್ಗಿಗಳಿಗೂ ಸುಲಭ ಗ್ರಾಹ್ಯವಲ್ಲ. ಅನುಭಾವದ ಆಳದಿಂದ ಜ್ಞಾನದ ಶಿಖರದಿಂದ ಉಸುರಿದ ಮಾತುಗಳು ‘ಮಾತೆಂಬುದು ಜ್ಯೋತಿರ್ಲಿಂಗ’ ಎಂಬ ಅವರ ನುಡಿ ಅನುಭಾವದ ಶಕ್ತಿಯನ್ನು ಪ್ರದರ್ಶಿಸುತ್ತದೆ. ಆತ್ಮಜ್ಞಾನದ ಆನಂದಗಳು ಮತ್ತು ಮಾತಿಗೆ ಸಿಲುಕದ ಅನುಭವ ವಿಷಯಗಳು ಲೋಕ ಕಲ್ಯಾಣದ ಚಿಂತನೆಗೆ ಸಾಕ್ಷಿಯಾಗಿದೆ. 

ಪ್ರಭುದೇವರ ಜ್ಞಾನಪ್ರಭೆ ಹಾಗೂ ಮಿಂಚುವೇಗದ ಶೈಲಿ ತೀರ ಸ್ವಾಭಾವಿಕವಾಗಿದೆ. ‘ಬೆಟ್ಟಕ್ಕೆ ಚಳಿಯಾದಡೆನು ಹೊದೆಸುವರಯ್ಯಾ, ಬಯಲು ಬತ್ತಲೆ ಇರ್ದಡೆನುಡಿಸುವಿರಯ್ಯಾ, ಭಕ್ತನು ಭವಿಯಾದಡೆ ಅದೇನನುಪಮಿಸುವನಯ್ಯಾ ಗುಹೇಶ್ವರಾ ಇಂತಹ ಹಲವಾರು ವಚನಗಳನ್ನು ನೋಡಿದಾಗ ಎಲ್ಲ ಕಡೆಗೆ ಅಲ್ಲಮನ ಅಪರೂಪದ ವ್ಯಕ್ತಿತ್ವವು ಉಜ್ವಲಕಿರಣದಂತೆ ಕಣ್ಣು ಕೊರೈಸುತ್ತದೆ.

ಅಜ್ಞಾನ ಅಹಂಕಾರಗಳಿಗೆ ಸಿಡಿಲಿನ ಏಟಾಗುತ್ತದೆ. ಏಕೆಂದರೆ ಅವರದು ಜ್ಞಾನದ ಅಧಿಕಾರವಾಣಿ  ಅವರ ನುಡಿಯಲ್ಲಿ ಹೋರಾಟವಿಲ್ಲ. ಏಳುಬೀಳುಗಳಿಲ್ಲ. ಆದರೆ ಆತ್ಮವಿಶ್ವಾಸವುಳ್ಳ ವಿನಯವಿದೆ. ಉಪಕಾರ ಭಾವವಿದೆ.

‘ಗುಹೇಶ್ವರಾ ನಿಮ್ಮ ಶರಣಸಂಗನ ಬಸವಣ್ಣನ ಸಾನಿದ್ಯದಿಂದಾನು ಸದ್ಭಕ್ತನಾದೆನಯ್ಯಾ’ ‘ಲಿಂಗಾನುಭವಿಗಳ ಸಂಗದಿಂದಾನು ಕಣ್ದೆರೆದನು. ಕಾಣಾ ಗುಹೇಶ್ವರಾ’ ‘ನಾ ದೇವನಲ್ಲದೇ ನೀ ದೇವನೇ? ನೀ ದೇವನಾದಡೆ ಎನ್ನನೇಕೆ ಸಲಹೆ? ಆರೈದು ಒಂದು ಕುಡಿತೆ ನೀರನೆರೆವೆ, ಹಸಿದಾಗ ಒಂದು ತುತ್ತು ಓಗರವನಿಕ್ಕುವೆ, ನಾ ದೇವ ಕಾಣಾ ಗುಹೇಶ್ವರಾ’ ಎಂಬಂತಹ ವಚನಗಳಿಂದ ಅಲ್ಲಮನ ಘನತರವಾದ ವ್ಯಕ್ತಿತ್ವದಿಂದ ಇದ್ದದ್ದನ್ನು ಇದ್ದ ಹಾಗೆ ಉಸುರಿದ ಅವನ ಮಾತುಗಳೇ ವಚನ ಸಾಹಿತ್ಯವಾಯಿತು.

ಮರ್ತ್ಯುಲೋಕದ ಮಾನವರು ದೇಗುಲದೊಳಗೊಂದು ದೇವರ ಮಾಡಿದರೆ ಆನು ಬೆರಗಾದೆನಯ್ಯಾ’ ದೇಹದೊಳಗೆ ದೇವಾಲಯಮಿರ್ದು ಮತ್ತೇ ದೇವಾಲಯವೇಕೆ? ಹೀಗೆ ಅಲ್ಲಮನ ಅನೇಕ ವಚನಗಳ ಸಾಲು ಆತ್ಮೋದ್ದಾರಕ್ಕೆ ಪ್ರೇರಕವಾಗಿವೆ. ಜೊತೆಗೆ ನಿಜವಾದ ಭಕ್ತಿ ಜ್ಞಾನ ವೈರಾಗ್ಯ ಮುಕ್ತಿಗಳ ಕುರಿತಾದ ಸಹಜ ಉಕ್ತಿಗಳಾಗಿವೆ.

ಅನುಭವ ಮಂಟಪದ ಶೂನ್ಯ ಸಿಂಹಾಸನಾಧಿಪತಿ: ಬಸವಣ್ಣನವರು ಸಾಮಾಜಿಕ ಸಮಾನತೆಯ ನೆಲಗಟ್ಟನ್ನೇ ಮೂಲವಾಗಿಟ್ಟುಕೊಂಡು ಕ್ರಾಂತಿಕಾರಕ ಬದಲಾವಣೆಯ ಹರಿಕಾರರಾದರು. ಅದಕ್ಕಾಗಿಯೇ ಸಮಾಜದ ಎಲ್ಲ ಸ್ತರದ ಎಲ್ಲ ಪ್ರದೇಶದ ಶರಣ ಶರಣೆಯರಿಗೆ ಮುಕ್ತವಾಗಿ ಒಂದುಗೂಡುವುದಕ್ಕೆ ಅನುಭವ ಮಂಟಪ ಒಂದನ್ನು ಸ್ಥಾಪಿಸಿದರು. 

ಇದುವೇ ವಿಶ್ವದ ಪ್ರಥಮ ಸಾಮಾಜಿಕ ಧಾರ್ಮಿಕ ಸಂಸತ್ತಾಗಿದೆ. ಅರಸನಿಂದ ಹಿಡಿದು ಒಬ್ಬ ಸಾಮಾನ್ಯ ಕಾಯಕ ಮಾಡುವ ವ್ಯಕ್ತಿಯವರೆಗೂ ಇಲ್ಲಿ ಮುಕ್ತ ಅವಕಾಶವಿತ್ತು. ಜಾತಿ ಮತ ಪಂಥ ಸ್ತ್ರೀ ಪುರುಷ ಭೇದ ಭಾವ ದೂರವಿಟ್ಟು ಅರಿವಿನ ಮನೆಯಂತೆ ಇದ್ದ ವೇದಿಕೆಯೇ 12ನೇ ಶತಮಾನದ ಅನುಭವ ಮಂಟಪ.

ಇಂತಹ ಅನುಭವ ಮಂಟಪದಲ್ಲಿ ಪ್ರಭುದೇವನಿಗೆ ಸಾಕಾರ ನಿರಾಕಾರ ಸಂಕೇತಗಳನ್ನೊಳಗೊಂಡ ಸಿಂಹಾಸನ ನಿರ್ಮಿಸಿ ಅದರ ಶೂನ್ಯ ಸಿಂಹಾಸನ ಪೀಠದ ಅಧ್ಯಕ್ಷನನ್ನಾಗಿ ಅಲ್ಲಮಪ್ರಭುಗಳನ್ನು ನೇಮಿಸಲಾಯಿತು. ಬಸವಣ್ಣ, ಚೆನ್ನಬಸವಣ್ಣ, ಮಡಿವಾಳ ಮಾಚಿದೇವರಂತಹ ಶರಣರ ಸಹಕಾರದಿಂದ ಅನುಭವ ಮಂಟಪದ ಕಾರ್ಯ ಯಶಸ್ವಿಯಾಗಿ ನಡೆಯಲಾರಂಭಿಸಿತು. ಈ ಸಮಾನತೆಯ ವೇದಿಕೆಯಲ್ಲಿ ಶರಣರಿಂದ ನಡೆಯುವ ಚರ್ಚೆಗಳು ದೂರದ ಹಲವಾರು ಶರಣರನ್ನು ಸೆಳೆದವು.

ಮಾನವೀಯ ಮೌಲ್ಯಗಳ ಆಧಾರದ ಮೇಲೆ ಕಟ್ಟಿದ ಈ ವೇದಿಕೆ ಸಕಲ ಜೀವಗಳಿಗೆ ಲೇಸನ್ನು ಬಯಸುವ ಸಂದೇಶವನ್ನು ಸಾರಿತು. ಅದಕ್ಕಾಗಿಯೇ ಉತ್ತರದ ಕಾಶ್ಮೀರದಿಂದ ಮೋಳಿಗೆಯ ಮಾರಯ್ಯಾ ದಕ್ಷಿಣ ರಾಜ್ಯದಿಂದ ಸಕಳೇಶ ಮಾದರಸ ಅಪಘಾನಿಸ್ತಾನದಿಂದ ಮರುಳ ಶಂಕರದೇವರಂತಹ ಅನುಭಾವಿಗಳು ಕಲ್ಯಾಣದತ್ತ ಬಂದರು.

ಸಿದ್ಧರಾಮ, ಅಂಬಿಗರ ಚೌಡಯ್ಯ, ಮಡಿವಾಳ ಮಾಚಿದೇವ, ಹಡಪದ ಅಪ್ಪಣ್ಣ, ಶಿವದೇವ, ಅಕ್ಕನಾಗಮ್ಮ, ನುಲಿಯ ಚಂದಯ್ಯ, ಗಂಗಾಂಬಿಕೆ, ನೀಲಾಂಬಿಕೆ, ಅಕ್ಕಮಹಾದೇವಿ, ಮೇದಾರ ಕೇತಯ್ಯ, ಕಿನ್ನರಿ ಬೊಮ್ಮಯ್ಯ, ಡೊಹರ ಕಕ್ಕಯ್ಯ ಹಾವಿಹಾಳ ಕಲ್ಲಯ್ಯ, ಹರಳಯ್ಯ, ಆಯ್ದಕ್ಕಿ ಲಕ್ಕಮ್ಮ, ಮಾರಯ್ಯ, ಕೂಗಿನ ಮಾರಿತಂದೆ, ಶೂಲದ ಬೊಮ್ಮಯ್ಯ ಮಾದಾರ ಚೆನ್ನಯ್ಯ, ರಮ್ಮೆವ್ವೆ, ಬೊಂತಾದೇವಿ, ಸೂಳೆ ಸಂಕವ್ವರಂತಹ ಅನೇಕ ಶರಣ ಶರಣೆಯರು ಅನುಭವ ಮಂಟಪದಲ್ಲಿ ತಮ್ಮ ಅಂತರಂಗದ ಅರಿಕೆಯ ವಚನಗಳೊಂದಿಗೆ ಸಾಮಾಜಿಕ ಚಿಂತನೆಯಲ್ಲಿ ಪಾಲ್ಗೊಳ್ಳುತ್ತಿದ್ದರು.

ಇವರಿಗೆಲ್ಲ ಹಿರಿ ಕಿರಿಯರೆನ್ನದೆ ಸ್ತ್ರೀ ಪುರುಷರೆನ್ನದೆ ಶ್ರೇಷ್ಠ ಕನಿಷ್ಠರೆನ್ನದೆ ಸರ್ವರ ಚರ್ಚೆಗೆ ಅವಕಾಶ ಕೊಟ ಮಹಾ ಮಾರ್ಗದರ್ಶಕ  ಮಾರ್ಗದರ್ಶನ ಮಾಡುವವನೆ ಶೂನ್ಯ ಪೀಠಾದ್ಯಕ್ಷ ಅಲ್ಲಮಪ್ರಭು. 

ಅಲ್ಲಮಪ್ರಭುದೇವ ದೈವತ್ವಕ್ಕೇರಿದ ಸೀಮಾಪುರುಷ. ಇಲ್ಲಿ ಬದುಕಿ ಬಾಳಿ ಈ ಬದುಕಿನ ಮೂಲಕವೇ ಜೀವನದಾಚೆಯ ಸತ್ಯವನ್ನು ಇಂದಿಗೂ ಅವರ ಅನುಭಾವ ಮತ್ತು ಅವ್ಯಕ್ತಿ ವಿಶ್ವದ ಶಾಂತಿ ಮತ್ತು ಸಮೃದ್ಧಿಗೆ ಪ್ರೇರಕ.


ಜಗದೀಶ್ವರ ಎಚ್. ಪೂಜಾರ

- Advertisement -
- Advertisement -

Latest News

ಜಾತ್ರೆಗಳು ಜಾನಪದ ಕಲೆ, ಸಂಪ್ರದಾಯ, ಆಚರಣೆಗಳ ತೊಟ್ಟಿಲು

ಮೂಡಲಗಿ: ‘ಜನಪದರು ಸೇರಿ ದೈವೀಆರಾಧನೆಯೊಂದಿಗೆ ಜಾತಿ, ಧರ್ಮ, ಮೇಲು, ಕೀಳು ಭೇದ ಬಿಟ್ಟು ಸಾಮರಸ್ಯವನ್ನು ಬೆಳೆಸುವುದೇ ಜಾತ್ರೆಗಳಾಗಿವೆ’ ಎಂದು ಸಾಹಿತಿ, ಪತ್ರಕರ್ತ ಬಾಲಶೇಖರ ಬಂದಿ ಹೇಳಿದರು. ತಾಲ್ಲೂಕಿನ...
- Advertisement -

More Articles Like This

- Advertisement -
close
error: Content is protected !!
Join WhatsApp Group