ಗಡ್ಡಮೀಸೆಯ ಕಂಡು ಗಂಡೆಂದು ಕರೆಯುವರು
ಮತ್ತೆ ಮೊಲೆಮುಡಿ ಕಂಡು ಹೆಣ್ಣೆಂಬರು
ದೇಹದೊಳಗಿರುವಾತ್ಮ ಹೆಣ್ಣಲ್ಲ ಗಂಡಲ್ಲ
ಲಿಂಗಭೇದವನು ಬಿಡು – ಎಮ್ಮೆತಮ್ಮ
ಶಬ್ಧಾರ್ಥ
ಮುಡಿ = ತಲೆಗೂದಲು,ತುರುಬು
ತಾತ್ಪರ್ಯ
ಪುರುಷರಿಗೆ ಮುಖದಲ್ಲಿ ಗಡ್ಡಮೀಸೆ ಬರುವುದು ಮತ್ತು ಮಹಿಳೆಯರಿಗೆ ತಲೆಗೂದಲು ಎದೆ ಬರುವುದು ಪ್ರಕೃತಿ ನಿಯಮ. ಹೀಗೆ ಗಂಡು ಹೆಣ್ಣು ಎಂದು ಗುರುತಿಸಬಹುದು. ಆದರೆ ಸಮಾಜದಲ್ಲಿ ಗಂಡು ಹೆಚ್ಚು ಹೆಣ್ಣು ಕಡಿಮೆ ಎಂಬುವ ಭಾವಿಸುವುದು ತರವಲ್ಲ. ಭೂಮಿಯಲ್ಲಿ ಜನಿಸಿರುವ ಹೆಣ್ಣಾಗಲಿ ಗಂಡಾಗಲಿ ಸಮಾನರು. ಈ ಲಿಂಗ ತಾರತಮ್ಯ ಮಾಡುವುದನ್ನು ಬಿಡಬೇಕು.ಏಕೆಂದರೆ ಗಂಡಿನಲ್ಲಾಗಲಿ ಹೆಣ್ಣಿನಲ್ಲಾಗಲಿ ಒಳಗಿರುವ ಆತ್ಮ ಬೇರೆಯಲ್ಲ. ಅದು ಹೆಣ್ಣು ಅಲ್ಲ ಗಂಡು ಅಲ್ಲ. ಅದು ಎಲ್ಲರಲ್ಲಿರುವ ಚೈತನ್ಯ.ಆದಕಾರಣ ಗಂಡಿಗೆ ಎಷ್ಟು ಸ್ವಾತಂತ್ರ್ಯವಿದೆಯೊ ಹೆಣ್ಣಿಗೂ ಕೂಡ ಅಷ್ಟೆ ಸ್ವಾತಂತ್ರ್ಯವಿದೆ. ಈ ಪುರುಷಪ್ರಧಾನ ಸಮಾಜದಲ್ಲಿಯ ಈ ತಾರತಮ್ಯ ಹೋಗಬೇಕೆಂದು ಶರಣರು ಸ್ತ್ರೀಗೆ ಎಲ್ಲದರಲ್ಲಿ ಸ್ವಾತಂತ್ರ ಕೊಟ್ಟರು.
ಗೊಗ್ಗವ್ವೆ ಎಂಬ ಶರಣೆ”ಮೊಲೆಮುಡಿ ಬಂದಡೆ ಹೆಣ್ಣೆಂಬರು,ಮೀಸೆಕಾಸೆ ಬಂದಡೆ ಗಂಡೆಂಬರು, ಈ ಉಭಯದ ಜ್ಞಾನ ಹೆಣ್ಣೊ ಗಂಡೋ ನಾಸ್ತಿನಾಥ?” ಎಂದು ಪ್ರಶ್ನಿಸುತ್ತಾಳೆ. ಜೇಡರದಾಸಿಮಯ್ಯ ಕೂಡ ಮೊಲೆ ಮುಡಿ ಬಂದಡೆ ಹೆಣ್ಣೆಂಬರು. ಗಡ್ಡ ಮೀಸೆ ಬಂದಡೆ ಗಂಡೆಂಬರು. ನಡುವೆ ಸುಳಿವ ಆತ್ಮನು ಹೆಣ್ಣೂ ಅಲ್ಲ ಗಂಡೂ ಅಲ್ಲ ಕಾಣಾ! ರಾಮನಾಥ” ಎಂದು ಗಂಡು ಹೆಣ್ಣು ಸಮವೆನ್ನುತ್ತಾನೆ.
ರಚನೆ ಮತ್ತ ವಿವರಣೆ
ಎನ್.ಶರಣಪ್ಪ ಮೆಟ್ರಿ
ಗಂಗಾವತಿ
ಮೊ: 9449030990