spot_img
spot_img

ಹೊಸ ಪುಸ್ತಕ ಓದು

Must Read

- Advertisement -

ದಕ್ಷಿಣ ಭಾರತ ನಟನಾಗ್ರೇಸರ ಚಕ್ರವರ್ತಿಯ ಅಪೂರ್ವ ಕಥನ

ಪುಸ್ತಕದ ಹೆಸರು : ಬಳ್ಳಾರಿ ರಾಘವ
ಲೇಖಕರು : ಡಾ. ಮೃತ್ಯುಂಜಯ ರುಮಾಲೆ
ಪ್ರಕಾಶಕರು : ರಂಗತೋರಣ, ಬಳ್ಳಾರಿ, ೨೦೨೪
ಪುಟ : ೩೪೪ ಬೆಲೆ : ರೂ. ೩೫೦
* * * * * * *
ವಿಜಯನಗರ ಸಾಮ್ರಾಜ್ಯದ ಅರಸ ಕೃಷ್ಣದೇವರಾಯನನ್ನು ‘ದಕ್ಷಿಣಭಾರತಾಗ್ರೇಸರ ಚಕ್ರವರ್ತಿ’ ಎಂದು ಗುರುತಿಸಿದಂತೆ, ಬಳ್ಳಾರಿ ರಾಘವ ಅವರನ್ನು ‘ದಕ್ಷಿಣ ಭಾರತ ನಟನಾಗ್ರೇಸರ ಚಕ್ರವರ್ತಿ’ ಎಂದು ಗುರುತಿಸಿ ಕರ್ನಾಟಕ-ಆಂಧ್ರ ಜನತೆ ಗೌರವಿಸಿದ್ದು ಚೇತೋಹಾರಿ ಚೇತನವೊಂದರ ಸಾಧನೆಯ ಗೌರಿಶಂಕರ ಎಂದೇ ಹೇಳಬೇಕು.

ಕನ್ನಡ-ತೆಲುಗು ರಂಗಭೂಮಿಗೆ ಒಂದು ಅಪೂರ್ವ ಚೈತನ್ಯವನ್ನು ತಂದುಕೊಟ್ಟ ಧೀಮಂತ ವ್ಯಕ್ತಿ ಬಳ್ಳಾರಿ ರಾಘವ. ಕರ್ನಾಟಕಾಂಧ್ರ ಮಾತ್ರವಲ್ಲದೆ, ಉತ್ತರ ಭಾರತದ ಬಹುತೇಕ ನಗರಗಳಲ್ಲದೆ, ಬರ್ಮಾ, ಲಂಡನ್ ಮೊದಲಾದ ದೇಶಗಳಲ್ಲಿಯೂ ತಮ್ಮ ಅಪ್ರತಿಮ ನಟನಾಚಾತುರ್ಯದಿಂದ ಲೋಕವಿಖ್ಯಾತಿಯನ್ನು ಪಡೆದವರು ಬಳ್ಳಾರಿ ರಾಘವ. ವಿಶ್ವಕವಿ ರವೀಂದ್ರನಾಥರು, ಲೋಕವನ್ನೆ ಬೆರಗುಗೊಳಿಸಿದ ಮಹಾತ್ಮ ಗಾಂಧೀಜಿ, ನಾಟಕಕಾರ ಬರ್ನಾಡ್ ಶಾ ಮೊದಲಾದ ಲೋಕಮಾನ್ಯರಿಂದ ಪ್ರಶಂಸೆ ಪಡೆದ ಕನ್ನಡದ ಏಕೈಕ ವ್ಯಕ್ತಿ ಬಳ್ಳಾರಿ ರಾಘವ. ೨೦ನೇ ಶತಮಾನದ ಪೂರ್ವಾರ್ಧದ ರಂಗಭೂಮಿ ಜಗತ್ತು ಅಪೂರ್ವ ಕತ್ತಲೆಯಿಂದ ತುಂಬಿತ್ತು. ಇಂತಹ ರಂಗಭೂಮಿಗೆ ಚಲನಶೀಲತೆಯನ್ನು, ಬೆಳಕನ್ನು ತಂದುಕೊಟ್ಟವರು ಬಳ್ಳಾರಿ ರಾಘವ. ಆಂಧ್ರ ಸರ್ಕಾರ ಹೈದರಾಬಾದ ಪಟ್ಟಣದಲ್ಲಿ ಸ್ಥಾಪಿಸಿರುವ ಕೃಷ್ಣದೇವರಾಯ ಮೊದಲುಗೊಂಡು ೩೩ ಮಹಾನ್ ವ್ಯಕ್ತಿಗಳ ಪ್ರತಿಮೆಗಳ ಸಾಲಿನಲ್ಲಿ ರಾಘವರದೂ ಇರುವುದು ಅಭಿಮಾನದ ಸಂಗತಿ. ತೆಲುಗ ನಾಡಿನವರು ರಾಘವರನ್ನು ಸ್ಮರಿಸುವಷ್ಟು ಕನ್ನಡದ ಜನರು ಸ್ಮರಿಸಲಿಲ್ಲ ಎಂಬುದು ವಿಷಾದ ಪಡುವ ಸಂಗತಿ. ಹೀಗಿದ್ದೂ ಎಂಟು ದಶಕಗಳ ಹಿಂದೆ ಕಲಾಬದುಕಿನಿಂದ ನೇಪಥ್ಯಕ್ಕೆ ಸರಿದಿದ್ದ ಬಳ್ಳಾರಿ ರಾಘವರ ಬದುಕು-ಸಾಧನೆಗಳನ್ನು ಒಂದು ತಪಸ್ಸು ಎನ್ನುವ ರೀತಿಯಲ್ಲಿ ಕಟ್ಟಿಕೊಟ್ಟವರು ಡಾ. ಮೃತ್ಯುಂಜಯ ರುಮಾಲೆ ಅವರು.

- Advertisement -

೨೦೨೦ ಇಡೀ ಜಗತ್ತಿಗೆ ಕರೋನಾ ರೋಗ ಆವರಿಸಿ, ಎಲ್ಲರನ್ನೂ ಭಯಭೀತಗೊಳಿಸಿತು. ಯಾರೂ ಹೊರಗೆ ಹೋಗಬಾರದ ಸ್ಥಿತಿಯನ್ನು ನಿರ್ಮಾಣ ಮಾಡಿತು. ಆಗ ಅನೇಕರು ಮನೆಯಲ್ಲಿ ಕಾಲ ಕಳೆಯಲು ಸಾಧ್ಯವಾಗದೆ ಒದ್ದಾಡಿ ಹೋದರು. ಆದರೆ ಡಾ. ರುಮಾಲೆ ಅವರು ಇದನ್ನೇ ವರವನ್ನಾಗಿ ಮಾಡಿಕೊಂಡು, ಬಳ್ಳಾರಿ ರಾಘವರ ಚರಿತ್ರೆ ಬರೆಯಲು ಮುಂದಾದರು. ಚರಿತ್ರೆಯ ಹೊರಮೈ ತೆಗೆದು, ಅಡಿಟಿಪ್ಪಣಿಗಳನ್ನು ಹಾಕಿ ವಿಶ್ವವಿದ್ಯಾಲಯಕ್ಕೆ ಸಾದರ ಪಡಿಸಿದರೆ ಖಂಡಿತವಾಗಿಯೂ ಈ ಕೃತಿಗೆ ಪಿಎಚ್.ಡಿ. ಪದವಿ ದೊರೆಯುತ್ತಿತ್ತು. ಅಷ್ಟು ವ್ಯಾಪಕವಾದ ಅಧ್ಯಯನ ಇಲ್ಲಿದೆ. ಮಾಹಿತಿ ಸಂಗ್ರಹಕ್ಕಾಗಿ ಡಾ. ರುಮಾಲೆ ಅವರು ಕರ್ನಾಟಕ-ಆಂಧ್ರ ಎರಡೂ ರಾಜ್ಯಗಳನ್ನು ಸುತ್ತಿದ್ದಾರೆ, ಅನೇಕ ಜನರನ್ನು ಸಂದರ್ಶನ ಮಾಡಿದ್ದಾರೆ, ನೂರಾರು ಪುಸ್ತಕಗಳನ್ನು ಅವಲೋಕಿಸಿದ್ದಾರೆ. ನಾಲ್ಕು ವರ್ಷಗಳ ಕಾಲ ನಿರಂತರ ಈ ಕೃತಿ ರಚನೆಗೆ ತಮ್ಮ ಸಮಯವನ್ನು ಮೀಸಲಿಟ್ಟಿದ್ದಾರೆ. ನಿವೃತ್ತಿಯ ಅಂಚಿನಲ್ಲಿರುವ ಅವರ ಈ ಶ್ರದ್ಧೆ-ಸಹನೆ ನಿಜಕ್ಕೂ ಬೆರಗುಗೊಳಿಸುತ್ತದೆ.

‘ತಾಡಪತ್ರಿ ರಾಘವಾಚಾರ್ಯರು’ ಆಗಿದ್ದ ರಾಘವರು ತಮ್ಮ ಕರ್ಮಭೂಮಿ ಬಳ್ಳಾರಿಯ ಅಸ್ಮಿತೆಯನ್ನು ತಮ್ಮೊಂದಿಗೆ ನಿತ್ಯನಿರಂತರ ಉಳಿಸಿಕೊಳ್ಳಬೇಕೆಂಬ ಹಂಬಲದಿಂದ ‘ಬಳ್ಳಾರಿ ರಾಘವ’ರಾದ ಘಟನೆಯೇ ರೋಮಾಂಚನ! ಈ ಕುರಿತು ಲೇಖಕರಾದ ಡಾ. ರುಮಾಲೆ ಅವರು ‘ಬಳ್ಳಾರಿ ಸ್ಥಳೀಯ ಅಭೀಜ್ಞೆಯಷ್ಟೇ ಆಗಿರಲಿಲ್ಲ; ಅದು ಬಳ್ಳಾರಿ ಕೇಂದ್ರದ ನಾಟಕ ಪರಂಪರೆಯ ಸಾಂಕೇತಿಕ ಗ್ರಹಿಕೆಯೂ, ಬಳ್ಳಾರಿ ಪರಿಸರದ ಕಲಾಪ್ರಜ್ಞೆಯ ಅಸ್ಮಿತೆಯೂ ಆಗಿತ್ತು. ಸಮಸ್ತ ಆಂಧ್ರಪ್ರದೇಶದ ರಂಗ ಚಟುವಟಿಕೆಗಳಿಗೆ ಸುವರ್ಣ ಸ್ಪರ್ಶ ನೀಡಿ ಮಹೋನ್ನತ ಚೌಕಟ್ಟನ್ನು ನಿರ್ಮಿಸಿಕೊಟ್ಟ ಪ್ರಶಂಸೆಯ ಗೌರವವೂ ಆಗಿತ್ತು’ ಎಂದು ವಿವರಿಸುತ್ತಾರೆ.

ಕೃತಿಯಲ್ಲಿ ಒಟ್ಟು ೩೯ ಅಧ್ಯಾಯಗಳಿವೆ. ೧೨ ಅನುಬಂಧಗಳಿವೆ. ಪ್ರತಿಯೊಂದು ಅಧ್ಯಾಯವು ಹೃದಯಸ್ಪರ್ಶಿಯಾದ ಘಟನೆಗಳಿಂದ ಆವೃತ್ತವಾಗಿ ಓದಗರ ಮನದಲ್ಲಿ ಮುಂದೇನು! ಎಂಬ ಕುತೂಹಲವನ್ನುಂಟು ಮಾಡುತ್ತವೆ. ಅವಧೂತ ಬಸಪ್ಪನ ಅನುಗ್ರಹದಿಂದ ಹುಟ್ಟಿದ ರಾಘವರಿಗೆ ‘ಬಸಪ್ಪ’ನೆಂದು ಹೆಸರಿಟ್ಟಿದ್ದರು ಎಂಬ ವಿಷಯದಿಂದ ಹಿಡಿದು, ಅವರು ರಂಗಪರದೆಯಿಂದ ಸರಿಯುವವರೆಗಿನ ಅನೇಕ ಘಟನೆಗಳು ರಾಘವರ ಘನವ್ಯಕ್ತಿತ್ವದ ಪರಿಮಳವನ್ನು ಪರಿಚಯಿಸುತ್ತಲೇ ಹೋಗುತ್ತವೆ. ರಾಘವರು ಬಾಲ್ಯಾವಸ್ಥೆಯಲ್ಲಿದ್ದ ಸಂದರ್ಭದಲ್ಲಿ ಬಳ್ಳಾರಿ ಪರಿಸರದಲ್ಲಿ ‘ಸರಸವಿನೋದಿನಿ ಸಭಾ’ ‘ಅಭಿನವ ಸರಸವಿನೋದಿನಿ ಸಭಾ’, ‘ಕೃಷ್ಣಮಾಚಾರ್ಯ ಸಭಾ’, ಮಹಿಳಾ ನಾಟ್ಯಸಂಘ’, ‘ಸುಮನೋರಮಾ ಸಭಾ’ ಮೊದಲಾದ ಸಭಾಗಳು ರಂಗಭೂಮಿಯ ಉಳಿವಿಗಾಗಿ ಪರಿಶ್ರಮಿಸುತ್ತಿದ್ದವು. ಹೀಗಾಗಿ ‘ಸಭಾಗಳ ಸಾಮ್ರಾಜ್ಯದಲ್ಲಿ ಬಳ್ಳಾರಿ ರಂಗಭೂಮಿಯ ಅಸ್ತಿತ್ವ ಮತ್ತು ಅಸ್ಮಿತೆಗಾಗಿ ಹಂಬಲಿಸುತ್ತಿತ್ತು. ಈ ಎಲ್ಲ ಸಭಾಗಳ ಪ್ರಭಾವ ಪ್ರೇರಣೆ ಕಾರಣವಾಗಿ ರಾಘವರು ಸಹಜವಾಗಿಯೇ ರಂಗಭೂಮಿಯತ್ತ ಸೆಳೆತಕ್ಕೆ ಒಳಗಾದರು.
ಪಂಡಿತ ತಾರಾನಾಥರು ರಾಘವರಿಗೆ ‘ಶಿವ ಪಂಚಾಕ್ಷರ ಮಂತ್ರೋಪದೇಶ’ ಮಾಡಿದ ಒಂದು ಅಧ್ಯಾಯ ಇಲ್ಲಿದೆ. ತಾರಾನಾಥರು ಕನ್ನಡ ನೆಲದಲ್ಲಿ ಮಾಡಿದ ಕಾರ್ಯಗಳು ಅಜರಾಮರ. ಇಂತಹ ಧೀಮಂತ ವ್ಯಕ್ತಿ ರಾಘವರಿಗೆ ಶಿವಪಂಚಾಕ್ಷರ ಮಂತ್ರೋಪದೇಶ ಮಾಡಿದ್ದು ಒಂದು ಮಹಾನ್ ಘಟನೆಯೇ ಆಗಿದೆ. ‘ಇದು ತಾರಾನಾಥರ ಕರ್ತೃತ್ವ ಶಕ್ತಿಯ ಮತ್ತು ರಾಘವರ ಅಧ್ಯಾತ್ಮ ಸ್ಫೂರ್ತ ಮನಸ್ಸಿನ ದ್ಯೋತಕವಾಗಿದೆ’ ಎಂದು ಡಾ. ರುಮಾಲೆ ಅವರು ಬರೆಯುತ್ತಾರೆ.

- Advertisement -

ರಾಘವರು ರಂಗಭೂಮಿಗೆ ಮಾತ್ರ ಮೀಸಲಾಗದೆ ವಕೀಲಿ ವೃತ್ತಿಯನ್ನು ಬದ್ಧತೆಯಿಂದ ನಿಭಾಯಿಸಿದವರು. ಆಗಿನ್ನು ಸ್ವಾತಂತ್ರ್ಯ ಹೋರಾಟದ ಸಂದರ್ಭ. ಆಳರಸರ ವಿರುದ್ಧ ಭಾರತೀಯರು ಆಗಾಗ ಮಾಡುತ್ತಿದ್ದ ಪ್ರತಿರೋಧದ ಪರಿಣಾಮವಾಗಿ ಅಹಿತಕರ ಘಟನೆಗಳು ಜರುಗುತ್ತಿದ್ದವು. ಒಮ್ಮೆ ಕೋ. ಚನ್ನಬಸಪ್ಪ, ಅ.ಲ.ನಂಜಪ್ಪ, ಎ.ಆರ್. ಕೊಟ್ರಬಸಪ್ಪ ಮೂವರು ಕಾಲೇಜು ವಿದ್ಯಾರ್ಥಿಗಳಾಗಿದ್ದ ಸಂದರ್ಭದಲ್ಲಿ ಬ್ರಿಟಿಷ್ ಅಧಿಕಾರಿಗಳು ಅವರ ಮೇಲೆ ಗುರುತರ ಆರೋಪ ಹೊರಿಸಿ ಬಂಧಿಸಿದ್ದರು. ಆ ಸಂದರ್ಭದಲ್ಲಿ ರಾಘವರು ಈ ಮೂವರು ವಿದ್ಯಾರ್ಥಿಗಳ ಪರವಾಗಿ ವಕಾಲತ್ತು ವಹಿಸಿ, ಅದ್ಭುತವಾದ ತಮ್ಮ ವಾಗ್ಝರಿಯಿಂದ ಮೂವರನ್ನು ಆರೋಪಮುಕ್ತರನ್ನಾಗಿ ಮಾಡಿದ ಘಟನೆ ಅವಿಸ್ಮರಣೀಯವಾಗಿದೆ. ಈ ವಿಷಯವನ್ನು ಡಾ. ರುಮಾಲೆ ಅವರು ಸಾಹಿತ್ಯ ಅಕಾಡೆಮಿಯಿಂದ ಪ್ರಕಟವಾದ ಸ್ವಾತಂತ್ರ್ಯೋತ್ಸವ ಅಮೃತಮಹೋತ್ಸವ ಮಾಲಿಕೆಯಲ್ಲಿ ಪ್ರಕಟವಾದ ‘ಸ್ವಾತಂತ್ರ್ಯ ಹೋರಾಟ : ಬಳ್ಳಾರಿ’ ಕೃತಿಯಲ್ಲಿ ಸುದೀರ್ಘವಾಗಿ ವಿವರಿಸಿದ್ದಾರೆ.

ಬಳ್ಳಾರಿ ರಾಘವರು ‘ವಿಜಯನಗರ ಪತನಮು’ (ವಿಜಯನಗರದ ಪತನ) ಎಂಬ ನಾಟಕದಲ್ಲಿ ಪಠಾಣ್ ರುಸ್ತುಂನ ಪಾತ್ರವನ್ನು ಮಾಡಿದರು. ಈ ಪಾತ್ರ ಎಷ್ಟು ಜನಪ್ರಿಯವಾಯಿತೆಂದರೆ, ರಾಘವರು ರಂಗಭೂಮಿ ಪ್ರಪಂಚದಲ್ಲಿ ಶಾಶ್ವತವಾಗಿ ನೆಲೆ ನಿಲ್ಲುವಂತೆ ಮಾಡಿತು ಈ ಪಾತ್ರ. ಮುಂದಿನದೆಲ್ಲ ರಾಘವರ ರಂಗಭೂಮಿ ಇತಿಹಾಸ ನಿರ್ಮಾಣದ ಹೆಜ್ಜೆಗಳು ಈ ಪಾತ್ರದ ಮೂಲಕ ವಿಸ್ತಾರವಾದ ಭಿತ್ತಿಯನ್ನು ಪಡೆದವು. ;ವಿಜಯನಗರ ಸಾಮ್ರಾಜ್ಯ ಪತನ’ ನಾಟಕದಲ್ಲಿ ರಾಘವರ ಪಠಾಣ್ ರುಸ್ತುಂ ಪಾತ್ರ ವಹಿಸಲಿಕ್ಕೆ ಹುಟ್ಟಿದರೋ ಅನ್ನಬೇಕಾಗುತ್ತದೆ. ರುಸ್ತುಮ ಮತ್ತೆ ಯಾರೂ ಅಲ್ಲ, ರಾಮರಾಯನ ಮಗ! ತಂದೆ ಹಿಂದೂ, ತಾಯಿ ಮುಸ್ಲಿಂ. ತಂದೆ ‘ಕರ್ನಾಟಕದ ಸಿಂಹಾಸನಾಧೀಶ್ವರ’ ತಾಯಿ ವಿಜಾಪುರದ ಆದಿಲ್ ಷಾಹಿ ಪ್ರಜೆ. ಮಗ ಹಿಂದೂ ರಾಜ್ಯಭಕ್ತನಾಗಬೇಕೆ? ಮುಸ್ಲಿಂ ರಾಜ್ಯಭಕ್ತನಾಗಬೇಕು?(ಇತಿಹಾಸವಂತೂ ಆದಿಲ್ ಷಾಹನೇ ರಾಮರಾಜನ ಮಗನೆಂದು ಹೇಳುತ್ತದೆ) ಈ ಘರ್ಷಣಕ್ಕೆ ಸಿಕ್ಕ ಜಂಝಮಾರುತಕ್ಕೆ ಸಿಕ್ಕಿದ, ದಿಕ್ಕು ಕಾಣದ ಹಕ್ಕಿಯಂತಾಗಿದ್ದಾನೆ ರುಸ್ತುಂ. ಕಡೆಗೆ ರಾಮರಾಯನನ್ನು ಕೊಲ್ಲುತ್ತಾನೆ. ಮನದ ಕೊರೆತ, ಪಶ್ಚಾತ್ತಾಪ; ಹುಚ್ಚನಾಗುತ್ತಾನೆ; ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ’ (ಪು. ೧೮೪)

‘ರಾಮದಾಸನನ್ನು ಮೆಚ್ಚಿದ ಮಹಾತ್ಮ’ ಅಧ್ಯಾಯ ತುಂಬ ಅರ್ಥಪೂರ್ಣವಾಗಿದೆ. ೧೯೧೫ರಲ್ಲಿ ಮಹಾತ್ಮಾ ಗಾಂಧೀಜಿಯವರು ಬೆಂಗಳೂರಿಗೆ ಬಂದಾಗ ಅಮೆಚ್ಯೂರ್ಸ್ ಡ್ರಾಮ್ಯಾಟಿಕ್ ಅಸೋಷಿಯೇಶನ್ ದವರು ‘ಧೀನಬಂಧು ಕಬೀರ’ ನಾಟಕವನ್ನು ಪ್ರದರ್ಶಿಸಿದರು. ಈ ನಾಟಕದಲ್ಲಿ ಪಂಡಿತ ತಾರಾನಾಥರು ‘ಕಬೀರ’ನ ಪಾತ್ರ ನಿರ್ವಹಿಸಿದರೆ, ರಾಘವರು ಆ ಪಾತ್ರದಷ್ಟೇ ಸಮತೂಕದಿಂದ ಕೂಡಿದ ‘ರಾಮದಾಸ’ನ ಪಾತ್ರವನ್ನು ಮಾಡಿದ್ದರು. ಗಾಂಧೀಜಿ, ರಾಜಾಜಿ ಮೊದಲಾದವರು ಈ ನಾಟಕವನ್ನು ನೋಡಿದರು. ಭಕ್ತಿಪ್ರಧಾನವಾದ ಈ ನಾಟಕವನ್ನು ನೋಡಿ ಗಾಂಧೀಜಿಯವರ ಹೃದಯತುಂಬಿ ಬಂದಿತು. ರಾಘವರನ್ನು ಮುಕ್ತಮನದಿಂದ ಶ್ಲಾಘಿಸಿದರು. ಈ ವಿಷಯದ ಅಧಿಕೃತತೆಗಾಗಿ ಡಾ. ರುಮಾಲೆ ಅವರು ತುಂಬ ಪ್ರಯತ್ನ ಪಟ್ಟಿದ್ದಾರೆ. ಆ ಕಾಲದ ರಂಗಭೂಮಿ ಪತ್ರಿಕೆಯ ಉಲ್ಲೇಖಗಳನ್ನು ದಾಖಲಿಸಿದ್ದಾರೆ. ಅಷ್ಟೇ ಅಲ್ಲ ಗಾಂಧೀಜಿಯವರ ಆಪ್ತರಾಗಿದ್ದ ಮಹಾದೇವ ದೇಸಾಯಿ ಅವರು ಗಾಂಧೀಜಿ ಅವರ ಪತ್ರ ಮತ್ತು ದಿನಚರಿಯಲ್ಲಿ ಇದನ್ನು ದಾಖಲಿಸಿರುವುದನ್ನು ಚಾರಿತ್ರಿಕ ಕುತೂಹಲಕ್ಕಾಗಿ ಇಡೀ ವರದಿಯನ್ನು ಪ್ರಕಟಿಸಿರುವುದು ಡಾ. ರುಮಾಲೆ ಅವರ ವಿಷಯ ಪ್ರತಿಪಾದನೆ ವಸ್ತುನಿಷ್ಠವಾಗಿರಬೇಕೆಂಬ ಕಾಳಜಿಗೆ ಪ್ರತೀಕವಾಗಿದೆ.

‘ರಾಘವರ ಪ್ರತಿಭೆ ಮತ್ತು ಶಾಸ್ತ್ರದ ಹಿನ್ನೆಲೆ’ ಅಧ್ಯಾಯವಂತೂ ಇನ್ನೂ ಮನೋಜ್ಞವಾಗಿದೆ. ರಾಘವರು ನಾಟಕ-ರಂಗಭೂಮಿ-ರಂಗಪಠ್ಯ, ಅಭಿನಯ ಕುರಿತಾಗಿ ಆಲೋಚನೆ ಮಾಡಿದ ವಿಚಾರಗಳನ್ನೆಲ್ಲ ಕ್ರೋಢೀಕರಿಸಿ ಕೊಟ್ಟಿದ್ದಾರೆ. ರಾಘವರನ್ನು ಕುರಿತು ಕನ್ನಡ ಸಾಹಿತ್ಯ ಲೋಕದ ದಿಗ್ಗಜರಾದ ದ.ರಾ.ಬೇಂದ್ರೆ, ಡಿ.ವಿ.ಜಿ. ತಿ.ತಾ.ಶರ್ಮಾ, ಅನಕೃ ಮೊದಲಾದವರ ಬರಹಗಳನ್ನು ಬಳಸಿಕೊಂಡು ಸಾಹಿತ್ಯಲೋಕದ ವಿದ್ವಜ್ಜನರೊಂದಿಗೆ ರಾಘವರ ಒಡನಾಟ ಹೇಗಿತ್ತು? ಎಂಬುದನ್ನು ಅತ್ಯಂತ ರಸವತ್ತಾಗಿ ವಿವರಿಸಿದ್ದಾರೆ.
‘ಲಂಡನ್ ಕೊಲಂಬೊ ಪ್ರವಾಸ : ಔತಣಕೂಟ’ ಎಂಬ ಅಧ್ಯಾಯ ಇಡೀ ಗ್ರಂಥದ ಮೌಲಿಕ ಭಾಗವೆನಿಸಿದೆ. ೧೯೨೮ರಲ್ಲಿ ರಾಘವರು ಲಂಡನ್ ಕೊಲಂಬೊ ದೇಶಗಳಿಗೆ ಪ್ರವಾಸ ಕೈಕೊಂಡಾಗ ಬೆಂಗಳೂರಿನಲ್ಲಿ ಅವರಿಗೊಂದು ಔತಣಕೂಟ ಏರ್ಪಡಿಸಲಾಗಿತ್ತು. ಈ ಸಭೆಯ ಅಧ್ಯಕ್ಷತೆಯನ್ನು ವಹಿಸಿದ ತಾರಾನಾಥರು ಭಾಷಣ ಮಾಡುತ್ತ ಹೇಳಿದ ನುಡಿಗಳು ನಿಜಕ್ಕೂ ಬೆರಗುಗೊಳಿಸುತ್ತವೆ. ತಮಗೆ ಅತ್ಯಂತ ಆತ್ಮೀಯರೂ, ರಂಗಭೂಮಿ ಪ್ರಪಂಚದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿ, ಕಲಾ ಜಗತ್ತಿನ ಸಾಧನೆಯ ಉತ್ತುಂಗ ಶಿಖರವೇರಿದ ರಾಘವರು ವಿದೇಶಿ ಪ್ರವಾಸದಲ್ಲಿ ಹೇಗಿರಬೇಕೆಂಬುದನ್ನು ಕುರುತು ನೇರವಾಗಿ ಹೇಳಿದ ಮಾತುಗಳು ಮನನೀಯವಾಗಿವೆ. ‘ನೀವು ಭಾರತದ ಒಬ್ಬ ಕಲಾವಿದರ ಪ್ರತಿನಿಧಿಯಾಗಿ ಅಲ್ಲಿಗೆ ಹೋಗುತ್ತಿರುವಿರಿ. ಅಲ್ಲಿ ರಾಜಕೀಯ ವಿಷಯವಾಗಿ ಪತ್ರಕರ್ತರು ಏನಾದರೂ ಪ್ರಶ್ನೆ ಕೇಳಿದರೆ ‘ರಾಜಕೀಯ ವಿಚಾರದಲ್ಲಿ ಬಾಯಿ ಬೀಗ’ ಹಾಕಿಕೊಂಡಿರಬೇಕೆಂದು ಎಚ್ಚರಿಸುತ್ತಾರೆ. ಆಕಸ್ಮಿಕವಾಗಿ ಏನಾದರೂ ಮಾತಾಡಿದರೆ ಏನೆಲ್ಲಾ ಯಡವಟ್ಟಗಳಾಗುತ್ತವೆ ಎಂಬುದನ್ನು ವಿವರಿಸುತ್ತಾರೆ. ‘ವಿಲಾಯತಿಯವರು ಪ್ರಚಾರ ವಿಚಾರದಲ್ಲಿ ಬಹುನಿಪುಣರು. ಇವರು ಏನಾದರೂ ‘ಓ ಗಾಂಧೀಯವರ ಅಸಹಕಾರವು ಜಯಪ್ರದವಾಗಿಲ್ಲ. ಮುಂಬೈಯಲ್ಲಿಯೂ ಬೆಜವಾಡದಲ್ಲಿಯೂ ಬೆಂಗಳೂರಿನಲ್ಲಿಯೂ ಎಲ್ಲಿಯೋ ಕೆಲವರು ಖಾದಿಯನ್ನು ಧರಿಸುತ್ತಿರುವವರು ಎಂದು ಆ ವಿಷಯ ಜ್ಞಾನವಿಲ್ಲದೆ ಹೇಳಿದ ಸಂದರ್ಭದಲ್ಲಿ ‘ಓ ಎ ಗ್ರೇಟ್ ಇಂಡಿನ ಆಕ್ಟರ್ ಹ್ಯಾಸ್ ಸೇಡ್ ಸೋ’ ಎಂದು ಅಲ್ಲಿನವರು ಗುಲ್ಲು ಮಾಡಲು ಅವಕಾಶವಾಗುವುದು…ತಾಯಿ ಭಗವತಿ! ನಿನ್ನಡಿಗಳ ಸೇವೆಯೇ ನನ್ನ ಧ್ಯೇಯವಾಗಿರಲಿ. ನಿನ್ನ ಕೀರ್ತಿಪ್ರದವಾದ ಕರ್ಮಗಳೇ ನನ್ನ ಕಾರ್ಯವಾಗಿರಲಿ. ನಿನ್ನ ಕೀರ್ತಿ ಪ್ರಚಾರವೇ ನನ್ನ ಸೇವೆಯಾಗಿರಲಿ ಎಂದು ಪ್ರಾರ್ಥಿಸುತ್ತಲಿರಬೇಕು” (ಪು. ೧೨೪) ಎಂದು ಹೇಳುತ್ತಾರೆ. ಅಧ್ಯಕ್ಷರ ಈ ನುಡಿಗಳಿಗೆ ರಾಘವರು ಪ್ರತ್ಯುತ್ತರವಾಗಿ ಹೇಳಿದ ಮಾತುಗಳು ಇನ್ನೂ ಸೋಜಿಗವಾಗಿವೆ ಕೇಳಿ- “ನಮ್ಮ ದೇಶದ ವಿಚಾರವಾಗಿ ಪರದೇಶಿಯರಲ್ಲಿ ಹೀನಭಾವನೆ ಹುಟ್ಟುವಂತೆ ನಾನು ಮಾತನಾಡಬಾರದೆಂದು ಅಧ್ಯಕ್ಷರು ಹೇಳಿರುವರು. ಆ ವಿಚಾರದಲ್ಲಿ ನನ್ನದೊಂದೇ ವಿಜ್ಞಾಪನೆ. ದೇವರು ನನಗೆ ತಕ್ಕಮಟ್ಟಿಗೆ ಬುದ್ಧಿಯನ್ನು ಕೊಟ್ಟು ನಾನು ಭಾರತಮಾತೆಯ ಪುತ್ರನೆಂಬ ಸ್ವಾಭಿಮಾನವು ನನ್ನಲ್ಲಿರುವಂತೆ ಅನುಗ್ರಹಿಸಿರುವನು. ಆದುದರಿಂದ ನಮ್ಮ ದೇಶದ ವಿಚಾರವಾಗಿ ನಾನು ಹೀನವಾಗಿ ಮಾತಾಡುವುದಂತಿರಲಿ, ಮತ್ತಾರಾದರೂ ಮಾತನಾಡಿದರೂ ನಾನು ಅದನ್ನು ಸಹಿಸಲಿಕ್ಕಿಲ್ಲ” (ಪು. ೧೨೭) ಎಂದು ಹೇಳಿರುವುದು ರಾಘವರ ರಾಷ್ಟ್ರಭಕ್ತಿ-ದೇಶಪ್ರೇಮದ ನಿಲುವಿಗೆ ಸಾಕ್ಷಿ.
ರಾಘವರ ಕಲೆಯನ್ನು ಜಗತ್ ಪ್ರಸಿದ್ಧ ನಾಟಕಕಾರ ಬರ್ನಾಡ್ ಶಾ ಕೂಡ ಮೆಚ್ಚಿ ‘ಷೇಕ್ಸಪಿಯರ್ ನಿನ್ನ ಸಲುವಾಗಿಯೇ ನಾಟಕ ಬರೆದಂತಿದೆ’ ಎಂದು ರಾಘವರ ಅಭಿನಯ ನೋಡಿ ಬರ್ನಾಡ್ ಶಾ ಹೇಳಿದ್ದು ನಿಜಕ್ಕೂ ಕನ್ನಡಿಗರ ಹೆಮ್ಮೆಗೆ ಕೋಡು ಮೂಡಿಸುವ ಸಂಗತಿಯಾಗಿದೆ. ಸ್ವಾತಂತ್ರ್ಯಪೂರ್ವದ ಬಹುತೇಕ ಹಿರಿಯ ರಾಜಕೀಯ ನೇತಾರರು ರಾಘವರ ಕಲೆಯನ್ನು ನೋಡಿ ಮೆಚ್ಚಿದ್ದರು.

ರಾಘವರು ಕನ್ನಡ ನಾಡಿಗೆ ನೀಡಿದ ಅಪೂರ್ವ ಕಾಣಿಕೆಗಳಲ್ಲಿ ಜೋಳದರಾಶಿ ದೊಡ್ಡನಗೌಡರಂತಹ ಅಪ್ರತಿಮ ಕಲಾವಿದನನ್ನು ಕೊಟ್ಟದ್ದು ಗಮನಿಸಬೇಕಾದ ಅಂಶ. ದೊಡ್ಡನಗೌಡರು ರಾಘವರ ಪರಮಶಿಷ್ಯರು. ಗೌಡರು ಕನಕದಾಸ ನಾಟಕ ಬರೆಯುವ ಸಂದರ್ಭದಲ್ಲಿ ರಾಘವರ ಮಾರ್ಗದರ್ಶನ ಪಡೆದ ಘಟನೆಯಂತೂ ಇಲ್ಲಿ ತುಂಬ ಅರ್ಥವತ್ತಾಗಿ ಮೂಡಿಬಂದಿದೆ. ದೊಡ್ಡನಗೌಡರಂತಹ ಕಲಾಜೀವಿಯ ಬೆನ್ನ ಹಿಂದಿನ ಶಕ್ತಿಯಾಗಿ, ಕಣ್ಣ ಮುಂದಿನ ಬೆಳಕಾಗಿ ರಾಘವರು ಮಾಡಿದ ಪ್ರಯತ್ನ, ನೀಡಿದ ಮಾರ್ಗದರ್ಶನದ ಕಥನವನ್ನು ಡಾ. ರುಮಾಲೆ ಅವರು ಅತ್ಯಂತ ಹೃದಯಂಗಮವಾಗಿ ಚಿತ್ರಿಸಿದ್ದಾರೆ. ೧೯೪೫-೪೬ರ ಕಾಲದಲ್ಲಿ ದೊಡ್ಡನಗೌಡರು ‘ಕ್ರಾಂತಿಪುರುಷ ಬಸವಣ್ಣ’ ಎಂಬ ನಾಟಕ ರಚನೆಗೆ ಮುಂದಾದರು. ಈ ವಿಷಯ ತಿಳಿದ ರಾಘವರು ಈ ನಾಟಕದಲ್ಲಿ ಬಸವಣ್ಣನವರ ಪಾತ್ರವನ್ನು ಮಾಡಬೇಕೆಂದು ಹಂಬಲಿಸಿದರು. ಆದರೆ ದೈವಲೀಲೆ ಬೇರೆಯಾಗಿತ್ತು. ಈ ನಾಟಕ ರಚನೆಯಾಗುವಷ್ಟರಲ್ಲಿ ರಾಘವರು ನಿಧನರಾದರು. ಇಂತಹ ಅನೇಕ ಕಾರುಣ್ಯದ ಕಥನಗಳು ಕೃತಿಯುದ್ದಕ್ಕೂ ನಮಗೆ ಸಿಗುತ್ತವೆ.
ಕೃತಿಯ ಕೊನೆಯಲ್ಲಿ ಒಟ್ಟು ೧೨ ಅನುಬಂಧಗಳಿವೆ. ರಾಘವರ ಜೀವನ ವಿವರ, ಪ್ರಮುಖ ವರ್ಷಗಳು, ಶ್ರೇಷ್ಠರ ದೃಷ್ಟಿಯಲ್ಲಿ ರಾಘವರು, ರಾಘವರ ಕುರಿತು ಪ್ರತಿಷ್ಠಿತರು ಬರೆದ ಲೇಖನಗಳು, ಸಂದರ್ಶನಗಳು, ವಿಶೇಷ ಉಪನ್ಯಾಸಗಳು, ಅಧ್ಯಕ್ಷ ಭಾಷಣ, ಪತ್ರಗಳು, ರಾಘವರು ಆಡಿದ ನಾಟಕಗಳು, ರಾಘವರು ವಹಿಸಿದ ಪಾತ್ರಗಳು, ರಾಘವರ ಸಮಕಾಲೀನರು, ಸಮಕಾಲೀನ ಹವ್ಯಾಸಿ ನಾಟಕ ಕಂಪನಿಗಳು, ಸಮಕಾಲೀನ ನಾಟಕಗಳು, ಚಿತ್ರಗಳು, ವಂಶವೃಕ್ಷ ಹೀಗೆ ರಾಘವರ ಬದುಕಿನ ಸಮಗ್ರ ವಿವರಗಳನ್ನು ಸಮೃದ್ಧ ಮಾಹಿತಿಯೊಂದಿಗೆ ತಿಳಿಸಿಕೊಡುವ ಒಂದು ಅಪರೂಪದ ಆಕರ ಕೃತಿಯಾಗಿದೆ. ರಾಘವರ ಬಗ್ಗೆ ಎಷ್ಟು ಬರೆದರೂ ಡಾ. ರುಮಾಲೆ ಅವರಿಗೆ ತೃಪ್ತಿಯಿಲ್ಲ. ಬಳ್ಳಾರಿಗೆ ಒಂದು ಘನತೆ ಗೌರವವನ್ನು ತಂದುಕೊಟ್ಟ ಮಹಾನ್ ಚೇತನ ರಾಘವರ ಬಗ್ಗೆ ಈಗ ಬರೆದದ್ದು ಅಲ್ಪ, ಇನ್ನೂ ಸಾಕಷ್ಟಿದೆ ಎಂಬ ಕೊರಗು ಅವರಲ್ಲಿದೆ. ‘ಇದನ್ನು ರಾಘವ ಅವರನ್ನು ಕುರಿತು ಮೊದಲಭಾಗವೆಂದು ಭಾವಿಸಿದರೆ, ಕಾಲಾವಕಾಶ ಲಭ್ಯವಾದಲ್ಲಿ ಎರಡನೇ ಭಾಗವು ತರುವ ಯೋಚನೆ ಇದೆ’ ಎಂದು ಲೇಖಕರ ಅರಿಕೆಯಲ್ಲಿ ಪ್ರಸ್ತಾಪಿಸಿದ್ದಾರೆ. ಹುಡುಕಿದಷ್ಟು ಸಿಗುವ ಆಕರ ಸಾಮಗ್ರಿಯನ್ನು ಬಳಸಿಕೊಂಡು, ಒಬ್ಬ ಶ್ರೇಷ್ಠ ಸಾಧಕನ ಗೌರಿಶಂಕರ ಪ್ರಾಯದ ಸಾಧನಾ ಹೆಜ್ಜೆಗಳನ್ನು ದಾಖಲಿಸುವಲ್ಲಿ ಡಾ. ರುಮಾಲೆ ಅವರು ಮಾಡಿದ ಪ್ರಯತ್ನ ಅತ್ಯಂತ ಶ್ಲಾಘನೀಯವಾಗಿದೆ. ಅವರದೇ ಆದ ಒಂದು ಭಾಷಾ ಶೈಲಿ ಇರುವುದರಿಂದ ಓದಿಗೆ ಎಲ್ಲಿಯೂ ರಸಭಂಗವಾಗುವುದಿಲ್ಲ. ನಮ್ಮ ಕಣ್ಣ ಮುಂದೆ ೧೯ನೇ ಶತಮಾನದ ರಂಗಭೂಮಿ ಪ್ರಪಂಚ ಬಂದಂತೆ ಭಾಸವಾಗುವಷ್ಟರ ಮಟ್ಟಿಗೆ ಈ ಕೃತಿಯ ಭಾಷೆ ನಮ್ಮನ್ನು ಆವರಿಸಿಕೊಳ್ಳುತ್ತದೆ.

ಡಾ. ರುಮಾಲೆ ಅವರು ಈ ವರೆಗೆ ಬರೆದಿರುವ ಬೃಹತ್ ಚರಿತ್ರ ಕಥನಗಳ ಸಾಲಿನಲ್ಲಿ ಈ ಕೃತಿ ಕಿರೀಟಪ್ರಾಯವಾಗಿದೆ ಎಂದು ಹೇಳಿದರೆ ಅತಿಶಯೋಕ್ತಿಯಾಗಲಾರದು. ರಾಘವ ಅವರಂತಹ ಮಹಾನ್ ಪುರುಷ ಇಲ್ಲವಾಗಿ ಇಂದಿಗೆ ಎಂಟು ದಶಕಗಳೇ ಆಗಿವೆ. ಅಂತಹ ಪುಣ್ಯಪುರುಷನ ಕುರಿತು ಅಪಾರ ಶ್ರಮವಹಿಸಿ, ಶ್ರದ್ಧೆಯಿಂದ ಬರೆದ ಡಾ. ಮೃತ್ಯುಂಜಯ ರುಮಾಲೆ ಅವರಿಗೆ ವಂದನೆ-ಅಭಿನಂದನೆಗಳು.

ಪ್ರಕಾಶ ಗಿರಿಮಲ್ಲನವರ
ಬೆಳಗಾವಿ
ಮೊ: 9902130041

- Advertisement -
- Advertisement -

Latest News

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ 

  ಧನಕನಕ‌ ನವರತ್ನ ನಿನ್ನೊಡವೆಯಲ್ಲಬಿಡು ನಿನ್ನೊಡವೆಯೆಂಬುವುದು ಜ್ಞಾನರತ್ನ ಈ ರತ್ನ ಧರಿಸಿದೊಡೆ ಲೋಕದಲಿ‌ ನಿನಗಿಂತ ಸಿರಿವಂತರಾರಿಲ್ಲ - ಎಮ್ಮೆತಮ್ಮ ||೧೩೧|| ಶಬ್ಧಾರ್ಥ ಧನಕನಕ = ಹಣ ಬಂಗಾರ. ನವರತ್ನ = ಒಂಬತ್ತು ಹರಳು ತಾತ್ಪರ್ಯ ಗಳಿಸಿರುವ ಹಣ‌...
- Advertisement -

More Articles Like This

- Advertisement -
close
error: Content is protected !!
Join WhatsApp Group