spot_img
spot_img

ದಿನಕ್ಕೊಬ್ಬ ಶರಣ ಮಾಲಿಕೆ

Must Read

- Advertisement -

ಶರಣೆ ಸತ್ಯಕ್ಕ

12ನೆಯ ಶತಮಾನವೆಂದರೆ ಅದು ಸಾಮಾಜಿಕ ಕ್ರಾಂತಿಯ ಪರ್ವ ಎಂದು ಹೇಳಬಹುದು. ಕಾಯಕ ಮತ್ತು ದಾಸೋಹಗಳೆಂಬ ಎರಡು ತತ್ವಗಳನ್ನು ಜಾರಿಗೆ ತರುವ ಮೂಲಕ ಹೊಸ ಕ್ರಾಂತಿ ಜ್ಯೋತಿಯನ್ನು ಬೆಳಗಿಸಿ ಸಮಾಜದಲ್ಲಿ ಸರ್ವ ಸಮಾನತೆಯನ್ನು ನಾಂದಿ ಹಾಡಿದವರು ನಮ್ಮ ಬಸವಣ್ಣನವರು.

12ನೇ ಶತಮಾನದಲ್ಲಿ ಶೋಷಣೆಯಲ್ಲಿ ಜೀವ ಹಣ್ಣಾದ ಕಾಲಘಟ್ಟದಲ್ಲಿ ಬಸವಣ್ಣನವರ ಸಮಕಾಲೀನರಾದ ಕಾಯಕನಿಷ್ಠೆ ಪ್ರಾಮಾಣಿಕತೆ ಮತ್ತು ಆತ್ಮ ಗೌರವದ ಪ್ರತೀಕವಾಗಿರುವ ಶರಣೆ, ಸತ್ಯಕ್ಕನವರ ಬದುಕು ಅನುಪಮ ಮತ್ತು ಅಲೌಕಿಕವಾದದ್ದು. ಕಸ ಗುಡಿಸುವ ಕಾಯಕದ ದಲಿತ ಕುಟುಂಬದಿಂದ ಬಂದಂತ ಶರಣೆ ಸತ್ಯಕ್ಕನವರು ಬಸವ ತತ್ವ ಮತ್ತು ಶರಣ ಸಿದ್ಧಾಂತದಲ್ಲಿ ನಡೆದು ಅತ್ಯಂತ ಎತ್ತರಕ್ಕೇರಿದಂತ ಮಹಿಳೆ. ಶರಣೆ ಸತ್ಯಕ್ಕನವರು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಹತ್ತಿರವಿರುವ ಹಿರೇ ಜಂಬೂರು ಗ್ರಾಮದವರು. ಈ ಊರಿನಲ್ಲಿ ಇವರದೇ ಹೆಸರಿನ ದೇವಾಲಯವು ಇದೆ. ಶರಣರ ಮನೆಯ ಅಂಗಳವನ್ನು ಗುಡಿಸುವ ಕಾಯಕದಲ್ಲಿ ತೊಡಗಿಸಿಕೊಂಡಂತವರು ಶರಣೆ ಸತ್ಯಕ್ಕನವರು. ಅವಿವಾಹಿತೆಯಾಗಿ ಉಳಿದು, ಆಧ್ಯಾತ್ಮ ಸಾಧನೆಗೈದ ಶರಣೆ.

- Advertisement -

ಶರಣೆ ಸತ್ಯಕ್ಕನವರ ಊರಿನಲ್ಲಿ ‘ಜಕ್ಕೇಶ್ವರ’ ದೇವಾಲಯವಿದೆ. ಇದು ಇವರ ಆರಾಧ್ಯ ದೈವವೂ ಆಗಿದೆ ಹಾಗಾಗಿ ಜಕ್ಕೇಶ್ವರನನ್ನೇ “ಶಂಭುಜಕ್ಕೇಶ್ವರ” ಎನ್ನುವ ವಚನಾಂಕಿತವನ್ನಾಗಿ ಆರಿಸಿಕೊಂಡಿದ್ದಾರೆ. ಅತ್ಯಂತ ಸರಳ ಭಾಷೆಯಲ್ಲಿ ಬರೆದಿರುವ ಅವರ 29 ವಚನಗಳು ಇಲ್ಲಿಯವರೆಗೆ ಲಭ್ಯವಾಗಿವೆ ಈ ಎಲ್ಲಾ ವಚನಗಳಲ್ಲಿ ಶಿವಪಾರಮ್ಯ, ಸದ್ಭಕ್ತರ ಮಹಿಮೆ, ಸದಾಚಾರದಲ್ಲಿ ನಡೆಯುವ ಗುರು-ಲಿಂಗ-ಜಂಗಮರ ಗುಣಲಕ್ಷಣಗಳು, ಢಾಂಬಿಕ ಭಕ್ತರ ಟೀಕೆ ಸ್ತ್ರೀ ಪುರುಷ ಸಮಾನತೆಗಳು ವ್ಯಕ್ತವಾಗಿವೆ..

ಅರ್ಚನೆ ಪೂಜನೆ ನೇಮವಲ್ಲ
ಮಂತ್ರ ತಂತ್ರ ನೇಮವಲ್ಲ
ಧೂಪ ದೀಪಾರತಿ ನೇಮವಲ್ಲ
ಪರಧನ ಪರಸ್ತ್ರೀ ಪರ ದೈವಂಗಳಿಗೆರಗಪ್ಪುದೆ ನೇಮ
ಶಂಭುಜಕ್ಕೇಶ್ವರನಲ್ಲಿ ಇವು ಕಾಣಿರಣ್ಣ ನಿತ್ಯ ನೇಮ.

ಶರಣೆ ಸತ್ಯಕ್ಕನವರದ್ದು ಏಕದೇವತಾನಿಷ್ಠೆ. ಅಂತರಂಗದಲ್ಲಿ ಮತ್ತು ಬಹಿರಂಗದಲ್ಲಿ ಬೇರೆ ಬೇರೆ ರೀತಿಯಲ್ಲಿ ನಡೆಯುವವರನ್ನು ಕಟುವಾಗಿ ಟೀಕಿಸಿದ್ದಾರೆ ಬ್ರಹ್ಮಾಂಡವನ್ನು ಕುರಿತ ಸತ್ಯಕ್ಕನವರ ಈ ವಚನದಲ್ಲಿ ನಾವು ಸೂಕ್ಷ್ಮವಾಗಿ ಗಮನಿಸಿದರೆ ಸಮಾಜದಲ್ಲಿ ಬೇರು ಬಿಟ್ಟಿದ್ದ ಅರ್ಚನೆ ಪೂಜನೆ ಮಂತ್ರ ತಂತ್ರ ಮತ್ತು ಧೂಪ ದೀಪಾರತಿಗಳಿಂದ ಸ್ಥಾವರಮೂರ್ತಿಗಳನ್ನು ಪೂಜಿಸುವುದನ್ನು ಪ್ರಶ್ನಿಸಿ ವಿಮರ್ಶೆ ಮಾಡುತ್ತಾರೆ.

- Advertisement -

ಅರ್ಚನೆ ಪೂಜನೆ ನೇಮವಲ್ಲ ಎಂದು ಪ್ರಾರಂಭವಾಗುವ ಈ ವಚನದಲ್ಲಿ ಶರಣರ ನೇಮ ನಿಯಮಗಳು ವ್ಯಕ್ತಿಯ ವೈಯಕ್ತಿಕ ಪ್ರಾಮಾಣಿಕ ಬದುಕಿಗೆ ಹಿಡಿದ ಕನ್ನಡಿಯಂದೇ ಹೇಳಬಹುದು. ಅಸತ್ಯವನ್ನು ನುಡಿಯುವವರಿಗೆ ನೇಮ ನಿತ್ಯಗಳು ಪ್ರಭಾವ ಬೀರಲಾರವು.ಯಾರು ಪರಸ್ತ್ರೀ ಪರಧನಕ್ಕೆ ಆಸೆಪಡುತ್ತಾರೋ, ಅಂಥವರಿಗೆ ಈ ಆಚಾರ ವಿಚಾರಗಳು ರುಚಿಸುವುದಿಲ್ಲ, ದುರಾಚಾರವು ಮನುಷ್ಯನ ವ್ಯಕ್ತಿತ್ವಕ್ಕೆ ಕಳಂಕವಾದದ್ದು, ಹಾಗಾಗಿ ನೇಮ ಮತ್ತು ಸದಾಚಾರದ ವ್ಯಕ್ತಿಗಳ ಅವಶ್ಯಕತೆಯನ್ನು ಸತ್ಯಕ್ಕನವರು ಬಯಸುತ್ತಾರೆ. ನಮಗೆ ನೈತಿಕ ಮಾರ್ಗದ ಗುಣಲಕ್ಷಣಗಳನ್ನು ಈ ವಚನದ ಮೂಲಕ ನಿರೂಪಿಸುತ್ತಾರೆ.

ಲಂಚ ವಂಚನಕ್ಕೆ ಕೈಯಾನದ ಭಾಷೆ
ಬಟ್ಟೆಯಲ್ಲಿ ಹೊನ್ನುವಸ್ತ್ರ ಬಿದ್ದಿದ್ದರೆ
ನಾನು ಕೈ ಮುಟ್ಟಿ ಎತ್ತಿದೆನಾದರೆ
ನಿಮ್ಮಾಣೆ ನಿಮ್ಮ ಪ್ರಮಥರಾಣೆ
ಅದೇನು ಕಾರಣವೇನೆಂದರೆ
ನೀವಿಕ್ಕಿದ ಭಿಕ್ಷೆದಲ್ಲಿಪ್ಪನಾಗಿ
ಇಂತಲ್ಲದೆ ನಾನು ಅಳಿಮನವ ಮಾಡಿ
ಪರದ್ರವ್ಯಕ್ಕೆ ಆಸೆ ಮಾಡಿದನಾದರೆ
ನೀನಾಗಲೇ ಎನ್ನ ನರಕದಲ್ಲಿ ಅದ್ದಿ ನೀನೆದ್ದು ಹೋಗ ಶಂಭುಜಕ್ಕೇಶ್ವರ

ಆಧ್ಯಾತ್ಮಿಕ ಸಾಧನೆಗೈದ ಶಿವ ಶರಣೆ ಸತ್ಯಕ್ಕನವರು ತಾನು ಲಂಚ ವಂಚನೆಗಳಿಗೆ ಕೈಯೊಡ್ಡದವಳೆಂದೂ, ದಾರಿಯಲ್ಲಿ ಬಿದ್ದ ಅನ್ಯರ ಒಡವೆ ವಸ್ತುಗಳನ್ನು ಮುಟ್ಟುವುದಿಲ್ಲವೆಂದೂ ತಮಗೆ ತಾವೇ ನಿರ್ಬಂಧ ವಹಿಸಿಕೊಂಡವರು. ಶಿವನನ್ನು ಅಂತರಂಗದ ದೈವವೆಂದು ಪರಿಗಣಿಸಿದವರು. ಸತ್ಯ ಶುದ್ಧ ಕಾಯಕವನ್ನು ಮಾಡಿ ಬಂದ ಹಣದಿಂದ ಪ್ರಸಾದವ ಸ್ವೀಕರಿಸುವೆನಲ್ಲದೆ, ಅನ್ಯರ ಗಳಿಕೆಯಿಂದ ಬಂದ ಹಣವನ್ನಾಗಲೀ, ಲಂಚ ವಂಚನೆ ಪಡೆಯಲು ಎಂದೂ ಕೈ ಚಾಚುವುದಿಲ್ಲ ಎಂಬ ದಿಟ್ಟ ಪ್ರಮಾಣವನ್ನು ಸ್ವೀಕರಿಸುತ್ತಾರೆ.
ದಿಟ್ಟ ಧೀರ ಶರಣೆ ಸತ್ಯಕ್ಕ ಸಹಜವಾಗಿ ಬರುವ ದಾರಿಯಲ್ಲಿ ಮತ್ತೊಬ್ಬರ ವಸ್ತ್ರ ಬಂಗಾರದ ವಸ್ತುಗಳು ಬಿದ್ದಿದ್ದರೂ ಅದನ್ನು ಕೈಮುಟ್ಟಿ ಎತ್ತಿಕೊಂಡರೆ, ಶಿವ ಶಿವಾ..! ನಿಮ್ಮಾಣೆ ಎನ್ನ ಕಾಯಕದಿಂದ ನೀವು ನೀಡಿದ ಸಂಪತ್ತಿನಲ್ಲಿ ಸಂತೃಪ್ತಿ ಜೀವನ ನಡೆಸುವೆ ಶಂಭುಜಕ್ಕೆಶ್ವರ ದೇವ ನಿಮ್ಮಾಣೆ ಎಂಬುದು ಈ ವಚನದ ತಾತ್ಪರ್ಯ.

ಹೀಗೆ ಸರ್ವ ಸಮಾನತೆ ಮನುಷ್ಯನ ಘನತೆ ಕಾಯಕ ತತ್ವದ ಮೂಲಕ ಬೆವರಿನ ಗೌರವ ಆದರ್ಶಗಳನ್ನು ತಿಳಿಸುತ್ತಾ ದಾಸೋಹ ತತ್ವದ ಮೂಲಕ ಹಂಚಿಕೊಂಡು ಬದುಕುವ ಸಂಪೂರ್ಣ ಸಾಮಾಜಿಕ ವ್ಯವಸ್ಥೆಯ ಭಾಗವಾಗಿದ್ದರು. ಶರಣೆ ಸತ್ಯಕ್ಕನವರು ತನಗಾಗಿ ಬದುಕದೇ, ಆದರ್ಶ ತತ್ವ ಸಿದ್ಧಾಂತಗಳತ್ತ ಗಮನಹರಿಸಿ ನುಡಿದಂತೆ ನಡೆದ, ನಡೆದಂತೆ ನುಡಿದ ಶರಣೆ ಸತ್ಯಕ್ಕ ಬಯಲೊಳಗೆ ಬಯಲಾದಳು.

ಗೀತಾ.ಜಿ.ಎಸ್
ಹರಮಘಟ್ಟ.ಶಿವಮೊಗ್ಗ

- Advertisement -
- Advertisement -

Latest News

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ 

  ಧನಕನಕ‌ ನವರತ್ನ ನಿನ್ನೊಡವೆಯಲ್ಲಬಿಡು ನಿನ್ನೊಡವೆಯೆಂಬುವುದು ಜ್ಞಾನರತ್ನ ಈ ರತ್ನ ಧರಿಸಿದೊಡೆ ಲೋಕದಲಿ‌ ನಿನಗಿಂತ ಸಿರಿವಂತರಾರಿಲ್ಲ - ಎಮ್ಮೆತಮ್ಮ ||೧೩೧|| ಶಬ್ಧಾರ್ಥ ಧನಕನಕ = ಹಣ ಬಂಗಾರ. ನವರತ್ನ = ಒಂಬತ್ತು ಹರಳು ತಾತ್ಪರ್ಯ ಗಳಿಸಿರುವ ಹಣ‌...
- Advertisement -

More Articles Like This

- Advertisement -
close
error: Content is protected !!
Join WhatsApp Group