ಸಿಂದಗಿ– ರೈತರ ಜಮೀನುಗಳಿಗೆ ಹೋಗುವ ಒತ್ತುವರಿಯಾಗಿರುವ ರಸ್ತೆಯಲ್ಲಿ ಡಬ್ಬಾ ಅಂಗಡಿಗಳ ತೆರವುಗೊಳಿಸುವಂತೆ ಆಗ್ರಹಿಸಿ ತಾಲೂಕಿನ ಬ್ಯಾಕೋಡ ಗ್ರಾಮದ ರೈತರು ತಹಶೀಲ್ದಾರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿ ಶಿರಸ್ತೆದಾರ ಜಿ.ಎಸ್.ರೋಡಗಿ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ನಿಂಗಪ್ಪ ಭಾವಿಕಟ್ಟಿ. ಪರಶುರಾಮ್ ಹೊಸಮನಿ, ರಾಯಪ್ಪ ಹಳಗೊಂಡ್, ಶ್ರೀಶೈಲ ನಾಯ್ಕೋಡಿ, ಧರೆಪ್ಪ ಭಾವಿಕಟ್ಟಿ, ಅಮರೇಶ ಹಳಗೊಂಡ, ಬಸವರಾಜ ತೇಗನೂರ್, ದತ್ತು ನಾಗಾವಿ ಸುರೇಶ ಹಳಗೊಂಡ, ಅನಸಾಬ್ ನದಾಫ್, ಚಂದ್ರು ಹಂದ್ರಾಳ, ಯಲ್ಲಪ್ಪ ಚೋರಗಸ್ತಿ ಸೇರಿದಂತೆ ಅನೇಕರು ಮಾತನಾಡಿ, ತಾಲೂಕಿನ ಬ್ಯಾಕೋಡ ಗ್ರಾಮದಿಂದ ಮಾಡಬಾಳ ಗ್ರಾಮ ಹಾಗೂ ನೂರಾರು ರೈತರ ಜಮೀನುಗಳಿಗೆ ಹೋಗುವ ರಸ್ತೆಯು ನೂರಾರು ವರ್ಷಗಳಿಂದ ಸರಕಾರಿ ನಕ್ಷೆಯಲ್ಲಿನ ವಹಿವಾಟು ರಸ್ತೆಯಲ್ಲಿಯೇ ಸಂಚಾರ ಮಾಡುತ್ತ ಬರಲಾಗಿತ್ತು ಆದರೆ ಇತ್ತೀಚೆಗೆ ರಸ್ತೆಗೆ ಹೊಂದಿಕೊಂಡಿರುವ ರೈತ ಜಮೀನು ಹದ್ದಬಸ್ತು ಮಾಡಿಕೊಂಡು ತನ್ನ ಹದ್ದಿನಲ್ಲಿ ತಂತಿ ಬೇಲಿ ಹಾಕಿಕೊಂಡಿದ್ದರಿಂದ ರೈತರ ಜಮೀನುಗಳಿಗೆ ಹೋಗಲು ರಸ್ತೆಯಿಲ್ಲದೆ ತೊಂದರೆ ಉಂಟಾಗಿದೆ ಏಕೆಂದರೆ ಅಧಿಕೃತ ರಸ್ತೆಯಲ್ಲಿ ಅನಧಿಕೃತ ಅಂಗಡಿಗಳು ತಲೆಎತ್ತಿ ನಿಂತುಕೊಂಡಿವೆ ಇದನ್ನು ತೆರುವುಗೊಳಿಸಿ ರೈತರ ಜಮೀನುಗಳಿಗೆ ಹೋಗಲು ಅನುಕೂಲ ಮಾಡಿಕೊಡುವಂತೆ ಗ್ರಾಪಂ ಅಭಿವೃದ್ಧಿ ಅಧಿಕಾರಿಗೆ ಮನವಿ ಮಾಡಿಕೊಳ್ಳಲಾಗಿತ್ತು ಅವರು ತಹಶೀಲ್ದಾರ ಮುಖಾಂತರ ತೆರವುಗೊಳಿಸಲು ಬರುವುದಾಗಿ ತಿಳಿಸಿದ್ದು ಅದರಂತೆ ನಾವೆಲ್ಲ ರೈತರು ಸೇರಿ ಹಲವಾರು ಬಾರಿ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಗಿದ್ದು ಅದಕ್ಕೆ ಅವರು ಕ್ಯಾರೆ ಅನ್ನದೇ ಬೇಜವಾಬ್ದಾರಿತನದಿಂದ ನಡೆದುಕೊಳ್ಳುತ್ತ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ ಅಲ್ಲದೆ ಇದರ ಬಗ್ಗೆ ವಿಚಾರಿಸಿದರೆ ಅಶ್ಪೃಶ್ಯರಂತೆ ಹೊರಗೆ ನಿಲ್ಲಲು ಸದ್ಯ ಆಗುವುದಿಲ್ಲ ಚುನಾವಣೆಯಿದೆ ಮುಂದೆ ಬಾ ಹೋಗು ದೂರ ನಿಂತು ಮಾತನಾಡು ಎಂದು ಕೊವಿಡ್ ಎದುರಿಸುತ್ತಿರುವ ಹಾಗೆ ವರ್ತನೆ ಮಾಡುತ್ತಿದ್ದಾರೆ. ನೀಡುವ ಮನವಿಯೊಂದಿಗೆ 15 ದಿನಗಳ ಗಡುವು ನೀಡುತ್ತೇವೆ. ಈ ಅವಧಿಯಲ್ಲಿ ಸಮಸ್ಯೆಗೆ ಸ್ಪಂದಿಸದಿದ್ದರೆ ಕಲಕೇರಿ ರಾಜ್ಯ ಹೆದ್ದಾರಿಯ ಮೇಲೆ ಎತ್ತು ಗಾಡಿ ಸಮ್ಮೇತ ನೂರಾರು ರೈತರು ಸೇರಿದಂತೆ ಸಾರ್ವಜನಿಕರ ಒಡಗೂಡಿ ಪ್ರತಿಭಟನೆಗೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ತಹಶೀಲ್ದಾರ ಹಿಂಬಾಗಿಲಿನಿಂದ ಪಲಾಯನ:
ಮನವಿ ಸಲ್ಲಿಸಲು ಅಗಮಿಸಿದ್ದ ರೈತರೊಂದಿಗೆ ಬೇಜವಾಬ್ದಾರಿತನದಿಂದ ವರ್ತಿಸಿ ಮನವಿ ಕೂಡಾ ಸ್ವೀಕರಿಸದೇ ತಹಶೀಲ್ದಾರರು ಹಿಂಬಾಗಿಲಿಂದ ತೆರಳಿ ವಾಹನದಲ್ಲಿ ಮುಂದಿನ ಆಸನದ ಮೇಲೆ ಕುಳಿತುಕೊಳ್ಳದೇ ಹಿಂಬದಿಯ ಅಸನದ ಮೇಲೆ ಕುಳಿತು ಪಲಾಯನವಾದರು.