ಕತ್ತಲೆಯ ಕೋಣೆಯಲಿ ಕುಳಿತುಕೊಳ್ಳುವೆಯೇಕೆ ?
ತೆರೆದುಬಿಡು ಕಿಟಕಿಬಾಗಿಲುಗಳನ್ನು
ಸೂಸಿಬರಲೊಳಗಡೆಗೆ ಹೊಸಬೆಳಕು ಹೊಸಗಾಳಿ
ಕಣ್ಣುತೆರೆದುಸಿರಾಡು – ಎಮ್ಮೆತಮ್ಮ
ಶಬ್ಧಾರ್ಥ
ಸೂಸಿಬರಲಿ = ಹರಿದುಬರಲಿ
ತಾತ್ಪರ್ಯ
ಬೆಳಕಿಲ್ಲದ ಕತ್ತಲೆ ಕೋಣೆಯಲ್ಲಿ ಕಿಟಕಿ ಬಾಗಿಲುಗಳನ್ನು ಮುಚ್ಚಿಕೊಂಡು ಕೂಡುವುದು ಸಲ್ಲ. ಎಲ್ಲ ಕಿಟಕಿ ಬಾಗಿಲು
ತೆರೆದಿಡಬೇಕು. ಆಗ ತಂಗಾಳಿ ಮತ್ತು ಹೊಂಬೆಳಕು ಒಳಗೆ
ಪ್ರವೇಶಿಸುತ್ತವೆ. ಆಗ ಚೆನ್ನಾಗಿ ಉಸಿರಾಡಬಹುದು ಮತ್ತು
ಎಲ್ಲ ವಸ್ತುಗಳು ಬೆಳಕಿನಲ್ಲಿ ಕಾಣಬಹುದು. ನಾವು
ಅಜ್ಞಾನದಲ್ಲಿ ಕೊಳೆತು ಸಂಕುಚಿತ ಮನದವರಾಗುವ ಬದಲು
ಎಲ್ಲ ಕಡೆಯಿಂದ ಜ್ಞಾನವನ್ನು ಸ್ವೀಕರಿಸಬೇಕು. ಆಗ ವಿಶಾಲ
ಮನದವರಾಗಲು ನಮ್ಮಲ್ಲಿರುವ ಪರವಸ್ತು ಕಾಣಿಸುತ್ತದೆ.
ಆನೋ ಭದ್ರಾಃ ಕೃತವೋ ಯಾಂತು ವಿಶ್ವತಃ ಎಂಬ ಮಾತು
ಋಗ್ವೇದದಲ್ಲಿ ಬರುತ್ತದೆ. ಅಂದರೆ ವಿಶ್ವದ ಎಲ್ಲಾ ಕಡೆಯಿಂದ ಒಳ್ಳೆಯ ಜ್ಞಾನದ ಬೆಳಕು ಹರಿದುಬರಲಿ ಎಂದು ಋಷಿಗಳು
ಪ್ರಾರ್ಥಿಸಿದರು. ಕೆಲವನ್ನು ಬಲ್ಲವರಿಂದ ಕಲಿತುಕೊಳ್ಳಬೇಕು.
ಮತ್ತೆ ಕೆಲವನ್ನು ಶಾಸ್ತ್ರಗಳನ್ನು ಓದಿ ತಿಳಿದುಕೊಳ್ಳಬೇಕು.
ಕೆಲವನ್ನು ಅನುಭವದಿಂದ ಮತ್ತೆ ಕೆಲವನ್ನು ಮಾಡುವರಿಂದ
ನೋಡಿ ಕಲಿಯಬೇಕು. ಮತ್ತೆ ಸಾಧು ಸಜ್ಜನರ ಸಂಗದಲ್ಲಿ ಇದ್ದು ಅರಿತುಕೊಳ್ಳಬೇಕು.ಆಗ ಮಾನವ ಸರ್ವಜ್ಞನಂತೆ ಜ್ಞಾನದ ಪರ್ವತವಾಗುತ್ತಾನೆ.ಹಲವು ಬಿಂದುಗಳು ಸೇರಿ ಸಿಂಧು ಆಗುವಂತೆ ಮಹಾಜ್ಞಾನಿಯಾಗುತ್ತಾನೆ. ಒಳ್ಳೆಯದು ಯಾವ ಕಡೆಯಿಂದ ಬಂದರು ಅದನ್ನು ಸ್ವೀಕರಿಸಬೇಕು. ಅದಕ್ಕಾಗಿ ತೆರೆದ ಹೃದಯಿಯಾಗಬೇಕು.
ರಚನೆ ಮತ್ತು ವಿವರಣೆ ಎನ್.ಶರಣಪ್ಪ ಮೆಟ್ರಿ
ಮೊ. 9449030990