ಹಾಸನದ ರಂಗಭೂಮಿಯಲ್ಲಿ ಕೇಳಿಬರುವ ಹೆಸರು ವೀರಭದ್ರಾಚಾರ್. ಹಾಸನ ತಾ. ದುದ್ದ ಹೋಬಳಿ ಗಾಡೇನಹಳ್ಳಿ ಗ್ರಾಮದ ಜಿ.ಸಿ.ಈರಾಚಾರ್ ಮತ್ತು ಈರಮ್ಮರವರ ಜೇಷ್ಠ ಪುತ್ರರಾಗಿ ೧೯೬೨ರಲ್ಲಿ ಜನಿಸಿದ ಇವರ ಪ್ರೈಮರಿ ೭ನೇ ತರಗತಿವರೆಗೆ ವಿದ್ಯಾಭ್ಯಾಸ ಸಕಲೇಶಪುರ ತಾ. ಬಾಳ್ಳುಪೇಟೆಯಲ್ಲಿ, ಪ್ರೌಢಶಿಕ್ಷಣ ಹಾಸನ ತಾ. ಶಾಂತಿಗ್ರಾಮದಲ್ಲಿ ನಡೆಯಿತು. ಪಿಯುಸಿ ಚನ್ನರಾಯಪಟ್ಟಣ, ಬಿಎ ಹಾಸನದ ಎನ್.ಡಿ.ಆರ್.ಕೆ. ಕಾಲೇಜಿನಲ್ಲಿ ಎಂ.ಎ. ಮೈಸೂರಿನ ಮಾನಸ ಗಂಗೋತ್ರಿ, ೨ ವರ್ಷ ಹಾಸನ ಕೃಷ್ಣ ಲಾ ಕಾಲೇಜಿನಲ್ಲಿ ಎಲ್‌ಎಲ್‌ಬಿ ಓದಿ ಮುಗಿಸಿರುವರು.
ಓದಿನ ದಿನಗಳಲ್ಲೇ ನಟನೆಯಲ್ಲಿ ಆಸಕ್ತಿ ಇದ್ದ ಇವರು ಹಳ್ಳಿಗಳಲ್ಲಿ ನಡೆಯುತ್ತಿದ್ದ ಪೌರಾಣಿಕ ಸಾಮಾಜಿಕ ನಾಟಕಗಳಲ್ಲಿ ನಟಿಸಿ ಅದೇ ಆಸಕ್ತಿಯನ್ನು ಇಂದಿಗೂ ಉಳಿಸಿಕೊಂಡಿದ್ದಾರೆ. ಹುಟ್ಟಿದ ಊರಲ್ಲಿ ನಡೆದ ಕುರುಕ್ಷೇತ್ರ ನಾಟಕದಲ್ಲಿ ಕೃಷ್ಣನ ಪಾತ್ರ ಮಾಡಿ ನೆರೆಹೊರೆ ಜನರ ಮನ ಗೆದ್ದರು.
ಶಿಕ್ಷಣ ಇಲಾಖೆಯಲ್ಲಿ ಕೆಲಸ ಮಾಡಿರುವ ಇವರಿಗೆ ೧೯೯೮ರಲ್ಲಿ ಬೇಲೂರಿಗೆ ವರ್ಗವಾಗಿ ಕೆಲಕಾಲ ರಂಗಭೂಮಿಯಿಂದ ದೂರ ಇರಬೇಕಾಯಿತು. ೨೦೦೦ರಲ್ಲಿ ಹಾಸನ ಜಿಲ್ಲಾ ಪಂಚಾಯಿತಿಗೆ ನಿಯೋಜನೆಯಾಗಿ ಮತ್ತೆ ಕಲಾಕ್ಷೇತ್ರಕ್ಕೆ ಕಾಲಿಟ್ಟು ಹಲವು ಸಂಘ ಸಂಸ್ಥೆಗಳಿಗೆ ಇವರು ನಾಟಕಗಳನ್ನು ನಿರ್ದೇಶನ ಮಾಡಿ ಜೊತೆಗೆ ಹಾರ‍್ಮೋನಿಯಂ ನುಡಿಸಿದ್ದಾರೆ. ಈವರೆಗೆ ೨೦ ನಾಟಕಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಇವರು ನಟಿಸಿರುವ ನಾಟಕಗಳ ಪಟ್ಟಿಯಲ್ಲಿ ಮುಖ್ಯವಾಗಿ ಕುರುಕ್ಷೇತ್ರ, ರಾಮಾಯಣ, ಶನಿ ಮಹಾತ್ಮೆ, ಪ್ರಚಂಡರಾವಣ ನಾಟಕಗಳು ಸೇರಿವೆ ನಟರಾಗಿ ಸೂತ್ರದಾರಿ, ನಾರದ, ಯುವನಾಶ್ವ, ರಾವಣ, ಛತಿ, ಬ್ರಾಹ್ಮಣ ,ಅಭಿಮನ್ಯು, ವಿಧುರ, ಶಿಖಂಡಿ, ದ್ರೋಣ, ಭೀಷ್ಮ ಸಾತ್ಯಕಿ, ಕೃಷ್ಣ, ಗುಹ, ವಶಿಷ್ಠ, ಅಂಗದ ಹೀಗೆ ೩೦-೩೫ ನಾಟಕಗಳಲ್ಲಿ ಬಹುಮುಖಿ ಪಾತ್ರಗಳನ್ನು ನಿಭಾಯಿಸಿದ್ದಾರೆ.
ರಂಗ ನಿರ್ದೇಶಕ ನಾಗರಾಜಾಚಾರ್ ಹಾಸನಕ್ಕೆ ಬಂದು ಇಲ್ಲಿ ನಾಟಕ ಕಲಿಸುವಾಗ ಇವರ ನಿರ್ದೇಶನದ ನಾಟಕಗಳಲ್ಲಿ ಪಾತ್ರ ನಿರ್ವಹಿಸಿದ್ದಾರೆ. ಸಂಗೀತ ವಿದ್ವಾನ್ ವೆಂಕಟೇಶ್ ರವರಿಂದ ತರಭೇತಿ ಪಡೆದು ೫ ವರ್ಷ ಕರ್ನಾಟಕ ಸಂಗೀತ ಅಭ್ಯಾಸ ಮಾಡಿದ್ದಾರೆ. ಹಾಸನ ಶಿಕ್ಷಣ ಇಲಾಖೆಯಲ್ಲಿ ಪತ್ರಾಂಕಿತ ಅಧಿಕಾರಿಯಾಗಿ ಕೆಲಸ ಮಾಡಿರುವ ಇವರು ೨೦೨೨ರಲ್ಲಿ ನಿವೃತ್ತರಾಗಿ ಇಂದಿಗೂ ಕಲೆಗಾರಿಕೆ ಮುಂದುವರೆಸಿದ್ದಾರೆ. ೨೦೧೫ ರಿಂದ ಕೀಬೋರ್ಡ್ ಹರ‍್ಮೋನಿಯಂ ನುಡಿಸುತ್ತಾ ಹಿಡಿತ ಸಾದಿಸುತ್ತಾ ಸಾಗಿದ್ದಾರೆ. ಇವರ ಕಲಾಸೇವೆ ಗುರುತಿಸಿ ಅನೇಕ ಸಂಘಸಂಸ್ಥೆಗಳು ಸನ್ಮಾನಿಸಿ ಪ್ರಶಸ್ತಿ ಪತ್ರನೀಡಿವೆ.
ಗೊರೂರು ಅನಂತರಾಜು, ಹಾಸನ. ಮೊ: ೯೪೪೯೪೬೨೮೭೯.
ವಿಳಾಸ: ಹುಣಸಿನಕೆರೆ ಬಡಾವಣೆ, ೨೯ನೇ ವಾರ್ಡ್, ಶ್ರೀ ಶನೀಶ್ವರದೇವಸ್ಥಾನರಸ್ತೆ, ಹಾಸನ.