ಕಾರ್ಗಿಲ್ ವಿಜಯದಿಂದ ಸೈನಿಕರ ಬೆಲೆ ಗೊತ್ತಾಗಿದೆ – ವಿಶ್ವನಾಥ ಕುರಡೆ

0
215

ಸಿಂದಗಿ: ಯೋಧರು ಎನ್ನುವುದು ನಿರ್ಲಕ್ಷ್ಯ ವಹಿಸುತ್ತಿರುವ ಸಮಾಜದಲ್ಲಿ ಕಾರ್ಗಿಲ್ ವಿಜಯೋತ್ಸವದಿಂದ ಸೈನಿಕರ ಬೆಲೆ ಏನೆಂಬುದು ಗೊತ್ತಾಗಿದೆ. ಕಾರ್ಗಿಲ್ ಕೇವಲ ಭೂಮಿಯಲ್ಲ. ನೂರಾರು ವೀರಯೋಧರು ಭಾರತ ಮಾತೆಗೆ ತಮ್ಮ ರಕ್ತ   ಅಭಿಷೇಕ ಮಾಡಿದ ದಿನ ಎಂದು ತಾಲೂಕು ಶಿಕ್ಷಣ ಪ್ರಸಾರಕ ಮಂಡಳಿಯ ನಿರ್ದೇಶಕ ವಿಶ್ವನಾಥ ಕುರಡೆ ಹೇಳಿದರು.

ಪಟ್ಟಣದ ಶ್ರೀ ಭುವನೇಶ್ವರಿ ವಿದ್ಯಾವರ್ಧಕ ಸಂಘದ ಕಾವ್ಯಾ ಶಿಕ್ಷಣ ಸಮೂಹ ಸಂಸ್ಥೆಗಳ ವತಿಯಿಂದ ಕಾರ್ಗಿಲ್ ವಿಜಯ ದಿವಸ್ ಹಾಗೂ ನಿವೃತ್ತ ಮಾಜಿ ಸೈನಿಕರಿಗೆ ಹಮ್ಮಿಕೊಂಡ ಸನ್ಮಾನ ಸಮಾರಂಭವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ದೇಶ ಸುರಕ್ಷತೆಯಿಂದ ಇರಬೇಕಾದರೆ ಸೈನಿಕರ ತ್ಯಾಗ, ಬಲಿದಾನವೇ ಕಾರಣ. ಸೈನಿಕರು ನಮಗೆ ಸಂರಕ್ಷಣೆ ನೀಡಿದರೆ, ರೈತ ಅನ್ನದಾತ ಇವರಿಬ್ಬರನ್ನೂ ಗೌರವಿಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ ಎಂದರು.

ಈ ವೇಳೆ ನಿವೃತ್ತ ಪೊಲೀಸ್ ಅಧಿಕಾರಿ, ಎಂ.ಎಂ.ಹಂಗರಗಿ, ಚಲನಚಿತ್ರ ನಟ ವಿಶ್ವಪ್ರಕಾಶ ಮಲಗೊಂಡ ಮಾತನಾಡಿ, ದೇಶದ ಪ್ರತಿಯೊಬ್ಬ ಪ್ರಜೆಯು ದೇಶಾಭಿಮಾನ ಬೆಳೆಸಿಕೊಳ್ಳಬೇಕು. ಅದರಲ್ಲೂ ವಿಶೇಷವಾಗಿ ಯುವಕರು ದೇಶಕ್ಕೆ ಸೇವೆ ಸಲ್ಲಿಸುವ ಮೂಲಕ ಜೀವನವನ್ನು ಸಾರ್ಥಕಪಡಿಸಿಕೊಳ್ಳಬೇಕು. ದೇಶ ಸೇವೆಯಂತಹ ಪುಣ್ಯ ಕಾರ್ಯ ಮತ್ತೊಂದಿಲ್ಲ. ಇಂದಿನ ಯುವಕರು ದೇಶಕ್ಕೆ ಸಲ್ಲಿಸುವ ಸೇವೆ ಅಮೂಲ್ಯವಾಗಿರುತ್ತದೆ. ಕಾರ್ಗಿಲ್ ಸಮಯದಲ್ಲಿ ಪಾಕಿಸ್ತಾನದ ವಿರುದ್ಧ ಜಯಗಳಿಸಲು ಶ್ರಮಿಸಿದ ನಮ್ಮ ಯೋಧರ ಪರಾಕ್ರಮ ಮೆಚ್ಚುವಂತಹದ್ದು, ಜೊತೆಗೆ ಆ ಸಮಯದಲ್ಲಿ ವೀರ ಮರಣ ಹೊಂದಿದ ವೀರ ಯೋಧರಿಗೆ ಇಂದು ನಮನ ಸಲ್ಲಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದರು.

ಇದೇ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿದ ಮಾಜಿ ಸೈನಿಕರ ಸಂಘದ ತಾಲೂಕಾಧ್ಯಕ್ಷ ಶ್ರೀಶೈಲ ಯಳಮೇಲಿ ಹಾಗೂ ನಿವೃತ್ತ ಸೈನಿಕ ಬಸವರಾಜ ಕೋಟರಗಸ್ತಿ ಮಾತನಾಡಿ, ಇಂತಹ ಶಿಕ್ಷಣ ಸಂಸ್ಥೆಗಳು ಕಾರ್ಗಿಲ್ ವಿಜಯೋತ್ಸವ ಆಚರಿಸುವ ಮೂಲಕ ನಮ್ಮನ್ನು ಸನ್ಮಾನಿಸುತ್ತಿರುವುದು ಸಂತಸ ತಂದಿದೆ. ಎರಡು ತಿಂಗಳ ಕಾಲ ನಡೆದ ಕಾರ್ಗಿಲ್ ಯುದ್ಧದಲ್ಲಿ ನಮ್ಮ ಅನೇಕ ಸೈನಿಕರು ಪ್ರಾಣ ಕಳೆದುಕೊಂಡಿದ್ದಾರೆ. ಅವರಲ್ಲಿನ ದೇಶ ಪ್ರೇಮ ಇಂದಿನ ಯುವ ಪೀಳಿಗೆ ತಿಳಿದುಕೊಳ್ಳಬೇಕು. ಅನೇಕರ ತ್ಯಾಗ, ಶ್ರಮದಿಂದ ಈ ದೇಶ ಕಟ್ಟಲಾಗಿದೆ. ಇದನ್ನು ಉಳಿಸಿಕೊಂಡು ಹೋಗುವುದು ಈ ದೇಶದ ಪ್ರತಿಯೊಬ್ಬ ನಾಗರಿಕರ ಕರ್ತವ್ಯ ಎಂದರು.

ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ವಹಿಸಿದ ಆದಿಶೇಷ ಸಂಸ್ಥಾನ ಮಠದ ರಾಜಯೋಗಿ ನಾಗರತ್ನ ವೀರರಾಜೇಂದ್ರ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ಅಧ್ಯಕ್ಷ ಚಂದ್ರಶೇಖರ ನಾಗರಬೆಟ್ಟ ಅಧ್ಯಕ್ಷೀಯ ನುಡಿಗಳನ್ನಾಡಿದರು.
ಈ ಸಂದರ್ಭದಲ್ಲಿ ನಿವೃತ್ತ ಸೈನಿಕರಿಗೆ ಹಾಗೂ ಕಾನಿಪಾ ಜಿಲ್ಲಾ ಪ್ರಶಸ್ತಿ ಪಡೆದ ಸುದರ್ಶನ ಜಂಗಣ್ಣಿ ಹಾಗೂ ಬೆಸ್ಟ್ ಆಕ್ಟರ್ ಪ್ರಶಸ್ತಿ ಪಡೆದುಕೊಂಡ ತುಷಾರ ಮಲಗೊಂಡ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಕಸಾಪ ತಾಲೂಕಾಧ್ಯಕ್ಷ ಶಿವಾನಂದ ಬಡಾನೂರ, ಪ್ರಕಾಶ ಲೋಣಿ, ಮಲ್ಲನಗೌಡ ಪಾಟೀಲ ಇಬ್ರಾಹಿಂಪೂರ, ಭೋಜರಾಜ ದೇಸಾಯಿ, ಶಾಂತವೀರ ಹಿರೇಮಠ, ಸುದರ್ಶನ ಜಂಗಣ್ಣಿ, ನಿವೃತ್ತ ಸೈನಿಕರಾದ ಭಾಗಪ್ಪ ಬಂಡಗಾರ, ಕಾಶಿನಾಥ ಚಾಂದಕವಟೆ, ಎಸ್.ಎಮ್. ಬಡಾನೂರ, ಎಸ್.ಎ.ಬಿರಾದಾರ, ಎಸ್.ಎಸ್.ಪತ್ತಾರ, ಬಾಬು ಸೂರ್ಯವಂಶಿ, ಈರಣ್ಣ ತಳವಾರ, ರವೀಂದ್ರ ಬಿರಾದಾರ ಸೇರಿದಂತೆ ಶಾಲೆಯ ಬೋಧಕ, ಬೋಧಕೇತರ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಇದ್ದರು.

ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಉಪನ್ಯಾಸಕ ಮಹಾಂತೇಶ ನೂಲಾನವರ ನಿರೂಪಿಸಿದರು. ಪಂಡಿತ ಯಂಪುರೆ ಸ್ವಾಗತಿಸಿದರು. ಆನಂದ ಶಾಬಾದಿ ವಂದಿಸಿದರು.