ನಾಲ್ಕು ತಿಂಗಳಲ್ಲಿ 4 ಜನ ಮುಖ್ಯಾಧಿಕಾರಿಗಳ ಕಂಡ ಸಿಂದಗಿ ಪುರಸಭೆ
ಸಿಂದಗಿ: ನಾಲ್ಕು ತಿಂಗಳಲ್ಲಿ 4 ಜನ ಮುಖ್ಯಾಧಿಕಾರಿಗಳನ್ನು ಕಂಡ ಸಿಂದಗಿ ಪುರಸಭೆಯು ಯಾವುದೇ ಅಭಿವೃದ್ಧಿ ಕಾಣದೇ ಎಲ್ಲೆಂದರಲ್ಲಿ ತಿಪ್ಪೆಗಳ ರಾಶಿ ತುಂಬಿದ್ದಲ್ಲದೆ ಗಟಾರುಗಳು ತುಂಬಿ ಮಲಿನ ನೀರು ರಸ್ತೆಗಳ ಮೇಲೆ ಹರಿಯುತ್ತಿರುವುದರಿಂದ ರಸ್ತೆ ಯಾವುದು ಚರಂಡಿ ಯಾವುದು ಗೊಚರಿಸದೇ ಅಪಘಾತಗಳು ನಡೆಯುತ್ತಿರುವುದು ಸರ್ವೇಸಾಮಾನ್ಯವಾಗಿದೆ.
ಪಟ್ಟಣದ ಪುರಸಭೆ ಕಾರ್ಯಾಲಯದಲ್ಲಿ ಕಾರ್ಯ ಸಿಬ್ಬಂದಿ 27ರಲ್ಲಿ 14, ಸಮಾನ ಕೆಲಸಕ್ಕೆ ಸಮಾನ ವೇತನ ಸಿಬ್ಬಂದಿ 19, ಹೊರಗುತ್ತಿಗೆ ಸಿಬ್ಬಂದಿ 2, ಅಕೌಟೆಂಟ್ 1, ಜುನಿಯರ್ ಪ್ರೋಗ್ರಾಂ ಸಿಬ್ಬಂದಿ 1, ಹೊರಗುತ್ತಿಗೆ ತಾಂತ್ರಿಕ ಸಿಬ್ಬಂದಿ 4, ಕಾರ್ಯ ಪೌರಕಾರ್ಮಿಕರು 36, ನೇರ ವೇತನ ಪಾವತಿ ಸಿಬ್ಬಂದಿ 18 ಸೇರಿದಂತೆ ಒಟ್ಟು 93 ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾಗ್ಯೂ ಸಾರ್ವಜನಿಕರು ದಾಖಲೆಗಳಿಗಾಗಿ ಸಿಬ್ಬಂದಿ ಪರದಾಡುವಂತಾಗಿದ್ದು ಅವರವರ ಕೆಲಸ ಸರಿಯಾಗಿ ಮಾಡಿಕೊಂಡರೆ ಸಾರ್ವಜನಿಕರಿಗೆ ಉತ್ತಮ ಸೇವೆ ಕಲ್ಪಿಸಿಕೊಟ್ಟಂತಾಗುತ್ತದೆ.
ಈ ಬಗ್ಗೆ ಪುರಸಭೆ ಮುಖ್ಯಾಧಿಕಾರಿ ಜಯಶ್ರೀ ತುಂಗಳ ಅವರನ್ನು ಪ್ರಶ್ನಿಸಿದಾಗ, ಹೊರಗುತ್ತಿಗೆ ಆಧಾರದ ಮೇಲೆ ನಿಯೋಜನೆಗೊಂಡ ಕಂಪ್ಯೂಟರ ಸಿಬ್ಬಂದಿಯ ಅವಧಿ ಮುಗಿದಿದ್ದು ಅವರನ್ನು ಕೂಡಲೇ ಸೇವೆಯಿಂದ ಕೈಬಿಟ್ಟರೆ ಕಾರ್ಯ ವೈಖರಿಗೆ ತೊಂದರೆಯಾಗುತ್ತಿದ್ದು ಅದರಿಂದ ಸಾರ್ವಜನಿಕರ ಸೇವೆ ಕುಂಠಿತವಾಗುತ್ತದೆ ಆ ಕಾರಣಕ್ಕೆ ಅವರನ್ನು ಮೌಖೀಕ ಆದೇಶದ ಮೇರೆಗೆ ಮುಂದುವರೆಸಲಾಗಿದ್ದು ಮುಂಬರುವ ಸಾಮಾನ್ಯ ಸಭೆಯಲ್ಲಿ ವಿಷಯ ಚರ್ಚಿಸಲಾಗುವುದು ಎಂದು ಉಡಾಫೆ ಉತ್ತರ ನೀಡಿ ನುಣುಚಿಕೊಂಡರು.
ಸಮಂಜಸವಲ್ಲದ ಸಿಬ್ಬಂದಿ ನಿಯೋಜನೆ:
ಪುರಸಭೆಯಲ್ಲಿ ಸಾಕಷ್ಟು ಸಿಬ್ಬಂದಿ ಇದ್ದಾಗ್ಯೂ ಕೂಡಾ ಕಸ ವಿಲೇವಾರಿ(ಲೋಡರ)ಗೆ ಮನೆಗಳ ಕರ ವಸೂಲಾತಿ (ಟ್ಯಾಕ್ಸ) ತಾಂತ್ರಿಕ ಯಂತ್ರ ಚಲಾವಣೆ ಬಿಲ್ಲ್ ಕಲೆಕ್ಟರ್ ಸಿಬ್ಬಂದಿಗೆ ಬೇರೆ ಕೆಲಸ ಹೀಗೆ ಯಾವ ಸಿಬ್ಬಂದಿ ಯಾವ ಕೆಲಸ ನಿರ್ವಹಿಸಲು ಸೂಚಿಸದೇ ಮುಖ್ಯಾಧಿಕಾರಿಯವರು ಸಮಂಜಸವಲ್ಲದ ಸಿಬ್ಬಂದಿಯ ನಿಯೋಜನೆ ಮಾಡಿ ಸಾರ್ವಜನಿಕರ ಆಸ್ತಿಗಳು ಸಹಜವಾಗಿ ಪರಭಾರೆ ಮಾಡಲು ಅನುಕೂಲ ಮಾಡಿಕೊಟ್ಟಂತಾಗಿದೆ.
ಸ್ವಚ್ಚ ಭಾರತ ಅಭಿಯಾನ ಮರಿಚಿಕೆ; ಪಟ್ಟಣದ ಸ್ವಚ್ಚತೆಗಾಗಿ ಬೇಕಾದಷ್ಟು ಸಿಬ್ಬಂದಿ ಇದ್ದರು ಕೂಡಾ ಪಟ್ಟಣದ ಎಲ್ಲೆಡೆ ಗಟಾರುಗಳು ತುಂಬಿ ಹರಿಯುತ್ತಿವೆ. ಎಲ್ಲೆಂದರಲ್ಲಿ ಕಸ ವಿಲೇವಾರಿಯಾಗದೆ ತಿಪ್ಪೆಗಳಾಗಿ ನಿರ್ಮಾಣವಾಗಿ ಸ್ವಚ್ಚ ಭಾರತ ಅಭಿಯಾನ ಹಳ್ಳ ಹಿಡಿದಿದೆ. ಇದನ್ನು ಸಾರ್ವಜನಿಕರು ನಿತ್ಯ ಅಧಿಕ ಸಂಖ್ಯೆಯಲ್ಲಿ ಸ್ವಚ್ಚತೆಗಾಗಿ ದೂರು ದಾಖಲಿಸುತ್ತಿದ್ದಾರೆ. ಆದರೆ ಮುಖ್ಯಾಧಿಕಾರಿ ಸೇರಿದಂತೆ ಎಲ್ಲ ಸಿಬ್ಬಂದಿ ತಮಗೆ ಸಂಬಂದಿಸದ ವಿಷಯ ಎನ್ನುವಂತೆ ಉತ್ತರ ನೀಡಿ ಸಾಗ ಹಾಕುತ್ತಿರುವುದು ಸಾಮಾನ್ಯವಾಗಿದೆ.
ಪಟ್ಟಣದಲ್ಲಿನ ಕೆಲ ಆಸ್ತಿಗಳು ಬೇರೆಯವರ ಹೆಸರಿನಲ್ಲಿ ಪರಭಾರೆಯಾಗಿವೆ ಯಾರೋ ಮಾಡಿದ ತಪ್ಪಿನಿಂದ ಪುರಸಭೆ ಮುಖ್ಯಾಧಿಕಾರಿ ತಲೆದಂಡ ತೆತ್ತಬೇಕಾಗಿದೆ ಆ ಕಾರಣಕ್ಕೆ ದಾಖಲೆ ಪೂರೈಸಲು ವಿಳಂಬವಾಗುತ್ತಿದೆ.
ಜಯಶ್ರೀ ತುಂಗಳ
ಪುರಸಭೆ ಮುಖ್ಯಾಧಿಕಾರಿ
ಪುರಸಭೆಯಲ್ಲಿ ಕಂಪ್ಯೂಟರ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಗಳು ಯಾರು ಯಾವ ಕೆಲಸ ಮಾಡಬೇಕೋ ಅನ್ನುವುದು ಮುಖ್ಯಾಧಿಕಾರಿಗಳಿಗೆ ಗೊತ್ತಿಲ್ಲದಂತಾಗಿದೆ. ಸಿಬ್ಬಂದಿಗಳು ಸರಿಯಾಗಿ ಕಾರ್ಯನಿರ್ವಹಿಸಿದರೆ ಸಾರ್ವಜನಿಕರು ದಾಖಲೆಗಳಿಗಾಗಿ ಪರದಾಡುತ್ತಿರುವುದನ್ನು ತಪ್ಪಿಸಿದಂತಾಗುತ್ತದೆ.
ಚೆನ್ನಪ್ಪ ಮುಚ್ಚಂಡಿ
ಸ್ಥಳಿಯ ನಿವಾಸಿ
ಪಟ್ಟಣದಲ್ಲಿ ಎಲ್ಲೆಂದರಲ್ಲಿ ಮಲೀನ ನೀರು ರಸ್ತೆಗಳ ಮೇಲೆ ಹರಿದು ದುರ್ನಾತ ಬೀರುತ್ತಿದೆ ಇದರಿಂದ ರೋಗ ರುಜಿನಗಳಿಗೆ ಆವ್ಹಾನಿಸಿದಂತಾಗಿದ್ದು ಹೊಸದಾಗಿ ಬಂದ ಮುಖ್ಯಾಧಿಕಾರಿಗಳು ರಾತ್ರಿಯಾದೊಡನೆ ಬೇರೆಡೆ ಪಲಾಯನವಾಗದೇ ಪಟ್ಟಣದಲ್ಲಿ ಸಂಚರಿಸಿ ಸೂಕ್ತ ಕ್ರಮ ಜರುಗಿಸಬೇಕಲ್ಲದೆ ಸ್ವಚ್ಚತೆ ಕಾಪಾಡಿ ಸ್ವಚ್ಛ ಭಾರತ ಅಭಿಯಾನಕ್ಕೆ ಅಸ್ತು ನೀಡಬೇಕು.
ಪ್ರಶಾಂತಗೌಡ ಪಾಟೀಲ
ಸ್ಥಳೀಯ ನಿವಾಸಿ
ವರದಿ: ಪಂಡಿತ್ ಯಂಪೂರೆ, ಸಿಂದಗಿ