ಸಿಂದಗಿ: ತಮ್ಮ ತಮ್ಮ ಕಾಯಕದಲ್ಲಿ ತಲ್ಲೀನರಾದ ಸಾಧಕರಿಗೆ ಸಾಧನೆಗಳು ತಾನಾಗಿಯೇ ಹರಿದು ಬರುವುದು ದೈವ ಸಂಕಲ್ಪ ಎಂದು ಬ್ರಹ್ಮಕುಮಾರಿ ಈಶ್ವರೀಯ ವಿವಿಯ ಸಂಚಾಲಕಿ ಪವಿತ್ರಾ ಅಕ್ಕನವರು ಹೇಳಿದರು.
ಪಟ್ಟಣದ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಂಡ ಸಾಧಕರಿಗೆ ಸನ್ಮಾನ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿ, ಸರಕಾರಿ ಸೇವೆಯಲ್ಲಿ ಪದೋನ್ನತಿ, ಸಾಮಾಜಿಕ ಸೇವಾವೃತ್ತಿಯಲ್ಲಿ ವ್ಯಕ್ತಿಗತ ಮತ್ತು ಕಾರ್ಯವೈಖರಿಗಳ ಮೇಲೆ ಪ್ರಶಸ್ತಿಗಳು ಸಿಕ್ಕಾಗ ಹೊಸ ಹೊಸ ಪ್ರತಿಭೆಗಳು ಹೊರ ಬಂದು ಸಾಧನೆಗಳನ್ನು ಮಾಡಲು ಪ್ರೇರಣೆ ದೊರಕುತ್ತದೆ ಕಾರಣ ಆಗಾಗ್ಗೆ ಸಾಧನೆಗಳನ್ನು ಗುರುತಿಸಿ ಗೌರವಗಳು ದೊರೆಯಬೇಕು ಎನ್ನುವುದು ಬಾಬಾರ ಸಂಕಲ್ಪವಾಗಿದೆ ಎಂದರು.
ಪದೋನ್ನತಿ ಹೊಂದಿದ ಶಿಕ್ಷಕ ಮಲ್ಲಿಕಾರ್ಜುನ ದೊಡಮನಿ ಮಾತನಾಡಿ, ಸಾಧನೆಗಳು ಸಾಧಕರ ಸೊತ್ತು ವಿನಃ ಸೋಮಾರಿಗಳ ಸೊತ್ತಲ್ಲ ಅಂತೆಯೇ ಪ್ರಶಸ್ತಿಗಳಿಗಾಗಿ ಆಯಾ ವೃತ್ತಿಗಳಲ್ಲಿ ದುಂಬಾಲು ಬೀಳದೆ ಅವರವರ ಕಾರ್ಯದಲ್ಲಿ ಕಾರ್ಯಪ್ರವೃತ್ತರಾದರೆ ಸಾಧನೆಗಳು ತಾನಾಗಿಯೇ ಮನೆ ಬಾಗಿಲಿಗೆ ಬರುತ್ತವೆ ಎನ್ನುವುದಕ್ಕೆ ಈ ವೇದಿಕೆಯೇ ಸಾಕ್ಷಿ ಎಂದು ತಿಳಿಸಿದರು.
ಸನ್ಮಾನ ಸ್ವೀಕರಿಸಿದ ಪಂಡಿತ ಯಂಪೂರೆ ಮಾತನಾಡಿ, ಇಂದು ಪ್ರಶಸ್ತಿಗಳು ಗಣ್ಯಮಾನ್ಯರ ಶಿಫಾರಸುಗಳ ಮೇಲೆ ನಿಂತಿವೆ ಆದರೆ ವ್ಯಕ್ತಿಗತ ಮತ್ತು ಸಾಧನೆ ಹಾಗೂ ಕಾರ್ಯವೈಖರಿಯನ್ನು ಗುರುತಿಸಿ ಪ್ರಶಸ್ತಿಗಳು ಸಿಗುವುದು ಅತೀ ವಿರಳ. 32 ವರ್ಷಗಳ ಛಾಯಾಚಿತ್ರಣದಲ್ಲಿ ಕಾರ್ಯ ನಿರ್ವಹಿಸಿದ ಹಿನ್ನೆಲೆಯಲ್ಲಿ ರಾಜ್ಯ ಛಾಯಾಚಿತ್ರಕಾರ ಸಂಘವು ರಾಜ್ಯದ ಕೊನೆಯ ಮತಕ್ಷೇತ್ರ ಸಾಧಕರನ್ನು ಗುರುತಿಸಿರುವುದು ಸಾಧನೆಯೇ ಸರಿ. ಅವರಿಗೆ ತಾಲೂಕಿನ ಛಾಯಾಚಿತ್ರಕಾರ ಬಳಗ ಅಭಿನಂದನೆ ಸಲ್ಲಿಸುತ್ತದೆ ಎಂದರು.
ಈ ಸಂದರ್ಭದಲ್ಲಿ ಸರಕಾರಿ ಸೇವೆಯಲ್ಲಿ ಪದೋನ್ನತಿ ಹೊಂದಿದ ಶಿಕ್ಷಕ ಮಲ್ಲಿಕಾರ್ಜುನ ದೊಡಮನಿ, ಛಾಯಾಚಿತ್ರಣದಲ್ಲಿ ರಾಜ್ಯ ಪ್ರಶಸ್ತಿ ಪಡೆದ ಪಂಡಿತ ಯಂಪೂರೆ, ಅಂಬರೀಶ ಅಲ್ದಿ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಪ್ರೋ. ಎಸ್.ಎಸ್.ಪಾಟೀಲ, ಶಿವನಗೌಡ ಬಿರಾದಾರ, ಎಸ್.ಎಸ್.ಬುಳ್ಳಾ, ಪತ್ರಕರ್ತರ ಸಂಘದ ಅಧ್ಯಕ್ಷ ಆನಂದ ಶಾಬಾದಿ, ಸಿ.ಎಂ.ಪೂಜಾರಿ, ವಿಜಯಕುಮಾರ ತೇಲಿ, ರುದ್ರಯ್ಯ ಹಿರೇಮಠ, ಮಲ್ಲಪ್ಪ ಡೋಣೂರ, ಪ್ರಮೀಳಾ ಪಾಟೀಲ, ಮಂಜಕ್ಕ ಹೂಗಾರ, ಮಲ್ಲಪ್ಪ ಪೂಜಾರಿ, ಕೆ.ಎಸ್.ಪತ್ತಾರ, ಪ್ರೇಮಾ ನಾಯಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಶಿಕ್ಷಕ ಸಾಹಿತಿ ಸಿದ್ದಲಿಂಗ ಚೌಧರಿ ಸ್ವಾಗತಿಸಿ ನಿರೂಪಿಸಿ ಕೊನೆಯಲ್ಲಿ ವಂದಿಸಿದರು.